ಹುಣಸೂರು ನಗರದಲ್ಲಿ ನಾಲ್ಕು ಪಥದ ರಸ್ತೆ ಕಾಮಗಾರಿ ವಿಸ್ತರಣೆಗೆ ಹೆದ್ದಾರಿಗಳ ಇಲಾಖೆಗೆ ಹರೀಶ್ ಗೌಡ ಮನವಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ನಗರದ ದೇವರಾಜ ಅರಸು ಪುತ್ಥಳಿಯಿಂದ ಯಶೋಧರಪುರದವರೆಗಿನ ನಾಲ್ಕು ಪಥದ ರಸ್ತೆ ಕಾಮಗಾರಿಯನ್ನು ಮೂಕನಹಳ್ಳಿವರೆಗೆ ವಿಸ್ತರಿಸಲು ಹಾಗೂ ವಿವಿಧ ಕಾಮಗಾರಿ ನಡೆಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.
ನಗರದ ಬೈಪಾಸ್‌ನ 80 ಕೋಟಿ ರೂ. ವೆಚ್ಚದ ನಾಲ್ಕು ಪಥದ ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮಂತ್ರಾಲಯದ ಕರ್ನಾಟಕ ಮತ್ತು ಕೇರಳ ಪ್ರಾಂತ್ಯದ ಪ್ರಾಂತೀಯ ಅಧಿಕಾರಿ ಚೀಫ್ ಎಂಜಿನಿಯರ್ ಶ್ರೀಧರ್ ಅವರೊಂದಿಗೆ ಪರಿಶೀಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಕಲ್ಕುಣಿಕೆ ವೃತ್ತದ ಬಳಿಯ ರಾಘವೇಂದ್ರಸ್ವಾಮಿ ಮಠದ ಬಳಿಯ ಚರಂಡಿಗೆ ಪೈಪ್ ಅಳವಡಿಸಿದೆ.
ಹೌಸಿಂಗ್ ಬೋರ್ಡ್‌ನ ಮನೆಗಳಿಗೆ ನೀರು ನುಗ್ಗುತ್ತಿರುವ ಪರಿಣಾಮ ಇಲ್ಲಿ ಕಿರುಸೇತುವೆ ನಿರ್ಮಿಸುವುದು, ಕೋರ್ಟ್ ಸರ್ಕಲ್ ಬಳಿ ವಳ್ಳಿಯಮ್ಮನ ಕಟ್ಟೆ ವಿವಿಧ ಬಡಾವಣೆಗಳಿಂದ ಬರುವ ನೀರು ತುಂಬಿಕೊಳ್ಳುತ್ತಿದ್ದು ಸ್ವಲ್ಪ ಮಳೆ ಬಂದರೂ ಜಲಾವೃತಗೊಳ್ಳುತ್ತಿದೆ. ಇಲ್ಲಿಯೂ ನೀರು ಹರಿವಿನ ಸಾಮರ್ಥ್ಯಕ್ಕೆ ತಕ್ಕಂತೆ ಚರಂಡಿ ನಿರ್ಮಿಸಬೇಕು ಎಂಬುದು ಸೇರಿದಂತೆ ಎಲ್ಲಡೆ ಶಾಶ್ವತ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದರು.
ಈಗಾಗಲೇ ಹೆಚ್ಚು ಅಪಘಾತ ನಡೆಯುವ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದ್ದು, ಇಲ್ಲಿ ಅಪಘಾತವಾಗದಂತೆ ತಡೆಯಲು ವೈಜ್ಞಾನಿಕವಾಗಿ ನಿರ್ಮಿಸಬೇಕು. ಕೋರ್ಟ್, ಕಲ್ಕುಣಿಕೆ ಸರ್ಕಲ್ ಗಳಲ್ಲಿ ವೈಜ್ಞಾನಿಕ ಸರ್ಕಲ್ ನಿರ್ಮಿಸಬೇಕು ಎಂದು ಕೋರಲಾಗಿದೆಎಂದರು.

ಎಮ್ಮೆಕೊಪಲಿನಿಂದ ನಗರದ ಆಶೀರ್ವಾದ್ ಹೋಟೆಲ್‌ವರೆಗೆ ಫೈಓವರ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಬನ್ನಿಕುಪ್ಪೆಯು ಹಸಿರು ಪರಿಸರವಲಯಕ್ಕೆ ಸೇರಿದ್ದು, ಅರಣ್ಯ ಇಲಾಖೆ ಅನುಮತಿ ಬೇಕಿರುವುದರಿಂದ ಬಣ್ಣಕುಪ್ಪೆಯ 13 ಕೋಟಿ ರೂ. ವೆಚ್ಚದ ಟ್ರೈಓವರ್ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಸಮಿತಿಯಲ್ಲಿ ಅನುಮೋದನೆ ದೊರೆತಿದ್ದು ಶೀಘ್ರು ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು.
ನಗರಸಭೆ, ಕೊಳಚೆ ನಿರ್ಮೂಲನೆ ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಮನ್ವಯತೆ ಸಾಧಿಸಿ ಆಗಬೇಕಿರುವ ಕಾಮಗಾರಿಗಳನ್ನು ನಡೆಸಿ,” ಎಂದು ನಗರಸಭೆ ಪೌರಾಯುಕ್ತ ಮಾನಸಾ ಹಾಗೂ ಎಂಜಿನಿಯರ್್ರ ಶಾಸಕರು ಸೂಚಿಸಿದರು.
40 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ: ಮೈಸೂರು-ಕುಶಾಲನಗರ ಹೆದ್ದಾರಿ ಅಭಿವೃದ್ಧಿಗೆ 40 ಕೋಟಿ ರೂ. ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. 2027ರ ಜನವರಿ ವೇಳೆಗೆ ಹುಣಸೂರು ನಗರದ ಬೈಪಾಸ್‌ನ ನಾಲ್ಕು ಪಥದ ನಾಲ್ಕು ಕಿ.ಮೀ. ರಸ್ತೆ ಹಾಗೂ ಸೇತುವೆ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಶಾಸಕರು ಸೂಚಿಸಿರುವ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೆದ್ದಾರಿ ಇ.ಇ. ಪಂಪಾಪತಿ ಮಾಹಿತಿ ನೀಡಿದರು.

ಸಮಸ್ಯೆಗಳನ್ನು ಪರಿಶೀಲಿಸಿದ್ದು, ಶಾಸಕ ಹರೀಶ್ ಗೌಡ ಅವರು ಸೂಚಿಸಿರುವ ಎಲ್ಲ ವಿಶ್ವತ ಕಾಮಗಾರಿಗಳನ್ನು ಮಂಜೂರು ಮಾಡಿಕೊಡಲಾಗುವುದು. ವೃತ್ತಗಳು ಹಾಗೂ ನೀರು ನಿಲ್ಲುವ ಕಡೆ ವೈಜ್ಞಾನಿಕವಾಗಿ ಕಾಮಗಾರಿ ನಡೆಸಬೇಕು ಹಾಗೂ ಅಗತ್ಯ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ನಗರಸಭೆ ಪೌರಾಯುಕ್ತೆ ಮಾನಸ, ಪರಿಸರ ಎಂಜಿನಿಯರ್ ಸೌಮ್ಯ, ಪ್ರಭಾರ ಎಇಇ ಲೋಕೇಶ್, ಹೆದ್ದಾರಿ ಇಲಾಖೆಯ ಎಇಇ ರೂಪಾ. ಎ.ಇ.ಕಬ್ಲಮ್, ವಿನಯ್, ನಗರಸಭೆ ಮಾಜಿ ಅಧ್ಯಕ್ಷ ಮಾಲಿಕ್ ಪಾಷಾ, ಮಾಜಿ ಸದಸ್ಯರಾದ ಶ್ರೀನಾಥ್, ಸತೀಶ, ಮುಖಂಡರಾದ ಹರವೆ ಶ್ರೀಧರ್ ಮತ್ತಿತರರಿದ್ದರು.







