ತೊರೆನೂರಿನಲ್ಲಿ ಕಣಿವೆ ಕಟ್ಟೆ ವತಿಯಿಂದ ಕುವೆಂಪು ಕುರಿತ ಉಪನ್ಯಾಸದಲ್ಲಿ ಡಾ ಜೆ.ಸೋಮಣ್ಣ ಹೇಳಿದ್ದೇನು?

ಕುಶಾಲನಗರ(ರಘುಹೆಬ್ಬಾಲೆ): ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವುದರೊಂದಿಗೆ ಸಮಾಜದಲ್ಲಿ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು ಸಿಗಬೇಕು ಎಂದು ಹಂಬಲಿಸಿದ ಕನ್ನಡದ ಮೇರು ಕವಿ ಕುವೆಂಪು ಎಂದು ಸಾಹಿತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ ಜೆ.ಸೋಮಣ್ಣ ಬಣ್ಣಿಸಿದರು.
ತಾಲ್ಲೂಕಿನ ತೊರೆನೂರು ಗ್ರಾಮದ ರೇವೇಗೌಡನಕೊಪ್ಪಲಿನ ಶನೇಶ್ವರ ದೇವಸ್ಥಾನದ ಆವರಣದಲ್ಲಿ ಕಣಿವೆ ಕಟ್ಟೆ ಕೊಡಗು ಬಳಗದ ವತಿಯಿಂದ ಭಾನುವಾರ ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿ, ಕುವೆಂಪು ಅವರು ವೈಚಾರಿಕತೆ ನೆಲಗಟ್ಟೆಯಲ್ಲಿ ತಮ್ಮ ಸಾಹಿತ್ಯ ರಚಿಸುವ ಮೂಲಕ ಜನರಲ್ಲಿ ವೈಚಾರಿಕತೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು ಜಾತಿ,ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು ಎಂದರು.

ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು.ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಂಡುವ ವಿಶ್ವ ಮಾನವನಾಗಿ ರೂಪುಗೊಳ್ಳ ಬೇಕು ಎಂಬುದು ಕುವೆಂಪು ಅವರ ಸಂದೇಶವಾಗಿದೆ ಎಂದರು.
ಗಾಂಧೀಜಿಯವರ ಸರ್ವೋದಯ ತತ್ವಕ್ಕೆ ಮಾರು ಹೋಗಿದ್ದ ಕುವೆಂಪು ಮನುಜ ಮತ,.ವಿಶ್ವಪಥ, ಸರ್ವೋದಯ, ಸಮನ್ವಯ,ಪೂರ್ಣ ದೃಷ್ಟಿ ಎಂಬ ತತ್ವಗಳು ಸಮಾಜದಲ್ಲಿ ಬೇರೂರ ಬೇಕು ಎಂದು ಹಂಬಲಿಸಿದ್ದರು ಎಂದು ಡಾ ಸೋಮಣ್ಣ ಬಣ್ಣಿಸಿದರು. ಕುವೆಂಪು ನೀಡಿದ ವಿಶ್ವಮಾನವ ಸಂದೇಶ ನಮ್ಮ ಮನಸ್ಸುಗಳು ಜಾತಿ – ಧರ್ಮದ ಹೆಸರಿನಲ್ಲಿ ಮತ ಮೌಢ್ಯ ಗಳಿಗೆ ಕಟ್ಟು ಬಿದ್ದು ಕುಬ್ಜ ಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಬಹಳ ಪ್ರಸ್ತುತ ಎನ್ನಿಸಿದೆ. “ಓ ನನ್ನ ಚೇತನ ಆಗು ನೀ ಅನಿಕೇತನ” ಎಂಬ ಅವರ ಕವಿತೆಯು ವಿಶ್ವಮಾನವ ಸಂದೇಶದ ಬಹು ಆಶಯವನ್ನು ಬಿತ್ತುತ್ತದೆ ಎಂದು ಡಾ ಸೋಮಣ್ಣ ಹೇಳಿದರು.
ಜಿಲ್ಲಾ ಲೀಡ್ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ,ಕುವೆಂಪು ವಿಶ್ವ ಕಂಡ ಅಪ್ರತಿಮ ಸಾಹಿತಿ, ಚಿಂತಕ. ಯಾವುದೇ ಬ್ರಿಟಿಷ್ ಸಾಹಿತಿಗಳಿಗೂ ಕಡಿಮೆ ಇಲ್ಲದಂತೆ ನೂರಾರು ಸಾಹಿತ್ಯಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ವೈಚಾರಿಕ ಕ್ರಾಂತಿ ಬೆಳೆಸಲು ಪ್ರಮುಖ ಕಾರಣರಾಗಿದ್ದಾರೆ ಎಂದರು. ಕನ್ನಡ ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರ. ಅವರ ವೈಚಾರಿಕ ನಿಲುವು ಮತ್ತು ಆದರ್ಶಗಳು ಇಂದಿಗೂ ನಮಗೆ ದಾರಿ ದೀಪ. ಮಲೆನಾಡು ಪರಿಸರದಲ್ಲಿ ಬೆಳೆದು ಸಮಾಜದ ಬಗ್ಗೆ ಕುವೆಂಪು ಅವರ ದೃಷ್ಟಿಕೋನ ಹಾಗೂ ಕಾಳಜಿ ಅಪ್ರತಿಮವಾದದ್ದು ಸರಕಾರ ಕುವೆಂಪು ಅವರ ಅನೇಕ ಚಿಂತನೆಗಳನ್ನು ಆಡಳಿತದಲ್ಲಿ ರೂಢಿಸಿಕೊಂಡಿದೆ ಎಂದು ಬಾಲಚಂದ್ರ ತಿಳಿಸಿದರು.

ಸಾಹಿತಿ ಕಣಿವೆ ಭಾರದ್ವಾಜ ಆನಂದತೀರ್ಥ ಮಾತನಾಡಿ, ಕುವೆಂಪು ಅವರ ಬದುಕಿನ ಒಳನೋಟ ಹಾಗೂ ಅವರ ವೈಚಾರಿಕ ಚಿಂತನೆ ಬಗ್ಗೆ ತಿಳಿಸಿದರು.
ಈ ಸಂದರ್ಭ ಕನ್ನಡ ಸಿರಿಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ವಿ.ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಎಸ್.ಬಿ.ಎಂ.ಬ್ಯಾಂಕ್ ನ ನಿವೃತ್ತ ಹಿರಿಯ ಅಧಿಕಾರಿ ಸೂದನ ರತ್ನಾವತಿ, ಕಣಿವೆ ಕಟ್ಟೆಯ ಪ್ರಧಾನ ಸಂಚಾಲಕ ಕೆ.ವಿ.ಉಮೇಶ್, ಸಂಚಾಲಕರಾದ ಟಿ.ಜಿ.ಪ್ರೇಮಕುಮಾರ್, ಎಂ.ಎನ್.ವೆಂಕಟನಾಯಕ್, ಲೇಖಕರಾದ ಸುನೀತ ಲೋಕೇಶ್, ಲೀಲಾಕುಮಾರಿ ತೊಡಿಕಾನ, ಮಾಲಾದೇವಿ ಮೂರ್ತಿ, ಕವಿಗಳಾದ ಟಿ.ಎಚ್.ಸುಕುಮಾರ್, ಕವಿತ ಪುಟ್ಟೇಗೌಡ, ಗ್ರಾ.ಪಂ.ಮಾಜಿ ಸದಸ್ಯೆ ನಿಂಗಾಜಮ್ಮ, ಕಸಾಪ ಪ್ರಮುಖರಾದ ಎಂ.ಎನ್.ಮೂರ್ತಿ, ಟಿ.ಬಿ.ಮಂಜುನಾಥ್, ಎಚ್.ಎನ್.ಸುಬ್ರಮಣ್ಯ, ಎಸ್.ಎಸ್.ನಾಗರಾಜ್, ಎಚ್.ಎಸ್.ಲೋಕೇಶ್, ಜಿಲ್ಲಾ ರಕ್ಷಣಾ ವೇದಿಕೆ( ಶಿವರಾಮೇಗೌಡ ಬಣ) ಯ ಅಧ್ಯಕ್ಷ ಕೆ.ಎನ್.ದೀಪಕ್, ಯುವ ಘಟಕದ ಸಂಘಟನಾ ಕಾರ್ಯದರ್ಶಿ ಪರಮೇಶ್, ಅನುಗ್ರಹ ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಲಿಂಗಮೂರ್ತಿ, ವಿವಿಧ ಸಂಘಟನೆಗಳ ಪ್ರಮುಖರಾದ ಟಿ.ಎಸ್.ಶಾಂಭಶಿವಮೂರ್ತಿ, ಎಸ್.ವಿ.ಶಿವಾನಂದ, ಎಸ್.ಎಸ್.ಚಂದ್ರಶೇಖರ್, ಸಿ.ಎನ್.ಲೋಕೇಶ್,ಟಿ.ಜಿ.ಲೋಕೇಶ್, ಎಚ್.ಎಸ್.ಪುಟ್ಟಪ್ಪ, ಟಿ.ಆರ್.ಉಮೇಶ್, ಟಿ.ಎಸ್.ಚಂದ್ರಶೇಖರ್, ಟಿ.ವೈ.ಸಂಗಮೇಶ್, ಟಿ.ಕೆ.ಕುಮಾರ್ ಪಾಲ್ಗೊಂಡಿದ್ದರು.







