LatestMysore

ಮಾದಕ ವ್ಯಸನಗಳು ಕ್ಷಣಿಕ ಆನಂದವಲ್ಲ.. ಜೀವನ ನಾಶಮಾಡುವ ವಿಷ.. ವಚನ ಕುಮಾರಸ್ವಾಮಿ ಕಿವಿಮಾತು

ಮೈಸೂರು: ಮಾದಕ ವ್ಯಸನಗಳು ಕ್ಷಣಿಕ ಆನಂದವಲ್ಲ ಅದು  ಜೀವನ ನಾಶಮಾಡುವ ವಿಷ  ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ, ವಚನ ಚಿಂತಕ ವಚನ ಕುಮಾರಸ್ವಾಮಿ ಹೇಳಿದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ವತಿಯಿಂದ ಮೈಸೂರಿನ ಟಿ.ಕೆ ಲೇಔಟ್‌ನಲ್ಲಿರುವ ತರಳಬಾಳು ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ  ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಹೃದಯಸ್ಪರ್ಶಿ ಜಾಗೃತಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಮಾದಕ ವಸ್ತುಗಳು ಕ್ಷಣಿಕ ಆನಂದ ನೀಡಬಹುದು; ಆದರೆ ಅದರ ಬೆಲೆ ಜೀವನವೇ ಆಗಿರುತ್ತದೆ. ವ್ಯಸನ ಎಂದರೆ ಕೇವಲ ಒಂದು ಚಟವಲ್ಲ – ಅದು ವ್ಯಕ್ತಿಯ ಆರೋಗ್ಯ, ಭವಿಷ್ಯ, ಕುಟುಂಬ ಹಾಗೂ ಸಮಾಜವನ್ನೇ ನಾಶಮಾಡುವ ಭಯಾನಕ ದಾರಿ” ಎಂದು ಎಚ್ಚರಿಸಿದರು.

ಮಾದಕ ವ್ಯಸನಗಳಿಗೆ ದಾಸರಾದರೆ ಆಗುವ ಮಾನಸಿಕ ಕುಸಿತ, ದೇಹಾರೋಗ್ಯದ ಹಾನಿ, ವಿದ್ಯಾಭ್ಯಾಸದ ವಿಫಲತೆ, ಕುಟುಂಬದ ನೋವು ಹಾಗೂ ಸಮಾಜದಿಂದ ದೂರಾಗುವ ಸ್ಥಿತಿಯನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ವ್ಯಸನವು ಮೊದಲು ಸ್ನೇಹದಂತೆ ಬರುತ್ತದೆ, ನಂತರ ಬಂಧನವಾಗಿ ಬಿಗಿದು, ಕೊನೆಗೆ ಶವಪೆಟ್ಟಿಗೆಯತ್ತ ಕರೆದೊಯ್ಯುತ್ತದ  ಎಂಬ ಮಾತು ವಿದ್ಯಾರ್ಥಿಗಳನ್ನು ಮೌನಗೊಳಿಸಿತು. ವಿದ್ಯಾರ್ಥಿಗಳು ಮಾನಸಿಕ ದೃಢತೆ ಬೆಳೆಸಿಕೊಳ್ಳಬೇಕು, ಉತ್ತಮ ಸ್ನೇಹವಲಯವನ್ನು ಆಯ್ಕೆ ಮಾಡಬೇಕು ಹಾಗೂ ಮೌಲ್ಯಾಧಾರಿತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿ ವಚನಗಳು ಕೇವಲ ಓದಲು ಅಲ್ಲ, ಬದುಕಲು. ವಚನದ ದಾರಿ ಹಿಡಿದರೆ ವ್ಯಸನದ ಬಲೆಗೆ ಬೀಳುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮಹದೇವಸ್ವಾಮಿ ಅವರು ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರುವ ಪ್ರತಿಜ್ಞಾವಿಧಿ ಬೋಧಿಸಿ, ಮಾತನಾಡಿ, ಮಾದಕ ಚಟುವಟಿಕೆಗಳ ವಿರುದ್ಧ ನಿರಂತರ ಜಾಗೃತಿ ಮೂಡಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಶಿಕ್ಷಣವು ಪಠ್ಯಜ್ಞಾನಕ್ಕಷ್ಟೇ ಸೀಮಿತವಾಗದೇ, ಉತ್ತಮ ನಾಗರಿಕರನ್ನು ರೂಪಿಸುವ ಕೇಂದ್ರವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶಶಿಕುಮಾರ್ ಹಾಗೂ ಸೇವಾ ಪ್ರತಿನಿಧಿ ಸ್ವಾತಿ, ಉಪನ್ಯಾಸಕರಾದ ಸಂತೋಷ್ ಮತ್ತು ಆಕಾಶ್ ಉಪಸ್ಥಿತರಿದ್ದರು. ಮಾದಕ ವ್ಯಸನ ವಿರೋಧಿ ದಿನಾಚರಣೆಯ ಈ ಜಾಗೃತಿ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಚಿಂತನೆ ಮೂಡಿಸಿ, ಆರೋಗ್ಯಕರ ಹಾಗೂ ಮೌಲ್ಯಪೂರ್ಣ ಜೀವನದ ದಾರಿಯನ್ನು ತೋರಿಸುವಲ್ಲಿ ಯಶಸ್ವಿಯಾಯಿತು.

admin
the authoradmin

Leave a Reply

Translate to any language you want