ಶ್ರಮದಲ್ಲಿ ಶ್ರೇಷ್ಠತೆ, ಭಕ್ತಿಯಲ್ಲಿ ಶುದ್ಧತೆ, ಹೃದಯದಲ್ಲಿ ದಾಸೋಹ ಭಾವನೆ ಮೂಡಿಸುವುದೇ ಬಸವ ತತ್ವ
ಅಮೇರಿಕಾದ ಮಹಾಮನೆ ಕಾರ್ಯಕ್ರಮದಲ್ಲಿ ರೂಪ ಕುಮಾರಸ್ವಾಮಿ ಉಪನ್ಯಾಸ

ಅಮೇರಿಕ : ಶ್ರಮದಲ್ಲಿ ಶ್ರೇಷ್ಠತೆ, ಭಕ್ತಿಯಲ್ಲಿ ಶುದ್ಧತೆ, ಹೃದಯದಲ್ಲಿ ದಾಸೋಹ ಭಾವನೆ ಮೂಡಿಸುವುದೇ ಬಸವ ತತ್ವ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಹೇಳಿದರು.

ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ವೀರೇಶ್ ಜಾವ್ಲಿ ಮತ್ತು ಸುಮಿತ್ರಾ ಬಸವರಾಜಪ್ಪ ಅವರ ನಿವಾಸದಲ್ಲಿ ಆಯೋಜಿಸಿದ್ದ ಮಹಾಮನೆ ಕಾರ್ಯಕ್ರಮದಲ್ಲಿ ಅಂತರ್ಜಾಲದ ಮೂಲಕ ಉಪನ್ಯಾಸ ನೀಡಿದ ಅವರು ಇಂದಿನ ಜಾಗತಿಕ ಬದುಕಿನಲ್ಲಿ ಶರಣರ ಚಿಂತನೆಗಳು ಹೇಗೆ ಮಾನಸಿಕ ಶಾಂತಿ, ಕುಟುಂಬ ಸೌಹಾರ್ದ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತವೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು.

ವಚನ ಸಾಹಿತ್ಯದಲ್ಲಿ ಅಡಗಿರುವ ಮಾನವೀಯ ಮೌಲ್ಯಗಳು ಹಾಗೂ ಸ್ತ್ರೀ–ಪುರುಷ ಸಮಾನತೆಯ ಸಂದೇಶಗಳನ್ನು ವಿಶೇಷವಾಗಿ ಪ್ರಸ್ತಾಪಿಸಿದರಲ್ಲದೆ, ಬಸವಣ್ಣನವರ ಬೆಳಕು ಹೃದಯದಲ್ಲಿ ನೆಲೆಗೊಂಡಾಗ, ಅಸಾಧ್ಯವೂ ಸಾಧ್ಯವಾಗುತ್ತದೆ. ಭಕ್ತಿ ಮತ್ತು ಅನುಭವವು ಪ್ರತಿಯೊಂದು ಹಂತದಲ್ಲೂ ಜೀವನವನ್ನು ಹೊಳೆಯಿಸುತ್ತದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಅರ್ಥಶಾಸ್ತ್ರವನ್ನು ಕಾಯಕ, ಇಷ್ಟಲಿಂಗ ಮತ್ತು ದಾಸೋಹ ತತ್ತ್ವಗಳೊಂದಿಗೆ ಜೀವಂತವಾಗಿ ಪ್ರಾಯೋಗಿಕ ರೀತಿಯಲ್ಲಿ ವಿವರಿಸಿದ್ದರು. ಪರುಷಕಟ್ಟೆಯಲ್ಲಿ ಕುಳಿತು ಜನರ ಕಷ್ಟ ನೋವುಗಳನ್ನು ಪರಿಹರಿಸುತ್ತಿದ್ದ ಅವರು, ಜಾತಿ, ವರ್ಗ, ಲಿಂಗ ಭೇದವಿಲ್ಲದೆ ಸಮಾಜದ ಕಲ್ಯಾಣಕ್ಕಾಗಿ ಜೀವನ ನಡೆಸಿದವರು. ವಚನವು ಕೇವಲ ಸಾಹಿತ್ಯವಲ್ಲ, ಬದುಕಿನ ಉಸಿರು, ಮನಸ್ಸಿನ ಬೆಳಕು ಮತ್ತು ಸಮಾಜಕ್ಕೆ ಹಂಚಿಕೊಳ್ಳುವ ಪ್ರೇರಣೆಯಾಗಿದೆ.

ವಚನ ಮತ್ತು ಶರಣ ಪರಂಪರೆಯು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಇತರ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಒಂದು ಶ್ರದ್ಧಾ, ಭಕ್ತಿ ಮತ್ತು ಕಲ್ಯಾಣದ ಪ್ರೇರಣೆಯಾಗಿ ಪರಿಣಮಿಸುವುದರ ಮೂಲಕ, ವಚನ ಸಂಸ್ಕೃತಿ ಮತ್ತು ಶರಣ ಪರಂಪರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಜ್ಞಾನಮಯ ಬೆಳಕನ್ನು ಹರಡುತ್ತಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕಿ ಉಷಾ ಹುನಗುಂದ್ ಅವರು ತಮ್ಮ ಪುತ್ರಿ ಶಿವಂಕರಿ ಅವರೊಂದಿಗೆ ವಚನಗಳನ್ನು ಸುಶ್ರಾವ್ಯವಾಗಿ ಹಾಡಿದರು. ತಾಯಿ–ಮಗಳ ಸಂಗಮದಲ್ಲಿ ಮೂಡಿದ ಭಕ್ತಿಗಾನ ಶ್ರೋತೃಗಳ ಮನಸೂರೆಗೊಂಡಿತು.

ಈ ಸಂಗೀತಯಾತ್ರೆಗೆ ಮನೋಹರ್ ಹುನಗುಂದ್ ಅವರು ಸಂಗೀತದಲ್ಲಿ ಸಮರ್ಥ ಸಹಕಾರ ನೀಡಿ ಕಾರ್ಯಕ್ರಮಕ್ಕೆ ಇನ್ನಷ್ಟು ಲಾವಣ್ಯ ತುಂಬಿದರು. ಭಕ್ತಿ ಸಂಗೀತದ ಮಧುರ ಸ್ವರಗಳು ಸಭಾಂಗಣವನ್ನು ಆವರಿಸಿ, ಇಡೀ ಕಾರ್ಯಕ್ರಮದ ವಾತಾವರಣವನ್ನು ಆಧ್ಯಾತ್ಮಿಕ ಸ್ಪಂದನದಿಂದ ತುಂಬಿ ತುಳುಕುವಂತೆ ಮಾಡಿತು.

ಕಾರ್ಯಕ್ರಮದಲ್ಲಿ ರೇಣುಕಾ ಆರಾಧ್ಯ, ಹರ್ಷ ರಂಜಿನಿ, ಕಾವ್ಯ ಹೆಮ್ಮರನಹಳ್ಳಿ, ವಿನಯ್ ಕಲ್ಲೇಶ್, ಪ್ರಸನ್ನ ಜೋಬಿಗೇನಹಳ್ಳಿ, ಗೌರಿ, ಅರುಣ್ ಶೈಲಜಾ, ಸುಷ್ಮಾ ಅರುಣ್, ಸ್ವಾಮಿ ಬಸವರಾಜ, ಶಶಿಧರ್ ಎಂ. ಕವಿತಾ, ಮಂಜುನಾಥ್ ಶಿವಯ್ಯ, ವಿಜಯ ಚಿಕ್ಕಮಠ, ಅರುಣಕುಮಾರ್, ಪಾವನಿ ಮತ್ತು ಅನೇಕ ಕುಟುಂಬಗಳು ಉಪಸ್ಥಿತರಿದ್ದರು.







