ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಗೆ ವಿಧ್ಯುಕ್ತ ಚಾಲನೆ.. ಇಂದಿನ ಕಾರ್ಯಕ್ರಮಗಳೇನು ಗೊತ್ತಾ?

ಮೈಸೂರು: ಸುತ್ತೂರು ಜಾತ್ರೆ ಆರಂಭಕ್ಕೆ ಮುನ್ನವೇ ಈಗಾಗಲೇ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶಿವರಾತ್ರೀಶ್ವರರ ಗದ್ದಿಗೆಗೆ ರುದ್ರಾಭಿಷೇಕ, ಮಹಾಪೂಜೆ ನೆರವೇರಿಸಿ, ಮಹಾದಾಸೋಹಕ್ಕೆ ಚಾಲನೆ ನೀಡಿದ್ದು, ಸಿಹಿ ತಿನಿಸು ತಯಾರಿಕೆ ಕಾರ್ಯ ಆರಂಭವಾಗಿದ್ದು, ಭರದಿಂದ ಸಾಗುತ್ತಿದೆ. ಇದರ ಜತೆಗೆ ಪೂಜೆ ಸಲ್ಲಿಸುವ ಮೂಲಕ 7 ದಿನಗಳ ದಾಸೋಹಕ್ಕೆ ಶ್ರೀಗಳು ಚಾಲನೆ ನೀಡಿದ್ದಾರೆ.
ಈಗಾಗಲೇ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೇ, ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದು, ಜಾತ್ರೆಗೆ ಲಕ್ಷಾಂತರ ಮಂದಿ ಸಾಕ್ಷಿಯಾಗಲಿದ್ದಾರೆ. ಹೀಗಾಗಿ ಈ ಲಕ್ಷಾಂತರ ಮಂದಿಗೆ ಉಣಬಡಿಸಲು ವಿವಿಧ ಬಗೆಯ ಖಾದ್ಯಗಳ ತಯಾರಿಕೆ ಭರದಿಂದ ಸಾಗುತ್ತಿದೆ. ಲಾಡು, ಮೈಸೂರು ಪಾಕ್, ಸಿಹಿ ಬೂಂದಿ, ಖಾರ ಬೂಂದಿ ಸೇರಿದಂತೆ ಇನ್ನಿತರ ತಿನಿಸುಗಳ ತಯಾರಿಕೆಯಲ್ಲಿ ನೂರಾರು ಮಂದಿ ನುರಿತ ಬಾಣಸಿಗರು ತೊಡಗಿದ್ದಾರೆ.

ಗುರುವಾರ (ಜ.15 )ದಿಂದ ಆರಂಭವಾಗಲಿರುವ ಜಾತ್ರೆ ಮಂಗಳವಾರ( ಜ.20)ರವರೆಗೆ ಹತ್ತಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನರನ್ನು ಸೆಳೆಯಲಿದೆ. ಮೊದಲ ದಿನವಾದ ಗುರುವಾರ ವಸ್ತುಪ್ರದರ್ಶನ, ಕೃಷಿ ಮೇಳ, ಆರೋಗ್ಯ ತಪಾಸಣಾ ಶಿಬಿರ, ಸಾಂಸ್ಕಂತಿಕ ಮೇಳ ಹಾಗೂ ದೋಣಿ ವಿಹಾರಕ್ಕೆ ಚಾಲನೆ ದೊರೆಯಲಿದೆ. ಪ್ರಾತಃಕಾಲ 4 ಗಂಟೆಗೆ ಕರ್ತೃ ಗದ್ದುಗೆಯಲ್ಲಿ ಅನುಜ್ಞೆ, ಮಹಾಸಂಕಲ್ಪ ಪೂರ್ವಕ ಮಹಾರುದ್ರಾಭಿಷೇಕ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಮೇಗಳಾಪುರ, ಮಾಧವಗೆರೆಯಲ್ಲಿ ಸ್ನೇಹ ಸೌಹಾರ್ದ ಶಾಂತು ಪ್ರಾರ್ಥನಾ ಪಥಸಂಚನಲನ ನಡೆಯಲಿದ್ದು, ಬೆಳಗ್ಗೆ 7.30ಕ್ಕೆ ಮೈಸೂರಿನ ಹೊಸಮಠದ ಕಿರಿಯ ಶ್ರೀ ಸಿದ್ಧಬಸವ ಸ್ವಾಮಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವರು.
ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟ ರಸಸಿದ್ಧೇಶ್ವರ ಮಠದ ರುದ್ರಮಹಾಂತ ಸ್ವಾಮಿ ಧರ್ಮಸಂದೇಶ ನೀಡುವರು. ಬಳಿಕ ಬೆಳಗ್ಗೆ 7.30ಕ್ಕೆ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಮಧ್ಯಾಹ್ನ 3.15ಕ್ಕೆ ಉತ್ಸವ ಮೂರ್ತಿಯನ್ನು ಶ್ರೀಮಠದಿಂದ ಕರ್ತÈ ಗದ್ದುಗೆಗೆ ಬಿಜಯಂಗೈಯ್ಯಲಾಗುತ್ತದೆ. ಸಂಜೆ 7 ಗಂಟೆಗೆ ಕರ್ತೃ ಗದ್ದುಗೆಯಲ್ಲಿ ಆಗ್ರೋದಕ ಪುಣ್ಯಾಹ, ನಾಂದಿ, ಕಲಶ ಸ್ಥಾಪನೆ ಮಾಡಲಾಗುತ್ತದೆ.

ಸಂಜೆ ನಾಲ್ಕು ಗಂಟೆಗೆ ಅಥಣಿಯ ಗಚ್ಚನಮಠದ ಶಿವಬಸವ ಸ್ವಾಮಿ, ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಮಹಾಸ್ವಾಮಿ ಹಾಗೂ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಎಸ್.ಶೆಟ್ಟರ್ ವಹಿಸುವರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಸ್ತುಪ್ರದರ್ಶನ ಉದ್ಘಾಟಿಸುವರು. ಕೃಷಿ ಮೇಳವನ್ನು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್, ಸಾಂಸ್ಕೃತಿಕ ಮೇಳವನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ, ಆರೋಗ್ಯ ತಪಾಸಣಾ ಶಿಬಿರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ದೋಣಿ ವಿಹಾರವನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು.
ಶಾಸಕರಾದ ಹೆಚ್.ಕೆ.ಸುರೇಶ್, ಎಸ್.ಮಂಜುನಾಥ್, ಹೆಚ್.ಡಿ.ತಮ್ಮಯ್ಯ, ಕೇರಳದ ಅಪರ ಮುಖ್ಯ ಕಾರ್ಯದರ್ಶಿ ಕೆ.ಆರ್.ಜ್ಯೋತಿಲಾಲ್, ಬಣ್ಣಾರಿ ಅಮ್ಮನ್ ಶುಗರ್ಸ್ ಅಧ್ಯಕ್ಷ ಎಸ್.ವಿ.ಬಾಲಸುಬ್ರಹ್ಮಣ್ಯಂ, ಮೈಸೂರು ಜಿ.ಪಂ ಸಿಇಒ ಎಸ್.ಯುಕೇಶ್ಕುಮಾರ್, ಮಂಡ್ಯ ಜಿ.ಪಂ ಸಿಇಒ ಕೆ.ಆರ್.ನಂದಿನಿ ಅತಿಥಿಗಳಾಗಿ ಭಾಗವಹಿಸುವರು. ಈ ಎಲ್ಲಾ ಕಾರ್ಯಕ್ರಮಗಳ ಉದ್ಘಾಟನೆ ಮೂಲಕ ಆರು ದಿನಗಳ ಸುತ್ತೂರು ಜಾತ್ರೆ ಅದ್ದೂರಿಯಾಗಿ ಚಾಲನೆ ಪಡೆದುಕೊಳ್ಳಲಿದೆ.







