LatestNews

ಕಾವೇರಿ ತವರು ಕೊಡಗಿನಲ್ಲಿ ಅಬ್ಬರಿಸಿದ ರೋಹಿಣಿ ಮಳೆ.. ಜಲಪಾತಗಳ ಬಳಿಗೆ ತೆರಳದಂತೆ ಆದೇಶ… ಇದುವರೆಗೆ ಸುರಿದ ಮಳೆಯ ಪ್ರಮಾಣವೆಷ್ಟು?

ಮಡಿಕೇರಿ: ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ರೋಹಿಣಿ ಮಳೆ ಅಬ್ಬರಿಸಿದ್ದು, ಪರಿಣಾಮ ಕಾವೇರಿ ಭೋರ್ಗರೆದು ಹರಿಯುತ್ತಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿಯ ಉಗಮಸ್ಥಾನ ತಲಕಾವೇರಿ ಸೇರಿದಂತೆ ಬ್ರಹ್ಮಗಿರಿ ಬೆಟ್ಟ ಶ್ರೇಣಿಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಕಾವೇರಿ ನದಿಯ ಉಪನದಿಗಳಾದ ಕನ್ನಿಕೆ, ಸುಜ್ಯೋತಿ ನದಿ ಸಂಗಮ ಕ್ಷೇತ್ರವಾದ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ.

ಪ್ರತಿ ವರ್ಷದಂತೆ ಜೂನ್ ಅಥವಾ ಜುಲೈನಲ್ಲಿ ಮಳೆ ಸುರಿಯಬಹುದೆಂದು ನಂಬಿದವರ ನಂಬಿಕೆಯನ್ನು ರೋಹಿಣಿ ಮಳೆ ಸುಳ್ಳು ಮಾಡಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಇಷ್ಟೊಂದು ಮಳೆ ಸುರಿಯುತ್ತಿರಲಿಲ್ಲ. ಮುಂಗಾರು ಮಳೆಯ ಆರಂಭ ಕೂಡ ಜಿಟಿ, ಜಿಟಿ ಮಳೆಯಿಂದಲೇ ಆರಂಭವಾಗುತ್ತಿತ್ತು. ಆದರೀಗ ನಡು ಮಳೆಗಾಲದಲ್ಲಿ ಸುರಿದಂತೆ ಭಾರೀ ಮಳೆ ಸುರಿಯುತ್ತಿದ್ದು ಕಾವೇರಿ, ಲಕ್ಷ್ಮಣ ತೀರ್ಥ ನದಿ ಸೇರಿದಂತೆ ಹೊಳೆ, ತೊರೆಗಳು ತುಂಬಿ ಹರಿಯುತ್ತಿವೆ. ಮಳೆ ಜತೆಗೆ ಗಾಳಿಯೂ ಬೀಸುತ್ತಿರುವುದರಿಂದ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿದ್ದು, ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಕಾಣಿಸಿದೆ.

ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಒಂದೇ ದಿನ ಭಾಗಮಂಡಲ 225 ಮಿ.ಮೀ.ಮಳೆ ಸುರಿದಿದೆ. ಮಡಿಕೇರಿ ವ್ಯಾಪ್ತಿಯಲ್ಲಿ 169ಮಿ.ಮೀ ಮಳೆ ಸುರಿದಿದೆ ಮತ್ತು ದಕ್ಷಿಣ ಕೊಡಗಿನ ವೀರಾಜಪೇಟೆಯಲ್ಲಿ 157 ಮಿ.ಮೀ, ಸೋಮವಾರಪೇಟೆ ಶಾಂತಳ್ಳಿಯಕಲ್ಲಿ 154 ಮಿ.ಮೀ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಮಳೆ ರಭಸ ಹೆಚ್ಚಾಗಿದ್ದು, ನಾಪೋಕ್ಲು 162.20, ಸಂಪಾಜೆ 17, ಅಮ್ಮತ್ತಿ 153, ಹುದಿಕೇರಿ 138, ಶ್ರೀಮಂಗಲ 153, ಪೊನ್ನಂಪೇಟೆ 111, ಬಾಳೆಲೆ 79.12, ಸೋಮವಾರಪೇಟೆ 116, ಶನಿವಾರಸಂತೆ 100, ಕೊಡ್ಲಿಪೇಟೆ 80.60, ಕುಶಾಲನಗರ 76.60, ಸುಂಟಿಕೊಪ್ಪ 128.20 ಮಿ.ಮೀ.ಮಳೆಯಾಗಿದೆ.   ಒಟ್ಟಾರೆ ಸರಾಸರಿ ಜಿಲ್ಲೆಯಲ್ಲಿ 126.79 ಮಿ.ಮೀ. ಮಳೆ ಸುರಿದಿದೆ. ಪರಿಣಾಮ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜನವರಿಯಿಂದ ಇಲ್ಲಿವರೆಗೆ ಸುಮಾರು 449.84 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಈ ಅವಧಿಯಲ್ಲಿ  325.40 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ 124.44 ಮಿ.ಮೀ. ಹೆಚ್ಚು ಮಳೆ ಸುರಿದಿದೆ.  ಇದೆಲ್ಲದರ ನಡುವೆ ಮಳೆಯ ಕಾರಣ ಪುಟ್ಟ ಜಲಾಶಯವಾದ ಚಿಕ್ಲಿಹೊಳೆ ಜಲಾಶಯವು ಬಹುಬೇಗ ಭರ್ತಿಯಾಗಿದ್ದು ಹೆಚ್ಚುವರಿ ನೀರು ವೃತ್ತಾಕಾರವಾಗಿ ಧುಮ್ಮಿಕ್ಕಲಾರಂಭಿಸಿದೆ. ಇನ್ನೊಂದೆಡೆ ಹಾರಂಗಿ ಜಲಾಶಯದ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. 2,859 ಅಡಿಗಳ ಗರಿಷ್ಟ ಮಟ್ಟವನ್ನು ಹೊಂದಿರುವ ಜಲಾಶಯದಲ್ಲಿ ಇದೀಗ 2834.70 ಅಡಿಗಳಷ್ಟು ನೀರಿದೆ.  ಕಳೆದ ವರ್ಷ ಇದೇ ಅವಧಿಯಲ್ಲಿ 2824.11 ಅಡಿಯಷ್ಟು ನೀರಿತ್ತು.  ಮಳೆಯಿಂದಾಗಿ ಒಳ ಹರಿವು 1693 ಕ್ಯುಸೆಕ್ ಇದ್ದು, 100 ಕ್ಯುಸೆಕ್ ಹೊರ ಹರಿವಿದೆ.

ಇದೆಲ್ಲದರ ನಡುವೆ ಮುಂಗಾರು ಮಳೆ  ಅಬ್ಬರ ಹೆಚ್ಚಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಅನಾಹುತ ಸಂಭವಿಸುವ ಸಾಧ್ಯತೆ ಇರುವ ಕಾರಣ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅಲ್ಲದೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ. ಪ್ರವಾಸಿಗರಿಗೆ ಒಂದಷ್ಟು ಎಚ್ಚರಿಕೆಯನ್ನು ನೀಡಲಾಗಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಅಥವಾ ಸಾರ್ವಜನಿಕರು ಜಿಲ್ಲೆಯ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡುವುದಾಗಲೇ, ನೀರಿನಲ್ಲಿ ಇಳಿಯುವುದು, ಈಜುವುದು, ಮೋಜು, ಮಸ್ತಿ ಇತ್ಯಾದಿ ಚಟುವಟಿಕೆಗಳನ್ನು ನಡೆಸದಂತೆ ಸೂಚನೆ ನೀಡಿದ್ದಾರೆ.

ಜತೆಗೆ ಕಠಿಣ ಆದೇಶ ಮಾಡಿರುವ ಜಿಲ್ಲಾಧಿಕಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಕೊಡಗು ಜಿಲ್ಲೆಯಾದ್ಯಂತ ಇರುವ ಜಲಪಾತಗಳು, ಝರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಆಣೆಕಟ್ಟು, ಜಲಾಶಯದ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಅನಧಿಕೃತವಾಗಿ ನೀರಿನಲ್ಲಿ ಇಳಿಯುವುದು, ಮುಳುಗು ಹೊಡೆಯುವುದು, ಸಾಹಸ ಚಟುವಟಿಕೆ ನಡೆಸುವುದು, ಈಜುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿದ್ದಾರೆ. ಉಲ್ಲಂಘಿಸುವವರು ವಿಪತ್ತು ನಿರ್ವಹಣಾ ಕಾಯ್ದೆ, 2005 ಸೆಕ್ಷನ್ 51(b) ಮತ್ತು ಸಂಬಂಧಿತ ನಿಯಮ, ಕಾಯ್ದೆಗಳ ವಿವಿಧ ಕಲಂಗಳಡಿಯಲ್ಲಿ ದಂಡನೆಗೆ ಒಳಗಾಗಬೇಕಾಗುತ್ತದೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ. ಜಿಲ್ಲೆಗೊಂದು ಸುತ್ತು ಹೊಡೆದರೆ, ಅಲ್ಲಲ್ಲಿ ಹಲವು ಅನಾಹುತಗಳು ಸೃಷ್ಟಿಯಾಗಿರುವುದು ಗೋಚರಿಸುತ್ತಿದೆ.

admin
the authoradmin

Leave a Reply

Translate to any language you want