ArticlesLatest

ಪಿಯುಸಿಗೆ ಗುಡ್ ಬೈ ಹೇಳಿದ  ಹುಡ್ಗ… ಇವತ್ತು ಲಾಯರ್! 40ಕ್ಕೆ ಕಾಲೇಜಿಗೆ ಹೋಗುವ ಮನಸ್ಸು ಬಂದಿದ್ದೇಗೆ?

ಕೈಚೆಲ್ಲಿ ಕುಳಿತವರು ಪರಮೇಶ್ ಅವರ ಸಾಧನೆಯ ಕಥೆಯನ್ನೊಮ್ಮೆ ಓದಿ

ರಘು ಹೆಬ್ಬಾಲೆ

ಕಠಿಣ ಶ್ರಮ, ಶ್ರದ್ಧೆ, ನಂಬಿಕೆ ಮತ್ತು ಛಲ ಇದಿಷ್ಟು ಇದ್ದರೆ ಯಾರೇ ಆಗಲಿ ಒಂದಲ್ಲ ಒಂದು ದಿನ ತನ್ನ ಗುರಿಯನ್ನು ಸಾಧಿಸಿಯೇ ಸಾಧಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಉದಾಹರಣೆಯಾಗಿ ನಿಂತವರು ಕೊಡಗಿನ ಹೆಬ್ಬಾಗಿಲು ಕುಶಾಲನಗರದ  ನ್ಯೂ ಹೌಸಿಂಗ್ ಬೋರ್ಡ್ ನಿವಾಸಿ   ಪರಮೇಶ್..! ಇವರ ಬದುಕಿನ ಹಾದಿಯನ್ನು ನೋಡಿದರೆ ಪ್ರಯತ್ನಗಳು ಕೈ ಬಿಡುವುದಿಲ್ಲ ಎಂಬ ಮಾತುಗಳು ನಿಜವೆನಿಸದಿರದು..  ಇವತ್ತು ಇವರು ಬದುಕು ಕಟ್ಟಿಕೊಂಡ ರೀತಿ ಮತ್ತು ಅವರು ಮಾಡಿದ ಸಾಧನೆ ಅದೆಷ್ಟೋ ಜನರಿಗೆ ಮಾದರಿ ಆದರೆ ಅಚ್ಚರಿಪಡಬೇಕಾಗಿಲ್ಲ.

ನಮ್ಮಿಂದ ಏನೂ ಆಗಲ್ಲ ಎಂದು ಕೈಚೆಲ್ಲಿ ಕುಳಿತವರು   ಪರಮೇಶ್ ಅವರ ಸಾಧನೆಯ ಕಥೆಯನ್ನೊಮ್ಮೆ ಓದಿ ಬಿಡಿ.. ಆಮೇಲೆ ನಿಮಗೂ ನಿಮ್ಮ ಗುರಿ ನೆನಪಾಗಬಹುದು.. ಅಷ್ಟೇ ಅಲ್ಲ ಆ ಗುರಿಯ ಕಡೆಗೆ ಮುಖ ಮಾಡಿ ನೀವು ಎದ್ದು ನಿಲ್ಲಲೂ ಬಹುದು… ಹಾಗೇನಾದರೂ ಆದರೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೇನಿದೆ… ಅವತ್ತು ಪರಮೇಶ್ ಪಿಯುಸಿಗೆ ಶಿಕ್ಷಣ ಸಾಕು ಬದುಕು ಕಟ್ಟಿಕೊಳ್ಳೋಣ ಎಂದು ಹೊರಟು ಬಿಟ್ಟರು. ಅದು ಅವತ್ತಿನ ಅನಿವಾರ್ಯತೆ ಆಗಿತ್ತು.. ಉನ್ನತ ಶಿಕ್ಷಣಕ್ಕೆ ಹಣ ಬೇಕಿತ್ತು. ಅದರ ಜತೆಗೆ ಹೊಟ್ಟೆಪಾಡು ಕಳೆಯಬೇಕಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ಬದುಕಿಗೆ ಮೊದಲ ಆದ್ಯತೆ ನೀಡಿ ದುಡಿಮೆಗೆ ಮುಂದಾದರು.

ಒಂದು ಮಾರುತಿ ವ್ಯಾನ್ ನಲ್ಲಿ, ಬ್ರೆಡ್ – ಬನ್-ಕೇಕ್ – ಮಸಾಲೆ ಕಡಲೆಯಂತಹ ‘ ಬೇಕರಿ ‘ತಿಂಡಿ – ತಿನಿಸುಗಳನ್ನು ತುಂಬಿಸಿಕೊಂಡು, ವಿವಿಧ ಗ್ರಾಮಗಳ ಹೋಟೆಲ್ – ಅಂಗಡಿಗಳಿಗೆ ಈ ತಿಂಡಿ- ತಿನಿಸುಗಳನ್ನು ವ್ಯಾಪಾರ ಮಾಡಲು ಆರಂಭಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಬಳಿಗೆ ಬೇಕರಿ ಮತ್ತು ಮಸಾಲೆ ಪದಾರ್ಥಗಳು ಬರುತ್ತವೆ ಎಂದರೆ ಅಂಗಡಿ ನಡೆಸುವವರಿಗೂ ಖುಷಿಯೇ.. ಹೀಗಾಗಿ ವ್ಯಾಪಾರ ನಿಧಾನವಾಗಿ ಕುದುರ ತೊಡಗಿತು. ಅವರು ಅದರಲ್ಲಿಯೇ ಬದುಕು ಕಟ್ಟಿಕೊಂಡು ಬಿಟ್ಟರು.  ಕಾಲ ಕ್ರಮೇಣ ಆ ವ್ಯಾಪಾರ ಅವರ ಕೈಹಿಡಿಯಿತು.

ಮುಂದೆ ಮದುವೆಯಾಯಿತು ಮಕ್ಕಳಾಯಿತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ ಅವರನ್ನು ಸಂಕಷ್ಟಕ್ಕೆ ತಳ್ಳಿದ್ದು ಕೊರೊನಾ.. ಅವತ್ತು ಬರೀ ಪರಮೇಶ್ ಅವರನ್ನು ಮಾತ್ರವಲ್ಲ ಕೋಟ್ಯಂತರ ಜನರನ್ನು ಕೊರೊನಾ ಕಟ್ಟಿ ಹಾಕಿತ್ತು. ಹಾಗೆಂದು ಕೊರೊನಾದಿಂದ ಕೆಟ್ಟದ್ದು ಮಾತ್ರವೇ ಆಗಿಲ್ಲ ಬದುಕಿಗೆ ಪಾಠವೂ ಆಗಿದೆ.. ಬಹಳಷ್ಟು ಜನರ ಬದುಕಿಗೆ ಅದು ತಿರುವು ಕೊಟ್ಟಿದೆ.. ಅದರೆ ಪರಮೇಶ್ ಅವರಿಗೆ ತಮ್ಮ ಬದುಕಿಗೆ ತಿರುವು ಸಿಕ್ಕಿದ್ದೇ ಇಲ್ಲಿಂದ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ..

ವ್ಯಾಪಾರ ಪಾತಾಳ ಸೇರಿತ್ತು… ಎಲ್ಲವನ್ನು ಬದಿಗೊತ್ತಿ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಆಗ ಅವರಿಗೆ ಅನಿಸಿದ್ದೇನೆಂದರೆ ಓದುವ ವಯಸ್ಸಲ್ಲಿ ಓದಲು ಸಾಧ್ಯವಾಗಿಲ್ಲ ಈಗಾದ್ರೂ ಓದೋಣ.. ಇದೊಂದು ರೀತಿಯಲ್ಲಿ ಅಚ್ಚರಿ ಎನಿಸ ಬಹುದು ಆದರೆ ಅವರಿಗೆ ಅದೇಕೆ ಓದುವ ಕನಸು ಕಣ್ಮುಂದೆ ಬಂತೋ ಗೊತ್ತಿಲ್ಲ. ಏನಾದರಾಗಲೀ ಪದವಿ ಪಡೆಯೋಣ ಎಂಬ ತೀರ್ಮಾಣಕ್ಕೆ ಬಂದು ಬಿಟ್ಟರು. ಬಹುಶಃ ಹೆಂಡತಿ ಮಕ್ಕಳಾಗಿ ಅವರಿಗೆ ವಿದ್ಯಾಭ್ಯಾಸ ಕೊಡಿಸುವ ವಯಸ್ಸಿಗೆ ನಾನು ಓದಬೇಕು ಎಂದರೆ ಬೇರೆ ಯಾರೇ ಆಗಿದ್ದರೂ ತಮಾಷೆ ಮಾಡುತ್ತಿದ್ದಾರೆ ಅಂದು ಕೊಳ್ಳುತ್ತಿದ್ದರೇನೋ? ಆದರೆ ಅವರ ಪತ್ನಿ ಹಾಗೆ ಮಾಡಲಿಲ್ಲ ಅವರಿಗೆ ಪತ್ನಿ ಸುಮಿ ಮತ್ತು ಮಕ್ಕಳಾದ ಅಭಯ್ -ಜಿನಿ ಉತ್ತೇಜನ ನೀಡಿದರು.

ಬರೀ ಪದವಿ ಓದುವುದರಿಂದ ಏನು ಪ್ರಯೋಜನ? ಎಂದು ಆಲೋಚಿಸಿದ ಅವರು ಎಲ್ಲವನ್ನು ಬದಿಗೆ ಸರಿಸಿ ಎಲ್ ಎಲ್ ಬಿ ಯನ್ನು ಆಯ್ದುಕೊಂಡರು.  ನಿಜ ಹೇಳಬೇಕೆಂದರೆ ಅವರು ತನ್ನ ಪಿಯುಸಿ ಶಿಕ್ಷಣವನ್ನು ಮುಗಿಸಿ ಅದಾಗಲೇ 24 ವರ್ಷ ಕಳೆದು ಹೋಗಿತ್ತು. ಆದರೂ ಮತ್ತೆ ಓದೋಕೆ ಹೋಗುತ್ತೇನೆಂದು ಅವರು ಹೊರಟಿದ್ದು ನಿಜಕ್ಕೂ ಖುಷಿ ಕೊಡುವ ವಿಚಾರವೇ.. ಇನ್ನು ಕೆಲವರಿಗೆ ಇದು ಅಚ್ಚರಿಯ ವಿಚಾರವೂ ಆಗಿತ್ತು. ಆದರೆ ಅವರು ತಲೆಕೆಡಿಸಿಕೊಳ್ಳದೆ. ಮೈಸೂರಿನಲ್ಲಿರುವ ಕಾನೂನು ಕಾಲೇಜಿಗೆ ಸೇರ್ಪಡೆಗೊಂಡರು.

ಪ್ರತಿದಿನ ಕುಶಾಲನಗರದಿಂದ ಮೈಸೂರಿಗೆ ಪ್ರಯಾಣ ಬೆಳೆಸಲಾರಂಭಿಸಿದರು. ಬೆಳಿಗ್ಗೆ ಕಾಲೇಜಿಗೆ ತೆರಳಿ ಕಾಲೇಜು ಮುಗಿಸಿಕೊಂಡು ಕುಶಾಲನಗರಕ್ಕೆ ಬರುತ್ತಿದ್ದರು. ಬೆಳಿಗ್ಗೆ ಐದು ಗಂಟೆಗೆ ಕುಶಾಲನಗರದಿಂದ ಬಸ್ ಏರಿ, ಮೈಸೂರುಗೆ ತಲುಪಿ, ಅಲ್ಲಿಂದ ಹತ್ತು ಕಿ.ಮೀ ದೂರದ ಬನ್ನೂರು ರಸ್ತೆಯಲ್ಲಿರುವ ಕಾಲೇಜ್ ಗೆ ತೆರಳಿ ಅಲ್ಲಿಂದ ಬಂದು ಕುಶಾಲನಗರದಲ್ಲಿ ತಮ್ಮ ವ್ಯಾಪಾರವನ್ನು ಮುಂದುವರೆಸುತ್ತಿದ್ದರು. ‘ವ್ಯಾಪಾರ’ದ ಚಟುವಟಿಕೆಗಳು ಮುಗಿಸಿ ಮನೆಗೆ ತಲುಪುವಾಗ ರಾತ್ರಿ ಹನ್ನೊಂದು -ಹನ್ನೇರಡು ಗಂಟೆಯಾಗುತ್ತಿತ್ತು….! ನಂತರ ಸ್ವಲ್ಪ ಹೊತ್ತು ನಿದ್ದೆ ಮಾಡಿ ಮತ್ತೆ ಐದುಗಂಟೆಗೆ ಎದ್ದು ಕಾಲೇಜಿಗೆ ಹೊರಡುತ್ತಿದ್ದರು.

ಇದೇ ರೀತಿಯ ಕಠಿಣ ಶ್ರಮದಲ್ಲಿ  ಅವರು ಐದು ವರ್ಷದ  ಕಾನೂನು ಪದವಿಯನ್ನು ಉತ್ತಮ ಅಂಕದೊಂದಿಗೆ ಮುಗಿಸಿಬಿಟ್ಟರು. ಹೀಗಾಗಿ ಹಿಂದೆ ವ್ಯಾಪಾರಿ ಪರಮೇಶ್  ಎಂದು ಕರೆಯುತ್ತಿದ್ದವರು ಇದೀಗ  ಲಾಯರ್ ಪರಮೇಶ್ ಎಂದು ಕರೆಯುತ್ತಿದ್ದಾರೆ. ಸದ್ಯ ಅವರು ವ್ಯಾಪಾರ ಮತ್ತು ವಕೀಲ ವೃತ್ತಿ ಎರಡಕ್ಕೂ ಆದ್ಯತೆ ನೀಡುತ್ತಾ ಮುನ್ನಡೆಯುತ್ತಿದ್ದಾರೆ.. ಅವರಿಗೊಂದು ಸೆಲ್ಯೂಟ್… ಅವರ ಮೊಬೈಲ್ ನಂ: 8296521805

 

 

admin
the authoradmin

Leave a Reply

Translate to any language you want