ArticlesLatest

ಇತಿಹಾಸದ ಕಥೆ ಹೇಳುವ ಕೊಡಗಿನ ಸಂತ ಅನ್ನಮ್ಮ ಚರ್ಚ್…. ಇದರ ನಿರ್ಮಾಣದ ಕಥೆಯೇ ರೋಚಕ!

ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ವೀರಾಜಪೇಟೆ ಬಂದಿದ್ದೇ ಆದರೆ ಅವರನ್ನು ಪಟ್ಟಣದ ಹೃದಯಭಾಗದಲ್ಲಿ ಗಗನಚುಂಬಿಯಾಗಿ ಕಂಗೊಳಿಸುವ ಸಂತ ಅನ್ನಮ್ಮ ಚರ್ಚ್ ತನ್ನತ್ತ ಸೆಳೆಯದಿರಲಾರದು.. ಈ ಚರ್ಚ್ ನ್ನು ನೋಡಿದ ತಕ್ಷಣವೇ ಇದು ಇವತ್ತು ನಿನ್ನೆಯದಲ್ಲ ಎಂಬುದು ಗೊತ್ತಾಗಿ ಬಿಡುತ್ತದೆ. ಏಕೆಂದರೆ ಅದರ ನಿರ್ಮಾಣದ ಶೈಲಿ ಮತ್ತು ನೋಟ ಶತಮಾನಗಳನ್ನು ಪೂರೈಸಿದೆ ಎಂಬುದನ್ನು ಮನದಟ್ಟು ಮಾಡುತ್ತದೆ. ಜತೆಗೆ ಇತಿಹಾಸವನ್ನು ಮೆಲುಕು ಹಾಕಬೇಕೆನ್ನುವ ಕುತೂಹಲವನ್ನು ಕೆರಳಿಸುತ್ತದೆ.

ಕೊಡಗಿನಲ್ಲಿ ನಿರ್ಮಾಣಗೊಂಡಿರುವ ಸಂತ ಅನ್ನಮ್ಮ ಚರ್ಚ್ ನಿಜಕ್ಕೂ ಸೋಜಿಗವನ್ನುಂಟು ಮಾಡುವ ಚರ್ಚ್ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ ಭಾವೈಕ್ಯತೆಯ ಸಂಗಮವೂ ಹೌದು.  ಇದೆಲ್ಲದಕ್ಕಿಂತ ಹೆಚ್ಚಾಗಿ ಇದನ್ನು ನಿರ್ಮಿಸಿದ್ದೇ ಹಿಂದೂ ರಾಜ ಎನ್ನುವುದು ಇತಿಹಾಸದ ಸತ್ಯವಾಗಿದೆ. ಈ ಚರ್ಚ್ ನಿರ್ಮಾಣಗೊಂಡ ಸ್ಥಳವೂ ನಿಸರ್ಗ ಸುಂದರತೆಯನ್ನು ಹೊಂದಿದ್ದು, ಬೆಟ್ಟಶ್ರೇಣಿಗಳ ನಡುವಿನ ಜನವಸತಿ ಪ್ರದೇಶ ಮೆರಗು ತಂದಿದೆ. ಚರ್ಚ್ ನ ಇತಿಹಾಸವನ್ನು ಮೆಲುಕು ಹಾಕಿದರೆ ಇದು ನಿರ್ಮಾಣವಾಗಿ ಕಳೆದ ನವೆಂಬರ್ 10ಕ್ಕೆ 233 ವರ್ಷಗಳಾಗಿವೆ.

ಚರ್ಚ್ ನಿರ್ಮಾಣದ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಇದರ ಹಿಂದಿನ ರೋಚಕ ಕಥೆ  ಬೆಳಕಿಗೆ ಬರುತ್ತದೆ. ಅದೇನೆಂದರೆ  ಮೂರನೇ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಕೊಡಗಿಗೆ ದಿಕ್ಕುಪಾಲಾಗಿ ತಪ್ಪಿಸಿಕೊಂಡು ಬಂದಂತಹ ಸುಮಾರು 700 ಕ್ರೈಸ್ತರಿಗೆ ದೊಡ್ಡವೀರರಾಜೇಂದ್ರನು ಆಶ್ರಯ ನೀಡಿ, ಹೊಸದಾಗಿ ಸ್ಥಾಪಿಸಲ್ಪಟ್ಟಂತಹ ವೀರರಾಜೇಂದ್ರಪೇಟೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡಿದನು. ಅಲ್ಲದೆ ಅವರ ಮತ ಧರ್ಮವನ್ನು ಪಾಲಿಸಲು ಅನುಕೂಲವಾಗುವಂತೆ ಗೋವಾದಿಂದ ಜುವಾಂವ್ ಡಿ’ಕೋಸ್ಟ ಎಂಬ ಧರ್ಮಗುರುವನ್ನು ಕರೆಯಿಸಿ 1792ರ ನವೆಂಬರ್ 10ರಂದು ಕ್ರೈಸ್ತರಿಗಾಗಿಯೇ ಒಂದು ಇಗರ್ಜಿ(ಚರ್ಚ್) ಕಟ್ಟಿಸಿದನು.  ದೊಡ್ಡವೀರರಾಜೇಂದ್ರನ ಕಾಲದಲ್ಲಿ ನಿರ್ಮಿತವಾದ ಈ ಇಗರ್ಜಿಯೇ ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ಆಗಿದೆ.

ಸಂತ ಅನ್ನಮ್ಮ ಚರ್ಚ್‌ಗೆ ಭೇಟಿ ನೀಡಿದ್ದೇ  ಆದರೆ ನಮಗೆ ಚರ್ಚ್‌ನ ಕಲಾವೈಭವ ಕಣ್ಣಿಗೆ ಕಟ್ಟುತ್ತದೆ. ಚರ್ಚ್‌ನ ಸಮಿಪದಲ್ಲಿ ಲೂರ್ದ್ ಮಾತೆಯ ಸ್ಮರಣಾರ್ಥವಾಗಿ ನಿರ್ಮಿಸಲಾದ ಫ್ರಾನ್ಸ್ ನ “ಲೂರ್ದ್” ಮಾದರಿಯ ಸುಂದರ ಕೃತ್ರಿಮ ಗವಿಯನ್ನು ಕಾಣಬಹುದು. ದೇವಾಲಯವು ಪ್ರಾಚೀನ-ಅವಾರ್ಚೀನ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಭವ್ಯ ಗಾಥಿಕ್ ಶೈಲಿಯಲ್ಲಿ ಶೃಂಗ ತ್ರಿಕೋನ ಬಾಗು ಬಾಹುಗಳ ಮುಖಗೋಪುರವಿದೆ. ದೀರ್ಘ ವೃತ್ತಾಕಾರದ ಪ್ರವೇಶ ದ್ವಾರಗಳಿವೆ. ಗೋಪುರವು ಸುಮಾರು 150ಅಡಿಗಳಷ್ಟು ಎತ್ತರವಿದ್ದು, ಇದರ ಮೇಲೆ ಪಂಚಲೋಹದ 6 ಅಡಿ ಎತ್ತರದ ಶಿಲುಬೆಯಿದ್ದು, ದೂರದಿಂದ ವೀಕ್ಷಿಸಿದಾಗ ವಿಶಾಲ ಅಂಗಳದ ನಡುವೆ ಇತಿಹಾಸದ ಕಥೆಯನ್ನು ಹೇಳಲು ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ.

ಸಾಲ್ವದೋರ್‌ಪಿಂಟೋ ಹಾಗೂ ದೋನಾಥ್ ಲೋಬೋರವರ ಜ್ಞಾಪಕಾರ್ಥವಾಗಿ ಪ್ಯಾರೀಸ್‌ನಿಂದ ತರಿಸಲ್ಪಟ್ಟ ಇಂಪಾದ ನಿನಾದವನ್ನು ಹೊರಹೊಮ್ಮಿಸುವ ಬೃಹದಾಕಾರದ ಎರಡು ಗಂಟೆಗಳನ್ನು ಸುಮಾರು ನೂರು ಅಡಿಗಳಷ್ಟು ಎತ್ತರದಲ್ಲಿ ಅಳವಡಿಸಲಾಗಿದೆ. ದೇವಾಲಯಕ್ಕೆ ಪೂರ್ವ ಹಾಗೂ ಉತ್ತರಮುಖವಾಗಿ ಪ್ರವೇಶದ್ವಾರಗಳಿದ್ದು, ದ್ವಾರಗಳನ್ನು ದಾಟಿ ಒಳ ಪ್ರವೇಶಿಸಿದರೆ, ಭವ್ಯ ಸಭಾಂಗಣ ಕಂಡು ಬರುತ್ತದೆ. ಪಶ್ಚಿಮ ಭಿತ್ತಿ(ಗೋಡೆ)ಯ ಬಳಿ ಬಲಿಪೀಠದ ಸುಂದರ ವಿನ್ಯಾಸವು ನಮ್ಮನ್ನು ಆಕರ್ಷಿಸುತ್ತದೆ. ಚರ್ಚ್‌ನ ಸ್ಥಾಪನೆಗೆ ಕಾರಣನಾದ ದೊರೆ ವೀರರಾಜೇಂದ್ರ ಒಡೆಯ ನೀಡಿರುವ ಎರಡು ದೀಪಕಂಬಗಳು (ಕುತ್ತುಂಬೊಳಿಚ್ಚ) ’ವಿ’ ಸಂಕೇತದಿಂದ ಕೂಡಿದ್ದು, ಬಲಿಪೀಠದ ಮೇಜಿನ ಮೇಲಿಡಲಾಗಿದೆ.

ಮೇಜಿನ ಹಿಂಭಾಗದಲ್ಲಿ ಪರಮ ಪ್ರಸಾದದ ಪೆಟ್ಟಿಗೆಯಿದ್ದು,  ಪೆಟ್ಟಿಗೆಯ ಮೇಲೆ ಏಸುವನ್ನು ಶಿಲುಬೆಗೇರಿಸಿದ ಶಿಲ್ಪ ಕಂಡು ಬರುತ್ತದೆ.  ಚರ್ಚ್‌ನ ಗೋಡೆಯ ಕೇಂದ್ರಭಾಗದಲ್ಲಿ ಜಗತ್ತಿನ ಪ್ರಸಿದ್ಧ ಕಲಾವಿದ ಮೈಕಲ್ ಎಂಜಿಲೋ ರೂಪಿಸಿದಂತಹ ’ಪಿಯಾತ್’ ಶಿಲ್ಪದ ಮಾದರಿಯ ’ಪಿಯಾತ್’ ಸ್ಥಿತಿಯ ಅಂದರೆ ತಾಯಿ ಮೇರಿಯ ತೊಡೆ ಮೇಲೆ ಏಸುವಿನ ಮೃತ ಶರೀರ ಅಂಗಾತ ಮಲಗಿದುದನ್ನು ಕಾಣಬಹುದು. ಮೇರಿ ತಾಯಿಯ ನಾಭಿ, ಏಸುವಿನ ನಾಭಿಗೆ ಸನಿಹವಿರುವಂತಹ ಭಾವ, ತಾಯಿಯ ಹೊಕ್ಕಳ ಬಳ್ಳಿಯ ಅಜನ್ಮ ಸಂಬಂಧದ ಸಂಕೇತದಂತೆ ತೋರುವ ಕರುಣಾರಸದ ಚಿತ್ರ ಇದಾಗಿದೆ.

ಇದನ್ನೂ ಓದಿ: ನೆನಪಾಗಿ ಕಾಡುವ ಮಡಿಕೇರಿಯ ನೆಹರು ಮಂಟಪ… ಇದರ  ವೈಭವ ಹೇಗಿತ್ತು ಗೊತ್ತಾ?

‘ಪಿಯಾತ್’ ಗೂಡಿನ ಎಡಕ್ಕೆ ಇಡೀ ಜಗತ್ತಿಗೆ ಶಾಂತಿಯ ಮುಖ ತೋರುವ  ಪುನರುತ್ಥಾನದ ಏಸುವಿನ ಭಂಗಿ, ಅಲ್ಲದೆ ಏಸುವಿನ ಕಷ್ಟ ಕೋಟಲೆಗಳನ್ನು ಕಣ್ಣಾರೆ ಕಂಡ ಸಾಕ್ಷಿಯಾದ  ಸಂತ ಸಭಾಸ್ಟಿಯನ್ನನ ಸ್ಮಾರಕ ಶಿಲ್ಪ ಕಂಡು ಬರುತ್ತದೆ.  ಏಸುವಿನ ತೆರೆದ ಹೃದಯ ಸ್ಥಾನ ಶಿಲ್ಪದ ಬಲಬದಿಯಲ್ಲಿದ್ದು, ಪಿಯಾತ್‌ಗೂಡಿನ ಬುಡದಲ್ಲಿ  ಇದು ನಜರೇತಿನ ಯೇಸು ಜ್ಯೂದರ ಅರಸ ಎಂಬ ಲ್ಯಾಟಿನ್ ಉಕ್ತಿಯಿದೆ. ಆಸನಗಳಿರುವ ಅಂಕಣವು ಬಲಿಪೀಠದ ಬಲಬದಿಗೆ ಇದ್ದು, ಬಾಲಕ ಏಸುವಿನ ಶೋಭಾಯ ಮುಖದ ಶಿಲ್ಪವು ಎಡ ಬದಿಗಿದೆ.

ಇನ್ನು ಚರ್ಚ್ ಬಗ್ಗೆ ಹೇಳ ಬೇಕೆಂದರೆ ಇದರ ಸಭಾಂಗಣದ ವಿನ್ಯಾಸ, ಬಲಿಪೀಠ, ಗೂಡು, ಮೂಲ ಅಂಕಣ, ಸಭಾ ಸ್ತಂಭಗಳು, ಗುರು ಸಮಾಧಿ ನೆಲೆ ಪರಿವರ ಶಿಲ್ಪ, ಪ್ರದಕ್ಷಿಣೆ ಸಭಾಕಾರ, ಮುಖಗೋಪುರಗಳನ್ನು ಎರಡು ಬಾರಿ ಪುನರ್ರಚಿಸಲಾಗಿದೆ. ಈ ಗುಡಿಯು ಹಿಂದೂ ದೇವಾಲಯದ ಗರ್ಭಾಂಕಣ, ನವರಂಗ ಮುಖಮಂಟಪ, ಗದ್ದುಗೆ ನೆಲೆಗೋಪುರಗಳನ್ನು ಹೋಲುವಂತಿದೆ. ಪ್ರತಿ ವರ್ಷವೂ ಕ್ರಿಸ್‌ಮಸ್ ಸಹಬ್ಬವನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಉಳಿದಂತೆ ಫೆಬ್ರವರಿ ತಿಂಗಳಲ್ಲಿ ಸಂತ ಅನ್ನಮ್ಮ ಕ್ಯಾಂಡಲ್ ಫೀಸ್ಟ್ ಹಬ್ಬವನ್ನು ನಡೆಸುತ್ತಾರೆ. ಈ ಸಂದರ್ಭ ಎಲ್ಲಾ ಜನಾಂಗದವರು ಇಲ್ಲಿ ನೆರೆಯುತ್ತಾರೆ. ಕೊಡಗಿನ ಹಬ್ಬಗಳಾದ ಕೈಲ್‌ಪೊಳ್ದ್, ಹುತ್ತರಿ ಹಬ್ಬದ ಆಚರಣೆಯೂ ಇಲ್ಲಿ ನಡೆಯುವುದು ವಿಶೇಷವಾಗಿದೆ.

 

B M Lavakumar

admin
the authoradmin

Leave a Reply

Translate to any language you want