Crime

ನಕಲಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ  ಕಳೆದುಕೊಂಡಿದ್ದು ಬರೋಬ್ಬರಿ 1.77 ಕೋಟಿ… ಹುಷಾರ್ ವಂಚಕರಿದ್ದಾರೆ!

ಮೈಸೂರು: ಆನ್ ಲೈನ್ ನಲ್ಲಿ ಹಣ ದ್ವಿಗುಣ ಮಾಡುವ ಟ್ರೇಡಿಂಗ್ ಅಪ್ಲಿಕೇಷನ್ ನ  ವಂಚನೆ ಹಲವರು ಬಲಿಯಾಗುತ್ತಿದ್ದರೂ ಜನ ಬುದ್ದಿ ಕಲಿಯುತ್ತಿಲ್ಲ. ಹೀಗಾಗಿ ಮೇಲಿಂದ ಮೇಲೆ  ವಂಚನೆಯ ಪ್ರಕರಣಗಳು ಕೇಳಿ ಬರುತ್ತಿದ್ದು ಇದೀಗ ಹೆಚ್ಚು ಲಾಭದ ಆಸೆಯಿಂದ ನಕಲಿ ಟ್ರೇಡಿಂಗ್ ಅಪ್ಲಿಕೇಶನ್ ಹಾಗೂ ವಾಟ್ಸಾಪ್ ಗುಂಪಿನ ಮೂಲಕ ಆನ್‌ಲೈನ್ ಹೂಡಿಕೆ ಮಾಡಿದ ಜೆ.ಪಿ.ನಗರದ 54 ವರ್ಷದ ವ್ಯಕ್ತಿಯೊಬ್ಬರು ಬರೋಬ್ಬರಿ 1.77 ಕೋಟಿ ರೂ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪೋಲೆನ್ ಕ್ಯಾಪಿಟಲ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಟ್ರೇಡಿಂಗ್ ಅಪ್ಲಿಕೇಶನ್ ಮತ್ತು ವಾಟ್ಸಾಪ್ ಗುಂಪಿನ ಮೂಲಕ ಈ ವಂಚನೆ ನಡೆದಿದೆ. ಮಗ್ನಾನಂದ ಶರ್ಮಾ ಎಂಬಾತ ವಾಟ್ಸಾಪ್ ಗುಂಪನ್ನು ರಚಿಸಿ, ಷೇರು ಮಾರುಕಟ್ಟೆ ತರಬೇತಿ ನೀಡಿ ಹೆಚ್ಚು ಲಾಭ ತಂದುಕೊಡುತ್ತೇನೆ ಎಂದು ನಂಬಿಸಿದ್ದ. ನಂತರ ಮೀರಾ ಎಂಬ ಮಹಿಳೆಯನ್ನು ಪರಿಚಯಿಸಿದ್ದು, ತಾನು ಪೋಲೆನ್ ಕ್ಯಾಪಿಟಲ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾಳೆ.

ಭಾರತೀಯ ಹಾಗೂ ಅಮೆರಿಕ ಮಾರುಕಟ್ಟೆಗಳಲ್ಲಿ ಕ್ಯಾಲಿಫೈಡ್ ಇನ್ಸ್‌ಟಿಟ್ಯೂಷನಲ್ ಬೈಯರ್ಸ್ ಆಗಿ ಟ್ರೇಡಿಂಗ್ ನಡೆಸಲಾಗುತ್ತದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ವಿದೇಶಿ ಸಂಸ್ಥೆಗಳು ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಲು ಸಾಧ್ಯವಿಲ್ಲ ಎಂದು ಹೇಳಿ, ವಿವಿಧ ಸ್ಥಳೀಯ ಕಂಪನಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವಂತೆ ತಿಳಿಸಿದ್ದಾರೆ. ಇದನ್ನು ನಂಬಿ  ಡಿ.೨೦ರೊಳಗೆ ಆರ್‌ಟಿಜಿಎಸ್ ಮೂಲಕ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.

ಜಮೆ ಮಾಡಿದ ಹಣವನ್ನು ಪೋಲೆನ್ ಕ್ಯಾಪಿಟಲ್ ಆಪ್‌ನಲ್ಲಿ ಟಾಪ್ ಅಪ್ ಕ್ಯಾಪಿಟಲ್ ಎಂದು ತೋರಿಸಲಾಗಿದ್ದು, ಹೆಚ್ಚು ಲಾಭ ತೋರಿಸುತ್ತಿತ್ತು. ಡಿ.31ಕ್ಕೆ ಆಪ್‌ನಲ್ಲಿ ಒಟ್ಟು ಮೌಲ್ಯ 15,49,74,164.168 ಎಂದು ತೋರಿಸಿತ್ತು. ಆದರೆ, ಹಣ ಹಿಂಪಡೆಯಲು ಯತ್ನಿಸಿದಾಗ, ಖಾಸಗಿ ಖಾತೆಗಳಿಗೆ ಕ್ಯಾಪಿಟಲ್ ಗೇನ್ಸ್ ತೆರಿಗೆ ಪಾವತಿಸಬೇಕು ಎಂದು ಮತ್ತೆ ಹಣ ಕೇಳಿದ್ದಾರೆ. ಈ ವೇಳೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾರ್ವಜನಿಕರೇ ಇನ್ನಾದರೂ ಎಚ್ಚರವಾಗಿರಿ…

ಆನ್‌ಲೈನ್ ಹೂಡಿಕೆ ಮತ್ತು ಟ್ರೇಡಿಂಗ್ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ವಂಚನೆಗಳ ಬಗ್ಗೆ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು. ಅತಿಯಾದ ಅಥವಾ ಖಚಿತ ಲಾಭ ಭರವಸೆ ನೀಡುವ ಹೂಡಿಕೆ ಯೋಜನೆಗಳಿಂದ ದೂರವಿರಿ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಹೂಡಿಕೆ ಆಫರ್‌ಗಳನ್ನು ನಂಬಬೇಡಿ. ಹೆಸರಾಂತ ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ ನಕಲಿ ಜಾಹೀರಾತುಗಳು ಮತ್ತು ಆಪ್‌ಗಳು ಹೆಚ್ಚಾಗುತ್ತಿದ್ದು, ಯಾವುದೇ ಹಣಕಾಸು ಸೇವೆಯ ನೈಜತೆಯನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರದ ಮೂಲಕವೇ ಪರಿಶೀಲಿಸಿ. ಪ್ರತಿಷ್ಠಿತ ಹಣಕಾಸು ಸಂಸ್ಥೆಗಳು ವೈಯಕ್ತಿಕ ವಾಟ್ಸಾಪ್ ನಂಬರ್ ಅಥವಾ ಅನಧಿಕೃತ ಗುಂಪುಗಳ ಮೂಲಕ ಹೂಡಿಕೆ ಕೇಳುವುದಿಲ್ಲ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ ಅಜ್ಞಾತ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ. ತೆರಿಗೆ, ಶುಲ್ಕ ಅಥವಾ ಕಮಿಷನ್ ಹೆಸರಿನಲ್ಲಿ ಖಾಸಗಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಡಿ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

admin
the authoradmin

Leave a Reply

Translate to any language you want