Political

ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಪ್ರತಾಪ್ ಸಿಂಹಗೆ ಮಾಜಿ ಶಾಸಕ ನಾಗೇಂದ್ರ ಹೇಳಿದ್ದೇನು?

ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಅಷ್ಟೆ:ಎಲ್.ನಾಗೇಂದ್ರ

ಮೈಸೂರು: ರಾಷ್ಟ್ರ ರಾಜಕಾರಣದಿಂದ ನೇಪಥ್ಯಕ್ಕೆ ಸರಿದ ಬಳಿಕ ಇದೀಗ ರಾಜ್ಯ ರಾಜಕಾರಣದತ್ತ ಮುಖ ಮಾಡುವ ನಿರ್ಧಾರ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿರುವ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದ್ದರು. ಆದರೀಗ ಅವರು ಮೈಸೂರಿನ ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ಅಲ್ಲಿನ ಮಾಜಿ ಶಾಸಕ ನಾಗೇಂದ್ರರವರ ಕಣ್ಣು ಕೆಂಪಾಗುವಂತೆ ಮಾಡಿದ್ದಲ್ಲದೆ ಆಕ್ರೋಶಕ್ಕೂ ಕಾರಣವಾಗಿದೆ.

ಹಾಗೆನೋಡಿದರೆ ಈ ಹಿಂದೆ ಪ್ರತಾಪ್ ಸಿಂಹ ಸಂಸದರಾಗಿದ್ದಾಗ ನಾಗೇಂದ್ರ ಅವರು ಚಾಮರಾಜಕ್ಷೇತ್ರದ ಶಾಸಕರಾಗಿದ್ದರು. ಈ ವೇಳೆ ಹಲವು ವಿಚಾರಗಳಲ್ಲಿ ಇವರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅದು ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿತ್ತು. ಇದೀಗ ತಮ್ಮ ಕ್ಷೇತ್ರದ ಮೇಲೆ ಪ್ರತಾಪ್ ಸಿಂಹ ಕಣ್ಣಿಟ್ಟಿರುವುದು ಇನ್ನಷ್ಟು ಕೆರಳಿಸುವಂತೆ ಮಾಡಿದೆ ಹೀಗಾಗಿಯೇ ಅವರು ಪ್ರತಾಪ್ ಸಿಂಹ ಯಾವ ನೈತಿಕತೆ ಇಟ್ಟುಕೊಂಡು ಈ ಕ್ಷೇತ್ರಕ್ಕೆ ಬರುತ್ತಾರೆ. ನಿಮಗೆ ಈ ಕ್ಷೇತ್ರವೇ ಬೇಕಾ? ನನ್ನ ಬಲಿ ತೆಗೆದುಕೊಂಡು ಇಲ್ಲಿ ಸ್ಪರ್ಧೆ ಮಾಡಬೇಕಾ? ನಾನು 30 ವರ್ಷಗಳ ಕಾಲ ಪಕ್ಷಕ್ಕೆ ದುಡಿದಿಲ್ಲವಾ? ಪಕ್ಷಕ್ಕೆ ನೀವೇನು ಮಾಡಿದ್ದೀರಾ ಎಂದು ಕೇಳಿದ್ದಾರೆ.

ನಾಗೇಂದ್ರ ಅವರು ಮಾಜಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಜತೆಗೆ  ಬಿಜೆಪಿ ನಗರಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಸಂಬಂಧ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, 2028ಕ್ಕೆ ಯಾರಿಗೆ ಮುಖಭಂಗ ಆಗುತ್ತೆ ಎಂದು ಕಾಯ್ದು ನೋಡಿ. ನನ್ನನ್ನು ಜನರೂ ಕೈಬಿಡಲ್ಲ. ಪಕ್ಷವೂ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.

ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಈ ಬಗ್ಗೆ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ. ಟಿಕೆಟನ್ನು ಯಾರಿಗೆ ಕೊಡಬೇಕು. ಯಾರಿಗೆ ಕೊಡಬಾರದು ಎಂದು ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಈ ಹಿಂದೆ ನನ್ನನ್ನು ಬಿಟ್ಟು ಯಾರಿಗೆ ಲೋಕಸಭಾ ಟಿಕೆಟ್ ನೀಡುತ್ತಾರೆ ಎಂದು ಇದೇ ಪ್ರತಾಪ್ ಸಿಂಹ ಹೇಳಿದ್ದರು. ಕೊನೆಗೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ.

ಚಾಮರಾಜ ಕ್ಷೇತ್ರದ ಪ್ರತಿ ಗಲ್ಲಿ, ಬಡಾವಣೆಗಳ ಮಾಹಿತಿ ನನಗಿದೆ. ಕಳೆದ 32 ವರ್ಷದಿಂದ ಪಕ್ಷದ ಕಾರ್ಯಕರ್ತನಿಂದ ಹಿಡಿದು ವಿವಿಧ ಜವಾಬ್ದಾರಿ ನಿಭಾಯಿಸುವ ಜತೆಗೆ ಪಕ್ಷ ಸಂಘಟನೆ ಮಾಡಿದ್ದೇನೆ. ಮೂರು ಬಾರಿ ಪಾಲಿಕೆ ಸದಸ್ಯ, ಒಮ್ಮೆ ಮೇಯರ್ ಹಾಗೂ ಮುಡಾ ಅದ್ಯಕ್ಷನಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ. ಎಲ್ಲಿಂದಲೋ ಬಂದು, ಈಗ ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದರೆ ಹೇಗೆ? ರಾಜ್ಯ ಮಟ್ಟದ ನಾಯಕ ಎಂದು ಬಿಂಬಿಸಿಕೊಳ್ಳುವ ಇವರು, ರಾಜ್ಯದಲ್ಲಿ ಬೇರೆಲ್ಲಿಯೂ ಸ್ಪರ್ಧಿಸಲು ಕ್ಷೇತ್ರಗಳು ಇಲ್ಲವಾ ಎಂದು ಪ್ರಶ್ನಿಸಿದರು.

ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಆಗಲೇ ಅವರಿಗೆ ಹಗಲು ಕನಸು ಬಿದ್ದಿದೆ. ಅನಗತ್ಯವಾಗಿ ಇಂತಹ ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬೇಡಿ ಎಂದು ಕಿಡಿಕಾರಿದರಲ್ಲದೆ, ಪಕ್ಷ ನನ್ನ ಸಂಘಟನಾ ಚತುರತೆ ಗುರುತಿಸಿ ಬಿಜೆಪಿ ನಗರಾಧ್ಯಕ್ಷನನ್ನಾಗಿ ಮಾಡಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬೆಲೆ ನೀಡಬೇಕೆ ವಿನಹ, ವ್ಯಕ್ತಿಗಳು ನೀಡುವ ಹೇಳಿಕೆಗಳಿಗೆ ಮನ್ನಣೆ ನೀಡಬಾರದು ಎಂದರು.

ಚಾಮರಾಜ ಕ್ಷೇತ್ರದಲ್ಲಿ ಈ ಹಿಂದೆ ಶಾಸಕನಾಗಿದ್ದಾಗ ಯಾರೊಬ್ಬರು ಬೆರಳು ತೋರಿಸದಂತೆ ಅಭಿವೃದ್ಧಿ ಕೆಲಸ ಮಾಡಿದ್ದೆ. ಇದೇ ಪ್ರತಾಪ್ ಸಿಂಹ ಅವರು ಆ ಸಂದರ್ಭ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂದು ಕೊಂಡಾಡಿದ್ದರು. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಯಾಗಿದ್ದ ಒಡೆಯರ್ ಪರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರಲಿಲ್ಲ. ನಮ್ಮ ಪರವಾಗಿ ಪ್ರಚಾರಕ್ಕೆ ಬಂದಿಲ್ಲ. ಒಬ್ಬರನ್ನೂ ಗೆಲ್ಲಿಸಿಲ್ಲ. ಪ್ರಧಾನಿ ಮೋದಿ ವರ್ಚಸ್ಸಿನಲ್ಲಿ ನಾವು, ನೀವು ಗೆದ್ದಿರುವುದು. ನಿಮ್ಮ ಗೆಲುವಿಗೆ ನಮ್ಮ ಕೊಡುಗೆಯೂ ಇದೆ ಎಂದರು.

ಚಾಮರಾಜ ಕ್ಷೇತ್ರ ನನ್ನ ಧರ್ಮ ಕ್ಷೇತ್ರವೂ ಆಗಿದೆ. ಕರ್ಮ ಕ್ಷೇತ್ರವೂ ಆಗಿದೆ. ನಾನು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದವನು. ಬೇರೆ ಎಲ್ಲಿಂದಲೋ ಇಲ್ಲಿಗೆ ಬಂದಿಲ್ಲ. ಅವರಿಗೆ ನೂರು ಜನ ಕಾರ್ಯಕರ್ತರಿದ್ದರೆ, ನನಗೆ ಸಾವಿರಾರು ಕಾರ್ಯಕರ್ತರು ಇದ್ದಾರೆ ಎಂದು ಹೇಳಿದ್ದಾರೆ. ಮುಂದೆ ಇದಕ್ಕೆ ಪ್ರತಾಪ್ ಸಿಂಹ ಯಾವ ರೀತಿಯ ತಿರುಗೇಟು ನೀಡುತ್ತಾರೋ ಗೊತ್ತಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಮುಂದಿನ ಚುನಾವಣೆ ಪ್ರತಾಪ್ ಸಿಂಹ ಕ್ಷೇತ್ರಗಳ ತಲಾಸೆಯಲ್ಲಿರುವುದಂತು ಸತ್ಯ ಮುಂದೇನಾಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

admin
the authoradmin

Leave a Reply

Translate to any language you want