Mysore

ಭೀಮನಕೊಲ್ಲಿ ಶ್ರೀ ಮಹದೇಶ್ವರಸ್ವಾಮಿಯ ಮಹಾರಥೋತ್ಸವ… ಜಯಘೋಷ ಮೊಳಗಿಸಿ ಸಂಭ್ರಮಿಸಿದ ಭಕ್ತರು

 ಹೆಚ್.ಡಿ.ಕೋಟೆ: ತಾಲೂಕಿನ ಪ್ರಸಿದ್ಧ ಭೀಮನಕೊಲ್ಲಿ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ ಮಂಗಳವಾರ ನೆರೆದ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.. ರಥೋತ್ಸವದ ವೇಳೆ ಜಯಘೋಷ ಮೊಳಗಿಸಿದ ಭಕ್ತರು ಮಹದೇಶ್ವರನ ಕಣ್ತುಂಬಿಕೊಂಡು ಕೃತಾರ್ಥರಾದರು.

ರಥೋತ್ಸವದ ಪ್ರಯುಕ್ತ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 6 ಗಂಟೆಗೆ ಸಹಸ್ರ ಬಿಲ್ವಾರ್ಚನೆ, 9 ಗಂಟೆಗೆ ಮಹಾಮಂಗಳಾರತಿ ನಂತರ 10ಗಂಟೆಗೆ ರಥದ ಮೇಲಿನ ಹುಲಿವಾಹನದಲ್ಲಿ ಪುಷ್ಪಗಳಿಂದ  ಅಲಂಕರಿಸಿದ್ದ ಉತ್ಸವ ಮೂರ್ತಿಯನ್ನು ಮಂಗಳವಾದ್ಯ ಮತ್ತು ಬಸವರಾಜು ತಂಡದ ವೀರಗಾಸೆ ಕುಣಿತದೊಂದಿಗೆ ದೇವಸ್ಥಾನದ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತಾಧಿಗಳು ರಥೋತ್ಸವವನ್ನು ಭಕ್ತಿ ಭಾವದಿಂದ ಕಣ್ತುಂಬಿಕೊಂಡು ಭಕ್ತಿ ಪರಾವಶರಾಗಿ ಉಘೆ ಮಾದಪ್ಪ, ಉಘೇ ಮಾದಪ್ಪ  ಎಂದು ಜೈಕಾರ ಮೊಳಗಿಸಿ ಸಂಭ್ರಮಿಸಿದರು.

ಮೂರು ದಿನಗಳ ಜಾತ್ರಾ ಮಹೋತ್ಸವವು  ಜ 26 ಸೋಮವಾರದಿಂದ ಆರಂಭವಾಗಿ ಬೆಳಿಗ್ಗೆ 6ಗಂಟೆಗೆ ಹೋಮ, ಮಹಾರುದ್ರಾಭಿಷೇಕ, 9ಗಂಟೆಗೆ ಮಹಾ ಮಂಗಳಾರತಿ, ರಾತ್ರಿ 12 ಗಂಟೆಗೆ ಹಾಲರವಿ ಸೇವೆ, ದೇವರ ಮೆರವಣಿಗೆ, ಕೊಂಡೊತ್ಸವ. ಜ 27 ರಂದು  ಸಹಸ್ರ ಬಿಲ್ವಾರ್ಚನೆ, 9ಗಂಟೆಗೆ ಮಹಾ ಮಂಗಳಾರತಿ, ರಾತ್ರಿ12ಗಂಟೆಗೆ ಆನೆ ವಾಹನೋತ್ಸವ ನಡೆಯಿತು.

ಜ 28  ಬೆಳಿಗ್ಗೆ 6ಗಂಟೆಗೆ  ಸಹಸ್ರ ಬಿಲ್ವಾರ್ಚನೆ, ಇತರೆ ಪೂಜಾ ಕಾರ್ಯಕ್ರಮಗಳು, ಹಾಗೂ ಬೆಳಿಗ್ಗೆ 9ಗಂಟೆಗೆ ಮಹಾಮಂಗಳಾರತಿ, ಸಂಜೆ 6-00 ಗಂಟೆಗೆ  ಸಮಾರೋಪ ಸಮಾರಂಭ ನಡೆಯಲಿದ್ದು ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯದಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಅಧ್ಯಕ್ಷತೆಯನ್ನು ಶಾಸಕ ಅನಿಲ್ ಚಿಕ್ಕಮಾದು ವಹಿಸಲಿದ್ದಾರೆ. ಸಂಸದ ಸುನೀಲ್ ಬೋಸ್ ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಲಿದ್ದಾರೆ. ರಾತ್ರಿ 12ರ ನಂತರ ತೆಪೋತ್ಸವ ನಡೆಯಲಿದೆ.

ದೇವಸ್ಥಾನದ ಮೂರು ಭಾಗಗಳಲ್ಲಿ ಕಬಿನಿ ಹಿನ್ನೀರು ಆವರಿಸಿದ್ದು ದ್ವೀಪದ ನಡುವೆ ದೇವಸ್ಥಾನ ಕಂಗೊಳಿಸುತ್ತದೆ. ಜಾತ್ರೆ ಪ್ರಯುಕ್ತ ದೇವಸ್ಥಾನವನ್ನು ಹಸಿರು ತಳಿರು ತೋರಣ, ವಿದ್ಯುತ್‌ ದೀಪಾಲಾಂಕರದಿಂದ ಅಲಂಕರಿಸಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲಕ್ಕೆ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ಹೆಚ್ಚುವರಿ ಬಸ್‌ ಸಂಪರ್ಕವನ್ನು ಹೆಚ್‌.ಡಿ.ಕೋಟೆ, ಸರಗೂರು ಮತ್ತು ಮೈಸೂರು ನಗರದಿಂದ ಕಲ್ಪಿಸಲಾಗಿದೆ.

ಕ್ಷೇತ್ರದ ಕಬಿನಿ ಹಿನ್ನೀರಿನ ಮತ್ತೊಂದು ಬದಿಯಲ್ಲಿ ಇರುವ ಕಾರಾಪುರ, ಎನ್‌. ಬೆಳತ್ತೂರು, ಮಗ್ಗೆ, ಮಳಲಿ, ಕೆ.ಆರ್‌.ಪುರ ಮುಂತಾದ ಗ್ರಾಮಗಳಿಂದ ಜನರು, ಕ್ಷೇತ್ರಕ್ಕೆ ಬರಬೇಕಾದರೆ ಕಬಿನಿ ಹಿನ್ನೀರಿನ ಮೂಲಕ ಬರುವುದಕ್ಕೆ. ಜನತೆಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಕಬಿನಿ ಹಿನ್ನೀರಿನ ಮೂಲಕ ಬರಲು ಲೋಕೋಪಯೋಗಿ ಒಳನಾಡು ಜಲಸಾರಿಗೆ ಇಲಾಖೆಯಿಂದ ದೇವಸ್ಥಾನಕ್ಕೆ ಯಾಂತ್ರೀಕೃತ  ಬೋಟ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಜನತೆಗೆ ಅನುಕೂಲವಾಗಿದೆ. ಬೋಟ್‌ ಸಂಚಾರ ಬೆಳಗಿನ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮಾತ್ರ ಇರುತ್ತದೆ. ಜಾತ್ರಾ ಮಹೋತ್ಸವದ ಅಂಗವಾಗಿ  ತೆಪ್ಪೋತ್ಸವ, ದನಗಳ ಪ್ರದರ್ಶನ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಜಾತ್ರಾ ಮಹೋತ್ಸವದ ದಿನಗಳಲ್ಲಿ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ  ತೊಂದರೆಯಾಗದಂತೆ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಸಲು ವಿಶೇಷ ಶಾಮಿಯಾನ ವ್ಯವಸ್ಥೆ ಕಲ್ಪಿಸಿದೆ. ವಿವಿಧ ಭಾಗಗಳಿಂದ 10 ರಿಂದ 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ ನೀರೀಕ್ಷೆ ಇದ್ದು,  ದೇವರ ದರ್ಶನಕ್ಕೆ ಸರತಿ ಸಾಲು ಮಾಡಲಾಗಿದ್ದು, ಅಂತರಸಂತೆ ಠಾಣೆಯ ಆರಕ್ಷಕ ಉಪನಿರೀಕ್ಷಕ ಚಂದ್ರಹಾಸ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.

ಭೀಮನಕೊಲ್ಲಿ ಮಹದೇಶ್ವರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಪಿ.ಎಸ್.ಮೂರ್ತಿ, ಉಪಾಧ್ಯಕ್ಷ ಗುರುಮಲ್ಲಪ್ಪ, ಕಾರ್ಯದರ್ಶಿ ಎಂ.ಎನ್.ಜಗದೀಶ್, ಗೌರವಾಧ್ಯಕ್ಷ ಡಿ.ಸುಂದರದಾಸ್, ಸದಸ್ಯರಾದ ಸುಬ್ಬಣ್ಣ, ಜೆ.ಪಿ.ಶಿವರಾಜು, ಮಳಲಿ ಗುರುಮೂರ್ತಿ, ದಯಾನಂದ, ಬಸವರಾಜು, ವೀರಣ್ಣ, ಬಿ.ಎಚ್.ನಂಜಪ್ಪ,  ಮಲ್ಲಿಕಾರ್ಜುನ್, ಗುರುಲಿಂಗಪ್ಪ , ಬಿ.ವಿ.ಮಾದಪ್ಪ, ರಾಜಣ್ಣ ಇದ್ದರು.

admin
the authoradmin

Leave a Reply

Translate to any language you want