ಕುಶಾಲನಗರ(ರಘು ಹೆಬ್ಬಾಲೆ) : ಪಟ್ಟಣದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ದೋದ್ದೇಶ ಸಹಕಾರ ಸಂಘದಿಂದ ಸಮುದಾಯಿಕ ಪ್ರಯೋಜನ ವಿದ್ಯಾಯೋಜನೆ ಅಡಿಯಲ್ಲಿ ರೂ.12 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಕಂಪ್ಯೂಟರ್ ಕೊಠಡಿಯನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕರು ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಪಡೆದು ತಮ್ಮ ಜ್ಞಾನ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆಂಗ್ಲ ಭಾಷೆಯ ಜ್ಞಾನ, ಕಂಪ್ಯೂಟರ್ ಜ್ಞಾನ ತುಂಬ ಅಗತ್ಯವಾಗಿದೆ.ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶ ಹೊಂದಿರುತ್ತಾರೆ. ಮಕ್ಕಳು ಧನಾತ್ಮಕ ಚಿಂತನೆ ಹೊಂದಬೇಕು.ಕಂಪ್ಯೂಟರ್ ನಲ್ಲಿ ತಮ್ಮ ಶಿಕ್ಷಣಕ್ಕೆ ಪೂರಕವಾದ ವಿಚಾರ ತಿಳಿಯಲು ಗಮನ ಹರಿಸಬೇಕು ಎಂದರು.
ಸಂಘದ ಅಧ್ಯಕ್ಷ ಟಿ. ಆರ್. ಶರವಣ ಕುಮಾರ್ ಮಾತನಾಡಿ, ಕಂಪ್ಯೂಟರ್ ಶಿಕ್ಷಣದಿಂದ ವಂಚಿತಗೊಂಡಿದ್ದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು. ಸಂಘವು ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಈವರೆಗೆ ಹಮ್ಮಿಕೊಂಡು ಬಂದಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಘದ ಮೂಲಕ ರೂ. 12 ಲಕ್ಷ ವೆಚ್ಚದಲ್ಲಿ 21 ಕಂಪ್ಯೂಟರ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕೊಡುಗೆ ನೀಡಲಾಗಿದೆ ಎಂದರು.

ಬಡ,ಮಧ್ಯಮ ವರ್ಗದ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದ್ದು, ವಿದ್ಯಾರ್ಥಿಗಳು ಉತ್ತಮ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಈ ಎಲ್ಲಾ ಕಂಪ್ಯೂಟರ್ ಗಳ ತಾಂತ್ರಿಕ ನಿರ್ವಹಣೆಯನ್ನು ನಮ್ಮ ಸಂಘ ವಹಿಸಲಿದೆ ಎಂದು ಶರವಣಕುಮಾರ್ ಹೇಳಿದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ. ಪಿ. ಶಶಿಧರ್ ಮಾತನಾಡಿ, ಕೈಗಾರಿಕೋದ್ಯಮಿಗಳ ಹಾಗೂ ವೃತ್ತಿ ನಿರತರ ಸಹಕಾರ ಸಂಘದ ವತಿಯಿಂದ ಸಿಎಸ್ಆರ್ ಫಂಡ್ ನಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘದ ಅಧ್ಯಕ್ಷ ಶರವಣಕುಮಾರ್ ಜಿಲ್ಲೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸರ್ಕಾರಿ ಕಾಲೇಜಿಗೆ ಉತ್ತಮ ಗುಣಮಟ್ಟದ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಖಾಸಗಿ ಕಾಲೇಜುಗಳಿಗೆ ಸರಿಸಾಟಿಯಾಗಿ ಸ್ಪರ್ಧಾತ್ಮಕವಾಗಿ ಸರ್ಕಾರಿ ಪದವಿ ಪೂರ್ವಗಳು ಬೆಳೆದು ನಿಂತಿವೆ ಎಂದರು. ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜುಗಳು ಅಭಿವೃದ್ಧಿ ಹೊಂದುತ್ತಿವೆ ಎಂದರು.

ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಪ್ರಭಾರ ಉಪ ನಿರ್ದೇಶಕ ಪಿ.ಆರ್. ವಿಜಯ್ ಮಾತನಾಡಿ,ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ದೋದ್ದೇಶ ಸಹಕಾರ ಸಂಘದ ಒಗ್ಗಟ್ಟು ಶಿಕ್ಷಕ ವರ್ಗ ಅನುಭವದ ಪಾಠವಾಗಬೇಕು.ಎಲ್ಲಾ ಕೆಲಸಗಳನ್ನು ಸರ್ಕಾರ ಮಾಡೋದಿಲ್ಲ.ಸರ್ಕಾರಿ ಶಾಲಾ,ಕಾಲೇಜುಗಳ ಅಭಿವೃದ್ಧಿಗೆ ಸಂಘಸಂಸ್ಥೆಗಳ ಕೊಡುಗೆ ತುಂಬ ಅಗತ್ಯವಾಗಿದೆ ಎಂದರು.ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿದ್ದಾರೆ ಎಂದರು.ಕೈಗಾರಿಕೋದ್ಯಮಿಗಳ ಹಾಗೂ ವೃತ್ತಿ ನಿರತರ ಸಹಕಾರ ಸಂಘದ ಅಧ್ಯಕ್ಷರು,ಆಡಳಿತ ಮಂಡಳಿಗೆ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್. ಎನ್. ರಾಜೇಂದ್ರ, ಪ್ರಭಾರ ಪ್ರಾಂಶುಪಾಲೆ ಬಿ.ಜಿ. ಶಾಂತಿ ಮತ್ತು ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಸಂಘದ ನಿರ್ದೇಶಕರಾದ ರಾಮಕೃಷ್ಣಯ್ಯ, ಶಿವಪ್ರಕಾಶ್, ನಾರಾಯಣ, ಸುರೇಶ್ ಕುಮಾರ್, ಶರತ್, ಕವಿತಾ,ಅಮೃತ್, ಸುರೇಶ್, ಕೃತಿಕಾ ಪೊನ್ನಪ್ಪ ಮತ್ತು ಕೀರ್ತಿ ಲಕ್ಷ್ಮಿ ಸಹ ನಿರ್ದೇಶಕರಾದ ಆರ್. ಕೆ.ನಾಗೇಂದ್ರ ಬಾಬು ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಡಿ. ಶ್ರೀಜೇಶ್, ವ್ಯವಸ್ಥಾಪಕ ಆರ್. ರಾಜು,ನಾಡಪ್ರಭುಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಪಾಲ್ಗೊಂಡಿದ್ದರು.

ಉಪನ್ಯಾಸಕಿ ಪ್ರಿಯಾಂಕಾ ಪ್ರಾರ್ಥಿಸಿದರು. ಪ್ರಾಂಶುಪಾಲೆ ಬಿ.ಜಿ.ಶಾಂತಿ ಸ್ವಾಗತಿಸಿದರು.ನಂದೀಶ್ ನಿರೂಪಿಸಿದರು.ಇದೇ ಸಂದರ್ಭ ಕೈಗಾರಿಕೋದ್ಯಮಿಗಳ ಹಾಗೂ ವೃತ್ತಿ ನಿರತರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹಾಗೂ ಎಲ್ಲಾ ನಿರ್ದೇಶಕರನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಜೇಂದ್ರ ಅವರು ಸನ್ಮಾನಿಸಿ ಗೌರವಿಸಿದರು. ಜೊತೆಗೆ ರಾಜ್ಯಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಾದ ಚಿಂತನಾ , ದಿವ್ಯಾ, ಅಭಿಯಾ ಅವರನ್ನು ಸನ್ಮಾನಿಸಲಾಯಿತು.








