ಕುಶಾಲನಗರ(ರಘುಹೆಬ್ಬಾಲೆ): ಸಮೀಪದ ನಂಜರಾಯಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್.ವಿಶ್ವ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿ ಕ್ರೀಡಾಕೂಟಕ್ಕೆ ಸದಾ ಪ್ರೋತ್ಸಾಹ ಬೆಂಬಲ ನೀಡುತ್ತಾ ಬರುತ್ತಿದ್ದೇವೆ. ಸರ್ವ ಧರ್ಮೀಯರ ಸಹಕಾರದಿಂದ ಗ್ರಾಮೀಣ ಕ್ರೀಡೆಗಳು ನಶಿಸದಂತೆ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದೇವೆ. ಗ್ರಾಮಸ್ಥರೇ ಒಂದೊಂದು ಜವಬ್ದಾರಿ ಹೊತ್ತು ಕಾರ್ಯಕ್ರಮಗಳ ಯಶಸ್ವಿಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

ಗ್ರಾಮ ಪಂಚಾಯತಿ ಹಳೆ ವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ದಿ ಸಮಿತಿ ಹಾಗೂ ದಾನಿಗಳ ಸಹಕಾರದ ಮೂಲಕ ಶಿಕ್ಷಣದೊಂದಿಗೆ ಕ್ರೀಡೆಗೂ ಕೂಡ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಸದಸ್ಯ ರಕ್ಷಿತ್ ಮಾವಜಿ ಮಾತನಾಡಿ, ಶಿಕ್ಷಣದಿಂದ ಬೌದ್ದಿಕ ವಿಕಸನವಾದರೆ ಕ್ರೀಡೆಯಿಂದ ದೈಹಿಕ ವಿಕಸನ ಸಾಧ್ಯ. ಉತ್ತಮ ಆರೋಗ್ಯ, ಸದೃಢ ದೇಹಕ್ಕೆ ಕ್ರೀಡೆ ಸಹಕಾರಿಯಾಗಲಿದೆ. ನಮ್ಮ ಗ್ರಾಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹಲವು ಉತ್ತಮ ಸಾಧನೆ ತೋರಿದ್ದಾರೆ. ಕ್ರೀಡಾಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದರು.

ನಿವೃತ್ತ ಸೈನಿಕ ಬಿ.ಎಸ್.ಮುಸ್ತಾಫ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ಕ್ರೀಡಾಕೂಟಕ್ಕೆ ಶುಭ ಕೋರಿದರು. ಹಳೆ ವಿದ್ಯಾರ್ಥಿಗಳಾದ ಟಿ.ಕೆ.ಸೋಮನ್ ಮತ್ತು ಟಿ.ಕೆ. ರಘು ಅವರು ಮೇಲಾಟಗಳಿಗೆ ಚಾಲನೆ ನೀಡಿದರು. ಗ್ರಾಮಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ವಿ.ಪ್ರೇಮಾನಂದ ಮಾತನಾಡಿದರು.
ವಿದ್ಯಾರ್ಥಿಗಳ ಪಥಸಂಚಲನ ಬಳಿಕ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಮಾಜಿ ಸೈನಿಕ ಮುಸ್ತಾಫ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ನಂಜರಾಯಪಟ್ಟಣ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶೃತಿ ಶ್ರೀನಿವಾಸನ್,ಮುಖ್ಯ ಶಿಕ್ಷಕಿ ಸರಳಾ ರಾಣಿ, ಹಳೆ ವಿದ್ಯಾರ್ಥಿಗಳಾದ ಕಾಳಯ್ಯ, ರವಿ ಬೆಳ್ಯಪ್ಪ, ದುಬಾರೆ ರಾಫ್ಟ್ ಮತ್ತು ಗೈಡ್ ಅಸೋಸಿಯೇಷನ್ ಅಧ್ಯಕ್ಷ, ಶರತ್, ದಾನಿಗಳಾದ ಗಣಪತಿ, ಅಮೀರ್, ಅಬೂಬಕರ್, ಸೈನಿಕ ತಿಲಕ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮ್ಯಾಥ್ಯು, ಖಜಾಂಚಿ ಹ್ಯಾರಿಸ್ ಸೇರಿದಂತೆ ಶಾಲಾಭಿವೃದ್ದಿ ಸಮಿತಿ ಸದಸ್ಯರುಗಳು, ಶಿಕ್ಷಕ ವೃಂದದವರು, ಪೋಷಕರು ಪಾಲ್ಗೊಂಡಿದ್ದರು.








