LatestMysore

ನಿರ್ಗತಿಕ ಮಹಿಳೆಯರಿಗೆ ಮಸಾಶನ ಕೊಡಿಸಿ ಮಾನವೀಯತೆ ಮೆರೆದ ದಸಂಸ

ಮೈಸೂರು: ಇವತ್ತು ಬಹಳಷ್ಟು ಜನ ಬಡತನರೇಖೆಗಿಂತಲೂ ಕೆಳಗಿನ ಜೀವನ ನಡೆಸುತ್ತಿದ್ದರೂ ಅವರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ. ಇದನ್ನು ಗುರುತಿಸಿದ ದಲಿತ ಸಂಘರ್ಷ ಸಮಿತಿಯು ಮೈಸೂರಿನ ಏಕಲವ್ಯ ನಗರದಲ್ಲಿ ಸಂಕಷ್ಟದಲ್ಲಿದ್ದ ನಿರ್ಗತಿಕ ಮಹಿಳೆಯರಿಗೆ ಮೈಸೂರು ಉಪತಹಸೀಲ್ದಾರ್‌ ಶ್ರೀನಿವಾಸ್‌ ರವರಿಗೆ ಮಾಹಿತಿ ನೀಡಿ ಮಾಸಾಶನದ ಮಂಜೂರಾತಿ ಪತ್ರವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಈ ವೇಳೆ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್‌ ಮಲ್ಲಾಡಿ ರವರು ಮಾತನಾಡಿ ಏಕಲವ್ಯ ನಗರದಲ್ಲಿ ವಾಸವಿರುವ ಆದಿದ್ರಾವಿಡ ಪೌರಕಾರ್ಮಿಕ ಸಮುದಾಯಕ್ಕೆ ಸೇರಿದ ಲಕ್ಷ್ಮಮ್ಮ ಎಂಬ ನಿರ್ಗತಿಕ ಮಹಿಳೆಯು ತನ್ನ ಕೈ ಹಿಡಿದ ಗಂಡನೇ ಮೋಸ ಮಾಡಿ 10 ವರ್ಷಗಳ ಹಿಂದೆಯೇ ಈಕೆಯನ್ನು ಬಿಟ್ಟು ಹೋದನು. ಇದ್ದ ಒಬ್ಬ ಮಗ ಹಾದಪ್ಪ ಈತನ ಹೆಂಡತಿ ಮಧು ನಾಲ್ಕು ಹೆಣ್ಣು ಒಂದು ಗಂಡು ಮಗುವನ್ನು ಬಿಟ್ಟು ಕೆಲವು ತಿಂಗಳುಗಳ ಹಿಂದೆ ಅನಾರೋಗ್ಯಪೀಡಿತನಾಗಿ ಮರಣ ಹೊಂದಿದನು. ಗಂಡನ ಸಾವು ಮಾಸುವ ಮುನ್ನವೇ ಸೊಸೆ ಮಧುಗೆ ಎರಡೂ ಕಿಡ್ನಿಗಳು ವಿಫಲವಾಗಿ ಆಸ್ಪತ್ರೆ ಸೇರಿ ಚಿಕಿತ್ಸೆಗೂ ಹಣವಿಲ್ಲದೆ ಪರಿತಪಿಸುವ ಸ್ಥಿತಿ ಉಂಟಾಯಿತು. ಇತ್ತ ಐದು ಚಿಕ್ಕ ಮಕ್ಕಳನ್ನು ಅಜ್ಜಿ ಲಕ್ಷ್ಮಮ್ಮನೇ ಸಾಕುವಂತಾಯಿತು.

ವಯಸ್ಸಾದ ಲಕ್ಷ್ಮಮ್ಮ ದಿನನಿತ್ಯ ತಲೆಕೂದಲು ಬಟ್ಟೆ ಪಿನ್ನು ಹಳ್ಳಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾ ಬಂದ ಹಣದಲ್ಲಿ ಮಕ್ಕಳನ್ನು ಸಾಕುತ್ತಿದ್ದಳು. ಈ ಸಂಕಷ್ಟದಲ್ಲಿ ಬಳಲುತ್ತಿರುವ ದಲಿತ ಕುಟುಂಬವನ್ನು ದಸಂಸ ವು ಗಮನಿಸಿ ಕಂದಾಯಾಧಿಕಾರಿಗಳಿಗೆ ಈ ಕುಟುಂಬದ ಪರಿಸ್ಥಿತಿಯನ್ನು ತಿಳಿಸಿ ಲಕ್ಷ್ಮಮ್ಮನಿಗೆ ಮನಸ್ವಿನಿ ಯೋಜನೆಯಡಿ ಮಾಸಾಶನ ಮಂಜೂರು ಮಾಡಿಸಲು ಮೈಸೂರಿನ ತಹಸೀಲ್ದಾರ್‌ ಕಛೇರಿಗೆ ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಸಿತ್ತು. ಅದರಂತೆ ಲಕ್ಷ್ಮಮ್ಮನಿಗೆ ಮನಸ್ವಿನಿ ಯೋಜನೆಯ ಆದೇಶದ ಪತ್ರವನ್ನು ಕೊಡಿಸಲಾಯಿತು. ಇದೇ ಸಂದರ್ಭದಲ್ಲಿ ಲಕ್ಷ್ಮಮ್ಮನ ಐದು ಜನ ಮೊಮ್ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ದಸಂಸ ವು ತೆಗೆದುಕೊಳ್ಳಲಿರುವುದಾಗಿ ಹೇಳಿದರು.
ಮತ್ತೊಬ್ಬ ಮಹಿಳೆ ಅಲೆಮಾರಿ ದೊಂಬಿದಾಸ ಸಮುದಾಯದ ಲಕ್ಷ್ಮಮ್ಮ ಕೂಡ ಸಂಕಷ್ಟದಲ್ಲಿ ಜೀವಿಸುತ್ತಾ ಈಕೆಯ ಗಂಡ ಕಾಳಪ್ಪನಿಗೆ ಎರಡೂ ಕಣ್ಣುಗಳು ಕಾಣದೆ ಗಂಡನನ್ನು ಸಾಕುವ ಜವಾಬ್ದಾರಿಯನ್ನು ಈಕೆಯೇ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಈಕೆಯು ಜೀವನ ನಿರ್ವಹಣೆಗೆ ಹಳ್ಳಿ ಹಳ್ಳಿಗಳಿಗೆ ಹೋಗಿ ಜನರು ಕೊಡುವ ಸಹಾಯದಿಂದ ಗಂಡ ಕಾಳಪ್ಪ ಹಾಗೂ ಈಕೆಯ ಊಟೋಪಚಾರ, ಔಷಧೋಪಚಾರ ಎಲ್ಲವನ್ನು ನಿಭಾಯಿಸುವ ಪರಿಸ್ಥಿತಿ ಇತ್ತು. ಲಕ್ಷ್ಮಮ್ಮಳ ಪರಿಸ್ಥಿತಿಯನ್ನು ದಸಂಸವು ನೋಡಿ ಈಕೆಗೂ ಸಹ ಮಾಸಾಶನ ಮಾಡಿಕೊಡುವಂತೆ ಕೆಲವು ದಿನಗಳ ಹಿಂದೆ ಮೈಸೂರಿನ ತಹಸೀಲ್ದಾರ್‌ ರವರ ಕಛೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ದಸಂಸದ ಮನವಿಗೆ ಕಂದಾಯಾಧಿಕಾರಿಗಳು ಸ್ಪಂದಿಸಿ ಇಬ್ಬರು ನಿರ್ಗತಿಕ ಮಹಿಳೆಯರಿಗೆ ಮಾಸಾಶನವನ್ನು ಮಂಜೂರು ಮಾಡಿಕೊಟ್ಟಿರುವುದಕ್ಕೆ ಮೈಸೂರು ದಸಂಸ ವು ಕಂದಾಯಾಧಿಕಾರಿಗಳನ್ನು ಅಭಿನಂದಿಸುತ್ತದೆ.

ಸರ್ಕಾರ ಕೊಡುತ್ತಿರುವ ರೂ. 800 ಮಾಸಾಶನ ಯಾವುದಕ್ಕೂ ಸಾಕಾಗುವುದಿಲ್ಲ. ಇಂತಹ ನಿರ್ಗತಿಕ ಮಹಿಳೆಯರಿಗೆ ಪ್ರತೀ ತಿಂಗಳು ರೂ. 3000/- ಗಳನ್ನಾದರೂ ಸರ್ಕಾರ ಮಂಜೂರು ಮಾಡಿದರೆ ಎಷ್ಟೋ ನಿರ್ಗತಿಕ ಮಹಿಳೆಯರ ಬದುಕಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಈ ಇಬ್ಬರು ಮಹಿಳೆಯರಿಗೆ ಮೈಸೂರಿನ ಉಪತಹಸೀಲ್ದಾರ್‌ ಶ್ರೀನಿವಾಸ್‌ ರವರು ಮಾಸಾಶನದ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿ ಸರ್ಕಾರದ ಸೌಲಭ್ಯಗಳು ಇಂತಹ ನಿರ್ಗತಿಕರಿಗೆ ತಲುಪಲು ಸಹಾಯ ಮಾಡುತ್ತಿರುವ ದಸಂಸದ ನಿಂಗರಾಜ್‌ ಮಲ್ಲಾಡಿರವರನ್ನು ನಾನು ಅಭಿನಂದಿಸುತ್ತೇನೆ. ನಿಜವಾದ ನಿರ್ಗತಿಕ ಜನರಿಗೆ ಸರ್ಕಾರದ ಸೌಲಭ್ಯಗಳು ದೊರೆತಲ್ಲಿ ಇಂತಹ ಯೋಜನೆಗಳು ಸಫಲತೆ ಕಾಣಲು ಸಾಧ್ಯವಾಗುತ್ತದೆ ಎಂದರು. ಇಬ್ಬರು ಮಹಿಳೆಯರು ಮಾಸಾಶನದ ಮಂಜೂರಾತಿ ಪತ್ರ ವನ್ನು ಪಡೆದುಕೊಂಡು ಕೃತಜ್ಞತಾ ಭಾವದಿಂದ ಕೈ ಮುಗಿಯುತ್ತಾ ಹಾರೈಸಿದರು.

admin
the authoradmin

Leave a Reply

Translate to any language you want