ಓದು ಪ್ರಶ್ನಿಸುವ ಮನೋಭಾವ ಬೆಳೆಸಿ, ಜ್ಞಾನವನ್ನು ಹೆಚ್ಚಿಸುತ್ತದೆ.. ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ಓದು ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ಜ್ಞಾನವನ್ನು ಹೆಚ್ಚಿಸುವುದರೊಂದಿಗೆ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಹೇಳಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಹೆಬ್ಬಾಳಿನ ಬಸವಮಾರ್ಗ ವ್ಯಸನಮುಕ್ತ ಪುನರ್ವಸತಿ ಕೇಂದ್ರದಲ್ಲಿ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಓದು ಎಂದರೆ ಪುಸ್ತಕ ಹುಳವಾಗುವುದಲ್ಲ. ಬದಲಿಗೆ ಬಲಿಷ್ಠವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ವಿದ್ಯೆಯನ್ನು ನಾವು ಕೈವಶ ಮಾಡಿಕೊಳ್ಳಬೇಕು.
ಜೀವನದ ಎಲ್ಲಾ ಸಮಸ್ಯೆಗಳಿಗೆ ಓದುವುದೊಂದೆ ಪರಿಹಾರವಾಗಿದೆ. ಓದಿನ ರುಚಿಯನ್ನು ಹತ್ತಿಸಿಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಯುವಕರು ಇಂದು ಹಾದಿ ತಪ್ಪುತ್ತಿದ್ದಾರೆ. ನಾನಾ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಮಾತನಾಡಿ, ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮಾನ. ತಲೆ ತಗ್ಗಸಿ ಓದಿದರೆ, ತಲೆ ಎತ್ತಿ ಓಡಾಡುವಂತೆ ಮಾಡುತ್ತದೆ ಎಂದರು.

ಮನೆಗೊಂದು ಗ್ರಂಥಾಲಯ ಜಿಲ್ಲಾ ಸಂಚಾಲಕ ಎಂ.ಚಂದ್ರಶೇಖರ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಕದಂಬ ಬಾಹುಗಳಿಂದ ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಂಡರೆ ನಮಗೆ ಉತ್ತಮ ಸಂಗಾತಿ ಸಿಗುತ್ತದೆ. ನಮ್ಮ ಸಮಾಜದಲ್ಲಿ ಬಂದುಹೋದ ಹಲವಾರು ಮಹನೀಯರು ಪುಸ್ತಕಗಳನ್ನು ಓದಿಯೇ ಅವರು ಮಹಾನ್ ವ್ಯಕ್ತಿಗಳಾಗಿದ್ದಾರೆ. ಪುಸ್ತಕ, ಓದಿಗೆ ಎಂದೂ ಸಾವಿಲ್ಲ. ಈ ನಿಟ್ಟಿನಲ್ಲಿ ಪುಸ್ತಕಕ್ಕೆ ವ್ಯಸನಿಯಾದರೆ ಭವ್ಯವಾದ ಬದುಕು ಪ್ರತಿಯೊಬ್ಬರದಾಗುತ್ತದೆ ಎಂದು ತಿಳಿಸಿದರು.
ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ವ್ಯಕ್ತಿ ತಲೆ ಎತ್ತಿ ನಡೆಯುವಂತೆ ಮಾಡುವುದು ಪುಸ್ತಕಗಳು. ಪುಸ್ತಕ ಮನುಷ್ಯನ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ನಾನು ಕೂಡಿತಕ್ಕೆ ದಾಸನಾಗಿದ್ದೆ. ಬಳಿಕ ವ್ಯಸನಮುಕ್ತ ಜೀವನ ಮಾಡಬೇಕು ಎಂದು ನಿರ್ಧಾರ ಮಾಡಿದಾಗ ಪುಸ್ತಕಗಳು ನನಗೆ ನೆರವಾದವು.

ಓದು ಪ್ರತಿಯೊಬ್ಬರಿಗೂ ಮುಖ್ಯ. ಈ ನಿಟ್ಟಿನಲ್ಲಿ ಬಸವಮಾರ್ಗ ಸಂಸ್ಥೆಯಿಂದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಪಾಲನೆ ಫೋಷಣೆ ಮಾಡಲಾಗುತ್ತದೆ ಜತೆಗೆ ಆ ಮಕ್ಕಳಿಗೆ ಉಚಿತವಾಗಿ ವಸತಿ ನಿಲಯವನ್ನು ಕಲ್ಪಿಸಿಕೊಡಲಾಗಿದೆ. ಸಂಸ್ಥೆಗೆ 6 ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವ್ಯಸನಕ್ಕೆ ದಾಸರಾದ ಪಾಲಕರ ಮಕ್ಕಳನ್ನು ದತ್ತು ಪಡೆಯುವ ಯೋಜನೆ ಮಾಡಲಾಗುತ್ತಿದೆ. ನಿಮ್ಮ ಮಕ್ಕಳನ್ನು ನಮ್ಮ ಸಂಸ್ಥೆಗೆ ನೀಡಿದರೆ ಅಂತ ಮಕ್ಕಳ ಸಂಪೂರ್ಣ ಓದಿನ ಖರ್ಚನ್ನು ನೋಡಿಕೊಳ್ಳಲಾಗುತ್ತದೆ ಎಂದು ಘೋಷಿಸಿದರು.
ಶಿಕ್ಷ ಪಿಯು ಕಾಲೇಜಿನ ಪ್ರಾಂಶುಪಾಲ ಶರಣ ದೇವರಾಜು ಪಿ. ಚಿಕ್ಕಹಳ್ಳಿ, ಸಮಾಜ ಸೇವಕ ಕುಮಾರ ಸ್ವಾಮಿ ಇದ್ದರು.







