ArticlesLatest

ಇದು ಕಡವೆ ಮತ್ತು ರೈತ ದಂಪತಿಯ ಭಾವನಾತ್ಮಕ ಸಂಬಂಧದ ಕಥೆ…. ಮೇವು ಹಾಕಿದವರ ಮರೆಯದ ಕಡವೆ!

ಪ್ರಾಣಿಗಳಲ್ಲಿಯೂ ಕೃತಜ್ಞತಾ ಭಾವವಿರುತ್ತದೆ. ಅವು  ಅನ್ನ ಹಾಕಿ ಪ್ರೀತಿ ತೋರಿದವರನ್ನು ಎಂದಿಗೂ ಮರೆಯುವುದಿಲ್ಲ. ನಮ್ಮ ಒಡನಾಟದಲ್ಲಿರುವ ಪ್ರಾಣಿಗಳು ದಿನಕಳೆದಂತೆ ನಮಗೆ ಹತ್ತಿರವಾಗುತ್ತವೆ.. ಹಸಿವು ತಣಿಸಿದ ಕೈಗಳಿಗೆ ಅವು ಕೃತಜ್ಞವಾಗಿರುತ್ತವೆ. ಹೀಗಿರುವಾಗಲೇ ಸುಮಾರು ಒಂಬತ್ತು ವರ್ಷಗಳ ಹಿಂದೆ ಕಡವೆ ಮತ್ತು ಅದನ್ನು ಸಲಹಿ ಪೋಷಿಸಿ ಬೆಳೆಸಿದ ದಂಪತಿ ನಡುವಿನ ಭಾವನಾತ್ಮಕ ಸಂಬಂಧದ ಕಥೆಯೊಂದು ನೆನಪಾಗುತ್ತದೆ. ಇವತ್ತು ಆ ಕಡವೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಘಟನೆ ಮಾತ್ರ ನೆನಪಾಗಿ ಉಳಿದಿದೆ.

ದನಗಳ ಜತೆಗೆ ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಮರಳಿ ಕಾಡಿಗೆ ಹೋಗದೆ ದನಗಳ ಜತೆಯಲ್ಲಿದ್ದುಕೊಂಡು ರೈತದಂಪತಿ ನೀಡುತ್ತಿದ್ದ ಹುಲ್ಲು ಮೇವನ್ನು ತಿಂದುಕೊಂಡು ಮನೆಯವರ ಪ್ರೀತಿಗೆ ಪಾತ್ರರಾಗಿತ್ತು. ಆದರೆ ಆಮೇಲೆ ಏನಾಯಿತು? ಅದು ಮೇವು ಕೊಟ್ಟವರನ್ನು ಕಂಡು ಧನ್ಯತಾಭಾವ ಮೆರೆದಿದ್ದು ಹೇಗೆ ಎಲ್ಲವೂ ಒಂಥರಾ ಕುತೂಹಲಕಾರಿಯಾಗಿದೆ. ಅದೊಂದು ಘಟನೆ ಅರ್ಥವಾಗಬೇಕಾದರೆ ನಾವು ಆ ದಿನಗಳಿಗೆ ಹೋಗಬೇಕಾಗುತ್ತದೆ.

2017ರಲ್ಲಿ ಕಾಡಿದ ಬರದಿಂದಾಗಿ ಅರಣ್ಯಗಳೆಲ್ಲವೂ ಬೋಳು ಬಿದ್ದಿದ್ದವು. ಕಾಡುಗಳಲ್ಲಿ ಹಸಿರು ಮೇವು ಇಲ್ಲದೆ ಪ್ರಾಣಿಗಳೆಲ್ಲವೂ ಒದ್ದಾಡಲಾರಂಭಿಸಿದ್ದವು. ಅರಣ್ಯಧಾಮಗಳಲ್ಲಿದ್ದ ವನ್ಯ ಪ್ರಾಣಿಗಳು ನೀರು ಮೇವಿಗಾಗಿ ಒದ್ದಾಡುವ ಪರಿಸ್ಥಿತಿಯಿತ್ತು.  ಹಾಸನದ ಗೆಂಡೆಕಟ್ಟೆ(Gendekatte Park) ಅರಣ್ಯಧಾಮದ ಪರಿಸ್ಥಿತಿಯೂ ಹಾಗೆಯೇ ಇತ್ತು. ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ಕ್ಷಾಮ ತಲೆದೋರಿದ ಬಗ್ಗೆ ವರದಿಗಳು ಬಂದಿದ್ದವು. ಅಲ್ಲಿರುವ ಪ್ರಾಣಿಗಳು ಹಸಿರು ಮೇವಿಗಾಗಿ ಪರದಾಡುತ್ತಿವೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿ ಕೇಳಿದ  ಸಕಲೇಶಪುರ ತಾಲೂಕಿನ ಹತ್ತಿಹಳ್ಳಿ ಗ್ರಾಮದ ನಿವಾಸಿ ಪರಮೇಶ್ ಮತ್ತು ಕುಸುಮ ದಂಪತಿಗೆ ಗಾಬರಿಯಾಗಿತ್ತು. ಹೊಟ್ಟೆಯಲ್ಲಿ ಅದೇನೋ ಒಂದು ರೀತಿಯ ಸಂಕಟ ಕಾಡಲಾರಂಭಿಸಿತು.

ಗೆಂಡೆಕಟ್ಟೆಯಲ್ಲಿ ವನ್ಯಪ್ರಾಣಿಗಳಿಗೆ ಸಂಕಷ್ಟ ಬಂದರೆ ಪರಮೇಶ್ ಮತ್ತು ಕುಸುಮ ದಂಪತಿ ಏಕೆ ನೋವು ಅನುಭವಿಸಬೇಕು? ಎಂಬ ಪ್ರಶ್ನೆ ಕಾಡದಿರದು.. ಆದರೆ ಅದಕ್ಕೊಂದು ಕಾರಣವಿತ್ತು. ಅದು ಏನೆಂದರೆ ಅವರು ಪ್ರೀತಿಯಿಂದ ಹುಲ್ಲುಸೊಪ್ಪು ಹಾಕಿ ನಾಲ್ಕು ವರ್ಷಗಳ ಕಾಲ ತಮ್ಮ ದನಕರುಗಳೊಂದಿಗೆ ಸಾಕಿದ್ದ  ಕಡವೆ ರಾಜು ಅದೇ ಗೆಂಡೆಕಟ್ಟೆ ಅರಣ್ಯಧಾಮವನ್ನು ಸೇರಿತ್ತು. ಅದನ್ನು ನೆನೆದಾಗಲೆಲ್ಲ ಅವರ ಕಣ್ಣಲ್ಲಿ ನೀರು, ಹೊಟ್ಟೆಯಲ್ಲಿ ನೋವು ಶುರುವಾಗಿತ್ತು. ಹೊಟ್ಟೆ ತುಂಬಾ ಹಸಿರು ಹುಲ್ಲು ತಿನ್ನುತ್ತಾ ದಷ್ಟಪುಷ್ಠನಾಗಿದ್ದ  ನಮ್ಮ ರಾಜು ಅಲ್ಲಿ ಹೇಗಿದ್ದಾನೋ ಎಂಬ ಚಿಂತೆ ಕಾಡಲಾರಂಭಿಸಿತು.

ರಾಜು ಎಂದರೆ ಪರಮೇಶ್ ಮತ್ತು ಕುಸುಮ ದಂಪತಿ ಮನೆಯಲ್ಲಿದ್ದ ಕಡವೆಯ ಹೆಸರು. ಇದಕ್ಕೆ ಅವರು ಪ್ರೀತಿಯಿಂದ ಇಟ್ಟ ಹೆಸರಾಗಿತ್ತು. ರಾಜು ಕರೆದ ತಕ್ಷಣ ಕತ್ತು ಎತ್ತಿ ನೋಡುವ ಮಟ್ಟಿಗೆ ಅದಕ್ಕೂ ಮತ್ತು ಅವರಿಗೆ ಬಾಂಧವ್ಯ ಬೆಳೆದಿತ್ತು. ಇನ್ನು ಕಾಡಿನಲ್ಲಿದ್ದ ಕಡವೆ   ರೈತರಾದ ಪರಮೇಶ್ ಮತ್ತು ಕುಸುಮ ದಂಪತಿಯ ಪ್ರೀತಿಯ ರಾಜು ಆಗಿದ್ದು ಹೇಗೆ ಎನ್ನುವುದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ.

ಅದು ಏನೆಂದರೆ ಪರಮೇಶ್ ಕುಸುಮ ದಂಪತಿ  ಹಸು ಸಾಕಿದ್ದರು. ಆ ಹಸು ಕರು ಹಾಕಿತ್ತಾದರೂ ಕರು ಬದುಕಲಿಲ್ಲ.  ಪ್ರತಿದಿನವೂ ಈ ಹಸುವನ್ನು ಇತರೆ ದನಗಳ ಜೊತೆ ಅರಣ್ಯದಂಚಿನಲ್ಲಿ ಮೇಯಿಸಿಕೊಂಡು ಬರುತ್ತಿದ್ದರು. ಹೀಗಿರುವಾಗ ಅದೊಂದು ದಿನ ಅತ್ತ ಕಾಡನಲ್ಲಿ ಮರಿಯೊಂದಿಗಿದ್ದ ತಾಯಿ ಕಡವೆಯನ್ನು ಯಾರೋ ಬೇಟೆಯಾಡಿಬಿಟ್ಟರು. ಮರಿ ತಬ್ಬಲಿಯಾಯಿತು. ಅದು ದಿಕ್ಕು ತಪ್ಪಿ ಕಾಡಿನಿಂದ ಹೊರ ಬಂದಾಗ ನಾಯಿಗಳು ಅಟ್ಟಿಸಿಕೊಂಡು ಬಂದವು. ಆಗ ಅದು ಬಂದು ದನಗಳ ಹಿಂಡನ್ನು ಸೇರಿಕೊಂಡಿತು.

ದನಗಳೊಂದಿಗೆ ಬಂದ ಆ ಕಡವೆ ಮರಿಯನ್ನು ಪರಮೇಶ್ ಮತ್ತು ಕುಸುಮ ದಂಪತಿ ಲಾಲನೆ, ಪಾಲನೆ ಮಾಡಿದರು. ಅದು ಕರು ಸತ್ತಿದ್ದ ಹಸುವಿನ ಹಾಲನ್ನೇ ಕುಡಿದು ಬದುಕ ತೊಡಗಿತು. ದಂಪತಿ ಅದಕ್ಕೆ ಪ್ರೀತಿಯಿಂದ ರಾಜು ಎಂದು ಹೆಸರಿಟ್ಟರು. ದನಗಳ ಒಡನಾಟದಲ್ಲಿದ್ದ ಅದು ದಷ್ಟಪುಷ್ಟವಾಗಿ ಬೆಳೆದಿತ್ತು. ಹೀಗೆ  ವರ್ಷಗಳೇ ಕಳೆದು ಹೋದವು. ಇದನ್ನು ನೋಡಿದ ಕೆಲವರು ಅರಣ್ಯ ಇಲಾಖೆಗೆ ದೂರು ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ವನ್ಯ ಪ್ರಾಣಿಯನ್ನು ಸಾಕುವುದು ಅಪರಾಧ ಹೀಗಾಗಿ ತಮಗೆ ಒಪ್ಪಿಸುವಂತೆ ಸೂಚನೆ ನೀಡಿದರು.

ಅರಣ್ಯಾಧಿಕಾರಿಗಳ ಮಾತಿಗೆ ಒಲ್ಲದ ಮನಸ್ಸಿನಿಂದ ದಂಪತಿ  ಒಪ್ಪಿದರು. ಅದರಂತೆ ಸುರಕ್ಷಿತವಾಗಿ ಕಡವೆಯನ್ನು ನಮಗೆ ಒಪ್ಪಿಸಿದ್ದೀರಿ ಎಂದು ಪ್ರಶಂಸೆಯ ಪತ್ರವನ್ನು ಆ ದಂಪತಿಗೆ ನೀಡಿ ಕಡವೆಯನ್ನು ಕೊಂಡೊಯ್ದು ಗೆಂಡೆಕಟ್ಟೆ ಅರಣ್ಯಧಾಮಕ್ಕೆ ಬಿಟ್ಟಿದ್ದರು. ಈ ಘಟನೆ ನಡೆದು ಮೂರು ವರ್ಷಗಳೇ ಆಗಿ ಹೋಗಿತ್ತು.  2017ರ ವೇಳೆಗೆ  ಬರ ಕಾಣಿಸಿತ್ತು.  ಹೀಗಾಗಿ ಬರದಿಂದ ಗೆಂಡೆಕಟ್ಟೆ ಅರಣ್ಯದಲ್ಲಿ ಪ್ರಾಣಿಗಳಿಗೆ ಸಂಕಷ್ಟ ಎದುರಾಗಿದೆ ಎಂಬ ಸುದ್ದಿ ಬಂದಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪರಮೇಶ್ ಮತ್ತು ಕುಸುಮ ಅವರಿಗೆ ಮನಸ್ಸು ತಡೆಯಲಿಲ್ಲ. ಆತನನ್ನು ನೋಡಿ ಬರೋಣವೆಂದು ಹಸಿರು ಮೇವಿನೊಂದಿಗೆ ಹೊರಟೇ ಬಿಟ್ಟರು.

ಗೆಂಡೆಕಟ್ಟೆ ಅರಣ್ಯಧಾಮದ ತಲುಪಿದ ಅವರಿಗೆ ಅವತ್ತಿನ ಅಲ್ಲಿನ ಸ್ಥಿತಿಯನ್ನು ನೋಡಿ ಮರುಕ ಹುಟ್ಟಿತ್ತು. ಇಂತಹ ಪರಿಸ್ಥಿತಿಯಲ್ಲಿ ರಾಜು ಎಲ್ಲಿದ್ದಾನೋ ಎಂದು ಹುಡುಕಾಡಿದರು. ಒಂದಷ್ಟು ಕಡೆ ಅಡ್ಡಾಡಿ ಹುಡುಕಾಟ ನಡೆಸಿದರು. ಅಲ್ಲೆಲ್ಲೂ ಕಾಣದೆ ಹೋದಾಗ ನಿರಾಸೆ, ಬೇಸರವಾಗಿ ಕಣ್ಣಂಚಿನಲ್ಲಿ ನೀರು ಜಿನುಗಲಾರಂಭಿಸಿತು. ಅದರೂ ಮನಸ್ಸಿನ ಎಲ್ಲೋ ಒಂದು ಕಡೆ ರಾಜು ಸಿಕ್ಕೇ ಸಿಗುತ್ತಾನೆ ಎಂಬ ನಂಬಿಕೆ ಇನ್ನಷ್ಟು ಹುಡುಕುವಂತೆ ಮಾಡಿತು. ಆಗ ಅಲ್ಲೊಂದು ಕಡವೆ ಕಾಣಿಸಿತು. ಅದು ನಮ್ಮ ರಾಜು ಆಗಿರಬಹುದಾ ಎಂಬ ಅನುಮಾನ. ಆದರೂ ನೋಡಿಯೇ ಬಿಡೋಣ ಎಂದು ಜೋರಾಗಿ ರಾಜು ಎಂದು ಕರೆದರು.

ಆ ಧ್ವನಿಗೆ ಅದು ತಲೆ ಎತ್ತಿ ಇವರತ್ತ ನೋಡಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬರತೊಡಗಿತ್ತು. ಅವರಿಗೆ ಅಚ್ಚರಿಯೋ ಅಚ್ಚರಿ ಜತೆಗೆ ತಾವು ಸಾಕಿ ಬೆಳೆಸಿದ ಮೂಕ ಜೀವ ಮೂರು ವರ್ಷದ ಬಳಿಕವೂ ನೆನಪು ಮಾಡಿಕೊಂಡು ಬಂತಲ್ಲ ಎಂಬ ಸಂತಸವೂ ಉಕ್ಕಿಹರಿದಿತ್ತು.  ಕಬ್ಬಿಣದ ಸರಣಿನ ಬಲೆಯ ನಡುವೆ ಹೊರಗಿನಿಂದಲೇ ಕೈ ಹಾಕಿ ಅದರ ಮೈದಡವಿ ಬಾಳೆ ಹಣ್ಣು ಹಸಿರು ಸೊಪ್ಪನ್ನು ನೀಡಿದ ದಂಪತಿಗಳು ಅದನ್ನು ನೋಡಿ ಖುಷಿ ಪಡುತ್ತಾ ಮನಸ್ಸಲ್ಲದ ಮನಸ್ಸಿನಿಂದ ಅದಕ್ಕೆ ಬೀಳ್ಕೊಟ್ಟು ಅಲ್ಲಿಂದ ಬಂದಿದ್ದರು. ಪ್ರಾಣಿ ಪ್ರೀತಿ ಅಂದರೆ ಇದೇ ಅಲ್ವಾ? ಅದ್ಯಾಕೋ ಗೊತ್ತಿಲ್ಲ. ಕಡವೆಯ ನೆನಪಾಯಿತು. ಹೀಗಾಗಿ ಅವತ್ತಿನ ಕಥೆಯನ್ನು ಇವತ್ತು ನಿಮ್ಮ ಮುಂದಿಟ್ಟಿದ್ದೇನೆ…

ಬಿ.ಎಂ.ಲವಕುಮಾರ್

admin
the authoradmin

Leave a Reply

Translate to any language you want