ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 62 ದಾನಿಗಳಿಂದ ರಕ್ತದಾನ

ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆ, ಸರಗೂರು; ಕೆ.ಆರ್. ಆಸ್ಪತ್ರೆ, ಮೈಸೂರು ರಕ್ತನಿಧಿ ಕೇಂದ್ರ; ಸರಗೂರಿನ ವರ್ತಕರ ಮಂಡಳಿ; ಜೈನ್ ಮಿಲನ್; ಲಯನ್ಸ್ ಕ್ಲಬ್; ರಾಜಸ್ಥಾನ್ ಸಂಘ ಹಾಗೂ ಸ್ಥಳೀಯ ಸಂಘ–ಸಂಸ್ಥೆಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ವಿವೇಕಾನಂದ ಸ್ಮಾರಕ ಆಸ್ಪತ್ರೆ ಆವರಣದಲ್ಲಿ ಯಶಸ್ವಿಯಾಗಿ ನಡೆದಿದ್ದು, ಸುಮಾರು 62 ಮಂದಿ ರಕ್ತದಾನ ಮಾಡಿದರು.

ರಕ್ತದಾನ ಶಿಬಿರದಲ್ಲಿ ಕೆ.ಆರ್. ಆಸ್ಪತ್ರೆ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಕುಸುಮ ಅವರು ಮಾತನಾಡಿ, ವಿವೇಕಾನಂದ ಸ್ಮಾರಕ ಆಸ್ಪತ್ರೆಯು ಕೇವಲ ಸರಗೂರು ಮತ್ತು ಹೆಚ್.ಡಿ. ಕೋಟೆ ತಾಲ್ಲೂಕುಗಳಿಗೆ ಮಾತ್ರ ಸೀಮಿತವಾಗದೆ, ಇತರೆ ತಾಲ್ಲೂಕುಗಳು ಹಾಗೂ ಜಿಲ್ಲಾದ್ಯಂತವೂ ಗುಣಮಟ್ಟದ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರಲ್ಲದೆ, ವಿವಿಧ ಸಂಘ–ಸಂಸ್ಥೆಗಳು ಒಟ್ಟಾಗಿ ಕಾರ್ಯಕ್ರಮ ಆಯೋಜಿಸುವುದರಿಂದ ಶಿಬಿರಕ್ಕೆ ಇನ್ನಷ್ಟು ಬಲ ಸಿಗುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಾಗರಾಜು ಅವರು, ಸಮಾಜಮುಖಿ ಕಾರ್ಯಕ್ರಮಗಳಿಗೆ ವಿವೇಕಾನಂದ ಸ್ಮಾರಕ ಆಸ್ಪತ್ರೆಯೊಂದಿಗೆ ಕೈಜೋಡಿಸಿ ಮುಂದುವರಿದು ಶಿಬಿರಗಳನ್ನು ಆಯೋಜಿಸಲು ಲಯನ್ಸ್ ಕ್ಲಬ್ ಸದಾ ಸಿದ್ಧವಿದೆ ಎಂದು ತಿಳಿಸಿ, ರಕ್ತದಾನ ಮಾಡಿದ ಎಲ್ಲ ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಆಸ್ಪತ್ರೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಶ್ರಾಫ್ ಅವರು ಮಾತನಾಡಿ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. ಒಬ್ಬ ದಾನಿಯ ರಕ್ತದಿಂದ ಮೂರು ಜನರ ಜೀವ ಉಳಿಯಬಹುದು. ರಕ್ತದಾನ ಮಾಡಿದ 24 ಗಂಟೆಗಳೊಳಗೆ ದೇಹದಲ್ಲಿ ರಕ್ತ ಪುನರುತ್ಪಾದನೆಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ಕ್ಲಿನಿಕಲ್ ಫೆಥಾಲಜಿಸ್ಟ್ ಡಾ. ಗಣೇಶ್ ಅವರು ಮಾತನಾಡಿ, ರಕ್ತದಾನ ಶಿಬಿರಕ್ಕೆ ಸ್ಥಳೀಯ ಸಂಘ–ಸಂಸ್ಥೆಗಳು ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದರು. ಪ್ರತಿಯೊಬ್ಬ ರಕ್ತದಾನಿ ತನ್ನೊಂದಿಗೆ ಮತ್ತೊಬ್ಬ ದಾನಿಯನ್ನು ಶಿಬಿರಕ್ಕೆ ಕರೆತರಬೇಕು. ಯುವಕರ ಭಾಗವಹಿಸುವಿಕೆ ಹೆಚ್ಚಾದಾಗ ಮಾತ್ರ ರಕ್ತದ ಕೊರತೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಈ ರಕ್ತದಾನ ಶಿಬಿರದಲ್ಲಿ ಒಟ್ಟು 62 ದಾನಿಗಳು ರಕ್ತದಾನ ಮಾಡಿ ಮಾನವೀಯತೆಯನ್ನು ಮೆರೆದರು. ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ಆಸ್ಪತ್ರೆ ಆಡಳಿತ ಮಂಡಳಿಯ ವತಿಯಿಂದ ಧನ್ಯವಾದಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕರಾದ ಸಂಧ್ಯಾ ಬಿ.ಜಿ, ವೆಂಕಟಸ್ವಾಮಿ ಕೆ, ಬಂಗಾರಶೆಟ್ಟಿ, ರಾಜೇಶ್, ಸದಾಶಿವ, ಶ್ರೀಧರ್, ನಿಂಗರಾಜು, ಸತೀಶ್, ದೀಪು, ಚನ್ನಪ್ಪ, ಸುರೇಶ್, ಸಿದ್ದರಾಜು ಬಿ.ಕೆ, ರವಿಕುಮಾರ್, ಶ್ರೀಕಂಠ, ನಂದೀಸ್, ಜಯಕುಮಾರ್, ಇರಾಜು, ಗೋಪಾಲಕೃಷ್ಣ, ಪುಟ್ಟಮ್ಮ, ಸುಧಾರಾಣಿ, ರಕ್ತನಿಧಿ ಕೇಂದ್ರದ ಸಿಬ್ಬಂದಿಗಳಾದ ರವಿಶಂಕರ್ ಸೇರಿದಂತೆ ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.








