ಕಾರ್ಮಿಕ ಇಲಾಖೆಯು ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಹಾಗೂ ನ್ಯಾಷನಲ್ ಪೆನ್ಷನ್ ಸ್ಕೀಂ ಫಾರ್ ದಿ ಟ್ರೇಡರ್ಸ್ ಅಂಡ್ ಸೆಲ್ಫ್ ಎಂಪ್ಲಾಯ್ಡ್ ಪರ್ಸನ್ (ಎನ್ಪಿಎಸ್ ಟ್ರೇಡರ್ಸ್) ಯೋಜನೆಯಡಿ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಸಲುವಾಗಿ ವಿಶೇಷ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ.
ವಿವಿಧ ವರ್ಗದ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಸಲುವಾಗಿ ಪಂಚಾಯತ್ ರಾಜ್ ಸಂಸ್ಥೆಗಳು, ನಗರಸ್ಥಳೀಯ ಸಂಸ್ಥೆಗಳು ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಸಹಯೋಗದೊಂದಿಗೆ ಜನವರಿ 15 ರಿಂದ ಫೆಬ್ರವರಿ 15ರವರೆಗೆ ನಗರ ಪ್ರದೇಶಗಳಲ್ಲಿ ಹಾಗೂ ಫೆಬ್ರವರಿ 16 ರಿಂದ ಮಾರ್ಚ್ 15ರವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ.

ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಗೃಹ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಬಿಸಿಯೂಟ ತಯಾರಕರು, ಹಮಾಲಿಗಳು, ಇಟ್ಟಿಗೆ ಕಾರ್ಮಿಕರು, ಭಟ್ಟಿ ಕಾರ್ಮಿಕರು ಚಮ್ಮಾರರು, ಚಿಂದಿ ಆಯುವವರು, ಮನೆಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಚರ್ಮೋದ್ಯಮ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು, ಮೆಕ್ಯಾನಿಕ್ಗಳು, ಕೈಮಗ್ಗ ಕಾರ್ಮಿಕರು, ಇನ್ನಿತರೆ ಕೆಲಸಗಾರರು ಹಾಗೂ ಅಸಂಘಟಿತ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ನೋಂದಾಯಿಸಿಕೊಳ್ಳಬಹುದು.
ಅಸಂಘಟಿತ ಕಾರ್ಮಿಕರು 18 ರಿಂದ 40 ವರ್ಷದೊಳಗಿರಬೇಕು. ಮಾಸಿಕ ಆದಾಯ 15 ಸಾವಿರಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ, ಇ.ಎಸ್.ಐ/ಪಿ.ಎಫ್/ಎನ್.ಪಿ.ಎಸ್ ಯೋಜನೆಯ ವ್ಯಾಪ್ತಿಗೆ ಒಳಪಡಬಾರದು. ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು.

ಕಾರ್ಮಿಕರು ಹೊಂದಿರುವ ಆರಂಭ ವಂತಿಕೆಯ ಮೊತ್ತ, ಆಧಾರ್ ಕಾರ್ಡ್, ಖಾತೆ ಹೊಂದಿರುವ ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್ ಪುಸ್ತಕ/ಚೆಕ್ ಪುಸ್ತಕ/ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು) ತಮ್ಮ ನಾಮ ನಿರ್ದೇಶಿತರ ವಿವರಗಳು ಮತ್ತು ಮೊಬೈಲ್ ಫೋನ್ ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ನೊಂದಾಯಿಸಿಕೊಳ್ಳಬೇಕು. ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಬೇಕು ಹಾಗೂ ತದ ನಂತರದ ಮಾಸಿಕ ವಂತಿಗೆಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ.
ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುಭವಿಯು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3 ಸಾವಿರ ಖಚಿತ ಕನಿಷ್ಠ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ.
ಚಂದಾದಾರರು 10 ವರ್ಷದೊಳಗೆ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುವುದು. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದ್ದಲ್ಲಿ ಅವರು ಪಾವತಿಸಿದ ವಂತಿಕೆಯೊAದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ/ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಪಾವತಿಸಲಾಗುವುದು.

ಫಲಾನುಭವಿಯು ನಿರಂತರವಾಗಿ ವಂತಿಗೆಯನ್ನು ಪಾವತಿಸಿದ್ದು, ಅವರು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗ ನ್ಯೂನತೆಯಿಂದ ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿರುತ್ತಾರೆ.
ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತಪಟ್ಟಲ್ಲಿ, ಅವರ ಪತ್ನಿ/ಪತಿ ಮಾತ್ರ ಶೇ.50ರಷ್ಟು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯು ವಿದ್ಯುನ್ಮಾನ ಆಧಾರಿತವಾಗಿದ್ದು ಎಸ್.ಎಂ.ಎಸ್ ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲ ಕಾಲಕ್ಕೆ ತಿಳಿಸಲಾಗುತ್ತದೆ ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ) ಗಳಲ್ಲಿ ಯೋಜನೆಯಡಿ ಫಲಾನುಭವಿಗಳಾಗಿ ನೊಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು








