Political

ಟ್ರಬಲ್ ಶೂಟರ್ ಡಿಕೆಶಿ ಸಿಎಂ ಆಗೋದು ಡೌಟು.. ಅನುಮಾನ ಹುಟ್ಟು ಹಾಕುತ್ತಿರುವ ಹೈಕಮಾಂಡ್  ನಡೆ!

 ಟ್ರಬಲ್ ಶೂಟರ್ ಕನಕಪುರದ ಬಂಡೆಗೆ ಕರ್ನಾಟಕ ಚಕ್ರಾಧಿಪತ್ಯ ಅರ್ಥಾತ್  ಸಿಎಂ ಸ್ಥಾನ ಸಿಗುವ ಯಾವುದೇ ಲಕ್ಷಣಗಳು ಸಧ್ಯಕ್ಕೆ ಗೋಚರಿಸುತ್ತಿಲ್ಲ. ಏಕೆಂದರೆ ಈಗಾಗಲೇ ಹೈಕಮಾಂಡ್ ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವತ್ತ ಗಮನಹರಿಸದೆ ಅಸ್ಸಾಂ ವಿಧಾನಸಭಾ ಚುನಾವಣೆಯತ್ತ ಮುಖ ಮಾಡಿದ್ದು, ಅಲ್ಲಿಗೆ ವೀಕ್ಷಕರನ್ನಾಗಿ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡಿದೆ. ಇದು ಪರೋಕ್ಷವಾಗಿ ಸಿದ್ದರಾಮಯ್ಯರವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎನ್ನುವ ಸೂಚನೆಯಾ? ಹಾಗಾದರೆ ಡಿಕೆಶಿ ಸಿಎಂ ಆಗಲ್ವಾ?

ಕಳೆದೊಂದು ವರ್ಷಂದೀಚೆಗೆ ಪವರ್ ಶೇರಿಂಗ್ ಫೈಟ್ ರಾಜ್ಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳು ಸಮಯ ಸಿಕ್ಕಾಗಲೆಲ್ಲ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ವಿಚಾರಗಳನ್ನು ತೇಲಿ ಬಿಡುತ್ತಲೆ ಇದ್ದಾರೆ. ಡಿ.ಕೆ.ಶಿವಕುಮಾರ್ ರಾಜ್ಯ ನಾಯಕರಿಗಿಂತ ಹೆಚ್ಚಾಗಿ ಹೈಕಮಾಂಡ್ ನಾಯಕರ ಮೇಲೆ ಭರವಸೆ ಇಟ್ಟಿದ್ದರು. ಆದರೆ ಹೈಕಮಾಂಡ್  ಅದ್ಯಾಕೋ  ಕರುಣೆ ತೋರಿದಂತೆ ಕಾಣಿಸುತ್ತಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಮುಂದೇನು ಮಾಡುತ್ತಾರೆ ಎಂಬುದೇ ಕುತೂಹಲದ ವಿಚಾರವಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಹೀಗಿರುವಾಗ ಇಲ್ಲಿ ಏನಾದರೂ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಕಿತ್ತು ಡಿ.ಕೆ.ಶಿವಕುಮಾರ್ ಅವರಿಗೆ ನೀಡುವುದು ಅಷ್ಟು ಸುಲಭವಾಗಿ  ಉಳಿದಿಲ್ಲ. ಅಹಿಂದ ಅಸ್ತ್ರವನ್ನು ಬಳಸಿಯೇ ಇಲ್ಲಿವರೆಗೆ ಸಿಎಂ ಸಿದ್ದರಾಮಯ್ಯ ಬಂದು ನಿಂತಿದ್ದಾರೆ. ಅವರ ಬೆನ್ನಿಗೆ ಹಿಂದುಳಿದ ಸಮುದಾಯದ ನಾಯಕರು, ಅಲ್ಪಸಂಖ್ಯಾತ ನಾಯಕರು ಹೀಗೆ ಹಲವರಿದ್ದಾರೆ. ಹೀಗಿರುವಾಗ ಹೈಕಮಾಂಡ್ ಗೂ ಅಧಿಕಾರ ಹಸ್ತಾಂತರ ಮಾಡುವುದು ಸುಲಭವಾಗಿ ಉಳಿದಿಲ್ಲ. ಹೀಗಾಗಿಯೇ ಹೈಕಮಾಂಡ್ ಸರ್ಕಸ್ ಮಾಡಿಕೊಂಡು ಬರುತ್ತಿದೆ.

2023ರಲ್ಲಿ ಅಧಿಕಾರ ಹಿಡಿಯುವಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರವನ್ನು ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಳಿಕ ಅದಕ್ಕೊಂದು ನ್ಯಾಯಯುತ ಸ್ಥಾನ ಒದಗಿಸಿದ್ದಾರೆ. ಹಂಚಿಹೋಗಿದ್ದ, ಮೌನಕ್ಕೆ ಜಾರಿದ್ದ ನಾಯಕರನ್ನೆಲ್ಲ ಒಂದೆಡೆ ಸೇರಿಸಿ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ. ಪಕ್ಷದ ಸಂಘಟನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ಇದೆಲ್ಲವೂ ಅವರಿಗೆ ಗೆಲುವನ್ನು ತಂದುಕೊಟ್ಟಿದೆ. ಹಾಗೆಂದು ಎಲ್ಲವೂ ಡಿ.ಕೆ.ಶಿವಕುಮಾರ್ ಅವರಿಂದಲೇ ಆಯಿತಾ? ಖಂಡಿತಾ ಇಲ್ಲ. ಸಿದ್ದರಾಮಯ್ಯ ಅವರ ವರ್ಚಸ್ಸು ಕೆಲಸ ಮಾಡಿದೆ.

ಇನ್ನು ಅವತ್ತು ಚುನಾವಣೆ ನಡೆದು ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆಯನ್ನು  ಮೀರಿ ಗೆದ್ದು ಬಂದಾಗ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿಯೇ ತೀರುತ್ತೇನೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಸಿದ್ದರಾಮಯ್ಯ ಅವರು ಬಿಗಿಪಟ್ಟು ಹಿಡಿದ ಕಾರಣದಿಂದಾಗಿ ಕೆಲ ದಿನಗಳ ಹಗ್ಗಜಗ್ಗಾಟದ ಬಳಿಕ ಸಿದ್ದರಾಮಯ್ಯ ಅವರೇ ಸಿಎಂ ಎಂದು ಘೋಷಣೆ ಮಾಡಲಾಯಿತು. ಈ ವೇಳೆ ಡಿ.ಕೆ.ಶಿ ಡಿಸಿಎಂ ಆದರು. ಬಹುಶಃ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಅಧಿಕಾರದ ಹಸ್ತಾಂತರದ ಒಪ್ಪಂದವೂ ಆಗಿತ್ತು ಎಂಬ ಮಾತುಗಳು ಅಲ್ಲಿಂದ ಇಲ್ಲಿವರೆಗೂ  ಇದೆ.

ಇವತ್ತು ಡಿ.ಕೆ.ಶಿವಕುಮಾರ್ ಕಾರ್ಯಕ್ರಮಗಳ ವೇದಿಕೆಗಳಲ್ಲಿ ನಂಬಿಕೆಯ ಮಾತುಗಳನ್ನಾಡುತ್ತಿರುವುದು, ಹಿಂದೊಮ್ಮೆ ರಾಷ್ಟ್ರೀಯ ಮಾಧ್ಯಮಕ್ಕೆ ಪವರ್ ಶೇರಿಂಗ್ ಬಗ್ಗೆ ಹೇಳಿಕೆ ನೀಡಿರುವುದು ಮತ್ತು ಅವರ ಬೆಂಬಲಿಗರು ಆಗಾಗ್ಗೆ ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೂಗುತ್ತಿರುವುದು ಇದೆಲ್ಲವೂ ಅವತ್ತು ಒಪ್ಪಂದ  ಆಗಿದೆ ಎಂಬುದನ್ನು ಸೂಚಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ. ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರ ಪಡೆದಾಗ ಅವರ ನಡುವಿನ ಒಪ್ಪಂದ ಬಹಿರಂಗವಾಗಿತ್ತು.

ಆದರೆ ಇಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವತ್ತು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಏನು ಒಪ್ಪಂದ ಆಗಿತ್ತು ಎಂಬುದನ್ನು ಬಹಿರಂಗಗೊಳಿಸಿಲ್ಲ. ಹೈಕಮಾಂಡ್ ಮತ್ತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಗೊತ್ತಿದೆ. ಒಂದು ವೇಳೆ ಒಪ್ಪಂದ ಆಗಿಯೂ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡದೆ ಸತಾಯಿಸುತ್ತಿದ್ದರಾ? ಅಥವಾ ಡಿ.ಕೆ.ಶಿವಕುಮಾರ್ ಸಿಎಂ ಆಗಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೋ ಗೊತ್ತಿಲ್ಲ. ಇನ್ನು ಇರುವುದು ಕೇವಲ ಎರಡೂವರೆ ವರ್ಷಗಳು ಮಾತ್ರ. ಅದರಲ್ಲೂ ಕೊನೆಯ ವರ್ಷ ಎಲೆಕ್ಷನ್ ವರ್ಷವಾಗಿರುವುದರಿಂದ ಅಧಿಕಾರ ಯಾರೇ ಪಡೆದರೂ ಒತ್ತಡ ಅನುಭವಿಸಲೇ ಬೇಕಾಗುತ್ತದೆ.

ತಮ್ಮ ನೆರಳನ್ನು ನಂಬದ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನ್ನು ನಂಬಿದ್ದರು. ಅದರಲ್ಲೂ ಸೋನಿಯಾಗಾಂಧಿ ಅವರ ಬಗ್ಗೆ ಅಗಾಧ ನಂಬಿಕೆ ಇಟ್ಟಿದ್ದರು. ಅವರು ಯಾವತ್ತೂ ನನ್ನನ್ನು ಕೈ ಬಿಡಲ್ಲ ಎಂಬ ವಿಶ್ವಾಸದಲ್ಲಿದ್ದರು. ಆದರೆ ಇತ್ತೀಚೆಗಿನ ಬೆಳವಣಿಗೆಯನ್ನು ಗಮನಿಸಿದರೆ, ಹೈಕಮಾಂಡ್ ಈ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುವ ಮೂಲಕ ದಿನ ತಳ್ಳುವ ಪ್ರಯತ್ನ ಮಾಡುತ್ತಿದೆಯಾ? ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಇಡೀ ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಅದರಲ್ಲೂ ಸದೃಢವಾಗಿರುವುದು ಕರ್ನಾಟಕ ಮಾತ್ರ. ಆದ್ದರಿಂದ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಸ್ವಲ್ಪ ಎಡವಟ್ಟು ಆದರೂ ಸಮಸ್ಯೆ ಆಗುತ್ತದೆ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ  ಈ ವಿಚಾರದಲ್ಲಿ ಮೌನವಾಗಿದ್ದಾರಾ? ಗೊತ್ತಿಲ್ಲ.

ದೇಶದಲ್ಲಿ ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಮೊದಲಾದ ಕಡೆಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಹೈಕಮಾಂಡ್ ಸಿದ್ಧತೆ ಮಾಡಿಕೊಳ್ಳಲೇ ಬೇಕಾಗಿದೆ. ಕಳೆದ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಎಲ್ಲಿಯೂ ಗೆದ್ದಿಲ್ಲ. ಮುಂದಿನ ಚುನಾವಣೆಗಳಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಹೈಕಮಾಂಡ್ ಆ ಕಡೆಗೆ ಗಮನಹರಿಸುತ್ತಿದೆ. ಇಲ್ಲಿವರೆಗಿನ ಚುನಾವಣೆಗಳನ್ನು ಗಮನಿಸಿದರೆ ರಾಹುಲ್ ಗಾಂಧಿ ಚುನಾವಣಾ ನೇತೃತ್ವ ವಹಿಸಿದ್ದ ಚುನಾವಣೆಗಳಲ್ಲಿ ಗೆಲುವು ಸಿಕ್ಕಿಲ್ಲ. ಹೀನಾಯ ಸೋಲು ಕಂಡಿದೆ. ಹೀಗಾಗಿ ಅವರ ಬದಲಿಗೆ ಈ ಬಾರಿ ಸ್ವತಃ ಪ್ರಿಯಾಂಕ ವಾದ್ರಾ ಅವರೇ ಅಖಾಡಕ್ಕೆ ಇಳಿಯುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.

ಅಸ್ಸಾಂ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಪ್ರಿಯಾಂಕವಾದ್ರಾ ತಾವೇ ಮುಂದೆ ನಿಂತು ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಕ್ರೀನ್ ಕಮಿಟಿಯನ್ನು ಮಾಡಿದ್ದು  ಇದರಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಸೇರಿಸಿದ್ದಾರೆ. ಆ ಮೂಲಕ ಜವಬ್ದಾರಿಯುತ ಸ್ಥಾನವನ್ನು ನೀಡಿದ್ದಾರೆ. ಯಾವತ್ತೂ ಹೈಕಮಾಂಡ್ ತೀರ್ಮಾನವನ್ನು ತಳ್ಳಿ ಹಾಕಿದವರಲ್ಲ. ಅದನ್ನು  ನಿಷ್ಠೆಯಿಂದ ಮಾಡಿದವರು ಡಿಕೆಶಿ. ಇದೀಗ ಸಿಎಂ ಅಧಿಕಾರ ಹಸ್ತಾಂತರದ ತಿಕ್ಕಾಟಗಳು ನಡೆಯುತ್ತಿರುವಾಗಲೇ ಅಸ್ಸಾಂ ಚುನಾವಣೆಯಲ್ಲಿ ವೀಕ್ಷಕ ಸ್ಥಾನದ ಜವಬ್ದಾರಿ ನೀಡಿರುವುದು ಡಿ.ಕೆ.ಶಿವಕುಮಾರ್ ಅವರಿಗೆ  ಅಗ್ನಿಪರೀಕ್ಷೆ ಎಂದರೆ ತಪ್ಪಾಗಲಾರದು.

ಅಸ್ಸಾಂನಲ್ಲಿ ಇವತ್ತು ಸಿಎಂ ಆಗಿರುವ ಹಿಮಂತ್ ಬಿಸ್ವಾ ಶರ್ಮಾ ಒಂದು ಕಾಲದಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕರಾಗಿದ್ದವರು. ಅವರು ರಾಹುಲ್ ಗಾಂಧಿಯವರ ನಡೆಯಿಂದ ಬೇಸತ್ತು ಬಿಜೆಪಿಗೆ ಸೇರಿದ್ದಲ್ಲದೆ, ಆ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತರುವಲ್ಲಿಯೂ ಯಶಸ್ವಿಯಾದವರು. ಅವರ ಮುಂದೆ ಕಾಂಗ್ರೆಸ್ ಗೆಲುವು ಕಾಣುವುದು ಅಷ್ಟೊಂದು ಸುಲಭವಾಗಿ ಉಳಿದಿಲ್ಲ. ಅಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಹೀಗಾಗಿ ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಮತದಾರರನ್ನು ಸೆಳೆಯುವುದು ಒಂದು ಸವಾಲ್ ಆಗಿದ್ದು, ಆ ಸವಾಲನ್ನು ಡಿ.ಕೆ.ಶಿವಕುಮಾರ್ ಎದುರಿಸಿ ಅದರಲ್ಲಿ ಯಶಸ್ವಿಯಾಗುತ್ತಾರಾ? ಹೈಕಮಾಂಡ್ ನಿರ್ಧಾರವಾಗಿರುವ ಕಾರಣದಿಂದಾಗಿ ಅಸ್ಸಾಂನಲ್ಲಿ ಡಿಕೆಶಿ ಕೆಲಸ ಮಾಡಲೇ ಬೇಕಾಗಿದೆ.

ಇದು ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರ ಸಾಮರ್ಥ್ಯ ನೋಡಿ ನೀಡಿದ ಜವಬ್ದಾರಿನಾ? ಕರ್ನಾಟಕದಲ್ಲಿ ನಡೆಯುತ್ತಿರುವ ಪವರ್ ಶೇರಿಂಗ್ ಫೈಟ್ ನ್ನು ತಾತ್ಕಾಲಿಕ ಶಮನಗೊಳಿಸುವ ಪ್ರಯತ್ನನಾ? ಪ್ರಶ್ನೆಯಾಗಿಯೇ ಉಳಿದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡಲು ಸಿದ್ದರಿದ್ದರೂ ಅವರ ಬೆಂಬಲಿಗ ನಾಯಕರು ಅದಕ್ಕೆ ಆಸ್ಪದ ನೀಡದಂತೆ ನೋಡಿಕೊಳ್ಳುತ್ತಿದ್ದು, ಸಿದ್ದರಾಮಯ್ಯ ಅವರ ಪರವಾಗಿ ಬಲಪ್ರದರ್ಶನವನ್ನು ಮೇಲಿಂದ ಮೇಲೆ ಮಾಡಿಕೊಂಡೇ ಬರುತ್ತಿದ್ದಾರೆ. ಅತ್ತ ಡಿ.ಕೆ.ಶಿವಕುಮಾರ್ ಬಣದವರು ಸುಮ್ಮನೆ ಕುಳಿತಿಲ್ಲ. ಸಂಕ್ರಾಂತಿಗೆ ಡಿಕೆಶಿ ಸಿಎಂ ಆಗುತ್ತಾರೆ ಎಂಬ ಮಾತನ್ನು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆದರೂ ನಡೆಯದೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿಯ ಸಿಎಂ ಆಗಿ ಉಳಿದರೂ ಪರಿಣಾಮಗಳು ಮುಂದೆ ಕಾಂಗ್ರೆಸ್ ಪಕ್ಷದ ಮೇಲೆಯೇ ಬೀರಲಿದೆ ಎನ್ನುವುದಂತು ಸತ್ಯ.

ಹೆಚ್ಚಿನ ರಾಜಕೀಯ ಸುದ್ದಿಗಳಿಗಾಗಿ ಇದರ ಮೇಲೆ ಕ್ಷಿಕ್ ಮಾಡಿ…

 

-ಬಿ.ಎಂ.ಲವಕುಮಾರ್

 

 

admin
the authoradmin

Leave a Reply

Translate to any language you want