LatestPolitical

ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಭೂವರಾಹಸ್ವಾಮಿ ದೇವರಿಗೆ ಪೂಜೆ, ಪ್ರಾರ್ಥನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ: ಭೂವರಾಹಾಸ್ವಾಮಿ ದೇವರೆ ನನ್ನನ್ನು ಇಂದು ಇಲ್ಲಿಗೆ ಕರೆಸಿಕೊಂಡಿದ್ದಾರೆ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಭೂವರಾಹಸ್ವಾಮಿ ದೇವಾಲಯದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ದೇವಾಲಯದ ಭೇಟಿ ಬಗ್ಗೆ ಕೇಳಿದಾಗ, ಇವತ್ತು ಬೆಳಿಗ್ಗೆಯಷ್ಟೇ ದೇವಾಲಯ ಭೇಟಿ ಕಾರ್ಯಕ್ರಮ ನಿಗದಿಯಾಯಿತು. ನಾನು ಮೊದಲ ಬಾರಿಗೆ ಈ ದೇವಾಲಯಕ್ಕೆ ಬಂದಿದ್ದೇನೆ. ನಾನು ತಿಹಾರ್ ಜೈಲಿನಲ್ಲಿ ಇದ್ದಾಗ ನಮ್ಮ ಅತ್ತೆ, ಮಾವ 4 ಬಾರಿ ಈ ದೇವಾಲಯಕ್ಕೆ ಬಂದಿದ್ದರು. ಕಳೆದ ಎರಡು ವರ್ಷಗಳಿಂದ ಬೇರೆ ಪಕ್ಷದ ಸ್ನೇಹಿತರೊಬ್ಬರು ಇಲ್ಲಿಗೆ ಭೇಟಿ ನೀಡುವಂತೆ ತಿಳಿಸಿದರು. ಇಲ್ಲಿ ಬಂದು ನೋಡಿದಾಗ ನನಗೆ ದೇವರ ಮಹಿಮೆ ಅರ್ಥ ಆಯ್ತು.

ಇದು ಮಂಡ್ಯ ಜಿಲ್ಲೆಯ ಅದ್ಭುತ, ಐತಿಹಾಸಿಕ ದೇವಾಲಯ. ಎಲ್ಲಾ ಧರ್ಮದ ಜನ ಈ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಅದನ್ನು ನೋಡಿ ಖುಷಿ ಎನಿಸಿತು. ದೇವರ ವಿಗ್ರಹ ಬಹಳ ಸುಂದರವಾಗಿದೆ. ಈ ದೇವಾಲಯ ಕಟ್ಟಲು ಕೆಲಸ ಮಾಡುತ್ತಿರುವವರು ಮುಸ್ಲಿಮರು. ಈ ದೇವಾಲಯದಲ್ಲಿ ಜಾತಿ, ಧರ್ಮ ಇಲ್ಲ. ಇವತ್ತು ಈ ದೇವಾಲಯಕ್ಕೆ ಬರಲು ಕಾರಣ ದೇವರ ಪ್ರೇರಣೆ. ರಾಜ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಹೇಳಿದರು.

ನಿಮಗೆ ಸಿಎಂ ಸ್ಥಾನ ಸಿಗಲಿ ಎಂದು ಹೋಮ ಮಾಡಲಾಗಿದೆಯೇ ಎಂದು ಕೇಳಿದಾಗ, “ಈ ವಿಚಾರ ನನಗೆ ಗೊತ್ತಿಲ್ಲ. ಬರಬೇಕಾದರೇ ಏನಾದರೂ ತರಬೇಕಾ ಎಂದು ಅರ್ಚಕರನ್ನು ಕೇಳಿದೆ. ಏನೂ ಬೇಡ ಬಂದು ದರ್ಶನ ಮಾಡಿ ಸಾಕು. ಅರ್ಚಕರು ಧಾರ್ಮಿಕವಾಗಿ ಪವಿತ್ರವಾದ ಕೆಲಸ ಮಾಡುತ್ತಿದ್ದಾರೆ. ಯಾರು ಯಾವ ಪ್ರಾರ್ಥನೆ ಮಾಡಿದ್ದಾರೋ ಗೊತ್ತಿಲ್ಲ. ಬಂದು ದರ್ಶನ ಮಾಡಿ ಎಂದರು, ನಾನು ಬಂದಿದ್ದೇನೆ. ದೇವರೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾನೆ” ಎಂದು ತಿಳಿಸಿದರು.

ವಿಶ್ವ ಒಕ್ಕಲಿಗ ಮಠದ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಕೇಳಿದಾಗ, ಎಲ್ಲಾ ಹಿರಿಯರು, ಸ್ವಾಮೀಜಿಗಳು, ಮಕ್ಕಳು ನನ್ನನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದಾರೆ, ಆಶೀರ್ವಾದ ಮಾಡುತ್ತಿದ್ದಾರೆ ಅಷ್ಟೇ  ಎಂದು ತಿಳಿಸಿದರು.

admin
the authoradmin

Leave a Reply

Translate to any language you want