ನಕಲಿ ಆಯುರ್ವೇದ ಚಿಕಿತ್ಸಾಲಯಗಳಿವೆ ಹುಷಾರ್!.. ಆಯುರ್ವೇದ- ಯುನಾನಿ ವೈದ್ಯ ಮಂಡಳಿ ಹೇಳಿದ್ದೇನು?

ಬೆಂಗಳೂರು: ಆಯುರ್ವೇದ ಚಿಕಿತ್ಸೆ ನೀಡುವ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇವರ ಮೋಸದಾಟಕ್ಕೆ ಹಲವರು ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಆಯುರ್ವೇದ ಚಿಕಿತ್ಸಾಲಯಗಳನ್ನು ತೆರೆಯಬೇಕಾದರೆ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಲ್ಲಿ ನೋಂದಣಿಯಾಗಬೇಕಾಗುತ್ತದೆ. ಆದರೆ ಈ ಮಂಡಳಿಯಲ್ಲಿ ನೋಂದಣಿಯಾಗದೆ ಕಾರ್ಯಾಚರಿಸುತ್ತಿರುವ ನಕಲಿ ವೈದ್ಯರಿದ್ದು, ಇದೀಗ ಅಂತಹ ಕ್ಲಿನಿಕ್ ಗಳನ್ನು ಹುಡುಕಿ ನಕಲಿ ವೈದ್ಯರು ಎಂದು ಘೋಷಣೆ ಮಾಡಲಾಗಿದೆ. ಸದ್ಯ ಅಧಿಕೃತವಾಗಿ 11 ವೈದ್ಯರನ್ನು ನಕಲಿ ಎಂದು ಘೋಷಿಸಲಾಗಿದೆ.

ಈಗಾಗಲೇ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯು 11 ಜನ ವೈದ್ಯರುಗಳ ನೋಂದಣಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆಗಾಗಿ ಹಾಜರಾಗಲು ಈಗಾಗಲೇ ಮೂರು ಬಾರಿ ಸೂಚನಾ ಪತ್ರಗಳನ್ನು ನೀಡಿತ್ತು. ಆದರೂ ಸಹ ಈ ಮಂಡಳಿಗೆ ಯಾವುದೇ ಮೂಲ ದಾಖಲಾತಿಗಳನ್ನು ಹಾಜರುಪಡಿಸದೇ ಮತ್ತು ಮಂಡಳಿಯಲ್ಲಿ ನೋಂದಣಿಗೊಂಡಿಲ್ಲದ ಕಾರಣ ಅವರು ನಕಲಿ ವೈದ್ಯರು ಎಂಬುದು ದೃಢಪಟ್ಟಿದೆ. ಹಾಗಾದರೆ ಯಾರು ಅವರು ಎಂಬುದನ್ನು ನೋಡಿದ್ದೇ ಆದರೆ ಕೊಡಗು, ಮೈಸೂರು, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ನಕಲಿ ಆಯುರ್ವೇದದ ವೈದ್ಯರಿಲ್ಲದಿರುವುದು ಗೋಚರಿಸಿದೆ. ಆದರೆ ಬಳ್ಳಾರಿ, ತುಮಕೂರು, ಧಾರವಾಡಗಳಲ್ಲಿ ಕಂಡು ಬಂದಿದೆ.

ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯು ಹನ್ನೊಂದು ಮಂದಿ ವೈದ್ಯರು ಯಾರು ಮತ್ತು ಅವರ ಚಿಕಿತ್ಸಾಲಯಗಳ ವಿವರಗಳನ್ನು ನೀಡಿದೆ. ಅದು ಹೀಗಿದೆ. 1-ಅಬ್ದುಲ್ ಅಜೀಮ್ ಮುಲ್ಲಾ, ಸಯ್ಯಾದ್ ಕ್ಲಿನಿಕ್, ಮಾರ್ಕೆಟ್ ರೋಡ್, ಕುಂದಗೋಳ, ಧಾರವಾಡ ಜಿಲ್ಲೆ, 2-ನಾಗಯ್ಯ ಮಠ, ಎಸ್.ಜಿ.ವಿ ಕ್ಲಿನಿಕ್, ಉಪ್ಪಿನ ಬೆಟಗೆರಿ, ಧಾರವಾಡ ಜಿಲ್ಲೆ, 3-ಶೀಲವೇರಿ ದಿವಾಕರ್, ಶ್ರೀ ಸಾಯಿ ಕ್ಲಿನಿಕ್, ಕಗ್ಗಲ್ ರೋಡ್, ದಮ್ಮೂರು, ಬಳ್ಳಾರಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, 4-ಲಕ್ಷ್ಮೀ ನಾರಾಯಣರೆಡ್ಡಿ, ಶ್ರೀ ಸಾಯಿ ಕ್ಲಿನಿಕ್, ಬ್ಯಾಂಕ್ ರೋಡ್, ಹೆಚ್. ಹೊಸಹಳ್ಳಿ, ಸಿರಗುಪ್ಪ ತಾಲೂಕು, ಬಳ್ಳಾರಿ ಜಿಲ್ಲೆ, 5-ರಾಜಶೇಖರ ತೊರಗಲ್ಲು, ತೊರಗಲ್ಲು ಕ್ಲಿನಿಕ್, ಹೆಬ್ಬಾಳ, ನವಲಗುಂದ ತಾಲ್ಲೂಕ್ ಧಾರವಾಡ ಜಿಲ್ಲೆ.

6-ರಾಮಾಂಜನೇಯ ಲಿಖಿತ್ರಾಮ್ ಕ್ಲಿನಿಕ್, ದಾಸುದಿ, ಚಿಕ್ಕನಾಯಕನ ಹಳ್ಳಿ ತಾಲೂಕು, ತುಮಕೂರು ಜಿಲ್ಲೆ, 7-ಎಂ.ವಿ.ನಾಗರಾಜು, ಚಳ್ಳಕೆರೆ ರಸ್ತೆ, ಹಿರಿಯೂರ್ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, 8-ಸೋಮೇಶ್ವರ ಶೇಖಪ್ಪ ಕದಡಿ, ಸೋಮೇಶ್ವರ ಕ್ಲಿನಿಕ್, ಮಾಗಡಿ, ಶಿರಹಟ್ಟಿ ತಾಲೂಕು, ಗದಗ ಜಿಲ್ಲೆ, 9-ಚೌಡಪ್ಪ, ಭಗವತಿ ಕ್ಲಿನಿಕ್, ಪಟ್ಟನಾಯಕನಹಳ್ಳಿ, ಸಿರಾ ತಾಲೂಕು, ತುಮಕೂರು ಜಿಲ್ಲೆ, 10-ಯೋಗಾನಂದ, ಹಗಲವಾಡಿ, ಅಲ್ಬಗಹಟ್ಟಿ ಪೋಸ್ಟ್, ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ, 11-ದಿನೇಶ್ ಕೆ.ಎಸ್. ಮಂಜುನಾಥ ಕ್ಲಿನಿಕ್, ಕಸ್ತೂರು, ತುಮಕೂರು.

ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಪರಿಶೀಲನೆ ಪ್ರಕಾರ ಈ 11 ಜನ ವೈದ್ಯರುಗಳು ನಕಲಿ ವೈದ್ಯರೆಂದು ಕಂಡು ಬಂದಿದ್ದು, ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ನಕಲಿ ವೈದ್ಯ ವೃತ್ತಿ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಪತ್ರ ಬರೆಯಲಾಗಿದೆ. ಸಾರ್ವಜನಿಕರ ಆರೋಗ್ಯದ ವಿಷಯವಾಗಿರುವುದರಿಂದ ನಕಲಿ ವೈದ್ಯರ ಕುರಿತು ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಲಾಗುತ್ತಿದೆ. ಅಲ್ಲದೆ ಅವರುಗಳನ್ನು ನಕಲಿ ವೈದ್ಯರೆಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಷ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.

ಯಾರೇ ಆಗಲಿ ರೋಗಿಗಳು ಆಯುರ್ವೇದ ಚಿಕಿತ್ಸೆ ಪಡೆಯುತ್ತೇನೆ ಎಂದು ಹೊರಡುವ ಮುನ್ನ ಚಿಕಿತ್ಸೆ ನೀಡುವ ವೈದ್ಯರ ಪೂರ್ವಾಪರಗಳನ್ನು ತಿಳಿದುಕೊಂಡು ಮುನ್ನಡೆಯುವುದು ಒಳಿತು ಇಲ್ಲದೆ ಹೋದರೆ ಜೀವಕ್ಕೆ ಕುತ್ತು ಬರುವ ಅಪಾಯ ಇದ್ದೇ ಇರುತ್ತದೆ. ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡುವುದು ಒಳಿತು. ಬಹಳಷ್ಟು ಜನರು ಆಪರೇಷನ್ ಗೆ ಹೆದರಿ ಆಯುರ್ವೇದ ಚಿಕಿತ್ಸೆಗೆ ಮುಂದಾಗುವುದು ಕಂಡು ಬರುತ್ತದೆ. ಹೀಗಾಗಿ ಎಚ್ಚರಿಕೆ ಇರಲಿ…







