Mysore

ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಸ್ವಾವಲಂಬಿಯಾಗಲು, ತಹಸೀಲ್ದಾರ್ ಮೋಹನಕುಮಾರಿ ಕರೆ

ಸರಗೂರು: ಸರಗೂರು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಮೋಹನಕುಮಾರಿ, ರೈತರು ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುವತ್ತ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

ಕೃಷಿ ಇಲಾಖೆ, ಕೃಷಿಕ ಸಮಾಜ ಸರಗೂರು, ಕೃಷಿ ಪರಿಕರ ಮಾರಾಟಗಾರರ ಸಂಘ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಬೆನ್ನೆಲುಬಾದ ರೈತರ ಶ್ರೇಯೋಭಿವೃದ್ಧಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಅವುಗಳ ಬಗ್ಗೆ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ರೈತರ ಏಳಿಗೆಗಾಗಿ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಳ್ಳಬೇಕೆಂದೂ ಸಲಹೆ ನೀಡಿದರು.

ಸಾಂಬಾರ ಪದಾರ್ಥಗಳ ಮಂಡಳಿಯ ವಿಜ್ಞಾನಿ ಹರ್ಷ ಮಾತನಾಡಿ, ಸಾಂಬಾರ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಕಾಳು ಮೆಣಸು, ಏಲಕ್ಕಿ, ಚಕ್ಕೆ ಸೇರಿದಂತೆ ಅಡಿಕೆ ಬೆಳೆಗಳಂಥ ತೋಟಗಾರಿಕೆ ಬೆಳೆಗಳಿಗೆ ರೈತರು ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಉತ್ತಮ ಬೆಲೆ ಸಿಕ್ಕಿ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ. ಪ್ರಸಾದ್ ಮಾತನಾಡಿ, ರೈತರ ಅನುಕೂಲಕ್ಕಾಗಿ ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅವುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ರೈತರಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದ್ದು, ರೈತರು ಸಮಗ್ರ ಕೃಷಿ ಹಾಗೂ ಬದಲಿ ಕೃಷಿಗೆ ಆದ್ಯತೆ ನೀಡಬೇಕು. ಒಂದೇ ಬೆಳೆಗೆ ಸೀಮಿತವಾಗದೆ ವಿವಿಧ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಸಿದ್ದಪ್ಪಸ್ವಾಮಿ, ಸರಗೂರಿನ ಕೃಷಿ ಅಧಿಕಾರಿ ಶಿವಕುಮಾರ್, ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ರಾಕೇಶ್, ಕೃಷಿಕ ಸಮಾಜದ ಸರಗೂರು ಅಧ್ಯಕ್ಷ ಶಾಂತವೀರಮೂರ್ತಿ, ಉಪಾಧ್ಯಕ್ಷ ಮಾದೇಗೌಡ, ಸದಸ್ಯರಾದ ಎಂ.ಕೆ. ಹರಿದಾಸ್, ನಾಮಧಾರಿಗೌಡ ಸಂಘದ ಅಧ್ಯಕ್ಷ ಎಚ್.ಡಿ. ರತ್ನಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿಪುಟ್ಟಯ್ಯ, ಸಿದ್ದಪ್ಪ, ಹಂಚೀಪುರ ಪುಟ್ಟಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ವೇಳೆ ನಲ್ಲೂರುಕೆರೆಯ ವೆಂಕಟೇಶ್ವರರಾವ್, ಚಂಗೌಡನಹಳ್ಳಿ ಈಶ್ವರ್, ಸಾಗರೆ ಮಲ್ಲಿಗಮ್ಮ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ವೆಂಕಟೇಶ್ವರರಾವ್ ಅವರು ಕೃಷಿಕ ಸಮಾಜ ಸರಗೂರು ಶಾಖೆಯ ಕಟ್ಟಡ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ಒಂದು ಗುಂಟೆ ನಿವೇಶನವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು.

admin
the authoradmin

Leave a Reply

Translate to any language you want