LatestPolitical

ದಳಪತಿಗಳ ಕದನಕ್ಕೆ ಅಖಾಡ ರೆಡಿ..!  ಜಿ.ಟಿ. ದೇವೇಗೌಡ್ರ ಕ್ಷೇತ್ರಕ್ಕೆ ಸಾ.ರಾ.ಮಹೇಶ್ ಎಂಟ್ರಿ?

 ಬೆಂಗಳೂರು: ರಾಜಕೀಯದಲ್ಲಿ ಯಾರು ಯಾವಾಗ ಶತ್ರುಗಳಾಗುತ್ತಾರೋ? ಮಿತ್ರರಾಗುತ್ತಾರೋ ಎಂಬುದನ್ನು ಹೇಳಲಾಗದು.. ಆದರೆ ಇವತ್ತು ಮೈಸೂರು ಭಾಗದಲ್ಲಿ ಪ್ರಭಾವಿ ಎನಿಸಿಕೊಂಡಿರುವ ದಳದ ನಾಯಕರಿಬ್ಬರು ರಾಜಕೀಯ ಸಮರಕ್ಕಿಳಿದಿರುವುದು ಅಚ್ಚರಿ ಮೂಡಿಸಿದೆ. ಇದು ಮುಂದೆ (2028) ಬರಲಿರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿನಾ? ದೊಡ್ಡ ಗೌಡರ ಕುಟುಂಬಕ್ಕೆ ಸೆಡ್ಡು ಹೊಡೆದಿರುವ ಜಿ.ಟಿ.ದೇವೇಗೌಡರಿಗೆ ಟಕ್ಕರ್ ಕೊಡುವ ತಂತ್ರನಾ..? ಹೀಗೆ ರಾಜಕೀಯ ವಲಯದಲ್ಲಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ…

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡು ಹತಾಶರಾಗಿರುವ ಜೆಡಿಎಸ್ ಮುಖಂಡ ಮಾಜಿ ಸಚಿವ ಸಾ.ರಾ.ಮಹೇಶ್ ಮುಂದಿನ 2028ರ ಚುನಾವಣೆಗೆ ಈಗಿನಿಂದಲೇ ಮೈಕೊಡವಿ ನಿಂತಿದ್ದಾರೆ. ಅವರು ತಮ್ಮ ತವರು ಕ್ಷೇತ್ರ ಮೂರು ಬಾರಿ ಗೆಲುವು ತಂದುಕೊಟ್ಟ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರನಾ? ಇದರ ಹಿಂದೆ ಇರುವವರು ದೊಡ್ಡಗೌಡ್ರ ಕುಟುಂಬನಾ? ಗೊತ್ತಿಲ್ಲ.. ಆದರೆ ಈಗಾಗಲೇ ಹೆಚ್.ಡಿ.ದೇವೇಗೌಡರ ಕುಟುಂಬದ ಸಖ್ಯ ಕಳೆದುಕೊಂಡಿರುವ ಜಿ.ಟಿ.ದೇವೇಗೌಡರು ಜೆಡಿಎಸ್ ನಲ್ಲಿಯೇ ಇದ್ದರೂ ಇಲ್ಲದಂತೆ ಇರುವುದಂತು ನಿಜ…

ಕಳೆದ ಎರಡು ಅವಧಿಯಿಂದಲೂ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದಡಿ ಸ್ಪರ್ಧಿಸಿ ಗೆಲುವು ಕಾಣುತ್ತಿರುವ ಜಿ.ಟಿ.ದೇವೇಗೌಡರು ಜೆಡಿಎಸ್ ನಲ್ಲಿ ತಟಸ್ಥರಾಗಿರುವುದು ಕಂಡು ಬರುತ್ತಿದೆ. ಇದು ಜಿ.ಟಿ. ದೇವೇಗೌಡರದು ತಂತ್ರನಾ? ಅದು ಗೊತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಕಾಲದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಭಾರೀ ತಿಕ್ಕಾಟವಿದ್ದರೂ ಜಿ.ಟಿ.ದೇವೇಗೌಡರು ತಟಸ್ಥರಾಗಿದ್ದುಕೊಂಡೇ ತಮ್ಮ ಕೆಲಸವನ್ನು ಮಾಡಿಕೊಂಡು ಬಂದಿದ್ದನ್ನು ಸ್ಮರಿಸಬಹುದು.

ನಂತರದ ಅವಧಿಯಲ್ಲಿ 2023ರ ಚುನಾವಣೆ ವೇಳೆ ಕಾಂಗ್ರೆಸ್ ಕಡೆಗೆ ಒಲವು ಹೊಂದುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಹೆಚ್.ಡಿ.ದೇವೇಗೌಡರು ಸಂಧಾನ ನಡೆಸಿ ಪಕ್ಷದಿಂದ ಹೊರ ಹೋಗದಂತೆ ಮಾಡಿದ್ದಲ್ಲದೆ, ಅವರ ಪುತ್ರ ಜಿ.ಡಿ.ಹರೀಶ್ ಗೌಡರಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಿ ಗೆಲ್ಲುವಂತೆ ಮಾಡಿದರು. ಆ ನಂತರ ಮತ್ತೊಮ್ಮೆ ಜೆಡಿಎಸ್ ನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ ಜಿ.ಟಿ.ದೇವೇಗೌಡರು ಗೆಲುವು ಕಂಡರು. ಆ ನಂತರ ಅವರು ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಅಂತರ ಕಾಪಾಡಿಕೊಂಡಿದ್ದು, ಈಗ ತಟಸ್ಥರಾಗಿ ಉಳಿದಿದ್ದಾರೆ. ಅವರ ಪುತ್ರ ಜಿ.ಡಿ. ಹರೀಶ್ ಗೌಡರು ಜೆಡಿಎಸ್ ನಲ್ಲಿ ಸಕ್ರಿಯರಾಗಿದ್ದಾರೆ,

ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ 2028ರ ವಿಧಾನಸಭಾ ಚುನಾವಣೆಗೆ ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ನಿಂದ ಟಿಕೆಟ್ ಸಿಗುವುದು ಕಷ್ಟಸಾಧ್ಯ. ಅದಕ್ಕಿಂತ ಹೆಚ್ಚಾಗಿ ಹಿಂದೊಮ್ಮೆ ಅವರು ಚುನಾವಣಾ ರಾಜಕೀಯದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದರು. ಹೀಗಿರುವಾಗಲೇ ಅವರ ಕ್ಷೇತ್ರದ ಮೇಲೆ ಜೆಡಿಎಸ್ ನ ಪ್ರಭಾವಿ ಮುಖಂಡರಲ್ಲಿ ಒಬ್ಬರಾದ ಸಾ.ರಾ.ಮಹೇಶ್ ಕಣ್ಣಿಟ್ಟಿರುವುದು ಮತ್ತು ಅಲ್ಲಿ ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ.

ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆಯನ್ನು ಎದುರಿಸುವ ಸಾಧ್ಯತೆ ಇರುವುದರಿಂದ  ಈ ಕ್ಷೇತ್ರದಲ್ಲಿ ಎರಡು ಪಕ್ಷ ಒಂದಾದರೆ ಗೆಲುವು ಸಾಧಿಸುವುದು ಸುಲಭ ಎಂಬ ಲೆಕ್ಕಾಚಾರ ಸಾರಾ ಮಹೇಶ್ ಅವರದ್ದಾಗಿರಬಹುದು.  ಇದೆ್ಲ್ಲವನ್ನು ಗಮನಿಸಿದರೆ ಚಾಮುಂಡೇಶ್ವರಿ ಕ್ಷೇತ್ರವು ಎಲ್ಲ ರೀತಿಯಲ್ಲಿಯೂ ಸಾರಾ ಮಹೇಶ್ ಅವರಿಗೆ ಸೂಕ್ತ ಕ್ಷೇತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೂ ಜಿ.ಟಿ.ದೇವೇಗೌಡರು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯದಿಂದಲೇ ದೂರ ಸರಿಯುತ್ತಾರಾ? ಹಾಗೊಂದು ಪ್ರಶ್ನೆಗಳು  ರಾಜಕೀಯ ಪಡಸಾಲೆಯಲ್ಲಿ ಹುಟ್ಟಿಕೊಳ್ಳುತ್ತಿವೆ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗ ಬಹುದು. ಅವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಯಾವ ನಿರ್ಧಾರವನ್ನು ಬೇಕಾದರೂ ಜಿ.ಟಿ.ದೇವೇಗೌಡರು ತೆಗೆದುಕೊಳ್ಳಬಹುದೇನೋ? ಈ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಜಿ.ಟಿ.ದೇವೇಗೌಡರಿಗೆ ಅನುಕೂಲವಾಗುತ್ತದೆ ಎಂದೆನಿಸಿದರೆ ಕಾಂಗ್ರೆಸ್ ಕಡೆಗೆ ಮುಖ ಮಾಡಿದರೂ ಅಚ್ಚರಿಯಿಲ್ಲ.

ಜಿ.ಟಿದೇವೇಗೌಡರ ರಾಜಕೀಯದ ಹಾದಿಯನ್ನು ನೋಡಿದ್ದೇ ಆದರೆ ಅವರು ಜೆಡಿಎಸ್ ಪಕ್ಷಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಪಕ್ಷವನ್ನು ಕಟ್ಟಿ ಬೆಳಸಿದರಲ್ಲಿ ಅವರ ಶ್ರಮವೂ ಇದ್ದೇ ಇದೆ. ಜೆಡಿಎಸ್ ನಿಂದ ಸಿದ್ದರಾಮಯ್ಯ ಹೊರ ಹೋದ ನಂತರ ಮೈಸೂರು ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗಾಗಿ ಕೆಲಸ ಮಾಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ  ಮೊದಲ ಅವಧಿಗೆ  ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಸಚಿವರಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿ ಪಕ್ಷಕ್ಕಾಗಿ ದುಡಿದಿದ್ದರು. ಆದರೆ ನಂತರ ದಿನಗಳಲ್ಲಿ  ಮಾಜಿ ಸಚಿವ ಹೆಚ್ ಡಿ ರೇವಣ್ಣನವರೊಂದಿಗಿನ ಮುನಿಸು ಅವರನ್ನು ಪಕ್ಷವನ್ನು ಬಿಟ್ಟು ಹೊರ ಹೋಗುವಂತೆ ಮಾಡಿತ್ತು.

ಜೆಡಿಎಸ್ ನಿಂದ ಹೊರ ಬಂದ ಅವರು ಮೈಸೂರಿನಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಬಿಜೆಪಿ ಸೇರ್ಪಡೆಗೊಂಡರು. 2008ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ  ಎಚ್ ಪಿ ಮಂಜುನಾಥ್ ವಿರುದ್ಧ ಸೋಲು ಕಂಡರು. ಆದರೆ ಅವರು ಸೋತರೂ ಅವತ್ತು ರಾಜ್ಯದಲ್ಲಿ  ಬಿಜೆಪಿ ಅಧಿಕಾರ ಹಿಡಿದಿತ್ತು. ಹೀಗಾಗಿ   ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಮೈಸೂರು ಜಿಲ್ಲೆಯ ಪ್ರಭಾವಿ ಒಕ್ಕಲಿಗ ನಾಯಕ ಜಿಟಿ ದೇವೇಗೌಡರನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದರು.

ಆದರೆ ಐದು ವರ್ಷ ಕಳೆಯುವ ವೇಳೆಗೆ ಅವರಿಗೆ ಬಿಜೆಪಿ ಸಖ್ಯ ಸಾಕಾಗಿತ್ತು. ಮತ್ತೆ  ಜೆಡಿಎಸ್ ಕಡೆಗೆ ಮುಖ ಮಾಡಿದರು. ಕ್ಷೇತ್ರ ಬದಲಾಯಿಸಿದ ಅವರು 2013ರಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದರು. ಅಷ್ಟೇ ಅಲ್ಲದೆ  ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅದೇ ಕ್ಷೇತ್ರದಿಂದ  ಮರು ಆಯ್ಕೆ ಬಯಸಿ ಚುನಾವಣೆಗೆ ನಿಂತರು. ಬಹುಶಃ ಆ ಚುನಾವಣೆ ರಾಜಕೀಯ ಇತಿಹಾಸದಲ್ಲಿ ಮರೆಯಲಾರದ್ದಾಗಿತ್ತು.

ಏಕೆಂದರೆ ಅವರ ಎದುರು ಸ್ಪರ್ಧೆಗೆ ಇಳಿದಿದ್ದು ಅವತ್ತಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು.. ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ತಮ್ಮ ತವರು ಕ್ಷೇತ್ರವನ್ನು ಪುತ್ರ ಯತೀಂದ್ರಗೆ ನೀಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ ಜಿ.ಟಿ.ದೇವೇಗೌಡರ ಪ್ರಭಾವದ ಮುಂದೆ ಸಿದ್ದರಾಮಯ್ಯ ಸೋಲಬೇಕಾಯಿತು. ಇದೊಂದು ಇತಿಹಾಸವೇ..

ಅವತ್ತಿನ ಚುನಾವಣಾ ಫಲಿತಾಂಶ ಅತಂತ್ರವಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ  ಸಚಿವರಾದರೂ  ಜಿ.ಟಿ.ದೇವೇಗೌಡರಿಗೆ ಪಕ್ಷದ ವರಿಷ್ಟರ ಬಗ್ಗೆ ಬೇಸರವಂತು ಇದ್ದೇ ಇತ್ತು. ಈ ಶೀತಲ ಸಮರ ಅವರನ್ನು ಪಕ್ಷದ ಚಟುವಟಿಕೆಯಿಂದ ದೂರ ಇರುವಂತೆ ಮಾಡಿತ್ತು. ನಂತರ ಸಮ್ಮಿಶ್ರ ಸರ್ಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಜಿಟಿಡಿ ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಕೊಂಡರು. 2023ರ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದರು. ಆದರೂ ದೇವೇಗೌಡರ ಕುಟುಂಬದ ಜತೆ ಅಷ್ಟಕಷ್ಟೆ ಎಂಬಂತಿದ್ದ ಜಿ.ಟಿ.ದೇವೇಗೌಡರು ಚುನಾವಣೆಯಲ್ಲಿ ಗೆದ್ದು ಶಾಸಕರಾದರೂ ಜೆಡಿಎಸ್ ನಿಂದ ದೂರವೇ ಇದ್ದಾರೆ…  ಮುಂದೆ ಅವರ ನಡೆ ಹೇಗಿರುತ್ತದೆಯೋ ಗೊತ್ತಿಲ್ಲ. ಆದರೆ ಅವರ ಕ್ಷೇತ್ರಕ್ಕೆ  ಸಾರಾ ಮಹೇಶ್ ರವರ ಎಂಟ್ರಿ  ಇದೀಗ ಕುತೂಹಲ ಕೆರಳಿಸಿದೆ… ಮುಂದಿನ ಬೆಳವಣಿಗೆಯನ್ನು ಕಾದು ನೋಡೋಣ…

 

ಬಿ.ಎಂ.ಲವಕುಮಾರ್

 

admin
the authoradmin

Leave a Reply

Translate to any language you want