ಸಕ್ಕರೆ ನಾಡು ಮಂಡ್ಯದಲ್ಲಿ ಜಯಚಾಮರಾಜ ಒಡೆಯರ ವೃತ್ತದ ಹೆಸರು ಉಳಿಯಲಿ.. ಏಕೆ ಗೊತ್ತಾ?
ಒಬ್ಬ ಇತಿಹಾಸ ಪುರುಷನ ನೆನಪಿನ ವೃತ್ತದಲ್ಲಿ ಮತ್ತೊಬ್ಬ ಇತಿಹಾಸ ಪುರುಷನ ಪ್ರತಿಮೆ ನಿರ್ಮಿಸುವುದು ಸೂಕ್ತವಲ್ಲ

ಮೈಸೂರು ಜಿಲ್ಲೆಗೆ ಸೇರಿದ್ದ ಮಂಡ್ಯ ಸೀಮೆಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ 1939 ರಲ್ಲಿ ಮಂಡ್ಯ ಜಿಲ್ಲೆ ಅಸ್ತಿತ್ವಕ್ಕೆ ಬಂದಿತು. ಮಂಡ್ಯ ಸೀಮೆಯ ಆರ್ಥಿಕ, ಸಾಮಾಜಿಕ, ಕೈಗಾರಿಕೆ, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಮೈಸೂರು ಒಡೆಯರುಗಳ ಪಾತ್ರವನ್ನು ಮಂಡ್ಯ ಜನತೆ ಮರೆಯುವಂತಿಲ್ಲ. ನೀರಾವರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ.
17ನೇ ಶತಮಾನದಲ್ಲಿ ಕಂಠೀರವ ನರಸರಾಜ ಒಡೆಯರು ಶ್ರೀರಂಗಪಟ್ಟಣದ ಸಮೀಪ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಿಸಿ ಅದಕ್ಕೆ ಬಂಗಾರದೊಡ್ಡಿ ನಾಲೆಯ ಮೂಲಕ ಸುಮಾರು 900 ಎಕರೆ ಪ್ರದೇಶಕ್ಕೆ ಕೃಷಿ ಕಾರ್ಯಕ್ಕೆ ನೀರಾವರಿ ಒದಗಿಸಿಕೊಟ್ಟರು. ಚಿಕ್ಕದೇವರಾಯ ಒಡೆಯರು ಅದೇ ರೀತಿಯಲ್ಲಿ ದೊಡ್ಡದೇವರಾಯ, ಚಿಕ್ಕದೇವರಾಯ ಕಾಲುವೆ ನಿರ್ಮಿಸಿ ನೀರಾವರಿ ಕಲ್ಪಿಸಿ ಕೃಷಿಕರ ಹಿತ ಸಾಧಿಸಿದ್ದಾರೆ. ಹತ್ತನೇ ಚಾಮರಾಜ ಒಡೆಯರು ಮದ್ದೂರು ತಾಲ್ಲೂಕಿನ ಷಿಂಷಾ ನದಿಗೆ ಅಣೆಕಟ್ಟೆ ನಿರ್ಮಿಸಿ ನೀರಾವರಿ ಕಲ್ಪಿಸಿ ಕೊಟ್ಟಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಂಬಾಡಿ ಕಟ್ಟೆ, ಬೆಳಗೊಳದ ಹತ್ತಿರ ಗೊಬ್ಬರದ ಕಾರ್ಖಾನೆ, ಮಂಡ್ಯದ ಸಕ್ಕರೆ ಕಾರ್ಖಾನೆ ಸೇರದಂತೆ ವಿವಿಧ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಿರುವುದು ಎಲ್ಲರ ಗಮನದಲ್ಲಿದೆ. ಮೈಸೂರು ಸಂಸ್ಥಾನವನ್ನಾಳಿದ ಒಡೆಯರು ವಂಶದ ಕೊನೆಯ ಅರಸ ಎಂದರೆ ಜಯಚಾಮರಾಜ ಒಡೆಯರು. ಇವರು ಮಂಡ್ಯದಲ್ಲಿ ಶಿಕ್ಷಣಕ್ಕಾಗಿ ಕಲ್ಲುಕಟ್ಟಡ ನಿರ್ಮಿಸಿದರು, ಮಾರುಕಟ್ಟೆ ನಿರ್ಮಿಸಿದರು ಹೀಗೆ ಹಲವು ಕಾರ್ಯ ಸಾಧನೆ ಮಾಡಿರುವುದನ್ನು ಮಂಡ್ಯ ಜನತೆ ಮರೆಯಬಾರದು. ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ಮಂಡ್ಯದಲ್ಲಿ ಇರುವ ಜಯಚಾಮರಾಜ ಒಡೆಯರು ವೃತ್ತದಲ್ಲಿ ನಾಡ ಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಿಸವ ಸುದ್ದಿಯಾಗಿದೆ.
ಅಲ್ಲಿ ಪ್ರತಿಮೆ ನಿರ್ಮಿಸಿದರೆ ಅದನ್ನು ಜಯಚಾಮರಾಜ ಒಡೆಯರು ಹೆಸರು ಅಳಿಸಿಹೋಗಿ ಕೆಂಪೇಗೌಡ ವೃತ್ತ ಎಂದು ಹೇಳಲಾಗುತ್ತದೆ. ಒಬ್ಬ ಇತಿಹಾಸ ಪುರುಷನ ನೆನಪಿನ ವೃತ್ತದಲ್ಲಿ ಮತ್ತೊಬ್ಬ ಇತಿಹಾಸ ಪುರುಷನ ಪ್ರತಿಮೆ ನಿರ್ಮಿಸುವುದು ಸೂಕ್ತವಲ್ಲ. ಆ ರೀತಿಯಾದರೆ ಅದು ಚಾಮರಾಜ ಒಡೆಯರಿಗೆ ಮಾಡಿದ ಅಪಮಾನ ಆಗುತ್ತದೆ. ಒಡೆಯರ ವಂಶದವರು ಮಂಡ್ಯ ಸೀಮೆಯ ಅಭಿವೃದ್ಧಿಗೆ ಕಾರಣವಾಗಿರುವುದರಿಂದ ಮಂಡ್ಯ ಜನತೆ ಅವರಿಗೆ ಋಣಿಯಾಗಿರಬೇಕೆ ವಿನಃ ಅವರ ಹೆಸರಿಗೆ ಅಪಚಾರ ಮಾಡಬಾರದು.

ಆದುದರಿಂದ ಮಂಡ್ಯದ ಪ್ರಮುಖ ವೃತ್ತಕ್ಕೆ ಹಿಂದೆಯೇ ಹೆಸರಿಟ್ಟಿರುವ ಜಯಚಾಮರಾಜ ವೃತ್ತದ ಹೆಸರನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕಾಗಿದೆ. ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಸೂಕ್ತ ಪರ್ಯಾಯ ಸ್ಥಳವನ್ನು ಗುರುತಿಸಲಿ. ಮಂಡ್ಯ ಬೆಳೆಯುತ್ತಿದೆ. ಮಂಡ್ಯ ಪ್ರವೇಶ ದ್ವಾರದಲ್ಲಿ ನಿರ್ಮಿಸುವುದು ಸೂಕ್ತ ಎನಿಸುತ್ತದೆ.
ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವ ಶಾಸಕರು ಮಂಡ್ಯ ಸೀಮೆಯ ಜನರ ಬದುಕು ಹಸನುಗೊಳಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆ ಸ್ಥಾಪಿಸಲು ಮುಂದಾಗಿಲ್ಲ ಏಕೆ? ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ 1999ರ ಇಸವಿಯಿಂದಲೂ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಆಚರಿಕೊಂಡು ಬರುವಾಗ ನಾಲ್ವಡಿ ಪ್ರತಿಮೆಗೆ ಒತ್ತಾಯ ಮಾಡಿಕೊಂಡು ಬಂದಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಪ್ರತಿವರ್ಷ ಅವರ ಜಯಂತಿ ಸಂದರ್ಭದಲ್ಲಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಜನಪ್ರತಿನಿಧಿಗಳು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಅದು ಇದುವರಿಗೂ ಈಡೇರಿಸಲ್ಲ. ಶಾಸಕರು ಈಗಲಾದರೂ ನಾಲ್ವಡಿ ಪ್ರತಿಮೆ ಸ್ಥಾಪಿಸಲು ಮುಂದಾಗಲಿ ಎಂದು ಒತ್ತಾಯಪೂರ್ವಕವಾಗಿ ಮನವಿ.
ಸಿ. ಸಿದ್ದರಾಜು ಆಲಕೆರೆ
ಲೇಖಕರು, ಮಂಡ್ಯ: 9449326560







