ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವಿಶ್ವದ ಯಾವುದೇ ಧರ್ಮವು ಹಿಂದೂ ಧರ್ಮದ ವೈಶಿಷ್ಟ್ಯತೆಯನ್ನು ಹೊಂದಿಲ್ಲ. ವಿದೇಶಿಯರು ಸಹ ನಮ್ಮ ಧರ್ಮದ ಸಂಸ್ಕೃತಿ, ಪರಂಪರೆ, ಸಭ್ಯತೆಯ ಪ್ರತೀಕಗಳಾದ ಆಯುರ್ವೇದ, ಯೋಗ ಪದ್ಧತಿಯನ್ನು ಅರ್ಥೈಸಿಕೊಂಡು ಅನುಸರಿಸುತ್ತಿದ್ದಾರೆ. ಇದು ನಮ್ಮ ಧರ್ಮದ ಹೆಮ್ಮೆ ಎಂದು ವಿದ್ಯಾಭಾರತಿ ಪ್ರಾಂತ ಸಂಯೋಜಕ ಬೌದ್ಧಿಕ್ ಉಮೇಶ್ ಬಣ್ಣಿಸಿದರು.
ಹಿಂದೂ ಸಮಾಜೋತ್ಸವ ಸಮಿತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರದ ಎರಡನೇ ವರ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ಮುನೇಶ್ವರಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಹಿಂದೂ ಧರ್ಮವನ್ನು ಇನ್ನೊಬ್ಬರಿಂದ ಅರ್ಥೈಸಲು ಸಾಧ್ಯವಿಲ್ಲ. ಆದರೆ ಅರ್ಥ ಮಾಡಿಕೊಳ್ಳಬಹುದು. ಹಿಂದೂ ವ್ಯಕ್ತಿ ತನ್ನ ದೇವರ ಹೆಸರನ್ನು ತಾನು ಇಟ್ಟುಕೊಂಡು ಶಾಂತಿ, ಸಮಾಧಾನ, ಸಹನೆ, ಸನ್ನಡತೆ ತಂದುಕೊಳ್ಳಬಹುದು. ವಿಶ್ವದ ಯಾವುದೇ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ ಹಿಂದೂ ಧರ್ಮ ಎನ್ನುವುದು ಅನುಭವ ಜನ್ಯ ಧರ್ಮವಾಗಿದೆ. ಹಿಂದೂ ಎನ್ನುವುದು ಜೀವನಾನುಭವಕ್ಕೆ ಬರುವ ಧರ್ಮವಾಗಿದೆ’ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಎಸ್.ರಾಧಾಕೃಷ್ಣ ಮಾತನಾಡಿ, ವಿದೇಶಿಯರು ಭಾರತವನ್ನು ಸಾವಿರಾರು ವರ್ಷಗಳ ಕಾಲ ಆಳ್ವಿಕೆ ಮಾಡಿ ದಾಳಿ ನಡೆಸಿ ದರೋಡೆ ಮಾಡಿದರೂ ನಮ್ಮ ನೆಲದ ಅಂತಃಸತ್ವವನ್ನು ಅಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಮೂಲ ಕಾರಣ ಹಿಂದೂಧರ್ಮದ ಶಕ್ತಿ. ಆರ್‌ಎಸ್‌ಎಸ್ ದೇಶದ ಸರ್ವರ ಏಳಿಗೆಗಾಗಿ ನಿಸ್ವಾರ್ಥ ಸೇವೆ ಮಾಡುತ್ತಿದೆ. ಐದು ಶತಮಾನಗಳ ನಿರಂತರ ಹೋರಾಟ, ಲಕ್ಷಾಂತರ ಜನರ ಬಲಿದಾನದ ನಂತರ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪಿಸಲ್ಪಟ್ಟಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಡೆದ ಶೋಭಾಯಾತ್ರೆಗೆ ಉಕ್ಕಿನಕಂತೆ ಮಠದ ಶ್ರೀಸಾಂಬಸದಾಶಿವಸ್ವಾಮಿ ಚಾಲನೆ ನೀಡಿದರು. ಆಂಜನೇಯ ಸ್ವಾಮಿ ದೇಗುಲದಿಂದ ಹೊರಟ ಶೋಭಾಯಾತ್ರೆಯಲ್ಲಿ ಆಂಜನೇಯ ಮೂರ್ತಿಯ ಪಂಚಲೋಹದ ವಿಗ್ರಹ, ಶ್ರೀರಾಮದೇವರ ಉತ್ಸವ ಮೂರ್ತಿ, ಭಾರತಮಾತೆ ಭಾವಚಿತ್ರ, ಮೈಸೂರು ಮಹಾರಾಜರ ವೇಷಧಾರಿ ಗಳು ಹಾಗೂ ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು.
ವಕೀಲ ಯೋಗಾನಂದ ಕುಮಾರ್, ಸಮಿತಿಯ ಪ್ರಧಾನಕಾರ್ಯದರ್ಶಿ ರವಿಕುಮಾರ್, ಸಹಕಾರ್ಯದರ್ಶಿ ಶ್ರೀದತ್ತ, ಸದಸ್ಯರಾದ ಪ್ರಕಾಶ್, ರಮೇಶ್, ವೆಂಕಟೇಶ್, ರಜತ್, ರಘುವೀರ್ ಜಿ, ಮಹದೇವ್‌ಬಾಗಲ್, ನಾರಾಯಣ್, ಸುರೇಶ್, ಮಂತೋತ್ಸವ ಸಮಿತಿ ಅಧ್ಯಕ್ಷ ಪಿ. ಹನು ಎನ್.ದಾಸ್, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ದೇವರಳ್ಳಿ ಸೋಮ ಶೇಖರ್, ಸತ್ಯಪ್ಪ, ಅರುಣ್ ಚೌಹಾಣ್, ನರಸಿಂಹಮೂರ್ತಿ, ಸುಬ್ರಮಣ್ಯರಾವ್, ಕಮಲಮ್ಮ, ಸವಿತಾ ಚೌಹಾಣ್, ಕೃಷ್ಣ ಕುಮಾರ್, ನಾಗರಾಜ್, ರವಿಕುಮಾರ್, ಅಪದ್ದಣ್ಣಯ್ಯ, ಯಶೋಧಮ್ಮ, ಸಂಘಪರಿವಾರದ ಸದಸ್ಯರು ಹಾಜರಿದ್ದರು.








