LatestNews

ಕುಶಾಲನಗರದಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ.. ಧರ್ಮ, ಸಂಸ್ಕ್ರತಿ ಉಳಿವಿಗೆ ಸಂಘಟಿತರಗಬೇಕು

ಕುಶಾಲನಗರ(ರಘುಹೆಬ್ಬಾಲೆ): ಎಲ್ಲಾ ಹಿಂದೂಗಳು ಒಂದಾಗಿ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು  ಉಳಿಸೋಣ.ಏಕತೆಯಲ್ಲಿ ನಮ್ಮ ಶಕ್ತಿ ಇದೆ ಒಟ್ಟಾಗಿ ನಿಲ್ಲೋಣ ಎಂದು ಹಿಂದೂ ಮುಖಂಡರೂ ಆದ ಪುತ್ತೂರಿನ ಶ್ರೀ ವಿವೇಕಾನಂದ ಕಾಲೇಜು ಅಧ್ಯಕ್ಷ ರವೀಂದ್ರ ಪತ್ತೂರು ಸಲಹೆ ನೀಡಿದರು.

ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ  ಭಾನುವಾರ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಅಂಗವಾಗಿ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಏರ್ಪಡಿಸಿದ್ದ  ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹಿಂದೂಗಳು ಒಗ್ಗೂಡಿ ಸಂಘಟಿತರಾಗುವ ಮೂಲಕ  ಹಿಂದೂ ಸಂಸ್ಕೃತಿ, ಪರಂಪರೆಗಳನ್ನು,  ಕೌಟುಂಬಿಕ ಮೌಲ್ಯಗಳನ್ನು ಸಂರಕ್ಷಿಸುವ ಈ ಮೂಲಕ   ಹಿಂದೂ ಸಮಾಜದ ಬಲವರ್ಧನೆಗೆ ಶ್ರಮಿಸಬೇಕೆಂದು ಎಂದರು.

ಇದು ಯಾವುದೇ ವ್ಯಕ್ತಿಯ, ಧರ್ಮದ,  ರಾಜಕೀಯ ಪಕ್ಷದ ವಿರುದ್ದ ಹಿಂದೂ ಸಂಗಮವಲ್ಲ.ನಮ್ಮ ಹಿಂದೂ ಸಮಾಜದ ಸಂಘಟನೆಗೆ ಗ್ರಾಮಗಳಲ್ಲಿ ಸಮಿತಿ ರಚನೆ ಮಾಡುವ ಮೂಲಕ ಜಾಗೃತಿ ಮೂಡುತ್ತಿರುವುದು ಹೆಮ್ಮೆಯ ಸಂಗತಿ. ಆದರೆ, ಹಿಂದೂಗಳೆಲ್ಲಾ ಒಂದೇ ಎಂಬ ಭಾವನೆಗಳೊಂದಿಗೆ ಜಾತಿ ಪದ್ಧತಿ ನಿರ್ಮೂಲನೆ ಮಾಡಬೇಕು. ಸ್ವದೇಶಿ ವಸ್ತುಗಳಿಗೆ ಆದ್ಯತೆ ಕೊಡಬೇಕು. ಹಿಂದುತ್ವದ ಅರ್ಥ ಮಾಡಿಕೊಂಡವರು ಜಗತ್ತಿನಾದ್ಯಂತ ಬೇರೆ ಬೇರೆ ರಂಗಗಳಲ್ಲಿ ಬೆಳೆಯುತ್ತಿದ್ದಾರೆ.

ಕೆಲವರು ವಿನಾಶಕ್ಕೆ  ಸಂಚು ರೂಪಿಸುತ್ತಿದ್ದಾರೆ.ಹಿಂದೂ ಪದ ಕೇಳಿದರೆ  ಮೈ ಪರಚಿಕೊಳ್ಳುವ ಕಾಲವೊಂದಿತ್ತು.ಸ್ವಾಮಿ ವಿವೇಕಾನಂದರ ಆದರ್ಶಗಳ ಪಾಲನೆ ಹಿಂದೂಗಳ ಹೆಮ್ಮೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ನವಚೈತನ್ಯ ತಂದು ಕೊಟ್ಟ ಮಹಾ ಚೇತನ ಎಂದು ರವೀಂದ್ರ ಬಣ್ಣಿಸಿದರು.

ಹಿಂದೂಗಳು ಇರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಹಿಂದೂ ಸಮಾಜ ಯಾವತ್ತೂ ಯಾರ ಜೊತೆಯೂ ಯುದ್ಧಕ್ಕಿಳಿಯಲಿಲ್ಲ.ಜಗತ್ತಿನ ಕೆಲವು  ರಾಷ್ಟ್ರ ಗಳಿಗೆ ಜನರನ್ನು ಕೊಲ್ಲುವುದೇ ಕೆಲಸವಾಗುತ್ತಿದೆ. ಭಾರತೀಯ ಸಹೋದರಿಯರ ಸಿಂಧೂರ ಅಳಿಸಿದ ಉಗ್ರರನ್ನು ನಮ್ಮ ಸೈನಿಕರು ಸದೆ ಬಡಿದದ್ದು ಇತಿಹಾಸ ಎಂದರು.

ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ನಾಲ್ಕು ಸಾವಿರ ವರ್ಷಗಳ  ಹಳೆಯ ಪುರಾತನ ಧರ್ಮ ನಮ್ಮ ಹಿಂದೂ ಧರ್ಮ.ಮಹಾನ್ ತ್ಯಾಗಿಗಳು, ಋಷಿಮುನಿಗಳು, ಮಹರ್ಷಿಗಳು ಇರುವಂತಹ  ಶ್ರೇಷ್ಠ ಸನಾತನ ಧರ್ಮದ ಸಂರಕ್ಷಣೆ ಅಗತ್ಯವಿದೆ. ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದ ದೇಶ ನಮ್ಮದು.

ಪರಿಸರ ಸಂರಕ್ಷಣೆಗೂ ಹಿಂದೂ ಧರ್ಮದ ಧಾರ್ಮಿಕ ಪದ್ದತಿಗಳಿಗೂ ಅವಿನಾಭಾವ ಸಂಬಂಧವಿದೆ. ಭಾರತೀಯ ಸಂಸ್ಕೃತಿಯನ್ನು ಇಂದಿನ ಯುವಕ ಯುವತಿಯರು ಆರಾಧಿಸುವ ಮೂಲಕ ಹಿರಿಯರ ಆಚರಣೆಗಳನ್ನು ಗೌರವಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ವಾಗಬೇಕಿದೆ. ಇಂತಹ ಶ್ರೇಷ್ಠ ಧರ್ಮದ ತಳಹದಿ ಗಟ್ಟಿ ಗೊಳಿಸಬೇಕಿದೆ. ಕೆಲವು ರಾಜಕಾರಣಿಗಳು ಮತಬ್ಯಾಂಕಿಗೋಸ್ಕರ  ಹಿಂದೂ ಧರ್ಮದ ವಿರುದ್ದ  ಟೀಕೆ ಮಾಡುವುದು ಸಲ್ಲದು.  ಹಾಗಾಗಿ ಹಿಂದೂ ಯುವ ಶಕ್ತಿ ಒಗ್ಗೂಡಿ ಎಂದರು.

ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕ ಜಿ.ಎಲ್.ನಾಗರಾಜು ಮಾತನಾಡಿ, ಸಹಸ್ರ ವರ್ಷಗಳಿಂದ ಹಿಂದೂ ರಾಷ್ಟ್ರ  ಭಾರತ ದೇಶ  ಕಳೆದು ಕೊಂಡದ್ದನ್ನು ಮರಳಿ  ಗಳಿಸಿ ಕೊಳ್ಳುವುದಕ್ಕೆ ಹಿಂದೂ ಸಂಗಮ ಅವಶ್ಯವಿದೆ. ಹಿಂದೂಗಳು ಇನ್ನಾದರೂ ಒಗ್ಗೂಡಿ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.  ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ಈ ಸಂದರ್ಭ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್, ವಿಶ್ವಜ್ಞಾನಿ ಡಾ.ಅಂಬೇಡ್ಕರ್ ಸಂಘದ ಅಧ್ಯಕ್ಷ ಲೋಕೇಶ್ ಪುಂಡಾರಿ, ಮುಖಂಡರಾದ ವಿ.ಎನ್.ವಸಂತ ಕುಮಾರ್,  ಹರಪಳ್ಳಿರವೀಂದ್ರ ಭಾಗವಹಿಸಿದ್ದರು.

ಮಹಿಳೆಯರು ಸಾಮೂಹಿಕವಾಗಿ ವಂದೇ ಮಾತರಂ ಗೀತೆ ಹಾಡಿದರು. ಮಕ್ಕಳು ದೇಶ ಭಕ್ತರ  ಹಾಗೂ ತ್ಯಾಗಿಗಳ ಛದ್ಮವೇಷ ಧರಿಸಿ ಗಮನ ಸೆಳೆದರು. ಚಂದ್ರಶೇಖರ್ ದೇಶಭಕ್ತಿ ಗೀತೆ ಹಾಡಿದರು. ಎಂ.ಡಿ.ರಂಗಸ್ವಾಮಿ ಸ್ವಾಗತಿಸಿದರು. ಆಶಾ ಅಶೋಕ್ ನಿರೂಪಿಸಿದರು.

admin
the authoradmin

Leave a Reply

Translate to any language you want