Mysore

ಮೆಲ್ಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಜರುಗಿದ ಮಕ್ಕಳ ಸಂತೆಯಲ್ಲಿ ವ್ಯಾಪಾರ-ವಹಿವಾಟು ಹೇಗಿತ್ತು ಗೊತ್ತಾ?

ಮೈಸೂರು: ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ‘ಮಕ್ಕಳ ಸಂತೆ’ ಅತ್ಯಂತ ಸಂಭ್ರಮದಿಂದ ನಡೆದು, ನಿರೀಕ್ಷೆಗೂ ಮೀರಿ ಯಶಸ್ವಿಯಾಗುವ ಮೂಲಕ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ಮತ್ತು ಸಂವಹನ ಕೌಶಲ್ಯವನ್ನು ಬೆಳೆಸಲು ತುಂಬಾ ಸಹಕಾರಿಯಾಯಿತು.

‘ಮಕ್ಕಳ ಸಂತೆ’ಯಲ್ಲಿ ಒಟ್ಟು 59ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ಈ ಮಳಿಗೆಗಳಲ್ಲಿ ಸೊಪ್ಪು, ತರಕಾರಿ, ಹಣ್ಣುಗಳು, ತಿಂಡಿ ತಿನಿಸುಗಳು, ಶರಬತ್ತು ಹಾಗೂ ಮಜ್ಜಿಗೆಯಂತಹ ತಂಪು ಪಾನೀಯಗಳನ್ನು ವಿದ್ಯಾರ್ಥಿಗಳು ‘ವ್ಯಾಪಾರಿ’ಗಳಾಗಿ ಮಾರಾಟ ಮಾಡಿದರು.

ಇವರಿಗೆ ಮೆಲ್ಲಹಳ್ಳಿ ಮತ್ತು ಹಾರೋಹಳ್ಳಿಯ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಅಡುಗೆ ಸಿಬ್ಬಂದಿ ‘ಗ್ರಾಹಕ’ರಾಗಿ ಭರ್ಜರಿಯಾಗಿಯೇ ‘ವ್ಯಾಪಾರ’ದಲ್ಲಿ ತೊಡಗಿ ಅತ್ಯುತ್ಸಾಹದಿಂದ ತಮಗಿಷ್ಟದ ‘ಸರಕು’ಗಳನ್ನು ಖರೀದಿಸಿದರು.

ಎಲ್ಲ ಮಳಿಗೆಗಳ ವಿದ್ಯಾರ್ಥಿ ವ್ಯಾಪಾರಿಗಳು ಒಟ್ಟು 5,915 ರೂ. ಬಂಡವಾಳ ಹೂಡಿದ್ದರು. ಈ ಮೂಲ ಬಂಡವಾಳದ ಮೇಲೆ ಒಟ್ಟು 4100 ರೂ. ಲಾಭ ದೊರಕಿತು. ಒಟ್ಟಾರೆ 10,015 ರೂ.ಗಳ ವಹಿವಾಟು ನಡೆಯಿತು. ಲಾಭದ ಮೇಲೆ 679 ರೂ. ‘ಸಂತೆ ಸುಂಕ’ ಸಂಗ್ರವಾಯಿತು. 59ಮಳಿಗೆಗಳಲ್ಲಿ 41ಮಳಿಗೆಗಳು ಲಾಭವನ್ನೂ, 11 ಮಳಿಗೆಗಳು ನಷ್ಟವನ್ನೂ, 5ಮಳಿಗೆಗಳು ಲಾಭ-ನಷ್ಟದ ಸಮತೋಲನವನ್ನು ಅನುಭವಿಸಿದವು.

ಬೆಳಗ್ಗೆ 11 ಗಂಟೆಗೆ ಅಗತ್ಯ ಸಿದ್ಧತೆಗಳೊಂದಿಗೆ ಆರಂಭವಾದ ‘ಮಕ್ಕಳ ಸಂತೆ’ಯನ್ನು ಮೆಲ್ಲಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಿ.ಪಿ.ಮಂಜುನಾಥ್ ಅವರು ‘ಸೊಪ್ಪು’ ಖರೀದಿಸುವ ಮೂಲಕ ಉದ್ಘಾಟಿಸಿದರು. ಶಿಕ್ಷಕ ಮತ್ತು ಸಾಹಿತಿ ಟಿ.ಸತೀಶ್ ಜವರೇಗೌಡ ಅವರು ವಿದ್ಯಾರ್ಥಿಗಳಿಗೆ ಬಂಡವಾಳ, ಹೂಡಿಕೆ, ಅಸಲು, ಲಾಭ, ನಷ್ಟ,  ತೂಕ, ವಂಚನೆ, ತೆರಿಗೆಯಂತಹ ಮಾರುಕಟ್ಟೆಯ ವಿದ್ಯಮಾನಗಳ ಮೂಲಕ ‘ಗಣಿತದ ಮೂಲ ಕ್ರಿಯೆ’ಗಳನ್ನು ಪರಿಚಯಿಸಿದರು.

ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮತ್ತು ಜಿಪಿಟಿ ಶಿಕ್ಷಕ ಹೆಚ್.ಎಸ್. ಸುನೀಲ್ ಕುಮಾರ್ ‘ಮಕ್ಕಳ ಸಂತೆ’ಯ ‘ತೆರಿಗೆ ಅಧಿಕಾರಿ’ಗಳಾಗಿ ಕಾರ್ಯ ನಿರ್ವಹಿಸಿದರು. ಹಾರೋಹಳ್ಳಿಯ ಮುಖ್ಯ ಶಿಕ್ಷಕ ಸಂತೋಷ್ ಬಿ. ಶೆಟ್ಟಿ, ಪ್ರೌಢಶಾಲಾ ಶಿಕ್ಷಕಿಯರಾದ ವಿಜಯಲಕ್ಷ್ಮಿ ಮತ್ತು ಮಹದೇಶ್ವರಿ ಸೇರಿದಂತೆ ಶಾಲೆಯ ಶಿಕ್ಷಕ- ಶಿಕ್ಷಕಿಯರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want