ಗ್ರಾಮೀಣ ಬದುಕಿಗೆ ಶರಣರ ವಿಚಾರವೇ ಸಾರ್ಥಕ ದಾರಿ… ವಚನ ಕುಮಾರಸ್ವಾಮಿ ಅಭಿಮತ
ಪ್ರತಿಯೊಬ್ಬರಿಗೂ ದೇಹ, ಸಂಪತ್ತು, ಬಂಧುಬಳಗ,ಆತ್ಮ ಎಂಬ ನಾಲ್ಕು ‘ಪತ್ನಿಯರು’

ಮಳವಳ್ಳಿ : ಗ್ರಾಮೀಣ ಬದುಕಿಗೆ ಶರಣರ ವಿಚಾರವೇ ಸಾರ್ಥಕ ದಾರಿ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಮಳವಳ್ಳಿ ಬೆಳದಿಂಗಳ ಶರಣರ ಚಿಂತನ ಮಂಥನ ಸಮಿತಿಯ ವತಿಯಿಂದ ಬಿ.ಜಿ.ಪುರ ಹೋಬಳಿಯ ಬಾಚನಹಳ್ಳಿ ಗ್ರಾಮದಲ್ಲಿ 137ನೇ ಶರಣರ ಚಿಂತನ ಮಂಥನ ಕಾರ್ಯಕ್ರಮದಲ್ಲಿ “ಗ್ರಾಮೀಣ ಬದುಕಿಗೆ ಶರಣರ ವಿಚಾರದ ದಾರಿ ಎಂಬ ವಿಷಯ ಕುರಿತು ಅರ್ಥಪೂರ್ಣ ಉಪನ್ಯಾಸ ನೀಡಿದ ಅವರು ವಚನ ಸಾಹಿತ್ಯದ ತತ್ತ್ವಗಳನ್ನು ಗ್ರಾಮೀಣ ಜನರಿಗೆ ಸುಲಭವಾಗಿ ತಲುಪುವ ಶೈಲಿಯಲ್ಲಿ, ದೃಷ್ಟಾಂತಗಳ ಮೂಲಕ ವಿವರಿಸಿದರು.

ಸ್ವರ್ಗ–ನರಕಗಳು ಮರಣಾನಂತರ ಅಲ್ಲ, ನಮ್ಮ ಜೀವಿತಾವಧಿಯಲ್ಲೇ ಅನುಭವಕ್ಕೆ ಬರುತ್ತವೆ. ಒಳ್ಳೆಯ ಕ್ಷಣಗಳನ್ನು ಕಾಣುವ, ಒಳ್ಳೆಯ ಮಾತುಗಳನ್ನು ಕೇಳುವ, ಮಾನವೀಯತೆಯನ್ನು ಅನುಭವಿಸುವ ಸ್ಥಳಗಳೇ ಸ್ವರ್ಗ ಮತ್ತು ದೇವಲೋಕ ಮಾನವನಿರ್ಮಿತ ಜೀವನದ ಅಂತರಂಗದ ಅರ್ಥವನ್ನು ವಿವರಿಸಿದ ಅವರು, “ಪ್ರತಿಯೊಬ್ಬರಿಗೂ ದೇಹ, ಸಂಪತ್ತು, ಬಂಧುಬಳಗ ಮತ್ತು ಆತ್ಮ ಎಂಬ ನಾಲ್ಕು ‘ಪತ್ನಿಯರು’ ಇರುತ್ತಾರೆ. ಆದರೆ ನಮ್ಮ ಜೊತೆ ಅಂತಿಮವಾಗಿ ಬರುವುದೇ ಆತ್ಮ. ಆದ್ದರಿಂದ ಆತ್ಮವನ್ನು ಅರಿತು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ವಚನ ಸಾಹಿತ್ಯದ ಅಧ್ಯಯನ ಅತ್ಯವಶ್ಯಕ”.

ಬಸವಣ್ಣನವರು “ತನು ಶುದ್ಧಿಗೆ ಕಾಯಕ, ಮನ ಶುದ್ಧಿಗೆ ಇಷ್ಟಲಿಂಗ, ಭಾವ ಶುದ್ಧಿಗೆ ದಾಸೋಹ ಎಂಬ ಮೂರು ಅಮೂಲ್ಯ ಮಾರ್ಗ ನೀಡಿದ್ದಾರೆ. ಇವುಗಳನ್ನು ಕೇವಲ ಮಾತಿನಲ್ಲಲ್ಲ, ಬದುಕಿನ ಆಚರಣೆಯಾಗಿ ಅಳವಡಿಸಿಕೊಂಡಾಗಲೇ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ’’. ಗ್ರಾಮೀಣ ಬದುಕಿನ ಉದಾಹರಣೆಗಳನ್ನು ನೀಡಿ, ದಿನನಿತ್ಯದ ಜೀವನದೊಂದಿಗೆ ವಚನ ತತ್ತ್ವಗಳನ್ನು ಜೋಡಿಸಿ ಮಾತನಾಡಿದ ಅವರ ಉಪನ್ಯಾಸ ಗ್ರಾಮಸ್ಥರಲ್ಲಿ ಚಿಂತನೆ, ಚೈತನ್ಯ ಮತ್ತು ಆತ್ಮಾವಲೋಕನಕ್ಕೆ ದಾರಿ ಮಾಡಿಕೊಟ್ಟಿತು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಹೊಸಹಳ್ಳಿ ಮಠದ ಶ್ರೀ ಓಂಕಾರಸ್ವಾಮಿಗಳು, ವಚನಸಾಹಿತ್ಯ ಜೀವನದ ನಡಿಗೆಗೆ ದಾರಿ ತೋರಿಸುತ್ತದೆ. ಸತ್ಯ, ಶ್ರಮ, ಸಮಾನತೆ, ದಯೆ ಎಂಬ ವಚನ ಮೌಲ್ಯಗಳನ್ನು ಪ್ರತಿ ದಿನದ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದರು.

ಗ್ರಾಮದ ಮುಖಂಡರುಗಳಾದ ಶೈಲೇಂದ್ರ, ಬಸವರಾಜಪ್ಪ, ಮಾದೇವಸ್ವಾಮಿ ಹಾಗೂ ಚಿಂತನ ಮಂಥನ ಸಮಿತಿಯವರಾದ ಮಲ್ಲೇಶ್, ನಾಗರಾಜಪ್ಪ, ಪರಶಿವಮೂರ್ತಿ, ಮಹದೇವಸ್ವಾಮಿ, ತಾಂಡವಮೂರ್ತಿ, ವಿಷಕಂಠ ಮೂರ್ತಿ, ಮಹದೇವಪ್ಪ ಸುರೇಶ್ ಕನ್ನಳ್ಳಿ ಉಪಸ್ಥಿತರಿದ್ದರು







