Mysore

ಕಂದೇಗಾಲದಲ್ಲಿ ಮಹದೇಶ್ವರ ಸ್ವಾಮಿಯ ಅದ್ಧೂರಿ ಜಾತ್ರಾಮಹೋತ್ಸವ.. ಭಕ್ತಿ ಭಾವ ಮೆರೆದ ಭಕ್ತರು

ಸರಗೂರು: ತಾಲೂಕಿನ ಸಾಗರೆ ಗ್ರಾಮ ಪಂಚಾಯತಿ ವ್ಯಾಪ್ತಿಯ  ಕಂದೇಗಾಲ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸ್ವಾಮಿರವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಮಂಗಳವಾರ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಸಂಪೂರ್ಣ ನೇತೃತ್ವವನ್ನು ಶ್ರೀ ಕಂದೇಗಾಲ ಶ್ರೀ ಮಹದೇಶ್ವರ ಜಾತ್ರಾ ಕಮಿಟಿ ವತಿಯಿಂದ ನಡೆದ ಜಾತ್ರೆಯಲ್ಲಿ ನೂರಾರು ಭಕ್ತರ ಸಾನ್ನಿಧ್ಯದಲ್ಲಿ ಧಾರ್ಮಿಕ ಆಚರಣೆಗಳು ಸಂಭ್ರಮದಿಂದ ಜರುಗಿದವು. ಇಲ್ಲಿನ ಕಂದೇಗಾಲ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನ ಮಾಜಿ ಶಾಸಕರಾದ ದಿವಂಗತ ಆರ್ ಪೀರಣ್ಣ ರವರ ಕಾಲದಲ್ಲಿ ಈ ದೇವಸ್ಥಾನ ಸ್ಥಾಪನೆಯಾಗಿದ್ದು, ಈ ದೇವಸ್ಥಾನಕ್ಕೆ ದಿವಂಗತ ಎಂ ಪಿ ವೆಂಕಟೇಶ್ ರವರ  ಸಹಕಾರದಿಂದ ಹಾಗೂ ತಮ್ಮಂದಿರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಪಿ ನಾಗರಾಜು, ಎಂ ಪಿ ಶಂಕರ್ ಇವರ ಮಕ್ಕಳಾದ ಬಾಲಾಜಿ ಎಂಎಸ್, ಚರಣ್ ಎಂ ಎಸ್, ಅಭಿಷೇಕ್ ಎಂ ಎಸ್ ಇವರು ಈ ದೇವಸ್ಥಾನಕ್ಕೆ ಸಹಾಯ ಹಸ್ತ ನೀಡುತ್ತಿರುತ್ತಾರೆ.

ಇಂದಿಗೂ ಈ ಜಾತ್ರೆಯಲ್ಲಿ  ಗ್ರಾಮಸ್ಥರು ಅಪಾರ ಭಕ್ತಿ ಭಾವದಿಂದ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಸೋಮವಾರ ರಾತ್ರಿಯಿಂದಲೇ ಕಂದೇಗಾಲ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯವನ್ನು ತಳಿರು-ತೋರಣ, ಬಣ್ಣಬಣ್ಣದ ರಂಗೋಲಿ ಹಾಗೂ ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.

ಶುಕ್ರವಾರ ಮುಂಜಾನೆ ಅರ್ಚಕರಾದ  ಬಿದರಹಳ್ಳಿ ಅರ್ಚಕರಾದ ಮಹದೇವಪ್ಪ ಅವರಿಂದ ಹೋಮ-ಹವನಗಳು ನಡೆದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಮಂಗಳವಾರ ಪೂರ್ಣಕುಂಭ ಕಳಸದೊಂದಿಗೆ ಉತ್ಸವ ಮೂರ್ತಿ ಹುಲಿಯ ವಾಹನವನ್ನು ರವಿ ಅರಸ್ ರವರ ಜಮೀನು ಹತ್ತಿರ ಕೊಂಡೊಯ್ದು ಗಂಗೆ ಪೂಜೆ ಸಲ್ಲಿಸಲಾಯಿತು. ಹುಲಿ ವಾಹನ ಉತ್ಸವ ಮೂರ್ತಿಗೆ ವಿವಿಧ ಹೂವಿನಿಂದ ಭವ್ಯವಾಗಿ ಅಲಂಕರಿಸಿ, ಮಂಗಳವಾದ್ಯ,ಕಂಸಾಲೆನೃತ್ಯ, ವೀರಗಾಸೆ, ಸತ್ತಿಗೆ, ನರಸೀಪುರದ ನಗಾರಿ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಉತ್ಸವ ಮೆರವಣಿಗೆ ಕಂದೇಗಾಲ ಗ್ರಾಮದ ಮುಖಾಂತರ ಹೊರಟು ಪ್ರಮುಖ ರಸ್ತೆಯ ಮೂಲಕ ಮೆರವಣಿಗೆ ಸಾಗುತ್ತಾ ದೇವಸ್ಥಾನಕ್ಕೆ ಆಗಮಿಸಿದರು.

ದೇವಾಲಯದ ಬಳಿಯ ಮುಂಭಾಗ ಮೂರು ಸುತ್ತು ಪ್ರದಕ್ಷಿಣೆ ನೆರವೇರಿಸಿದ ಬಳಿಕ, ಮೊದಲು ದೇವಸ್ಥಾನದ ಅರ್ಚಕರು ಕೊಂಡವನ್ನು ಆಯ್ದು, ನಂತರ ಹರಕೆ ಒತ್ತುವವರು ಹಾಗೂ ಸತ್ತಿಗೆ ಒತ್ತವರು ಕೊಂಡ ಹಾಯ್ದರು. ಈ ಸಂದರ್ಭದಲ್ಲಿ ಮಹಾ ಮಂಗಳಾರತಿ ನಡೆದು, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಹಲವಾರು ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆಗಳನ್ನು ತೀರಿಸಿಕೊಂಡರು.

ಪಡವಲು ವಿರಕ್ತ ಮಠದ ಮಠಾಧ್ಯಕ್ಷರಾದ ಶ್ರೀ ಮಹದೇವಸ್ವಾಮಿಗಳು,ದಡದಹಳ್ಳಿ ಪಟ್ಟದ ಮಠದ ಮಠಾಧ್ಯಕ್ಷರಾದ ಶ್ರೀ ಷಡಕ್ಷರಿ ಸ್ವಾಮೀಜಿ, ಅಂಚಿಪುರ ಪಟ್ಟದ ಮಠದ ಮಠಾಧ್ಯಕ್ಷರಾದ ಕಿರಿಯ ಸ್ವಾಮೀಜಿಗಳಾದ ಶ್ರೀ ತೋಂಟದಾರ್ಯ ಸ್ವಾಮಿಜಿ, ಜಕಳ್ಳಿ ಮಠದ ಮಠಾಧ್ಯಕ್ಷರಾದ ಶಿವಕುಮಾರ್ ಸ್ವಾಮೀಜಿ ಉಪಸ್ಥಿತರಿದ್ದರು.  ದೇವಸ್ಥಾನ ಮುಂಭಾಗದಲ್ಲಿರುವ ನೂತನವಾಗಿ ನಿರ್ಮಿಸಿರುವ ಬಸವನ ವಿಗ್ರಹವನ್ನು ಸ್ವಾಮೀಜಿಗಳು ಉದ್ಘಾಟಿಸಿದರು.

ಹಾಗೂ ನೂತನವಾಗಿ ನಿರ್ಮಿಸಿರುವ  ನವಗ್ರಹ ದೇವಸ್ಥಾನವನ್ನು ಮೈಸೂರಿನ ಗೆಜ್ಗಳ್ಳಿ ಲೋಕೇಶ್, ಗೊರೂರಿನ ಮಲ್ಲೇಶ್, ಶ್ರೀಕಂಠ ಮೂರ್ತಿ, ದಾರಿಪುರ ನಾಗಣ್ಣ, ಚೇತನ್ ಅರಸಿನಕೆರೆ ಇವರುಗಳು ಸ್ವಾಮೀಜಿಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಈ ಎಲ್ಲಾ ಭಕ್ತಾದಿಗಳನ್ನು ದೇವಸ್ಥಾನದ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ ಗೆಜ್ಜೆಗಳ್ಳಿ ರವರು ಶಾಸಕರಾದ ಹರೀಶ್ ಗೌಡರ ಪರವಾಗಿ ಇಲ್ಲಿಗೆ ಇನ್ನು ಹೆಚ್ಚಿನ ಕೆಲಸ ಮಾಡಿಸಿಕೊಡುವುದಾಗಿ ತಿಳಿಸಿದರು. ಜಾತ್ರಾ ಮಹೋತ್ಸವಕ್ಕೆ ಸರಗೂರು ತಾಲ್ಲೂಕಿನ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ದೇವಸ್ಥಾನದ ಕಮಿಟಿ ಅಧ್ಯಕ್ಷ ಪಟೇಲ್ ರಾಜಪ್ಪ, ಗೌರವಾನ್ವಿತ ಹಿರಿಯ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಕೆ.ಚಿಕ್ಕವೀರನಾಯಕ, ಖಜಾಂಚಿ ಬಿದರಹಳ್ಳಿ ಮಾದಪ್ಪ, ಕಾರ್ಯದರ್ಶಿ ಕಂದೇಗಾಲ ಸೋಮಣ್ಣ, ಕೆ.ಸಿ ರುದ್ರಯ್ಯ, ಗುರುಮಲ್ಲಪ್ಪ, ಲಕ್ಷ್ಮಣಚಾರಿ, ಅನಿತ ಅರಸು, ಸಿದ್ದಯ್ಯ, ದೊಡ್ಡಯ್ಯ, ಅರ್ಚಕ ಮಹದೇವಪ್ಪ, ಶಿವಕುಮಾರ್, ಸರಗೂರಿನ ಎಸ್ ಬಿ ಐ ಬ್ಯಾಂಕಿನ ವ್ಯವಸ್ಥಾಪಕ ರಾಖೇಶ್, ಚಾಮಲಾಪುರ ಸಿ.ಕೆ ಗಿರೀಶ್, ಕ ಸಾ ಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಮಹೇಶ್, ನಾಗೇಂದ್ರ, ಸಿದ್ದಪ್ಪ, ಅಕ್ಕ ಪಕ್ಕದ ಎಲ್ಲಾ ಗ್ರಾಮಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಾತ್ರಾ ಕೊಂಡೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರಗೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ಕಿರಣ್ ಎ ಎಸ್ ಐ ಶಿವಕುಮಾರ್, ಆನಂದ್, ಗಣಪತಿ, ಶಿವಕುಮಾರ್, ಜಗದೀಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

admin
the authoradmin

Leave a Reply

Translate to any language you want