Crime

ಜಾಗ ಸರ್ವೆಗೆ ಹೋದ ಮಹಿಳಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಬೆದರಿಕೆ

ಮೈಸೂರು: ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕಾದ ಜಮೀನು ಪರಿಶೀಲನೆಗೆ ತೆರಳಿದ ಗ್ರಾಮ ಆಡಳಿತ ಮಹಿಳಾ ಅಧಿಕಾರಿಗೆ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದ್ದು, ಈ ಸಂಬಂಧ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ತಾಲೂಕು ಗುಡಮಾದನಹಳ್ಳಿ ಗ್ರಾಮದ ಸರ್ವೇ ನಂಬರ್ 8ರಲ್ಲಿ5.5 ಎಕರೆ, ಸರ್ವೇ ನಂಬರ್ 60ರಲ್ಲಿ 6.10ಎಕರೆ ಹಾಗೂ ಸರ್ವೇ ನಂಬರ್ 68ರಲ್ಲಿ 8.25 ಎಕರೆ ಜಮೀನು ಸೇರಿದಂತೆ ಒಟ್ಟು 20ಎಕರೆ ಜಾಗವನ್ನು ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ. ಇದು ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆಯಾಗಿದ್ದು, ತಮ್ಮ ಸ್ವಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಜಾಗ ಗುರುತಿಸಿ ಸ್ವಾಧೀನ ಪ್ರಕ್ರಿಯೆಗೆ ಆದೇಶ ನೀಡಲಾಗಿತ್ತು.

ಈ  ಹಿನ್ನೆಲೆಯಲ್ಲಿ ಜಮೀನು ಪರಿಶೀಲನೆಗೆ ಗ್ರಾಮ ಆಡಳಿತಾಧಿಕಾರಿ ಬಂಡೀಪಾಳ್ಯ ವೃತ್ತದ ಜಿ.ಭವ್ಯ ಗ್ರಾಮ ಸಹಾಯಕ ನವೀನ್ ಕುಮಾರ್ ಎಂಬುವವರು  ತೆರಳಿದ್ದರು. ಈ ವೇಳೆ ಸದರಿ ಜಮೀನಿನಲ್ಲಿ ಅನಧಿಕೃತವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದ ಪುಟ್ಟಸ್ವಾಮಿ ಎಂಬಾತ ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಸೀಲ್ದಾರ್ ತಲೆ ತೆಗೆಯಬೇಕು. ನಿನ್ನನ್ನು ಇಲ್ಲಿಯೇ ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಪುಟ್ಟಸ್ವಾಮಿಯ ದೌರ್ಜನ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಗ್ರಾಮ ಸಹಾಯಕ ನವೀನ್ ಕುಮಾರ್‌ ಗೂ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿದ್ದಾನೆ. ಕೊಲೆ ಬೆದರಿಕೆ ಹಾಕಿದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಘಟನೆ ಸಂಬಂಧ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

admin
the authoradmin

Leave a Reply

Translate to any language you want