Latest

ಮಲ್ಪೆ ದೋಣಿ ದುರಂತದಲ್ಲಿ ಚಾಮರಾಜನಗರ, ಮೈಸೂರಿನ ಇಬ್ಬರು ಸಾವು… ಇನ್ನಿಬ್ಬರು ಗಂಭೀರ

ಮೈಸೂರು: ಮೈಸೂರಿನ ಖಾಸಗಿ ಸಂಸ್ಥೆ ಉಡುಪಿಗೆ ಹಮ್ಮಿಕೊಂಡಿದ್ದ ಪ್ರವಾಸದ ವೇಳೆ ಮಲ್ಪೆಯಲ್ಲಿ ವಿಹಾರ ನಡೆಸುತ್ತಿದ್ದ ದೋಣಿ ಮಗುಚಿದ ಘಟನೆಯಲ್ಲಿ  ಸಂಸ್ಥೆಯ ಉದ್ಯೋಗಿಗಳಾಗಿದ್ದ ಚಾಮರಾಜನಗರ ಮತ್ತು ಮೈಸೂರಿನ ನಿವಾಸಿಗಳಿಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಆ ಮೂಲಕ  ಮನರಂಜನೆಯ ವಾರಾಂತ್ಯ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಂತಾಗಿದೆ.ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ (27) ಹಾಗೂ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಸಿಂಧು (25) ಮೃತಪಟ್ಟ ದುರ್ದೈವಿಗಳು. ಇನ್ನು ಗಂಭೀರವಾಗಿ ಗಾಯಗೊಂಡಿರುವ ಧರ್ಮರಾಜ (26) ಮತ್ತು ದೀಶಾ (26) ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದು, ಅವರ ಸ್ಥಿತಿ ಸ್ಥಿರವಾಗಿದ್ದರೂ ಆತಂಕಕಾರಿ ಎಂದು ಹೇಳಲಾಗುತ್ತಿದೆ

.ಘಟನೆ ನಡೆದಿದ್ದು  ಹೇಗೆ ಎಂಬುದರ ಕುರಿತಂತೆ ಪೊಲೀಸ್ ತನಿಖೆಯ ಪ್ರಾಥಮಿಕ ವರದಿ ಪ್ರಕಾರ, ಮೈಸೂರು ಸರಸ್ವತಿಪುರಂನಲ್ಲಿರುವ ಗೋಲ್ಕ್ರಿಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಬಿಪಿಒ ಕಂಪನಿಯ 28ನೌಕರರು ಭಾನುವಾರ ಉಡುಪಿ ಪ್ರವಾಸಕ್ಕೆ ತೆರಳಿದ್ದರು. ಸೋಮವಾರ, ಮಲ್ಪೆ ಬೀಚ್‌ನ ಡೆಲ್ಟಾ ಬೀಚ್ ಪಾಯಿಂಟ್‌ನಿಂದ ದಿ ವೇವ್ ರೈಡರ್ ದೋಣಿಯಲ್ಲಿ 14 ಮಂದಿ ಪ್ರಯಾಣ ಆರಂಭಿಸಿದ್ದರು. ಈ ದೋಣಿಯನ್ನು ವೇವ್ ರೈಡರ್ಸ್ ಕಂಪನಿ ನಡೆಸುತ್ತಿತ್ತು.

ಎಲ್ಲಾ ಪ್ರಯಾಣಿಕರಿಗೆ ಜೀವ ರಕ್ಷಕ ಜಾಕೆಟ್‌ಗಳನ್ನು ನೀಡಲಾಗಿದ್ದರೂ, ಕೆಲವರು ಮಾತ್ರ ಅವನ್ನು ಧರಿಸಿದ್ದರೆನ್ನಲಾಗಿದೆ. ಮಧ್ಯಾಹ್ನದ ವೇಳೆಯಲ್ಲಿ ಸ್ವರ್ಣಾ ನದಿ ಸಮುದ್ರ ಸೇರುವ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಯಾರ್ಡ್ ಸಮೀಪ ದೋಣಿ ಮಗುಚಿ, ಅದರಲ್ಲಿದ್ದ ಎಲ್ಲಾ 14 ಮಂದಿ ನೀರಿಗೆ ಬಿದ್ದಿದ್ದಾರೆ. ಸ್ಥಳೀಯ ಮೀನುಗಾರರು ಹಾಗೂ ಇತರ ದೋಣಿ ಚಾಲಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಎಲ್ಲ ಪ್ರಯಾಣಿಕರನ್ನು ರಕ್ಷಿಸಿದರೂ ಶಂಕರಪ್ಪ ಮತ್ತು ಸಿಂಧು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಾತನಾಡಿದ ಸರಸ್ವತಿಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಪುರುಷೋತ್ತಮ್, ಮಲ್ಪೆ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಬಸ್-ಬೈಕ್ ನಡುವೆ ಅಪಘಾತ: ಸವಾರ ಸಾವು 

ಚಾಮರಾಜನಗರ : ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಸವಾರ ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಮಲೆಯೂರು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಮಲೆಯೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತವಾಗಿದ್ದು, ಬೈಕ್ ಸವಾರ ಶಿವಸ್ವಾಮಿ ಆಲಿಯಾಸ್ ಪುಟ್ಟ (30) ಎಂಬಾತನಿಗೆ ತಲೆಗೆ ತೀವ್ರವಾದ ಪೆಟ್ಟಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟನು. ಮತ್ತೊಬ್ಬ ಸವಾರನಿಗೆ ಪೆಟ್ಟಾಗಿದ್ದು, ಆಂಬುಲೆನ್ಸ್ ಮೂಲಕ ಸಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ರಸ್ತೆ ಅಪಘಾತವು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ  ಭೆಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿ ತನಿಖೆ ಕಾರ್ಯ ಕೈಗೊಂಡಿದ್ದಾರೆ.

ಹಾಸನೂರು ಕಾರ್ಯಪಾಳ್ಯ ಚೆಕ್‌ಪೋಸ್ಟ್‌ಗೆ ಸಲಗ ಎಂಟ್ರಿ

ಚಾಮರಾಜನಗರ: ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಬಳಿಯ ಕಾರ್ಯಪಾಳ್ಯ ಚೆಕ್‌ಪೋಸ್ಟ್‌ಗೆ ಒಂಟಿ ಸಲಗವೊಂದು ಮುತ್ತಿಗೆ ಹಾಕಿ ಭಯದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದೆ.  ಈ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಆನೆ, ಚಿರತೆ, ಹುಲಿ, ಕರಡಿ, ಕೆನ್ನಾಯಿ ಸೇರಿದಂತೆ ಮುಂತಾದ ಕಾಡು ಪ್ರಾಣಿಗಳು ವಾಸಿಸುತ್ತವೆ.

ಕರ್ನಾಟಕ ತಮಿಳುನಾಡು ಗಡಿ ಪ್ರದೇಶವಾಗಿರುವ ಕಾರ್ಯಪಾಳ್ಯಂ ಫಾರೆಸ್ಟ್ ಚೆಕ್ಸ್‌ಪೋಸ್ಟ್ ಗೆ ಬಂದ ಒಂಟಿ ಸಲಗ ಅಲ್ಲೇ ಇದ್ದ ಕಾರಿನತ್ತ ಬರಲು ಆರಂಭಿಸಿತು. ಇದನ್ನು ಕಂಡ ಫಾರೆಸ್ಟ್ ಸಿಬ್ಬಂದಿಯೊಬ್ಬರು ಶಬ್ದ ಮಾಡುವ ಮೂಲಕ ಕಾಡಾನೆ ಕಾಡಿನತ್ತ ತೆರಳಿತು. ಓಂಟಿ ಸಲಗ ಚೆಕ್ ಪೋಸ್ಟ್ ಗೆ ಬಂದಿದ್ದನ್ನು ಕಂಡ ಸ್ಥಳೀಕರು ಮತ್ತು ಅರಣ್ಯ ಸಿಬ್ಬಂದಿಗಳು ಆತಂಕದಿಂದ ಇದ್ದರು. ಕಾಡಾನೆ ಕಾಡಿನತ್ತ ತೆರಳಿದ ಬಳಿಕ ನಿಟ್ಟಿಸಿರು ಬಿಟ್ಟಿದ್ದಾರೆ.

ಗುಂಡ್ಲುಪೇಟೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಬಂಧನ

ಚಾಮರಾಜನಗರ: ಮನೆಯೊಂದರಲ್ಲಿ  ವೇಶ್ಯಾವಾಟಿಕೆ ನಡೆಸುತ್ತಿದ್ದನ್ನು ಪತ್ತೆ ಹಚ್ಚಿದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಜನತಾ ಕಾಲೋನಿಯಲ್ಲಿ ರವಿ ಎಂಬಾತ ತನ್ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿಯ ಮೇರೆಗೆ ಗುಂಡ್ಲುಪೇಟೆ ಪೊಲೀಸರು ಮಂಗಳವಾರ  ಮಧ್ಯಾಹ್ನದ ವೇಳೆಯಲ್ಲಿ ರವಿಯ ಜನತಾ ಕಾಲೋನಿಯ ಮನೆ  ಮೇಲೆ ದಾಳಿ ನಡೆಸಿದಾಗ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಮನೆಯನ್ನು ತಪಾಸಣೆ ಮಾಡಿದಾಗ ಕಾಂಡೂಮ್‌ ಹಾಗೂ ನಾಲ್ಕು ಬೈಕ್‌ ಮತ್ತು 4300 ರೂ ನಗದು ಪತ್ತೆಯಾಗಿ,  ಮಹಿಳೆ ತ್ತು ಇಬ್ಬರು ಪುರುಷರು ಸಿಕ್ಕಿಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಪೊಲೀಸ್‌ ಠಾಣೆಯ ಆರಕ್ಷಕ ನಿರೀಕ್ಷಕ ಎನ್.ಜಯಕುಮಾರ್, ಸಬ್‌ ಇನ್ಸ್‌ ಪೆಕ್ಟರ್ ನರೇಶ್ ಕುಮಾರ್, ಸಹಾಯಕ ಸಬ್‌ ಇನ್ಸ್‌ ಪೆಕ್ಟರ್‌ ಮಹೇಶ್.ಎ,  ಮುಖ್ಯ ಪೇದೆ ಬಂಟಪ್ಪ, ಸಿದ್ದರಾಜು, ಕಿಶೋರ್,  ಶಿವರಾಜು, ಮಾದಲಾಂಬಿಕಾ,  ಪೇದೆ ಗಳಾದ ಲಕ್ಷ್ಮಣ್ ಗೊಳಸಂಗಿ,  ನಟೇಶ ಹಾಗೂ ಚಾಲಕ ಜಯಕುಮಾರ್ ರವರು ಭಾಗವಹಿಸಿದ್ದರು.  ಪ್ರಕರಣ ಪತ್ತೆ ಹಚ್ಚಿದ  ತಂಡವನ್ನು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್ ಎಂ ಶ್ಲಾಘಿಸಿದ್ದಾರೆ.

 

admin
the authoradmin

Leave a Reply

Translate to any language you want