Crime

ನಂಜನಗೂಡು ಬಳಿ ಬೈಕ್ ಸಹಿತ ಯುವಕ ಸಜೀವ ದಹನ.. ಘಟನೆ ಸುತ್ತ ಅನುಮಾನಗಳ ಹುತ್ತ!

ಮೈಸೂರು: ಬೈಕ್ ಸಹಿತ ಯುವಕನೊಬ್ಬ ಸಜೀವ ದಹನಗೊಂಡಿರುವ ಘಟನೆ ಜಿಲ್ಲೆಯ ನಂಜನಗೂಡು ಬಳಿಯ ಕೊರಹುಂಡಿಗೆ ತೆರಳುವ ಮಾರ್ಗದ ಹುಲ್ಲಹಳ್ಳಿ ನಾಲೆ ಪಕ್ಕದಲ್ಲಿ ನಡೆದಿದ್ದು ಜನ ಬೆಚ್ಚಿ ಬೀಳುವಂತೆ ಮಾಡಿದ್ದು, ಪೊಲೀಸರು ಪ್ರಕರಣದ ಕುರಿತಂತೆ ತನಿಖೆ ಆರಂಭಿಸಿದ್ದಾರೆ.

ಈ ಘಟನೆಯಲ್ಲಿ ಬೈಕ್ ಸಹಿತ ಸುಟ್ಟು ಕರಕಲಾದ ವ್ಯಕ್ತಿಯನ್ನು ರಾಂಪುರ ನಿವಾಸಿ ಆದಿತ್ಯ(24) ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ ಘಟನೆಯ ಸುತ್ತಲೂ ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿವೆ.

ಮೃತ ಆದಿತ್ಯ ಸೋಮವಾರ ಸಂಜೆ ವೇಳೆ ನಂಜನಗೂಡಿನಿಂದ ಕೊರಹುಂಡಿಗೆ ತೆರಳುವ ಮಾರ್ಗದ ಹುಲ್ಲಹಳ್ಳಿ ನಾಲೆ ಪಕ್ಕದಲ್ಲಿ ಬೈಕ್ ಹೊತ್ತಿ ಉರಿದಿದ್ದು ಬೆಂಕಿ ಜ್ವಾಲೆಗಳ ನಡುವೆ ಯುವಕ  ಓಡಿ ಬರುವ ಪ್ರಯತ್ನ ಮಾಡಿ ಬಿದ್ದಿದ್ದಾನೆ. ಕೆಲವೇ ಕ್ಷಣಗಳಲ್ಲಿ. ಬೈಕ್ ಸಹಿತ ಯುವಕನ ದೇಹ ಸುಟ್ಟು ಹೋಗಿದೆ ಎಂದು ಹೇಳಲಾಗುತ್ತಿದೆ. ಬೈಕ್ ಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದು, ಸ್ಥಳಕ್ಕೆ ಧಾವಿಸಿ ಯುವಕನ ಪ್ರಾಣ ಉಳಿಸುವ ಪ್ರಯತ್ನ ಮಾಡಿದರೂ  ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಸದ್ಯ ಮೇಲ್ನೋಟಕ್ಕೆ ಆಕಸ್ಮಿಕ ಎಂದರೆ ಒಪ್ಪಿಕೊಳ್ಳಲಾಗುವುದಿಲ್ಲ. ಈತ ಒಬ್ಬನೇ ಬೈಕ್ ನಲ್ಲಿ ಹೋಗಿದ್ದನೇ ಬೇರೆ ಯಾರಾದರೂ ಇದ್ದರಾ? ಇಷ್ಟಕ್ಕೂ ಈತ ಈ ನಿರ್ಜನ ಪ್ರದೇಶಕ್ಕೆ ಏತಕ್ಕೆ ಬಂದಿದ್ದು? ಎಂಬಿತ್ಯಾದಿ ಪ್ರಶ್ನೆಗಳು ಗಿರಕಿ ಹೊಡೆಯುತ್ತಿದ್ದು, ಇದೊಂದು ಕೊಲೆಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಪೊಲೀಸರ ತನಿಖೆಯಿಂದಷ್ಟೆ ಆದಿತ್ಯನದು ಕೊಲೆಯಾ? ಆತ್ಮಹತ್ಯೆನಾ? ಅಥವಾ ಆಕಸ್ಮಿಕನಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಅಲ್ಲಿ ತನಕ ಈ ಪ್ರಕರಣ ಎಲ್ಲರ ನಿದ್ದೆಗೆಡಿಸಿರುವುದಂತು ನಿಜ

admin
the authoradmin

Leave a Reply

Translate to any language you want