Mysore

ಕೆ.ಆರ್.ನಗರದ ಎಪಿಎಂಸಿ ಆವರಣದಲ್ಲಿ ಭತ್ತ ಮತ್ತು ರಾಗಿ  ಖರೀದಿ ಕೇಂದ್ರಕ್ಕೆ ಶಾಸಕ ಡಿ.ರವಿಶಂಕರ್ ಚಾಲನೆ

ಕೆ.ಆರ್.ನಗರ(ಜಿಟೆಕ್ ಶಂಕರ್): ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಮತ್ತು ಬೆಂಬಲ ಬೆಲೆ ದೊರೆಯಲಿ ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆದಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿಯೇ ಮೊದಲ ಭತ್ತ ಖರೀದಿ ಕೇಂದ್ರ ಆರಂಭಿಸಿದ ಹೆಗ್ಗಳಿಕೆ ನಮ್ಮದಾಗಿದ್ದು ಇದಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಖರೀದಿ ಕೇಂದ್ರಗಳಿಗೆ ಭತ್ತ ಸರಬರಾಜು ಮಾಡುವ ಸಮಯದಲ್ಲಿ ರೈತರು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿ ಕೇಂದ್ರಗಳಿಗೆ ತರಬೇಕು ಗುಣಮಟ್ಟವಿಲ್ಲದ ಕಾರಣ ತಿರಸ್ಕೃತ ಗೊಂಡಲ್ಲಿ ತಾವುಗಳಿಗೆ ವಾಪಾಸ್ಸ್ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಸದಾ ರೈತ ಪರವಾಗಿ ಕೆಲಸ ಮಾಡುತ್ತಿದ್ದು ಪ್ರತಿ ರೈತರಿಂದ ಎಕರೆಗೆ 25ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತ ಮತ್ತು ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನಿಗಧಿಪಡಿಸಿದ್ದು ಇದರ ಜತೆಗೆ ಪ್ರತಿ ಚೀಲದಲ್ಲಿ 50 ಕೆ.ಜಿ. ತೂಕ ಇರುವಂತೆ ಸೂಚಿಸಲಾಗಿದ್ದು ಇದರಲ್ಲಿ ಯಾವುದೇ ವ್ಯತ್ಯಾಯ ಕಂಡು ಬರಬಾರದು ಎಂದು ಸಲಹೆ ನೀಡಿದರು.

ಖರೀದಿ ಕೇಂದ್ರದವರು ದಲ್ಲಾಳಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಈ ವಿಚಾರದಲ್ಲಿ ರೈತರು ಮತ್ತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದರೆ ಕನಿಷ್ಠ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಶಾಸಕರು ಪ್ರಸ್ತುತ ಕೇಂದ್ರ ಆರಂಭವಾಗುವುದು ತಡವಾಗಿದ್ದು ಮುಂದಿನ ವರ್ಷದಿಂದ ನವೆಂಬರ್ ತಿಂಗಳ ಮೊದಲ ವಾರದಲ್ಲಿಯೇ ಭತ್ತ ಮತ್ತು ರಾಗಿ ಕೇಂದ್ರವನ್ನು ಖರೀದಿ ಮಾಡಲಾಗುತ್ತದೆ ಎಂದರು.

ಈಗ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಎರಡು ಕಡೆಗಳಲ್ಲಿ ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆ ನೀಡಿ ಭತ್ತ ಮತ್ತು ರಾಗಿ ಖರೀದಿಸುತ್ತಿದ್ದು ಮುಂದಿನ ಸಾಲಿನಿಂದ ಎರಡು ತಾಲೂಕುಗಳ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿ ಮಾಡಲಿದ್ದು ಇದರಿಂದ ರೈತರಿಗೆ ಸಮಯ ಉಳಿಯುವುದರ ಜತೆಗೆ ಆರ್ಥಿಕ ಹೊರೆಯು ತಗ್ಗಲಿದೆ ಎಂದು ನುಡಿದರು.

ಈ ವರ್ಷ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 2369ರೂ. ಮತ್ತು ಗ್ರೇಡ್.ಎ. ಭತ್ತಕ್ಕೆ 2389 ರೂಗಳನ್ನು ನಿಗಧಿಪಡಿಸಲಾಗಿದ್ದು ಇದರ ಜತೆಗೆ ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂಗಳು ಕೊಡಲಾಗುತ್ತದೆ ಎಂದು ಪ್ರಕಟಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಹೆಚ್.ಪಿ.ಪ್ರಶಾಂತ್, ಕೆ.ಬಿ.ನಟರಾಜು, ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಪುರಸಭೆ ಮಾಜಿ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಆಹಾರ ಮತ್ತು ನಾಗರೀಕ ಪೂರೈಕೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ವ್ಯವಸ್ಥಾಪಕ ಡಿ.ಎಂ.ಕಿರಣ್, ಕಾರ್ಯದರ್ಶಿ ವಸಂತ್ ಕುಮಾರ್, ಸಹಕಾರ್ಯದರ್ಶಿ ರಾಜೇಶ್, ಲೆಕ್ಕಿಗ ಹೆಚ್.ಸಿ.ಚೆಲುವರಾಜು, ಆಹಾರ ನಿರೀಕ್ಷಕ ಎಲ್.ಮಂಜುನಾಥ್, ಶಿರಸ್ತೇದಾರರಾದ ಡಿ.ಆರ್.ಕುಮಾರ್, ಕೆ.ಪಿ.ಸುರೇಶ್, ಖರೀದಿ ಅಧಿಕಾರಿಗಳಾದ ಡಿ.ಸಿ.ಶರತ್ ಕುಮಾರ್, ರಂಜಿತಾ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಸದಸ್ಯ ಸೈಯದ್‌ಜಾಬೀರ್ ಹಾಜರಿದ್ದರು.

admin
the authoradmin

Leave a Reply

Translate to any language you want