ಮೈಸೂರು: ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ರಾತ್ರಿ ಎಂಟೂವರೆ ಗಂಟೆ ವೇಳೆಯಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣದ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ. ಇದೀಗ ಸ್ಪೋಟದಲ್ಲಿ ಸಾವನ್ನಪ್ಪಿದ ಬೆಲೂನು ಮಾರುತ್ತಿದ್ದ ವ್ಯಕ್ತಿ ಉತ್ತರ ಪ್ರದೇಶದ ಸಲೀಂ(39) ಎನ್ನುವುದು ಗೊತ್ತಾಗಿದೆ. ಹೀಗಾಗಿ ಆತನ ಪೂರ್ವಾಪರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದೀಗ ಬೆಲೂನು ಮಾರಲು ಬಂದು ಸಿಲಿಂಡರ್ ಸ್ಪೋಟದಿಂದ ಸಾವನ್ನಪ್ಪಿದ ಘಟನೆ ಆಕಸ್ಮಿಕವೋ? ಅಥವಾ ಇದರ ಹಿಂದೆ ಇನ್ನೇನಾದರೂ ನಿಗೂಢತೆ ಅಡಗಿದೆಯಾ? ಎಂಬ ಸಂಶಯಗಳು ಹುಟ್ಟಿಕೊಂಡಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಉದ್ದೇಶದಿಂದ ಎನ್ ಐಎ ಇದಕ್ಕೆ ಎಂಟ್ರಿ ಕೊಡುತ್ತಿದ್ದು, ಮೈಸೂರಿಗೆ ಆಗಮಿಸಿ ತನಿಖೆ ಚುರುಕುಗೊಳಿಸುವ ಸಾಧ್ಯತೆಯಿದೆ. ಇನ್ನು ಮೃತ ಸಲೀಂ ಉತ್ತರ ಪ್ರದೇಶದಿಂದ ಬಂದಿದ್ದು ಈತನೊಂದಿಗೆ ಇನ್ನು ಕೆಲವರಿದ್ದರು ಅವರೆಲ್ಲರೂ ಸ್ಪೋಟದ ಬಳಿಕ ನಾಪತ್ತೆಯಾಗಿದ್ದಾರೆ. ಈ ಪೈಕಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಸಲೀಂ ಕಳೆದ ಹದಿನೈದು ದಿನಗಳ ಹಿಂದೆ ಮೈಸೂರಿಗೆ ಬಂದಿದ್ದು ಮೈಸೂರು ನಗರದ ಲಷ್ಕರ್ ಮೊಹಲ್ಲಾದ ಶರೀಫ್ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿದ್ದು ಕೊಂಡು ಸೈಕಲ್ ಮೂಲಕ ಮೈಸೂರು ಅರಮನೆ ಸುತ್ತಮುತ್ತ ಹೀಲಿಯಂ ಗ್ಯಾಸ್ ತುಂಬಿ ಬೆಲೂನನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಕ್ರಿಸ್ ಮಸ್ ದಿನವಾದ ಗುರುವಾರ ಕೇವಲ ಸಲೀಂ ಮಾತ್ರ ಮಾರಾಟ ಮಾಡಲು ಬಂದಿದ್ದನು. ಉಳಿದಂತೆ ಯಾರೂ ಬಂದಿರಲಿಲ್ಲ.

ಇದೀಗ ಮೃತ ಸಲೀಂ ಮತ್ತು ಆತನೊಂದಿಗೆ ಬಂದಿದ್ದವರು ನಿಜವಾಗಿಯೂ ಬೆಲೂನ್ ಮಾರಲು ಬಂದಿದ್ದರೇ? ಅವರಿಗೆ ಸೈಕಲ್ ಮತ್ತು ಹೀಲಿಯಂ ಗ್ಯಾಸ್ ಸಿಲಿಂಡರ್ ಒದಗಿಸಿದ್ದು ಯಾರು? ಎಲ್ಲಿಂದ ಅವರು ಖರೀದಿ ಮಾಡಿದ್ದರು. ಇವರ ಕುರಿತಂತೆ ವಾಸ್ತವ್ಯ ಹೂಡಿದ್ದ ಲಾಡ್ಜ್ ನಲ್ಲಿ ಏನೇನು ದಾಖಲೆಗಳಿವೆ? ಎಂಬಿತ್ಯಾದಿ ವಿವರಗಳನ್ನು ಪೊಲೀಸರು ಕಲೆ ಹಾಕಿದ್ದು ಜತೆಗೆ ಇರುತ್ತಿದ್ದ ಇಬ್ಬರನ್ನು ಈ ನಿಟ್ಟಿನಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ನಿಜವಾಗಿಯೂ ಇವರು ಬೆಲೂನ್ ವ್ಯಾಪಾರ ಮಾಡಿ ಜೀವನ ನಡೆಸಲು ಬಂದಿದ್ದರೇ? ಅಥವಾ ಬೇರೇನಾದರೂ ಉದ್ದೇಶವಿತ್ತೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.
ಇನ್ನು ಸಲೀಂನ ಚಲನವಲನಗಳು ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸ್ಪೋಟ ಆಕಸ್ಮಿಕವೇ ಆಗಿದ್ದರೂ ಪೊಲೀಸರು ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಮಾಡಲೇ ಬೇಕಾಗಿದೆ. ಸಂಪೂರ್ಣ ತನಿಖೆಯ ಬಳಿಕವೇ ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಬೇಕಾಗಿದೆ. ಈಗಾಗಲೇ ಅಲ್ಲಲ್ಲಿ ಹುಸಿಬಾಂಬ್ ಕರೆಗಳು ಸೇರಿದಂತೆ ಹಲವು ರೀತಿಯ ಬೆದರಿಕೆಗಳು ಬರುತ್ತಿರುವುದರಿಂದ ಮತ್ತು ವರ್ಷಾಂತ್ಯದ ವೇಳೆಯಲ್ಲಿ ಮೈಸೂರಿನ ಕಡೆಗೆ ಸಾಗರೋಪಾದಿಯಲ್ಲಿ ಪ್ರವಾಸಿಗರು ಹರಿದು ಬರುವುದರಿಂದ ಪ್ರವಾಸಿಗರು ಸೇರಿದಂತೆ ಮೈಸೂರಿನ ಜನತೆಯಲ್ಲಿ ಆವರಿಸಿರುವ ಸಂಶಯದ ಕಾರ್ಮೋಡವನ್ನು ಸರಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕಾಗಿದೆ.

ಈಗಾಗಲೇ ಈ ಸ್ಪೋಟದ ಸುತ್ತಲೂ ಅನುಮಾನಗಳಂತು ಹರಿದಾಡುತ್ತಲೇ ಇದೆ ಏಕೆಂದರೆ ದೆಹಲಿ ಸ್ಪೋಟ ಮತ್ತು ಆ ನಂತರದ ತನಿಖೆಯಲ್ಲಿ ತಿಳಿದು ಬಂದ ರಹಸ್ಯಗಳು ನಮ್ಮ ಕಣ್ಣಮುಂದೆಯೇ ಇದೆ. ಆದ್ದರಿಂದ ಇದನ್ನು ಬೆಲೂನು ಮಾರುವಾಗ ಆದ ಆಕಸ್ಮಿಕ ಘಟನೆ ಎಂದು ತಳ್ಳಿ ಹಾಕಲಾಗದು. ಹೀಗಾಗಿಯೇ ಎನ್ ಐಎ ಎಂಟ್ರಿ ಕೊಡುತ್ತಿದೆ. ತಜ್ಞರ ಅಭಿಪ್ರಾಯದ ಪ್ರಕಾರ ಹೀಲಿಯಂ ಸ್ಪೋಟಗೊಳ್ಳುವುದು ಅಪರೂಪ ಹೀಗಿದ್ದರೂ ಸ್ಪೋಟವಾಗಿದೆ ಎಂದರೆ ಇದರ ಬಗ್ಗೆಯೂ ತನಿಖೆಯಾಗಬೇಕಾಗಿದೆ
ಮೃತ ಸಲೀಂ ಉತ್ತರ ಪ್ರದೇಶದಿಂದ ಸಹೋದರರೊಂದಿಗೆ ಬಂದು ಮೈಸೂರಿನ ಲಾಡ್ಜ್ ನಲ್ಲಿದ್ದ ಎನ್ನಲಾಗಿದೆ. ಲಾಡ್ಜ್ ನವರು ದೂರದಿಂದ ಬಂದವರಿಗೆ ಯಾವ ದಾಖಲೆಗಳ ಮೇಲೆ ವಾಸ್ತವ್ಯಕ್ಕೆ ಅವಕಾಶ ನೀಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಸ್ಥಳೀಯರು ಹೇಳುವ ಪ್ರಕಾರ ಈ ವ್ಯಾಪ್ತಿಯಲ್ಲಿ ತಿನಿಸುಗಳ ಮಾರಾಟ ನಡೆಯುತ್ತದೆಯಾದರೂ ಬೆಲೂನ್ ಮಾರಾಟ ಮಾಡುವುದು ಅಪರೂಪ. ಆದರೆ ಸಲೀಂ ಮಾರಾಟ ಮಾಡುತ್ತಿದ್ದ ಸಿಲಿಂಡರ್ ಸ್ಪೋಟ ಆಗಿದ್ದು ಹೇಗೆ? ಆತ ಅಲ್ಲಿಗೆ ಬಂದ ದಿನವೇ ಸ್ಪೋಟವಾಗಿದೆ. ಆದ್ದರಿಂದ ಅನುಮಾನ ಹುಟ್ಟಿಕೊಳ್ಳುತ್ತಿದೆ. ಅದು ಏನೇ ಇರಲಿ.. ತನಿಖೆ ನಡೆದು ನೈಜಾಂಶ ಹೊರಬರುವ ತನಕ ಅನುಮಾನಗಳು ಪ್ರತಿಯೊಬ್ಬರ ತಲೆಯಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತವೆ..
ಮೈಸೂರು ಅರಮನೆ ಬಳಿ ಮಹಾಸ್ಪೋಟ… ಓರ್ವ ಸಾವು… ನಾಲ್ವರಿಗೆ ಗಾಯ… ಇಷ್ಟಕ್ಕೂ ಆಗಿದ್ದೇನು?
B M Lavakumar








