ಕೆ.ಆರ್.ನಗರ(ಜಿಟೆಕ್ ಶಂಕರ್): ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಇತಿಹಾಸ ಪ್ರಸಿದ್ದ ಶ್ರೀರಾಮ ದೇವರ ಬ್ರಹ್ಮ ರಥೋತ್ಸವ ಶುಕ್ರವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ದೇವಾಲಯಲ್ಲಿ ಬೆಳಿಗ್ಗೆಯಿಂದಲೆ ಸೀತಾ ಸಮೇತ ಶ್ರೀರಾಮ ದೇವರಿಗೆ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಮಧ್ಯಾಹ್ನ 12ಗಂಟೆಗೆ ಉತ್ಸವ ಮೂರ್ತಿಗಳನ್ನು ದೇವಾಲಯದ ಪ್ರಾಂಗಣದಿಂದ ರಥದ ಬಳಿಗೆ ಮಂಗಳ ವಾಧ್ಯ ಸಮೇತ ಮೆರವಣಿಗೆಯ ಮೂಲಕ ಹೊತ್ತು ತಂದು ಪ್ರತಿಷ್ಠಾಪನೆ ಮಾಡಲಾಯಿತು. ಮೈಸೂರು ಆದಿ ಚುಂಚನಗಿರಿ ಶಾಖಾ ಮಠದ ಸೋಮನಾಥ ಶ್ರೀಗಳು, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಬೆಟ್ಟದಪುರ ಸಲಿಲಾಖ್ಯ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಕರ್ಪೂರವಳ್ಳಿ ಜಂಗಮ ಮಠದ ಅಭಿನವ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ತಹಸೀಲ್ದಾರ್ ರುಕಿಯಾಬೇಗಂ ಮತ್ತಿತರರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಆ ನಂತರ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಜನರ ಜಯಘೋಷದ ನಡುವೆ ರಥವನ್ನು ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಮಾಡಿಸಲಾಯಿತು, ಈ ಸಂದರ್ಭದಲ್ಲಿ ಬಹಳ ಭಕ್ತಿ ಭಾವದಿಂದ ರಥವನ್ನು ಎಳೆದ ಭಕ್ತರು ದೇವರಿಗೆ ಹಣ್ಣು ಧವನ ಸಮರ್ಪಿಸಿದರು. ಜಿಲ್ಲೆಯಿಂದಲ್ಲದೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡಲ್ಲದೆ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಹರಕೆ ತೀರಿಸಿದರು.
ಕಳೆದ ಸಾಲಿಗಿಂತ ಈ ಬಾರಿ ಹೆಚ್ಚು ಜನರು ಜಾತ್ರೆಗೆ ಆಗಮಿಸಿದ್ದು ವಿಶೇಷವಾಗಿತ್ತಲ್ಲದೆ ಸಿಹಿ ತಿಂಡಿ ಮತ್ತು ಆಟಿಕೆಯ ಅಂಗಡಿಗಳು ಎಲ್ಲರ ಮನ ಸೆಳೆಯುವುದರ ಜತೆಗೆ ಭರ್ಜರಿ ವ್ಯಾಪಾರವೂ ನಡೆಯಿತು. ಜಾತೆಗೆ ಆಗಮಿಸಿದ್ದ ಭಕ್ತರಿಗೆ ಶಾಸಕ ಡಿ.ರವಿಶಂಕರ್ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದರಲ್ಲದೆ ಜಿಲ್ಲಾ ಯುವ ಜೆಡಿಎಸ್ ಮುಖಂಡ ಹೆಚ್.ಕೆ.ಮದುಚಂದ್ರ ದೇವಾಲಯದ ಮುಂದೆ ಪಾನಕ ಮಜ್ಜಿಗೆ ವ್ಯವಸ್ಥೆ ಮಾಡಿದ್ದರು.

ರಥೋತ್ಸವ ಯಶಸ್ವಿಯಾಗಿ ನಡೆಯುವುದು ಮತ್ತು ಯಾವುದೇ ಅಹಿತರಕ ಘಟನೆ ನಡೆಯುವುದನ್ನ ತಪ್ಪಿಸಲು ಇದೇ ಪ್ರಥಬಾರಿಗೆ ಚುಂಚನನಟ್ಟೆ ಮತ್ತು ಹೊಸೂರು ಗ್ರಾಮದಲ್ಲಿರುವ ಬಾರ್ ಗಳನ್ನು ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರೆಗೆ ಇದೇ ಪ್ರಥಮ ಬಾರಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಬಂದ್ ಮಾಡಿಸಿದ್ದರು
ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಧನಹಳ್ಳಿ ಹೇಮಂತ್, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಸಾಲಿಗ್ರಾಮ ತಹಸೀಲ್ದಾರ್ ರುಕಿಯಾ ಬೇಗಂ, ತಾ.ಪಂ. ಇಓ ರವಿಕುಮಾರ್, ಕುಪ್ಪೆ ಗ್ರಾ.ಪಂ.ಪಿಡಿಒ ಯೋಗಾನಂದ್ ಸೇರಿದಂತೆ ಸಾವಿರಾರು ಮಂದಿ ಹಾಜರಿದ್ದರು.








