Mysore

ಸರಗೂರಲ್ಲಿ ಪಟ್ಟಣ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಅನಿಲ್ ಚಿಕ್ಕಮಾದು ಸೂಚನೆ

oppo_0

ಸರಗೂರು: ಶಿಥಿಲಗೊಂಡಿರುವ ಪಟ್ಟಣ ಪಂಚಾಯಿತಿ ಹಳೆಯ ಕಟ್ಟಡವನ್ನು ಶೀಘ್ರ‍್ರದಲ್ಲೆ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕರು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನೂತನ ಅಧ್ಯಕ್ಷೆ ಚೈತ್ರಾಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ ಪಂಚಾಯಿತಿ ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡವನ್ನು ನಿರ್ಮಿಸಬೇಕು. ಇದಕ್ಕಾಗಿ ೫೦ ಲಕ್ಷ ರೂ. ಅನುದಾನ ಇದ್ದು, ಹೆಚ್ಚುವರಿ ಅನುದಾನಕ್ಕಾಗಿ ಸರಕಾರದೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸಿಕೊಡಲಾಗುವುದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಸಿದ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್‌ಕುಮಾರ್, ಪಟ್ಟಣ ಪಂಚಾಯಿತಿ ಕಚೇರಿ ಸ್ಥಳಾಂತರಕ್ಕೆ ಕಟ್ಟಡ ಸಮಸ್ಯೆಯಿದ್ದು, ಕಟ್ಟಡ ಗುರುತಿಸಿದ ಕೂಡಲೇ ಸ್ಥಳಾಂತರಗೊಂಡು ಪಂಚಾಯಿತಿ ಕಚೇರಿ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಗುವುದು. ಹೆಚ್ಚುವರಿಯಾಗಿ ಸರಕಾರಕ್ಕೆ 5 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಜೋರಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡೆತಡೆಯಾಗಿದೆ. ಖಾಲಿ ನಿವೇಶನಗಳಲ್ಲಿ ಆಳೆತ್ತರ ಗಿಡ-ಗಂಟಿಗಳು ಬೆಳೆದು ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಇದಲ್ಲದೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಜಮೀನುಗಳಲ್ಲಿಯೂ ಗಿಡಗಂಟಿಗಳು ಹೇರಳವಾಗಿ ಬೆಳೆದು ನಿಂತಿವೆ ಎಂದು ಸದಸ್ಯ ಚಲುವಕೃಷ್ಣ ಸಭೆಯ ಗಮನ ಸೆಳೆದರು. ಶಾಸಕ ಅನಿಲ್ ಚಿಕ್ಕಮಾದು ಪ್ರತಿಕ್ರಿಯಿಸಿ, ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಬೇಕು. ಗಿಡ-ಗಂಟಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಕಂದಾಯ ಭೂಮಿಗಳಲ್ಲಿಯೂ ಬೆಳೆದಿರುವ ಜಂಗಲ್ ತೆರವಿಗೆ ತಹಸೀಲ್ದಾರ್ ಅವರು ಸೂಚನೆ ನೀಡಬೇಕು. ವಾರದೊಳಗೆ ಜಂಗಲ್ ತೆರವುಗೊಳಿಸಬೇಕು ಎಂದು ಗಡುವು ನೀಡಿದರು.

ಶಾಸಕ ಅನಿಲ್ ಚಿಕ್ಕಮಾದುರವರು ಇಲ್ಲಿನ ಪಟ್ಟಣ ಪಂಚಾಯತಿ ಕಚೇರಿಗೆ ಆಗಮಿಸಿದ್ದ ಮೈಸೂರಿನ ವಸತಿ ನಿಗಮದ ಇಲಾಖೆಯ ಅಧಿಕಾರಿ ನಾಗೇಶ್  ಎಂ.ಪಿ ರವರಿಗೆ ನಿಮ್ಮ ಇಲಾಖೆ ಬಗ್ಗೆ ಮಾಹಿತಿ ನೀಡಿ ಎಂದಾಗ, ಮಾತನಾಡಿ ಪ್ರಧಾನ ಮಂತ್ರಿ ಅವಾಜ್ ಯೋಜನೆ 2.0 ನಗರ ಮತ್ತು ಡಾ. ಬಿ ಆರ್ ಅಂಬೇಡ್ಕರ್ ನಿವಾಜ್ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗುತ್ತದೆ, ಕೇಂದ್ರದ ಅನುದಾನ 1.5 ಲಕ್ಷ, ರಾಜ್ಯದ ಅನುದಾನ ಎಸ್ ಸಿ, ಎಸ್ ಟಿ 2 ಲಕ್ಷ, ಸಾಮಾನ್ಯ 1.20 ಲಕ್ಷ, ಬಿಡುಗಡೆಗೊಳಿಸಲಾಗುತ್ತದೆ. ಸದರಿ ಯೋಜನೆಗಳಿಗೆ ಮಾನ್ಯ ಶಾಸಕರ ಅನುಮೋದನೆ ನೀಡಿದ ನಂತರ ಮಾನ್ಯ ಜಿಲ್ಲಾಧಿಕಾರಿಗಳ ಸಮಿತಿಯಲ್ಲಿ ಅನುಮೋದನೆ ಪಡೆದ ನಂತರ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು ರವರಿಂದ ಕಾರ್ಯ ಆದೇಶ ಪತ್ರ ವಿತರಿಸಲಾಗುವುದು ಎಂದರು.ಈ ಸಂಬಂಧ ಅರ್ಹ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದೆಂದು ತಿಳಿಸಿದರು.

ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಇದ್ದು, ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು. ಅಲ್ಲಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂಬ ನಾಮಫಲಕ ಅಳವಡಿಸಲು ಕ್ರಮವಹಿಸಬೇಕು. ವಾಹನಗಳು ಸೂಕ್ತ ಸ್ಥಳ ನಿಲ್ಲಿಸುವಂತೆ ಪೊಲೀಸರು ಸೂಚನೆ ನಿಡಬೇಕು ಎಂದು ತಾಕೀತು ನೀಡಿದರು. ಬಸ್ ನಿಲ್ದಾಣದಲ್ಲಿ ಶುಚಿತ್ವ ಇಲ್ಲದೆ ತುಂಬಾ ಹದಗೆಟ್ಟಿದ್ದು, ಈ ಬಗ್ಗೆ ಸರಗೂರಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಸದಸ್ಯರುಗಳು ಸೇರಿ ಇಲ್ಲಿನ ಶೌಚಾಲಯವನ್ನು ಬಂದ್ ಮಾಡಿಸಿದ್ದರು. ಈ ಸಂಬಂಧ ಸ್ಥಳಕ್ಕೆ ಮೈಸೂರಿನ ಸಂಚಲನಾಧಿಕಾರಿ ಹಾಗೂ ಇಂಜಿನಿಯರ್ ರವರುಗಳು ಸ್ಥಳಕ್ಕೆ ಆಗಮಿಸಿ ಬಸ್ ನಿಲ್ದಾಣ ದ ಸಮಸ್ಯೆಗಳನ್ನು ವೀಕ್ಷಿಸಿ ಈ ಸಂಬಂಧ ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿ,ನಿಲ್ದಾಣದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ನೂತನವಾಗಿ ದೊಡ್ಡದಾಗಿ ಹೊಸ ಇಂಗು ಗುಂಡಿಯನ್ನು ಕೂಡಲೇ ಮಾಡಿಸಲಾಗುವುದು ಎಂದು ತಿಳಿಸಿ ಹೋಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಮನಕ್ಕೆ ತರಲಾಯಿತು.

ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮೈಸೂರಿನ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿಗಳಾದ ಶ್ರೀನಿವಾಸ್ ರವರನ್ನು ದೂರವಾಣಿ ಮುಖಾಂತರ ಮಾತನಾಡಿ ಒಂದು ವಾರದ ಒಳಗಡೆ ಮಾಡದಿದ್ದರೆ, ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್‌ಕುಮಾರ್ ಸಭೆಯ ವರದಿ ಓದಿದರು. ತಹಸೀಲ್ದಾರ್ ಮೋಹನಕುಮಾರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾಸ್ವಾಮಿ, ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಹೇಮಾವತಿ ರಮೇಶ್, ಸಣ್ಣತಾಯಮ್ಮ, ಚಂದ್ರಕಲಾರಾಜಣ್ಣ, ಪಿಎಸ್‌ಐ ಆರ್.ಕಿರಣ್, ಸಾರಿಗೆ ಇಲಾಖೆಯ ಮಹದೇವಣ್ಣ, ಅರಣ್ಯ ಇಲಾಖೆ ಡಿಆರ್‌ಎಫ್‌ಓ ಪ್ರದೀಪ್, ಸಿಬ್ಬಂದಿಗಳಾದ ರಾಮು, ಪಳನಿ, ಶಿವಪ್ರಸಾದ್, ಅನಿತಾಕುಮಾರಿ, ಅರ್ಜುನ,ರಜಿನಿ, ಸ್ವಾಮಿ, ನಾಗೇಶ್, ಗಿರೀಶ್, ಶಾಸಕರ ಆಪ್ತ ಸಹಾಯಕ ಸುದರ್ಶನ್, ಸಿದ್ದರಾಜು ಸೇರಿದಂತೆ ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

admin
the authoradmin

Leave a Reply

Translate to any language you want