Latest

ಅರಣ್ಯದಲ್ಲಿನ ಅಕ್ರಮ ರೆಸಾರ್ಟ್‌ ಗಳ ತೆರವಿಗೆ ಆಗ್ರಹಿಸುತ್ತಿರುವುದೇಕೆ ಕಬಿನಿ ರೈತ ಹಿತ ರಕ್ಷಣಾ ಸಮಿತಿ?

ಮೈಸೂರು: ಕಬಿನಿ, ನಾಗರಹೊಳೆ, ಬಂಡೀಪುರ ಅರಣ್ಯದಲ್ಲಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವ  ರೆಸಾರ್ಟ್, ಬಾರ್, ಹೋಟೆಲ್‌ಗಳ ತೆರವಿಗೆ ಒತ್ತಾಯಿಸಿ ಕಬಿನಿ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ, ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಹೋಟೆಲ್, ರೆಸಾರ್ಟ್, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇವುಗಳ ಕಾರ್ಯಾಚರಣೆಯಿಂದ ಕಾಡಿನ ಪ್ರಾಣಿಗಳಿಗೆ ಸಾಕಷ್ಟು ಹಾನಿಯಾಗುತ್ತಿದ್ದು, ರಕ್ಷಣೆ, ಆಹಾರಕ್ಕಾಗಿ ನಾಡಿಗೆ ಬರಲು ಆರಂಭಿಸಿವೆ. ಇದರಿಂದ ಕಾಡಂಚಿನ ಪ್ರದೇಶದ ಕೃಷಿ ಕೂಲಿ ಕಾರ್ಮಿಕರು, ರೈತರು ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನಡೆದ ಹುಲಿ ದಾಳಿಗೆ ನಾಲ್ವರು ರೈತರು ಬಲಿಯಾಗಿದ್ದಾರೆ. ಅಲ್ಲದೆ ಸಾಕಷ್ಟು ಜಾನುವಾರುಗಳು ಹುಲಿಗೆ ಆಹಾರವಾಗಿವೆ ಎಂದು ಕಿಡಿ ಕಾರಿದ್ದಾರೆ.

ಈ ಕಟ್ಟಡಗಳಿಂದ ಬರುವ ಶಬ್ದ, ವಾಹನಗಳು ರಾತ್ರಿ ಸಮಯದಲ್ಲಿ ಲೈಟ್ ಬಳಕೆಯಿಂದ ಪ್ರಾಣಿಗಳ ಜೀವ ವೈವಿಧ್ಯತೆಗೆ ತೊಂದರೆಯಾಗಿ ಮಾನವ-ಪ್ರಾಣಿ ಸಂಘರ್ಷ ಸಂಭವಿಸುತ್ತಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರು ಕಂದಾಯ ಮತ್ತು ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ರೈತರ ಅಭಿಪ್ರಾಯ ಪಡೆದು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ, ಅಕ್ರಮ ಹಾಗೂ ಸಕ್ರಮದ ಬಗ್ಗೆ ವರದಿಯನ್ನು ತಯಾರಿಸಬೇಕು. ಈ ಭಾಗದ ರೈತರು ಮತ್ತು ಕಾಡಂಚಿನ ಪ್ರದೇಶದ ರಕ್ಷಣೆಗೆ ಮುಂದಾಗಬೇಕು. ಯಾವ್ಯಾವ ಸಚಿವರು, ಶಾಸಕರ ಅವಧಿಯಲ್ಲಿ ಎಷ್ಟೆಷ್ಟು ಅಕ್ರಮಗಳಾಗಿವೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ನಿಜವಾದ ರೆಸಾರ್ಟ್ ಮಾಲೀಕರು ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ಬಂಡವಾಳ ಶಾಹಿಗಳು, ಶ್ರೀಮಂತರ ಮೋಜು ಮಸ್ತಿಗೆ ಅವಕಾಶ ನೀಡುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಕಾಡಿನ ಒಳಗಡೆ ಇರುವ ದೇವಸ್ಥಾನಗಳಿಗೆ ಪೂಜೆಗೆ ಅವಕಾಶ ನೀಡುತ್ತಿಲ್ಲ. ಆದರೆ, ರಾಜಕಾರಣಿಗಳು ಹೆಲಿಕಾಪ್ಟರ್, ಕಾರುಗಳ ಬಳಕೆಗೆ ಅನುಮತಿ ನೀಡುವುದು ಎಷ್ಟು ಸರಿ? ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗಿರುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ರಾಜ್ಯ ಸಂಚಾಲಕ  ಡಾ.ಅನುಮಯ್ಯ, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ಉಪಾಧ್ಯಕ್ಷ ದೇವನೂರು ನಾಗೇಂದ್ರ, ಮಹೇಂದ್ರ ಮುದ್ದಳ್ಳಿ, ಮಧುಸೂದನ್,   ಚಿದಂಬರ.ಪಿ, ಮರಳಿ ಶಿವಣ್ಣ, ಅಂಡುವಿನಹಳ್ಳಿ ಮಹೇಶ್, ದೇವಿರಮ್ಮನಹಳ್ಳಿ ಸಿದ್ದಬಸಪ್ಪ, ಪ್ರಭುಸ್ವಾಮಿ, ಪುಟ್ಟಸ್ವಾಮಿ, ಗುರುವಿನಪುರ ಚಂದ್ರ ಮೋಹನ್, ರಾಮಣ್ಣ, ಬಸವರಾಜು, ನಾಗರಾಜಪ್ಪ, ಕೆಂಪ ನವೀನ್, ಮುಕಡಹಳ್ಳಿ ರಾಜು, ಕಿಲಿಪುರ ಶ್ರೀಕಂಠ, ಮರಿಯಾಲ ಮಾದಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want