ಮೈಸೂರು: ಜಿಲ್ಲಾಡಳಿತ ಮೈಸೂರು ಹಾಗೂ ನಗರದ ಮಡಿವಾಳ ಮಾಚಿದೇವರ ಜಯಂತಿ ಉತ್ಸವ ಸಮಿತಿ- 2026ರ ವತಿಯಿಂದ ಫೆಬ್ರವರಿ 1. ರಂದು ಮೈಸೂರಿನ ಕಲಾಮಂದಿರದಲ್ಲಿ ವಚನ ಸಂರಕ್ಷಕ ಮಡಿವಾಳ ಮಾಚಿದೇವರ 926ನೇ ಜಯಂತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಸಮಿತಿಯ ಪದಾಧಿಕಾರಿಗಳು ಹೇಳಿದರು.

ನಗರದ ಅಗ್ರಹಾರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪದಾಧಿಕಾರಿಗಳು, ಫೆಬ್ರವರಿ ಒಂದು ಭಾನುವಾರದಂದು ಬೆಳಗ್ಗೆ ಒಂಬತ್ತು ಗಂಟೆಗೆ ನಗರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಂದಿ ಕಂಬ ಪೂಜೆ ಹಾಗೂ ಮಾಚಿದೇವರ ಭಾವಚಿತ್ರ ಒಳಗೊಂಡ ರಥಕ್ಕೆ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಮೈಸೂರು ನಗರ ಹಾಗೂ ತಾಲೂಕಿನ ಎಲ್ಲ ಮಡಿವಾಳ ಸಂಘಟನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಹತ್ತಾರು ಕಲಾತಂಡ ಗಳೊಂದಿಗೆ ಕಳಸ ಹೊತ್ತ 501 ಮಹಿಳೆಯರು ದೇವರಾಜ ಅರಸು ರಸ್ತೆ ಮೂಲಕ ಕಲಾಮಂದಿರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಲ್ಲಿ ನಡೆಯುವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಉಸ್ತುವಾರಿ ಸಚಿವ ಮಹದೇವಪ್ಪ ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಮೈಸೂರು ಜಿಲ್ಲಾ ವ್ಯಾಪ್ತಿಯ ಎಲ್ಲಾ ವಿಧಾನಸಭೆ ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು , ಮಡಿವಾಳ ಸಂಘಟನೆಗಳ ಪ್ರಮುಖರು, ಕನ್ನಡ ಪರ ಸಂಘಟನೆಗಳು , ಹಿಂದುಳಿದ ಸಮಾಜಗಳ ಪದಾಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ದಿನದ ವಿಶೇಷವಾಗಿ ಮಾಚಿದೇವರ ವಚನ ಗಾಯನ ಹಾಗೂ ಮಡಿವಾಳ ಮಾಚಿದೇವರ ಕುರಿತ ಉಪನ್ಯಾಸ ಕಾರ್ಯಕ್ರಮ ಇರಲಿದೆ.
ಈ ಬಾರಿ ಜಯಂತಿ ಉತ್ಸವ ಭಾನುವಾರ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಡಿವಾಳ ಕುಲಬಾಂಧವರು ಹಾಗೂ ಸಮಾಜ ಪ್ರೋತ್ಸಾಹಿಸುವ ಎಲ್ಲ ಸಮಾಜದ ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಳ್ಳಬೇಕೆಂದು ಪದಾಧಿಕಾರಿಗಳು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ 2026 ಮಾಚಿದೇವರ ಜಯಂತಿ ಉತ್ಸವ ಸಮಿತಿಯ ಪ್ರಮುಖರಾದ ದುದ್ದಗೆರೆ ಶಿವಣ್ಣ, ಸಂತೋಷ್, ಜಯರಾಮ, ಚನ್ನಕೇಶವ, ರವಿನಂದನ, ಪ್ರಶಾಂತ್, ಕೇಶವ. ಬಿ.ಜಿ, ನಾಗೇಶ್, ರವಿ, ಸಿದ್ದಪ್ಪಾಜಿ, ಸತ್ಯನಾರಾಯಣ, ಮಂಜು, ಜಗದೀಶ , ರಾಜೇಶ್, ಮಾಧುರಾಜ್ ಇನ್ನಿತರರು ಉಪಸ್ಥಿತರಿದ್ದರು.








