MysoreNews

ರೈತರು, ಸ್ವಾಮೀಜಿಗಳ ಮೇಲಿನ ಎಫ್‌ಐಆರ್ ವಾಪಸ್ ಪಡೆಯಲು ಆಗ್ರಹಿಸಿ ಎಸ್ಪಿ ಕಚೇರಿಯಲ್ಲಿ ಧರಣಿ… ಕೇಸ್ ವಾಪಾಸ್ ಪಡೆಯುವ ಭರವಸೆ!

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರುದ್ಧ ಪ್ರತಿಭಟನೆ ನಡೆಸಿದ ಸ್ವಾಮೀಜಿಗಳು, ರೈತರು, ಶಾಸಕರು ಹಾಗೂ ನಾಗರೀಕರ ಮೇಲೆ ಹಾಕಿರುವ ಎಫ್‌ ಐಆರ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್‌ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹಾಗೂ ಹೋರಾಟ ಸಮಿತಿ ಮುಖಂಡರು ಬುಧವಾರ ನಗರದ ಎಸ್ಪಿ ಕಚೇರಿಯಲ್ಲಿ ಧರಣಿ ನಡೆಸಿದರು.

ಇದಕ್ಕೂ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್‌ ಅವರಿಗೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಹಾಜರಿದ್ದ ಕೇಂದ್ರ ವಲಯ ಐಜಿಲಾಬೂ ರಾಮ್ ಅವರಿಗೆ ಕೇಸ್ ಹಿಂಪಡೆಯುವ ಬಗ್ಗೆ ಮನವಿ ಮಾಡಿದರು. ರೈತರು, ಸ್ವಾಮೀಜಿಗಳು ಹಾಗೂ ಸಾರ್ವಜನಿಕರ ವಿರುದ್ಧ ಕೇಸು ದಾಖಲಿಸಿರುವುದಕ್ಕೆ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಸ್ಪಿ ಕಚೇರಿಯಲ್ಲಿ ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರು, ಸ್ವಾಮೀಜಿಗಳ ಮೇಲಿನ ಎಫ್‌ಐಆರ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತಮ್ಮ ನೀರಿನ ಹಕ್ಕಿಗಾಗಿ ಹೋರಾಟ ನಡೆಸಿದ ರೈತರ, ಸ್ವಾಮೀಜಿಗಳ ಮೇಲೆ ಕೇಸು ದಾಖಲಿಸುವುದೆಂದರೆ ಏನರ್ಥ? ಸ್ವಾಮೀಜಿಗಳು ರಾಜಕಾರಣ ಮಾಡಲು ಬಂದಿರಲಿಲ್ಲ, ಸಮಾಜದ ಒಳಿತಿಗೆ ಶ್ರಮಿಸುವ ಸ್ವಾಮೀಜಿಗಳು ಜನರ ನೀರಿನ ಹೋರಾಟದಲ್ಲಿ ಬೆಂಬಲ ನೀಡಿ ಭಾಗವಹಿಸಿದ್ದರು. ಇಂತಹವರ ಮೇಲೆ ಕೇಸು ಹಾಕಿದ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ ಎಂದರು.

ನಮ್ಮ ಮೇಲೆ ಎಫ್‌ಐಆರ್ ಮಾಡಿದ್ದೀರಿ, ನಮ್ಮ ಕೇಸ್ ವಾಪಸ್ ಪಡೆಯಬೇಡಿ, ನಾವು ಜೈಲಿಗೆ ಹೋಗಲೂ ಸಿದ್ಧವಿದ್ದೇವೆ. ಆದರೆ ರೈತರು, ಸ್ವಾಮೀಜಿಗಳ ಮೇಲಿನ ಎಫ್‌ಐಆರ್ ರದ್ದು ಮಾಡಬೇಕು. ಕುಣಿಗಲ್, ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಬಗ್ಗೆ ನಮ್ಮದೇನೂ ತಕರಾರಿಲ್ಲ. ಅವೈಜ್ಞಾನಿಕವಾದ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ರದ್ದು ಮಾಡಿ ನಾಲೆಯ ಮೂಲಕ ತೆಗೆದುಕೊಂಡು ಹೋಗಲಿ ಎಂಬುದು ನಮ್ಮ ಒತ್ತಾಯ ಎಂದು ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡರು ಮಾತನಾಡಿ, ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಶಾಂತ ರೀತಿಯ ಹೋರಾಟ ನಡೆಯಿತು. ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಲಿಲ್ಲ. ೨೦ ಸಾವಿರಜನ ಸೇರಿರುವ ಕಡೆ ಸಣ್ಣಪುಟ್ಟ ಅಹಿತಕರ ಪ್ರಕರಣ ನಡೆದಿರಬಹುದು. ನೀರಿನ ಹಕ್ಕಿಗಾಗಿ ರೈತರು ಆಕ್ರೋಶಗೊಂಡಿದ್ದಾರೆ, ಹಾಗೆಂದು ಅವರ ಮೇಲೆ ಎಫ್‌ಐಆರ್ ಮಾಡಿ ಕೇಸು ದಾಖಲಿಸುವುದು ಸರಿಯಲ್ಲ. ಸರ್ಕಾರ ತಕ್ಷಣ ರೈತರು, ಸ್ವಾಮೀಜಿಗಳು ಸೇರಿದಂತೆ ಎಲ್ಲಾ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಕುಣಿಗಲ್, ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದೇವೆ. ಆದರೆ ಎಕ್ಸ್‌ಪ್ರೆಸ್ ಕೆನಾಲ್ ಬೇಡ, ಈ ಕೆನಾಲ್ ನಿರ್ಮಾಣಕ್ಕೆ ಮಾಡುವ ವೆಚ್ಚದಲ್ಲಿ ಹೇಮಾವತಿ ನಾಲೆಯನ್ನು ಅಗಲಗೊಳಿಸಿ, ಆಧುನಿಕರಣಗೊಳಿಸಿ, ಸರ್ಕಾರ ನೀರಿನ ಹಂಚಿಕೆ ಪ್ರಮಾಣವನ್ನು ಹೆಚ್ಚು ಮಾಡಿ ಕುಣಿಗಲ್, ಮಾಗಡಿ, ರಾಮನಗರಕ್ಕೂ ತೆಗೆದುಕೊಂಡು ಹೋಗಲಿ. ಆದರೆ ರೈತರ, ಜನಪ್ರತಿನಿಧಿಗಳ ಹೋರಾಟವನ್ನು ದಮನ ಮಾಡಿಎಕ್ಸ್‌ಪ್ರೆಸ್‌ಕೆನಾಲ್‌ನಲ್ಲಿ ನೀರುತೆಗೆದುಕೊಂಡುಹೋಗಲು ಬಿಡುವುದಿಲ್ಲಎಂದರು.

ಎಕ್ಸ್‌ಪ್ರೆಸ್‌ಕೆನಾಲ್‌ಯೋಜನೆಯ ಸಾಧಕ, ಬಾಧಕಗಳ ಬಗ್ಗೆ ಇಂಡಿಯನ್‌ ಇನ್ಸ್ಟಿಟೂಟ್‌ ಆಫ್ ಸೈನ್ಸ್ ನ  ತಜ್ಞರಿಂದ ಸಮೀಕ್ಷೆ ಮಾಡಿಸಲಿ, ಆ ವರದಿ ತೃಪ್ತಿಕರವಾಗಿದೆ ಎನಿಸಿದರೆ ಎಕ್ಸ್‌ಪ್ರೆಸ್ ಕೆನಾಲ್ ಬಗ್ಗೆ ನಂತರ ತೀರ್ಮಾನಿಸೋಣ ಎಂದು ಶಾಸಕ ಸುರೇಶ್‌ಗೌಡ ಹೇಳಿದರು.

ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ರೈತರು, ಸ್ವಾಮೀಜಿಗಳ ವಿರುದ್ಧ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಬೇಕು. ಸ್ವಾಮೀಜಿಗಳ ಮೇಲೆ ಕೇಸು ಹಾಕುವುದೆಂದರೆ ದೇವಸ್ಥಾನಕ್ಕೆ ಬೀಗ ಹಾಕಿದಂತೆ, ಜಿಲ್ಲೆಯಲ್ಲಿ ಸುಮಾರು 40 ಮಠಗಳಿದ್ದು ಆ ಸ್ವಾಮೀಜಿಗಳು ಹೋರಾಟದಲ್ಲಿ ಭಾಗವಹಿಸಿ ಜೈಲಿಗೂ ಹೋಗಲು ಸಿದ್ಧ ಎಂದು ಹೇಳಿದ್ದಾರೆ. ಸ್ವಾಮೀಜಿಗಳು ಜೈಲಿಗೆ ಹೋದರೆ ನಿಮ್ಮ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಹೋರಾಟಗಾರರ ಮನವಿ ಬಗ್ಗೆ ಸರ್ಕಾರಕ್ಕೆ ಗಮನಕ್ಕೆ ತಂದು ಎಫ್‌ಐಆರ್ ವಾಪಸ್ ಪಡೆಯುವ ಪ್ರಯತ್ನ ಮಾಡುವುದಾಗಿ ಐಜಿ ಲಾಬೂ ರಾಮ್ ಹೇಳಿದಾಗ ಶಾಸಕರು ತಮ್ಮ ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ತಿಪಟೂರು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ನಗರ ಬಿಜೆಪಿ ಅಧ್ಯಕ್ಷ ಧನುಷ್, ಮುಖಂಡರಾದ ಟಿ.ಹೆಚ್.ಹನುಮಂತರಾಜು, ಸತ್ಯಮಂಗಲ ಜಗದೀಶ್, ಮನೋಹರಗೌಡ, ನರಸೇಗೌಡ ಮೊದಲಾದವರು ಭಾಗವಹಿಸಿದ್ದರು.

 

admin
the authoradmin

Leave a Reply

Translate to any language you want