ಸಾ.ರಾ.ಮಹೇಶ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಮುಖಂಡರಿಗಿಲ್ಲ… ಜೆಡಿಎಸ್ ಮುಖಂಡರ ತಿರುಗೇಟು

ಕೆ.ಆರ್.ನಗರ(ಜಿಟೆಕ್ ಶಂಕರ್): ಕಳೆದ 18 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಅಭಿವೃದ್ದಿ ಮತ್ತು ಜನ ಸೇವೆವಾಗಿ ತಮ್ಮ ರಾಜಕೀಯ ಜೀವನವನ್ನೆ ಮುಡುಪಾಗಿಟ್ಟಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಮುಖಂಡರಿಗೆ ಇಲ್ಲ ಎಂದು ಪುರಸಭೆ ಮಾಜಿ ಸದಸ್ಯ ಸಂತೋಷ್‌ಗೌಡ ತಿರುಗೇಟು ನೀಡಿದರು.
ಭ್ರಷ್ಟಾಚಾರ ಮತ್ತು ರೋಲ್ ಕಾಲ್ ವೃತ್ತಿಯನ್ನು ಪರಿ ಪಾಠವನ್ನಾಗಿಸಿಕೊಂಡು ಜನಹಿತ ಮರೆತಿರುವ ಕಾಂಗ್ರೆಸ್ಸಿಗರು ಅಭಿವೃದ್ದಿ ಶೂನ್ಯರಾಗಿ ಹತಾಶ ಮನೋಭಾವನೆಯಿಂದ ಮಾತನಾಡುತ್ತಿದ್ದು ಭವಿಷ್ಯದಲ್ಲಿ ಅವರು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದ ಜನ ಪ್ರತಿನಿಧಿಯಾಗಿ 15 ವರ್ಷಗಳ ಕಾಲ ಅತ್ಯಂತ ಜವಬ್ದಾರಿಯುತವಾಗಿ ಕೆಲಸ ಮಾಡಿರುವ ಜನಾನುರಾಗಿ ನಾಯಕ ಸಾ.ರಾ.ಮಹೇಶ್ ಅವರು ವಾರದ ಹಿಂದೆ ತಾಲೂಕಿನ ಸನ್ಯಾಸಿಪುರ ಗ್ರಾಮದ ಬಳಿ ಲೊಕೋಪಯೋಗಿ ಇಲಾಖೆಯ ವತಿಯಿಂದ ನಡೆಯುತ್ತಿರುವ 5 ಕೋಟಿ ವೆಚ್ಚದ ರಸ್ತೆ ಕಾಮಗಾರಿಯನ್ನು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪರಿಶೀಲಿಸಿ ಕಳಪೆ ಎಂದು ಸಾಬೀತು ಮಾಡಿದ್ದು ಇದನ್ನು ಸಹಿಸದವರು ಸುಳ್ಳು ಹೇಳಿಕೆ ನೀಡುತ್ತಿದ್ದು ಇದು ಹಾಸ್ಯಾಸ್ಪದ ಎಂದರು.

ಇದರ ಜತೆಗೆ ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ತಮ್ಮ ನಾಯಕರನ್ನು ಮೆಚ್ಚಿಸಲು ಮಾಜಿ ಸಚಿವರ ವಿರುದ್ದ ಆಧಾರ ರಹಿರ ಆರೋಪ ಮಾಡುತ್ತಿದ್ದು ಅವರು ತಮ್ಮ ಚಾಳಿಯನ್ನು ತಿದ್ದಿಕೊಂಡು ನಡೆಯದಿದ್ದರೆ ಸಾರ್ವಜನಿಕ ಸ್ಥಳದಲ್ಲಿ ಅವರ ಮುಖಕ್ಕೆ ಮಸಿ ಬಳಿಯಬೇಕಾಗಿತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಹಿಂದೆ ಕೆಲವು ವರ್ಷಗಳ ಹಿಂದೆ ಪುರಸಭೆ ಚುನಾವಣೆಗೆ ನಿಂತಿದ್ದ ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ಬೇರೆ ಪಕ್ಷದವರು ೨೫ ಸಾವಿರ ನೀಡಿದರು ಎಂದು ನಾಮಪತ್ರ ವಾಪಸ್ ಪಡೆದಿದ್ದು ಅವರಿಗೆ ರೋಲ್ ಕಾಲ್ ಸಂಸ್ಕೃತಿ ಚೆನ್ನಾಗಿ ಮೈಗೂಡಿದೆ ಎಂದು ಮೂದಲಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಡಿ.ಶಿವುನಾಯಕ್ ಅವರು ಪಟ್ಟಣದ ಕೃಷ್ಣರಾಜೇಂದ್ರ ತರಕಾರಿ ಮಾರುಕಟ್ಟೆ ಆರಂಭವಾಗದಿರಲು ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಕಾರಣ ಎಂದು ಆರೋಪಿಸಿದ್ದಾರೆ ಆದರೆ ವಾಸ್ತವವಾಗಿ ಕಾಮಗಾರಿ ಆರಂಬಿಸುವ ಮುನ್ನ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆಯದೆ ಅಕ್ರಮ ಎಸಗಿದ್ದು ನಿಜವಾದ ಕಾರಣ ಎಂದು ತಿಳಿಸಿದರು.
ನಮ್ಮ ಪಕ್ಷದ ಹಿಂದುಳಿದ ವರ್ಗದ ನಾಯಕರಾಗಿರುವ ಪುರಸಭೆ ಸದಸ್ಯ ಉಮೇಶ್ ಅವರ ಬಗ್ಗೆ ಅತ್ಯಂತ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಪುರಸಭೆ ಮಾಜಿ ಸದಸ್ಯ ನಟರಾಜು ನಿಜವಾದ ರೋಲ್‌ಕಾಲ್ ಗಿರಾಕಿಯಾಗಿದ್ದು ಮುಂದಿನ ದಿನಗಳಲ್ಲಿ ಅವರ ನಿಜ ಬಣ್ಣ ಬಯಲು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು ಮಾಡುವ ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ ಜೆಡಿಎಸ್ ಪಕ್ಷ ಮತ್ತು ಮುಖಂಡರು ಸದಾ ಬೆಂಬಲ ನೀಡುತ್ತೇವೆ ಆದರೆ ಅವರ ದಬ್ಬಾಳಿಕೆ ಮತ್ತು ದೌರ್ಜನ್ಯ ಸಹಿಸುವುದಿಲ್ಲವೆಂದರಲ್ಲದೆ ಈ ವಿಚಾರದಲ್ಲಿ ಯಾವುದೇ ಹೋರಾಟಕ್ಕೂ ಸಿದ್ದ ಎಂದು ಘೋಷಿಸಿದರು.
ಅನುಕಂಪ ಮತ್ತು ಮತದಾರರ ಕಾಲು ಹಿಡಿದು ಗೆದ್ದಿರುವವರಿಗೆ ಜನ ನಾಯಕರಾಗಿರುವ ಸಾ.ರಾ.ಮಹೇಶ್ ಮತ್ತು ಜೆಡಿಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲವೆಂದ ಸಂತೋಷ್‌ಗೌಡ ನಿಮ್ಮ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ ಎಂದರಲ್ಲದೆ ಬಿಹಾರದ ಪರಿಸ್ಥಿತಿ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೂ ಬರಲಿದೆ ಎಂದು ಭವಿಷ್ಯ ನುಡಿದರು.
ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜು, ಮಾಜಿ ಸದಸ್ಯರಾದ ಕೆ.ಎಲ್.ಜಗದೀಶ್, ರಾ.ಜ.ಶ್ರೀಕಾಂತ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಡಿ.ವಿ.ಗುಡಿ ಯೋಗೀಶ್, ಎಸ್‌ಸಿ ಘಟಕದ ಅಧ್ಯಕ್ಷ ಹಂಪಾಪುರ ಸುರೇಶ್, ವಕೀಲ ಅಂಕನಹಳ್ಳಿ ಎ.ಟಿ.ತಿಮ್ಮಪ್ಪ, ಜೆಡಿಎಸ್ ಮುಖಂಡರಾದ ಕೆ.ಜೆ.ಕುಚೇಲ, ಚಿಕ್ಕವೀರು, ರೂಪಸತೀಸ್, ನವಾಜ್, ಜಗದೀಶ್. ರಾಘವ, ಹೆಚ್.ಎಸ್.ಬಾಬು, ಮಲ್ಲಿಕಾ ಸುದ್ದಿಗೋಷ್ಠಿಯಲ್ಲಿ ಇದ್ದರು
.
ಕಾಂಗ್ರೆಸ್ ಪುರಸಭೆ ಸದಸ್ಯರ ವಿರುದ್ಧ ಆರೋಪ
ಕೆ.ಆರ್.ನಗರ ಪಟ್ಟಣದ ಪುರಸಭೆಯ ವಾಣಿಜ್ಯ ಮಳಿಗೆಯ ಬಾಡಿಗೆದಾರರಿಂದ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಎಂದು ಮಾಜಿ ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್ ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಮುಖಂಡ ಕಾಮಧೇನು ದರ್ಮ ಅವರು ಪಕ್ಷದ ಮುಖಂಡರು ಮತ್ತು ಈ ಹಿಂದೆ ಅಧಿಕಾರದಲ್ಲಿದ್ದ ಪುರಸಭೆ ಆಡಳಿತ ಮಂಡಳಿಯವರ ಅಪ್ಪಣೆಯ ಮೇರೆಗೆ ಮೇರೆಗೆ ಹಣ ವಸೂಲಿ ಮಾಡಿದ್ದರು ಎಂಬುದಕ್ಕೆ ನಮ್ಮಲ್ಲಿ ಸಾಕ್ಷ್ಯಗಳಿವೆ ಎಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಾಣಿಜ್ಯ ಮಳಿಗೆಯವರಿಂದ ಹಣ ಪಡೆದಿಲ್ಲ ಎಂದು ಹೇಳಿರುವ ಮಾಜಿ ಅಧ್ಯಕ್ಷರು ಈ ವಿಚಾರದಲ್ಲಿ ಕಪ್ಪಡಿಗೆ ಬಂದು ಪ್ರಮಾಣ ಮಾಡುವುದಾಗಿ ತಿಳಿಸಿದ್ದಾರೆ ಆದರೆ ಅವರಿಗೆ ಆತ್ಮ ಸಾಕ್ಷಿ ಇದ್ದರೆ ಅದನ್ನು ಪ್ರಶ್ನಿಸಿಕೊಳ್ಳಲಿ ಎಂದರು.
ಕಾಂಗ್ರೆಸ್ ಪಕ್ಷದ 14ಮಂದಿ ಮಾಜಿ ಪುರಸಭೆ ಸದಸ್ಯುರುಗಳು ವಾಣಿಜ್ಯ ಮಳಿಗೆಗಳವರಿಂದ ಹಣ ಪಡೆದ ಫಲಾನುಭವಿಗಳಾಗಿದ್ದು ಆನಂತರ ನಮ್ಮ ಗಮನಕ್ಕೆ ತಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಈಗ ನಾಟಕವಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ತಮ್ಮ ನಾಯಕರನ್ನು ಮೆಚ್ಚಿಸಿ ರಾಜಕೀಯ ಹುದ್ದೆ ಪಡೆಯಲು ಮನ ಬಂದಂತೆ ಮಾತನಾಡುತ್ತಿದ್ದು ಶಾಸಕ ಡಿ.ರವಿಶಂಕರ್ ಅವರು ಕೂಡಲೇ ಗಮನ ಹರಿಸಿ ಅತೃಪ್ತರಾಗಿರುವ ತಮ್ಮ ಪಕ್ಷದ ವಕ್ತಾರನಿಗೆ ಯಾವುದಾದರು ಶಕ್ತಿಯುತವಾದ ಸ್ಥಾನ ನೀಡಬೇಕೆಂದು ಸಲಹೆ ನೀಡಿದರು.







