ಈ ಬಾರಿ ಚಳಿ ತನ್ನ ಆಟ ಶುರು ಮಾಡಿದೆ. ಇತ್ತೀಚೆಗಿನ ವರ್ಷಗಳಲ್ಲಿ ವಾತಾವರಣದ ಏರುಪೇರುಗಳಿಂದಾಗಿ ಕಾಲಕ್ಕೆ ತಕ್ಕಂತೆ ಬಿಸಿಲು, ಮಳೆ, ಚಳಿ ಎಲ್ಲದರಲ್ಲೂ ವ್ಯತ್ಯಾಸಗಳು ಕಂಡು ಬರಲಾರಂಭಿಸಿದ್ದು ಇದರ ಪರಿಣಾಮಗಳು ಮನುಷ್ಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಇದೀಗ ಚಳಿ ಆರಂಭವಾಗಿದ್ದು, ಮೈಕೊರೆಯುವ ಚಳಿಗೆ ಜನ ಥರಗುಟ್ಟಲಾರಂಭಿಸಿದ್ದಾರೆ… ಅಯ್ಯೋ ಎಂಥ ಚಳಿಯಪ್ಪಾ… ಎಂದು ಉದ್ಘಾರ ತೆಗೆಯುತ್ತಿದ್ದಾರೆ. ಮುಂಜಾನೆ ಮತ್ತು ಸಂಜೆಯ ಚಳಿ ನಡುಕ ಹುಟ್ಟಿಸುತ್ತಿದೆ. ಜತೆಗೆ ಆರೋಗ್ಯಕ್ಕೂ ಮಾರಕವಾಗುತ್ತಿದೆ.
ಮೈನಡುಗಿಸುವ ಚಳಿ ಮತ್ತು ಶೀತಗಾಳಿಯ ವಾತಾವರಣ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದರಿಂದ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಇನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗಂಭೀರವಾಗಿ ಪರಿಣಗಣಿಸಿದ್ದು ರಾಜ್ಯಾದ್ಯಾಂತ ಹೆಚ್ಚಾಗಿರುವ ತೀವ್ರ ಶೀತಗಾಳಿ ಹಿನ್ನೆಲೆಯಲ್ಲಿ ಶೀತಗಾಳಿಯಿಂದಾಗುವ ಆರೋಗ್ಯ ಸಮಸ್ಯೆಗಳು ಮತ್ತು ಅದನ್ನು ತಡೆಯುವ ಉದ್ದೇಶದಿಂದ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.

ಜನರು ಈ ವೇಳೆ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಶೀತ ಅಲೆ ಅಥವಾ ಗಾಳಿಯಿಂದ ಸುರಕ್ಷತೆ ಪಡೆಯಲು ದಪ್ಪವಾದ ಒಂದೇ ಬಟ್ಟೆಯ ಬದಲಿಗೆ, ಹಲವು ಪದರಗಳ ಸಡಿಲವಾದ, ಹಗುರವಾದ, ಉಣ್ಣೆಯ ಬಟ್ಟೆಗಳನ್ನು ಧರಿಸಿ. ಕೈ ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚಿ, ತಲೆಗೆ ಟೋಪಿ, ಮಫ್ಲರ್ ಗಳನ್ನು ಹಾಕಿಕೊಳ್ಳುವುದು ಅಗತ್ಯವಾಗಿದೆ. ಹಾಗೆಯೇ ಬೆಚ್ಚಗಿನ ಕಾಲುಚೀಲಗಳು ಮತ್ತು ಜಲನಿರೋಧಕ (waterproof) ಶೂಗಳನ್ನು ಬಳಸಿ. ಬಟ್ಟೆ ಒಣಗಿರಬೇಕು. ಬಟ್ಟೆ ಒದ್ದೆಯಾದರೆ (ಬೆವರಿನಿಂದ ಮಳೆಯಿಂದ ಇತ್ಯಾದಿ) ತಕ್ಷಣ ಬದಲಾಯಿಸಿ, ದೇಹವನ್ನು ಹೈಡ್ರೆಟ್ ಆಗಿಡಲು ಬೆಚ್ಚಗಿನ ದ್ರವಗಳನ್ನು (ನೀರು, ಗಿಡಮೂಲಿಕೆ ಚಹಾ ಮತ್ತು ಸೂಪ್ ಇತ್ಯಾದಿ) ನಿಯಮಿತವಾಗಿ ಕುಡಿಯುವುದು ಒಳ್ಳೆಯದು.
ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡುವ ಬೀಟ್ರೋಟ್…
ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ದೇಹದ ಶಾಖವನ್ನು ಹೆಚ್ಚಿಸಲು ವಿಟಿಮಿನ್-ಸಿ ಸಮೃದ್ಧ ಹಣ್ಣುಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರಗಳನ್ನು ಸೇವಿಸಿ. ಸಾಧ್ಯವಾದಷ್ಟು ಮನೆಯೊಳಗ ಇರಲು ಪ್ರಯತ್ನಿಸಿ, ವಿಶೇಷವಾಗಿ ಹೆಚ್ಚು ಚಳಿಯಿರುವ ಸಮಯದಲ್ಲಿ (ಬೆಳಗಿನ ಜಾವ ಮತ್ತು ತಡರಾತ್ರಿ). ಅನಾರೋಗ್ಯ ಪೀಡಿತರು, ಅಸ್ವಸ್ಥರ ಬಗ್ಗೆ ಗಮನ ಕೊಡಬೇಕು, ವೃದ್ಧರು, ಮಕ್ಕಳು ಮತ್ತು, ಶಿಶುಗಳು ಸಾಕಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳುವುದು ಬಹುಮುಖ್ಯವಾಗಿದೆ.

ಹೈಪೋಥರ್ಮಿಯಾ (ನಡುಕ, ಗೊಂದಲ, ತೊದಲುವ ಮಾತು) ಮತ್ತು ಫ್ರಾಸ್ಟ್ ಬೈಟ್ (ನಿಶ್ಲೇಷತೆ, ಬಿಳಿ ಅಥವಾ ಮೇಣದಂತಹ ಚರ್ಮ) ನಂತಹ ಚಳಿ- ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಚಳಿ ಮತ್ತು ಒಣಗಾಳಿಯಿಂದ ಚರ್ಮಬಿರುಕು ಬಿಡುವುದನ್ನು ತಡೆಯಲು ಎಣ್ಣೆ, ಪೆಟ್ರೋಲಿಯಂ, ಜೆಲ್ಲಿ ಅಥವಾ ಕ್ರೀಮ್‌ನಿಂದ ನಿಯಮಿತವಾಗಿ ಚರ್ಮವನ್ನು ತೇವಗೊಳಿಸಿ. ದೂರದರ್ಶನ, ರೇಡಿಯೋ ಅಥವಾ ಪತ್ರಿಕೆಗಳ ಮೂಲಕ ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ದೈನಂದಿನ ಹವಾಮಾನ ಮಾಹಿತಿಯನ್ನು ನೋಡಿ ಮಾಹಿತಿ ತಿಳಿದುಕೊಂಡು ಎಚ್ಚರಿಕೆಯನ್ನು ವಹಿಸುವುದು ಅಗತ್ಯ.
ಇದನ್ನೂ ಓದಿ: ಐವತ್ತರ ನಂತರದ ಬದುಕಿಗೆ ಮಹಿಳೆಯರು ತಯಾರಾಗುವುದು ಹೇಗೆ?
ಶೀತ ಅಲೆ, ಗಾಳಿ ಸಂದರ್ಭದಲ್ಲಿ ಏನೆಲ್ಲ ಮಾಡಬಾರದು ಎಂದರೆ, ಮದ್ಯಪಾನ ಮಾಡಬೇಡಿ. ಇದು ಬೆಚ್ಚಗಿನ ಭಾವನೆಯನ್ನು ನೀಡುತ್ತದೆ ಎಂಬುದು ಸುಳ್ಳು. ಆದರೆ ವಾಸ್ತವವಾಗಿ ನಿಮ್ಮ ದೇಹದ ಮುಖ್ಯ ತಾಪಮಾನವನ್ನು ಕಡಿಮೆ ಮಾಡುತ್ತದೆ, ಹೈಪೋಥರ್ಮಿಯಾದ ಅಪಾಯವನ್ನು ಹೆಚ್ಚಿಸುತ್ತದೆ. ನಡುಕವನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹವು ಶಾಖವನ್ನು ಕಳೆದುಕೊಳ್ಳುತ್ತಿದೆ ಎಂಬುದರ ಮೊದಲ ಚಿಹ್ನೆ. ತಕ್ಷಣ ಮನೆಯೊಳಗೆ ಹೋಗಿ. ಫ್ರಾಸ್ಟ್ ಬೈಟ್ ಅಥವಾ ಚಳಿಯಿಂದ ಮರಗಟ್ಟಿದ ಚರ್ಮದ ಪ್ರದೇಶವನ್ನು ಉಜ್ಜಬೇಡಿ ಅಥವಾ ಮಸಾಜ್ ಮಾಡಬೇಡಿ. ಇದು ತೀವ್ರವಾದ ಅಂಗಾಂಶ ಹಾನಿಯನ್ನು ಉಂಟುಮಾಡಬಹುದು.

ಫ್ರಾಸ್ಟ್ ಬೈಟ್ ಆದ ಚರ್ಮವನ್ನು ಬೆಚ್ಚಗಾಗಿಸಲು ನೇರವಾದ, ತೀವ್ರವಾದ ಶಾಖವನ್ನು (ಹೀಟಿಂಗ್ರಾಡ್, ಬೆಂಕಿ ಅಥವಾ ಬಿಸಿನೀರು) ಬಳಸಬೇಡಿ, ಏಕೆಂದರೆ ನಿಶ್ಲೇಷಗೊಂಡ ಪ್ರದೇಶವು ಸುಲಭವಾಗಿ ಸುಟ್ಟು ಹೋಗಬಹುದು. ಗಾಳಿಯಿಲ್ಲದ ಮುಚ್ಚಿದ ಕೋಣೆಯಲ್ಲಿ ಕಲ್ಲಿದ್ದಲು, ಕಟ್ಟಿಗೆ ಅಥವಾ ಕ್ಯಾಂಡಲ್‌ಗಳನ್ನು ಉರಿಸಬೇಡಿ. ಇದು ಮಾರಣಾಂತಿಕ ಕಾರ್ಬನ್ ಅಂಶಕ್ಕೆ ಕಾರಣವಾಗಬಹುದು. ಬೆಂಕಿ ಅಥವಾ ತಾಪನ ಸಾಧನವನ್ನು ಹಾಗಾಗ ಗಮನಿಸುತ್ತಿರಿ. ಹೆಚ್ಚು ದೈಹಿಕ ಶ್ರಮ ಮಾಡಬೇಡಿ (ಉದಾಹರಣೆಗೆ, ತೀವ್ರವಾದ ಹೊರಾಂಗಣ ಕೆಲಸ) ಹೆಚ್ಚು ಬೆವರುವಿಕೆಯು ನಿಮ್ಮ ಬಟ್ಟೆಗಳನ್ನು ಒದ್ದೆ ಮಾಡಿ ವೇಗವಾಗಿ ತಣ್ಣಗಾಗಲು ಕಾರಣವಾಗಬಹುದು.
ಇದನ್ನೂ ಓದಿ: ಮಹಿಳೆಯರಲ್ಲಿ ಫಲವಂತಿಕೆ ದರ ಇಳಿಯುತ್ತಿದೆಯಾ?
ಚಳಿಗಾಲದಲ್ಲಿ ಪ್ರತಿಯೊಬ್ಬರೂ ಅವರವರ ದೈನಂದಿನ ಕೆಲಸಗಳನ್ನು ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಚಳಿ ಎಂಬ ಕಾರಣಕ್ಕೆ ಮನೆಯಲ್ಲಿಯೇ ಹೊದ್ದು ಕೂರಲು ಸಾಧ್ಯವಿಲ್ಲ. ಆದರೆ ಒಂದಷ್ಟು ಎಚ್ಚರಿಕೆ ವಹಿಸಿ ತಮ್ಮ ಇತಿಮಿತಿಯಲ್ಲಿ ಆರೋಗ್ಯ ರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮರೆಯಬಾರದು. ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಬಹುಮುಖ್ಯವಾಗಿದೆ. ಇನ್ನು ವಾತಾವರಣ ಬದಲಾದಂತೆ ಕೆಲವೊಂದು ಆರೋಗ್ಯದ ಸಮಸ್ಯೆಗಳು ಕಾಣಿಸುವುದು ಮಾಮೂಲಿ. ಹಾಗೆಂದು ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.
B M Lavakumar








