FoodLatest

ಮನೆಯಲ್ಲಿ ಮೊಟ್ಟೆಯಿದ್ದರೆ ಏನೆಲ್ಲ ವಿಶೇಷ ತಿನಿಸುಗಳು ಮಾಡಬಹುದು..? ನೀವೊಮ್ಮೆ ಮಾಡಿ ರುಚಿ ಶುಚಿಯ ತಿನಿಸು..

ಮನೆಯಲ್ಲಿ ಮೊಟ್ಟೆಯಿದ್ದರಂತು ಏನಾದರೊಂದು ಖಾದ್ಯ ಮಾಡಿಬಿಡಬಹುದು. ಮೊಟ್ಟೆಯಲ್ಲಿ ಹತ್ತಾರು ರೀತಿಯ ರುಚಿಯಾದ ಪದಾರ್ಥಗಳನ್ನು ಮಾಡಬಹುದಾಗಿದ್ದು ಇಲ್ಲಿದೆ ಒಂದಷ್ಟು ತಿನಿಸುಗಳ ತಯಾರು ಮಾಡುವ ಕ್ರಮಗಳು..

ಸ್ಪೆಷಲ್ ಎಗ್ ಮಸಾಲೆ

ಬೇಕಾಗುವ ಪದಾರ್ಥಗಳು: ಮೊಟ್ಟೆ-ನಾಲ್ಕು, ಟೊಮ್ಯಾಟೋ ಪೂರಿ- ಅರ್ಧ ಬಟ್ಟಲು, ಕಾರಪುಡಿ- ಅರ್ಧ ಟೀ ಚಮಚ,

ಜೀರಿಗೆಪುಡಿ- ಒಂದು ಟೀ ಚಮಚ, ಅರಸಿನಪುಡಿ- ಅರ್ಧ ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಮೂರು ಟೇಬಲ್ ಚಮಚ, ಗರಂಮಸಾಲೆ- ಒಂದು ಟೀ ಚಮಚ, ನೀರು- ಕಾಲು ಬಟ್ಟಲು

ಇದನ್ನೂ ಓದಿ: ಕೊಡಗಿನ ಮಳೆಗಾಲದ ಬಹು ಬೇಡಿಕೆಯ ತರಕಾರಿ ಬಿದಿರು ಕಣಿಲೆ…

ತಯಾರಿಸುವ ವಿಧಾನ: ಮೊದಲಿಗೆ ಪಾತ್ರೆಯಲ್ಲಿ ಎಣ್ಣೆ ಹಾಕಬೇಕು ಅದು ಕಾಯುತ್ತಿದ್ದಂತೆಯೇ ಅದಕ್ಕೆ ಟೊಮ್ಯಾಟೋ ಪೂರಿ, ಸೇರಿಸಿ ಕಲಕಬೇಕು ಬಳಿಕ ಕಾರದ ಪುಡಿ, ಜೀರಿಗೆ ಪುಡಿ, ಅರಸಿನಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ತಿರುಗಿಸಬೇಕು. ಆ ನಂತರ ಅದಕ್ಕೆ ನೀರು ಹಾಕಿ ಎರಡರಿಂದ ಮೂರು ನಿಮಿಷಗಳ ಕಾಲ ಕಲಕಿ ಬಳಿಕ ಮೊಟ್ಟೆಯನ್ನು ಒಡೆದು ಅದಕ್ಕೆ ಹಾಕಿ ಒಂದೆರಡು ನಿಮಿಷ ಬೇಯಲು ಬಿಡಬೇಕು. ಬೆಂದ ಬಳಿಕ ಅದರ ಮೇಲೆ ಗರಂ ಮಸಾಲೆ, ಅಗತ್ಯವಿದ್ದರೆ ಕರಿಮೆಣಸಿನ ಪುಡಿಯನ್ನು ಉದುರಿಸಿ ಇಳಿಸಿದರೆ ಸ್ಪೆಷಲ್ ಎಗ್ ಮಸಾಲ ರೆಡಿ.

ಇದು ಸಿಂಪಲ್ ಎಗ್ ಮಸಾಲ

ಬೇಕಾಗುವ ಪದಾರ್ಥಗಳ ವಿವರ: ಮೊಟ್ಟೆ- ಮೂರು, ಎಗ್ ಮಸಾಲೆಪುಡಿ- ಒಂದು ಟೀ ಚಮಚ, ಉಪ್ಪು- ಮುಕ್ಕಾಲು ಟೀ ಚಮಚ, ಎಣ್ಣೆ- ಒಂದೂವರೆ ಟೀ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ,

ಇದನ್ನೂ ಓದಿ: ಸುಲಭವಾಗಿ ಮಾಡಬಹುದಾದ ಮೂರು ಬಾತ್ ಗಳು…

ಮಾಡುವ ವಿಧಾನ: ಮೊದಲಿಗೆ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಅದರ ಸಿಪ್ಪೆ ತೆಗೆದು ಚಾಕುವಿನಿಂದ ಮಾರ್ಕ್ ಮಾಡಿಕೊಳ್ಳಬೇಕು. ಆ ನಂತರ ಒಂದು ಪಾತ್ರೆಯನ್ನು ಒಲೆ ಮೇಲಿಟ್ಟು ಎಣ್ಣೆಯನ್ನು ಹಾಕಬೇಕು ಅದು ಕಾದ ಬಳಿಕ ಅದಕ್ಕೆ ಮಸಾಲೆ ಪುಡಿಯನ್ನು ಹಾಕಿ ಅದು ಉಕ್ಕುತ್ತಿದ್ದಂತೆಯೇ ಉರಿಯನ್ನು ನಿಲ್ಲಿಸಿ. ನಂತರ ಬೇಯಿಸಿದ ಮೊಟ್ಟೆಯನ್ನು ಆ ಮಸಾಲೆಯಲ್ಲಿ ಹಾಕಿ ಮೇಲೆ ಕೆಳಗೆ ಮಾಡಿ ಮಸಾಲೆ ಹಿಡಿಯುವಂತೆ ಮಾಡಿ ಅದಕ್ಕೆ ಉಪ್ಪನ್ನು ಹಾಕಿ ಮತ್ತೊಮ್ಮೆ ತಿರುವಿ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇಷ್ಟು ಮಾಡಿದರೆ ಸಿಂಪಲ್ ಎಗ್ ಮಸಾಲ ರೆಡಿ.

ಊಟದ ಜತೆಗಿರಲಿ ಸ್ಪೈಸಿ ಎಗ್ ಫ್ರೈ

ಬೇಕಾಗುವ ಪದಾರ್ಥಗಳು: ಮೊಟ್ಟೆ- ನಾಲ್ಕು, ಎಣ್ಣೆ- ಒಂದೆರಡು ಚಮಚೆ, ಈರುಳ್ಳಿ- ಒಂದು, ಬೆಳ್ಳುಳ್ಳಿ, ಶುಂಠಿ ಪೇಸ್ಟ್- ಅರ್ಧ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಹಸಿಮೆಣಸು- ನಾಲ್ಕು, ನಿಂಬೆರಸ- ಎರಡು ಟೀ ಚಮಚ,

ಇದನ್ನೂ ಓದಿ: ಸಾಗು, ಉದ್ದಿನ ಇಡ್ಲಿ ಸಾಂಬಾರ್, ಅಡೆದೋಸೆ… ಇದೆಲ್ಲವನ್ನು ಆರಾಮಾಗಿ ಮನೆಯಲ್ಲಿ ಮಾಡಿ…

ಮಾಡುವ ವಿಧಾನ: ಮೊದಲಿಗೆ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿಕೊಂಡು ಅದರ ಸಿಪ್ಪೆ ತೆಗೆದು ಎರಡು ಭಾಗ ಮಾಡಿಟ್ಟುಕೊಳ್ಳಬೇಕು. ಹಸಿಮೆಣಸನ್ನು ಚೆನ್ನಾಗಿ ಜಜ್ಜಿಟ್ಟುಕ್ಳೊಂಡು, ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಕೊತ್ತಂಬರಿ ಸೊಪ್ಪನ್ನು ಕೂಡ ಚಿಕ್ಕದಾಗಿ ಹಚ್ಚಿಕೊಳ್ಳಬೇಕು.

ಆ ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಹಚ್ಚಿಟ್ಟ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಅದು ಕಂದು ಬಣ್ಣಕ್ಕೆ ತಿರುಗಿದ ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ತಿರುಗಿಸಿ ನಂತರ ಕೊತ್ತಂಬರಿ ಮತ್ತು ಜಜ್ಜಿದ ಮೆಣಸನ್ನು ಹಾಕಿ ಚೆನ್ನಾಗಿ ಕಲಸಿ ಆ ನಂತರ ಮೊಟ್ಟೆಯನ್ನು ಹಾಕಿ ತಿರುವಿ. ಬಳಿಕ ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಇಳಿಸಿದರೆ ಸ್ಪೈಸಿ ಎಗ್ ಫ್ರೈ ಸಿದ್ಧವಾದಂತೆಯೇ…

admin
the authoradmin

Leave a Reply

Translate to any language you want