ವಿಪಕ್ಷಗಳು ನಡೆಸುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದಿದ್ದೇಕೆ ಸಂಸದ ಯದುವೀರ್ ಒಡೆಯರ್?

ಹುಣಸೂರು (ಹಿರೀಕ್ಯಾತನಹಳ್ಳಿಸ್ವಾಮಿಗೌಡ): ಜನರು ಸತ್ಯಾಸತ್ಯತೆ ಅರಿಯಿರಿ. ವಿಪಕ್ಷಗಳ ಆರೋಪಗಳಿಗೆ ಕಿವಿಯಾಗದಿರಿ ಎಂದು ಕಿವಿಮಾತು ಹೇಳಿದ ಸಂಸದ ಯದುವೀರ್ ಒಡೆಯರ್ ಅವರು, ಅತ್ಯಂತ ಪಾರದರ್ಶಕ ಮತ್ತು ಉತ್ತಮ ಯೋಜನೆಯಾಗಿ ವಿ ಬಿ ಜಿರಾಮ್ ಜಿ ಯೋಜನೆ ಕುರಿತು ವಿಪಕ್ಷಗಳು ನಡೆಸುತ್ತಿರುವ ಅಪಪ್ರಚಾರಕ್ಕೆ ಜನತೆ ಕಿವಿಗೊಡದೇ ಗ್ರಾಮಗಳಲ್ಲಿ ಶಾಶ್ವತ ಸಂಪತ್ತು ಸ್ಥಾಪನೆಗೆ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಟ್ಟಡದ ಮೇಲಂತಸ್ತಿನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿ, ನರೇಗಾ ಯೋಜನೆಯ ಹಲವು ನ್ಯೂನ್ಯತೆಗಳನ್ನು ಸರಿಪಡಿಸಿ ಸಂಸತ್ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಕಾಯ್ದೆ ಜಾರಿಗೊಳಿಸಲಾಗಿದೆ. ಅತ್ಯಂತ ಪಾರದರ್ಶಕ ಮತ್ತು ಉತ್ತಮ ಯೋಜನೆಯಾಗಿ ವಿಬಿ ಜಿರಾಮ್‌ಜಿ ಜಾರಿಗೊಂಡಿದೆ. ನರೇಗಾ ಯೋಜನೆಯಡಿ ಈ ಹಿಂದೆ 100 ದಿನಗಳ ಕೂಲಿ ದಿನ ಇತ್ತು. ಇದೀಗ ಇದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ.

ಗ್ರಾ.ಪಂ.ಗಳಿಗೆ ತಮ್ಮ ಗ್ರಾಮದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಯೋಜನೆಯಲ್ಲಿ ಸಂಪೂರ್ಣ ಅಧಿಕಾರ ನೀಡಿದೆ. ನಿಮ್ಮೂರಿನ ರಸ್ತೆ, ಚರಂಡಿ, ಸೇತುವೆ, ಕಾಡಂಚಿನ ಗ್ರಾಮಗಳಲ್ಲಿ ತಡೆಗೋಡೆ ಇನ್ನಾವುದೇ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಕೌಶಲಾಭಿವೃದ್ಧಿ ತರಬೇತಿ ಮತ್ತು ಜೀವನೋಪಾಯ ಯೋಜನೆಗಳಿಗೆ ವಿಬಿ ಜಿ ರಾಮ್‌ಜೀ ಕಾಯ್ದೆ ಬಳಸಿಕೊಳ್ಳಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದಾದ ಆರ್ಥಿಕ ಕೊರತೆಗಳ ನಡುವೆ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಈ ನಡುವೆಯೂ ಸಂಸದರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ರಾಮೇನಹಳ್ಳಿ ರಸ್ತೆ ಅಭಿವೃದ್ಧಿಗೆ 30ಲಕ್ಷ ಕಲ್ಲಹಳ್ಳಿ ಗ್ರಾಮಕ್ಕೆ 30 ಲಕ್ಷ ರೂ.ಗಳು ಸೇರಿದಂತೆ ಸಮುದಾಯ ಭವನಗಳ ನಿರ್ಮಾಣದಲ್ಲಿ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.

ಅಲ್ಲದೆ ಸಂಸದರ ಸಹಕಾರದಲ್ಲಿ ತಾಲೂಕಿನ ವಿವಿಧ ಭಾಗದಲ್ಲಿ 5 ಕೋಟಿರೂ ರಸ್ತೆ ಅಭಿವೃದ್ದಿಗೂ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಶೈಲನಾಯಕ ಉಪಾಧ್ಯಕ್ಷ ಸುಜಾತ ಸದಸ್ಯರುಗಳಾದ ರೂಪ, ಆಶಾ, ಧನಂಜಯ, ಸ್ವಾಮಿಗೌಡ, ಪುಷ್ಪ, ಭಾಗ್ಯಮ್ಮ, ನಾಗರಾಜು, ಶಾಂತ, ಮಹೇಶ್, ಪಂಚಾಕ್ಷರಿ, ಬಸಮಣಿ, ಸಮಾಜ ಸೇವಕ ಹರವೆ ಶ್ರೀಧರ್ ಬಿ.ಜೆ.ಪಿ.ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಮುಖಂಡರಾದ, ನಾಗರಾಜ್ ಮಲ್ಲಾಡಿ, ಪ್ರಧಾನ ಕಾರ್ಯದರ್ಶಿ ಹಿರೀಕ್ಯಾತನಹಳ್ಳಿ ಸತೀಶ್, ಪಿಡಿಒ ಜೇತೇಂದ್ರನಾಥ್ ವರಪ್ರಸಾದ್, ಕಾರ್ಯದರ್ಶಿ ಲಕ್ಷ್ಮಿ, ಹಾಗೂ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಇದ್ದರು.







