Articles

ಕರುಣೆ- ಮಾನವೀಯತೆಯ ಪ್ರತಿರೂಪ ಕ್ರಿಸ್ಮಸ್ ಹಬ್ಬ… ಕ್ರಿಸ್ಮಸ್ ಹಬ್ಬದ ವಿಶೇಷತೆ ಏನೇನು?

ವ್ಯಕ್ತಿ ಅಳಿದರೂ ಉಳಿಯುವುದು ವ್ಯಕ್ತಿತ್ವ ಹಾಗೂ ಸಮಾಜಮುಖಿಯಾಗಿ ತಮ್ಮ ವ್ಯಕ್ತಿತ್ವದಿಂದ ಒದಗಿಸಿದ ಸೇವಾ ಕಾರ್ಯಗಳು. ಭುವಿಯ ಮಂದಿರದಲ್ಲಿ ಅನೇಕರು ಅಭೂತ ಪೂರ್ವವಾದ ವ್ಯಕ್ತಿತ್ವವನ್ನು ರೂಢಿಸಿಕೊಂಡು ಆದರ್ಶವಾಗಿ ನೆಲೆನಿಂತು ಬದುಕಿದ ಮಹಾತ್ಮರು ಇದ್ದಾರೆ. ಹೀನಕೃತ್ಯಗಳ‌ ನಡೆಸಿ ನಡೆಯಬಾರದ ಕಡೆ ನಡೆದು ಹಾಳಾದವರು ಇದ್ದಾರೆ.ಮಾನವ ಜೀವನವೆಂಬ ದೀರ್ಘ ಯಾತ್ರೆಯನ್ನು ಬೆಳಗಿಸುವ ಅತಿ ಪ್ರಮುಖ ದೀಪವೆಂದರೆ ವ್ಯಕ್ತಿತ್ವ. ಕೆಲವರ ವ್ಯಕ್ತಿತ್ವವೇ ಹೀಗೆ ವ್ಯಕ್ತಿ ದೊಡ್ಡವರಾದರೂ ವ್ಯಕ್ತವಾಗುವ ಬಗೆಯಿಂದ ಕಾಣುವ ಕಣ್ಣಿನ ಬಲೆಯಲ್ಲಿ ಸಿಲುಕಿ ಚಿಕ್ಕವರಂತೆ ಕಾಣುತ್ತಾರೆ.

ಕೆಲವರ ವ್ಯಕ್ತಿತ್ವವೇ ಹೀಗೆ ವ್ಯಕ್ತಿ ಚಿಕ್ಕವರಾಗಿದ್ದರೂ ಅಭಿವ್ಯಕ್ತ ಭಾವದಿಂದ ಹೃದಯದ ಕಣ್ಣಿಗೆ ಗೋಚರಿಸಿ ಹಿಮಾಲಯದ ಪರ್ವತದಂತೆ ಅವತರಿಸುತ್ತಾರೆ. ವ್ಯಕ್ತಿಯಲ್ಲಿ ವ್ಯಕ್ತಿತ್ವ ಘನವಾಗಿರಬೇಕು ಅಂತಹ ಘನವಾದ ಗಹನವಾದ ವ್ಯಕ್ತಿತ್ವದ ಪ್ರತಿರೂಪವೇ ಏಸುಕ್ರಿಸ್ತ. ಈ ಜಗತ್ತಿಗೆ ಕರುಣೆ, ಪ್ರೀತಿ, ದಯೆ ಎಂಬ ಅಮೂಲ್ಯ ಧಾತುಗಳನ್ನು ಬದುಕಿದ ಬಗೆಯಲ್ಲಿ ಮೌಲ್ಯಗಳ ರೂಪವಾಗಿ ಒದಗಿಸಿ ಸಂತ ಸ್ವರೂಪ ಧೀಶಕ್ತಿಯಾಗಿದ್ದಾರೆ. ಕ್ರಿಸ್ಮಸ್ ಹಬ್ಬವು ಜಗತ್ತಿನಾದ್ಯಂತ ಕೋಟ್ಯಂತರ ಜನರಿಂದ ಅತ್ಯಂತ ಭಕ್ತಿ, ಸಂತೋಷ ಮತ್ತು ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬವಾಗಿದೆ.

ಇದು ಕ್ರೈಸ್ತ ಧರ್ಮದ ಪ್ರಮುಖ ಹಬ್ಬವಾದರೂ, ಇಂದು ಧರ್ಮದ ಗಡಿಯನ್ನು ಮೀರಿ ಮಾನವೀಯತೆಯ ಹಬ್ಬವಾಗಿ ಪರಿವರ್ತನೆಯಾಗಿದೆ. ಪ್ರೀತಿ, ಶಾಂತಿ, ಸಹೋದರತ್ವ, ಕ್ಷಮೆ ಮತ್ತು ಸೇವೆಯ ಮೌಲ್ಯಗಳನ್ನು ಸಾರುವ ಕ್ರಿಸ್ಮಸ್ ಹಬ್ಬವು ಪ್ರತಿಯೊಬ್ಬರ ಬದುಕಿಗೂ ಪ್ರೇರಣೆಯಾಗಿದೆ. ಇತಿಹಾಸ, ಧಾರ್ಮಿಕತೆ ಮತ್ತು ಮಾನವೀಯ ಮೌಲ್ಯಗಳ ಸಂಗಮವೇ ಕ್ರಿಸ್ಮಸ್ ಹಬ್ಬ. ಯೇಸು ಕ್ರಿಸ್ತರ ಜನ್ಮವನ್ನು ಸ್ಮರಿಸುವ ಈ ಮಹತ್ವದ ದಿನವನ್ನು ಡಿಸೆಂಬರ್ 25ರಂದು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

ಪ್ರೀತಿ, ಕ್ಷಮೆ, ಶಾಂತಿ ಮತ್ತು ಸಹೋದರತ್ವ ಎಂಬ ಶಾಶ್ವತ ಮೌಲ್ಯಗಳನ್ನು ಮಾನವಕುಲಕ್ಕೆ ಸಾರಿದ ಯೇಸು ಕ್ರಿಸ್ತರ ಸಂದೇಶವೇ ಕ್ರಿಸ್ಮಸ್‌ನ ಆತ್ಮವಾಗಿದೆ. ಕ್ರಿಸ್ಮಸ್ ಕೇವಲ ಕ್ರೈಸ್ತರ ಧಾರ್ಮಿಕ ಹಬ್ಬವಷ್ಟೇ ಅಲ್ಲ; ಅದು ಜಾತಿ–ಮತ–ಭಾಷೆಗಳಗಡಿಗಳನ್ನು ಮೀರಿ ಮಾನವೀಯತೆಯನ್ನು ಒಗ್ಗೂಡಿಸುವ ವಿಶ್ವವ್ಯಾಪಿ ಹಬ್ಬವಾಗಿದೆ. ಮನೆಮನೆಗಳಲ್ಲಿ ಬೆಳಕು, ಸಂತೋಷ ಮತ್ತು ಆಶಾಕಿರಣಗಳನ್ನು ಹೊತ್ತೊಯ್ಯುವ ಕ್ರಿಸ್ಮಸ್, ಮಾನವನೊಳಗಿನ ಮಮತೆ, ದಾನಶೀಲತೆ ಮತ್ತು ಪರಸ್ಪರ ಗೌರವವನ್ನು ಪುನರುಜ್ಜೀವನಗೊಳಿಸುವ ಮಹಾನ್ ಪರ್ವವಾಗಿದೆ.

ಕ್ರಿಸ್ಮಸ್ ಪದದ ಅರ್ಥ ಮತ್ತು ಮೂಲ

‘ಕ್ರಿಸ್ಮಸ್’ ಎಂಬ ಪದವು Christ’s Mass ಎಂಬ ಇಂಗ್ಲಿಷ್ ಪದದಿಂದ ಉಗಮವಾಗಿದೆ. ಇದರ ಅರ್ಥ ‘ಕ್ರಿಸ್ತನ ಪೂಜಾ ಸಮಾರಂಭ’. ಈ ದಿನ ಯೇಸುಕ್ರಿಸ್ತರ ಜನ್ಮವನ್ನು ಸ್ಮರಿಸಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಕ್ರೈಸ್ತ ಧರ್ಮಗ್ರಂಥ ಬೈಬಲ್ ಪ್ರಕಾರ ಯೇಸುಕ್ರಿಸ್ತರು ಮಾನವಕುಲದ ಉದ್ಧಾರಕ್ಕಾಗಿ ಭೂಮಿಗೆ ಬಂದ ದೇವದೂತನೆಂದು ನಂಬಲಾಗುತ್ತದೆ.

ಯೇಸುಕ್ರಿಸ್ತರ ಜನನ – ಪವಿತ್ರ ಕಥನ

ಬೈಬಲ್‌ನ ಹೊಸ ಒಡಂಬಡಿಕೆಯ ಪ್ರಕಾರ, ಯೇಸುಕ್ರಿಸ್ತರು ಬೆಥ್ಲೆಹೇಮ್ ಎಂಬ ಪುಟ್ಟ ಪಟ್ಟಣದಲ್ಲಿ ಜನಿಸಿದರು. ಅವರ ತಾಯಿ ಮೇರಿ ಪವಿತ್ರಳಾಗಿದ್ದು, ತಂದೆ ಜೋಸೆಫ್ ಒಬ್ಬ ಕಾರ್ಪೆಂಟರ್ (ಕಡಗಗಾರ) ಆಗಿದ್ದರು. ಯೇಸು ರಾಜಭವನದಲ್ಲಿ ಅಲ್ಲ, ಬಡತನದ ಸಂಕೇತವಾದ ಹಸು–ಕುರಿಗಳ ಕೊಟ್ಟಿಗೆಯಲ್ಲಿ ಜನಿಸಿದರು. ಇದರಿಂದಲೇ ಯೇಸುದೀನ ದುರ್ಬಲರ ಪಾಲಿನ ದೇವರಾಗಿದ್ದಾರೆ ಎಂಬ ಭಾವನೆ ಜನರಲ್ಲಿ ಗಟ್ಟಿಯಾಗಿ ಬೇರೂರಿದೆ.

ಯೇಸುವಿನ ಜನನದ ಸಂದರ್ಭದಲ್ಲಿ ಆಕಾಶದಲ್ಲಿ ಹೊಳೆಯುವ ತಾರೆ ಕಾಣಿಸಿಕೊಂಡಿತು ಎಂಬ ನಂಬಿಕೆಯಿದೆ. ಅದನ್ನು ಅನುಸರಿಸಿ ಮೂವರು ಜ್ಞಾನಿಗಳು (Three Wise Men) ಬಂದು ಶಿಶು ಯೇಸುವಿಗೆ ಚಿನ್ನ, ಲೋಬಾನ್ ಮತ್ತು ಮಿರ್ ಎಂಬ ಕಾಣಿಕೆಗಳನ್ನು ಅರ್ಪಿಸಿದರು. ಈ ಘಟನೆಯು ಕ್ರಿಸ್ಮಸ್ ಹಬ್ಬಕ್ಕೆ ಪವಿತ್ರತೆಯ ಜೊತೆಗೆ ಆಶಾಕಿರಣವನ್ನೂ ನೀಡಿದೆ.

ಕ್ರಿಸ್ಮಸ್ ಆಚರಣೆಯ ವಿಧಾನಗಳು

ಕ್ರಿಸ್ಮಸ್ ಹಬ್ಬದ ಆಚರಣೆ ಡಿಸೆಂಬರ್ ತಿಂಗಳ ಮೊದಲಿನಿಂದಲೇ ಆರಂಭವಾಗುತ್ತದೆ. ಮನೆಗಳು, ಚರ್ಚುಗಳು, ಸಾರ್ವಜನಿಕ ಸ್ಥಳಗಳು ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಡಿಸೆಂಬರ್ 24ರ ಮಧ್ಯರಾತ್ರಿ ಮಿಡ್‌ನೈಟ್ಮಸ್ಸು ಎಂಬ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಈ ವೇಳೆ ಯೇಸುಕ್ರಿಸ್ತರ ಜನನದಕಥೆಯನ್ನು ವಾಚಿಸಲಾಗುತ್ತದೆ. ಭಕ್ತಿಗೀತೆಗಳು, ಪ್ರಾರ್ಥನೆಗಳು ಹಾಗೂ ಉಪದೇಶಗಳ ಮೂಲಕ ಜನರಲ್ಲಿ ಧಾರ್ಮಿಕ ಭಕ್ತಿ ಮತ್ತು ಆತ್ಮಶುದ್ಧಿ ಬೆಳೆಸಲಾಗುತ್ತದೆ.

ಮನೆಗಳಲ್ಲಿ ಕ್ರಿಸ್ಮಸ್ ಮರವನ್ನು ಅಲಂಕರಿಸುವುದು ಪ್ರಮುಖ ಸಂಪ್ರದಾಯ. ಈ ಮರವನ್ನು ದೀಪಗಳು, ತಾರೆಗಳು, ಬಣ್ಣಬಣ್ಣದ ಆಟಿಕೆಗಳು ಮತ್ತು ಗಂಟೆಗಳೊಂದಿಗೆ ಸಿಂಗರಿಸಲಾಗುತ್ತದೆ. ಕ್ರಿಸ್ಮಸ್ ತಾರೆ ಯೇಸುಜನನದ ಸೂಚಕವಾಗಿ ಪರಿಗಣಿಸಲ್ಪಡುತ್ತದೆ.

ಕ್ರಿಸ್ಮಸ್ ಹಬ್ಬದ ಅತ್ಯಂತ ಜನಪ್ರಿಯ ಪಾತ್ರವೆಂದರೆ ಸಾಂತಾ ಕ್ಲಾಸ್. ಅವರು ಮಕ್ಕಳಿಗೆ ಉಡುಗೊರೆಗಳನ್ನು ತರುತ್ತಾರೆ ಎಂಬ ನಂಬಿಕೆ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಸಾಂತಾ ಕ್ಲಾಸ್ ಪಾತ್ರವು ಸಂತ ನಿಕೊಲಸ್ ಎಂಬ ದಯಾಳು ವ್ಯಕ್ತಿಯಿಂದ ಪ್ರೇರಿತವಾಗಿದೆ ಎನ್ನಲಾಗುತ್ತದೆ. ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಲು, ಸತ್ಕರ್ಮಕ್ಕೆ ಪ್ರೇರೇಪಿಸಲು ಈ ಕಲ್ಪನೆ ಸಹಾಯಕವಾಗಿದೆ.

ಕ್ರಿಸ್ಮಸ್ ಹಬ್ಬದಲ್ಲಿ ಕೇಕ್ ಕತ್ತರಿಸುವುದು ಪ್ರಮುಖ ಆಚರಣೆ. ವಿಶೇಷವಾಗಿ ಹಣ್ಣುಗಳಿಂದ ತಯಾರಿಸಲಾದ ಪ್ಲಮ್ ಕೇಕ್ ಬಹಳ ಜನಪ್ರಿಯ. ಕುಟುಂಬದವರು, ಸ್ನೇಹಿತರು, ನೆರೆಹೊರೆಯವರು ಒಟ್ಟಾಗಿ ಕೇಕ್ ಹಂಚಿಕೊಂಡು ಸಂತೋಷ ಹಂಚಿಕೊಳ್ಳುತ್ತಾರೆ. ಇದು ಪರಸ್ಪರ ಪ್ರೀತಿ ಮತ್ತು ಏಕತೆಯ ಸಂಕೇತವಾಗಿದೆ.

ಕ್ರಿಸ್ಮಸ್ ಹಬ್ಬದಲ್ಲಿ ಉಡುಗೊರೆ ನೀಡುವುದು ಕೇವಲ ಸಂಭ್ರಮವಲ್ಲ; ಅದು ಪ್ರೀತಿಯನ್ನು ವ್ಯಕ್ತಪಡಿಸುವ ಮಾಧ್ಯಮ. ಬಡವರು, ಅನಾಥರು, ವೃದ್ಧರು ಮತ್ತು ನಿರಾಶ್ರಿತರಿಗೆ ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸೇವಾಭಾವವನ್ನು ವ್ಯಕ್ತಪಡಿಸಲಾಗುತ್ತದೆ. ಅನೇಕ ಸಂಘಟನೆಗಳು ಈ ದಿನ ವಿಶೇಷ ಸೇವಾಕಾರ್ಯಗಳನ್ನು ನಡೆಸುತ್ತವೆ.

ಕ್ರಿಸ್ಮಸ್ ಹಬ್ಬವುಮಾನವಕುಲಕ್ಕೆ ನೀಡುವ ಸಂದೇಶಗಳು ಅತ್ಯಂತ ಮಹತ್ವವುಳ್ಳವು: ಎಲ್ಲರೂ ಸಮಾನರು, ಪ್ರೀತಿ ಮತ್ತು ಕ್ಷಮೆಯೇ ಶ್ರೇಷ್ಠ ಶಕ್ತಿಗಳು, ಬಡವರ ಸೇವೆಯೇ ದೇವರ ಸೇವೆ, ದ್ವೇಷಕ್ಕಿಂತ ಸ್ನೇಹ ಶ್ರೇಷ್ಠ, ಈ ಸಂದೇಶಗಳು ಇಂದಿನ ಅಶಾಂತ ಸಮಾಜದಲ್ಲಿ ಅತ್ಯಂತ ಅಗತ್ಯವಾಗಿವೆ.

admin
the authoradmin

Leave a Reply

Translate to any language you want