Mysore

ವಚನಗಳಲ್ಲಿ ವ್ಯಸನಮುಕ್ತ ಜೀವನ ಕುರಿತ ವಿಶೇಷ ಉಪನ್ಯಾಸ ಸರಣಿ ಮಾಲಿಕೆ ಸಮಾರೋಪ

ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದೇವೆ‌. ಅವರು ಡ್ರಗ್ಸ್ ಅನ್ನು ಔಷಧವನ್ನಾಗಿ ತೆಗೆದುಕೊಂಡರೆ, ನಾವು ಅದನ್ನೆ ಆಹಾರವನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. ಇದು ದುರಾದೃಷ್ಟದ ಸಂಗತಿ

ಮೈಸೂರು(ಹೆಚ್.ಪಿ.ನವೀನ್ ಕುಮಾರ್) : ಶರಣ ಸಾಹಿತ್ಯ ತಾಲೂಕು ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಷನ್(ರಿ) ವತಿಯಿಂದ ನಗರದ ಹೆಬ್ಬಾಳಿನಲ್ಲಿರುವ ಇರುವ ವ್ಯಸನಮುಕ್ತ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಮಂಗಳವಾರ ವಚನಗಳಲ್ಲಿ ವ್ಯಸನಮುಕ್ತ ಜೀವನ ಕುರಿತು ವಿಶೇಷ ಉಪನ್ಯಾಸ ಸರಣಿ ಮಾಲಿಕೆ ಸಮಾರೋಪಗೊಂಡಿತು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ಮಾತನಾಡಿ, ದುರಾಭ್ಯಾಸ, ದುಶ್ಚಟದಿಂದ ಮನುಷ್ಯನ ಜೀವನದ ಮಾರ್ಗವೇ ನಾಶವಾಗುತ್ತದೆ. ನಮ್ಮ ಮನಸ್ಸನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳದ ಪರಿಣಾಮವಾಗಿ ಇಂತಹ ಅನಾಚಾರಗಳು ಸಮಾಜದಲ್ಲಿ ನಡೆಯುತ್ತಿದೆ. ದುರ್ಬುದ್ದಿ, ಕೆಟ್ಟವರ ಸಹವಾಸದಿಂದ ಬದುಕು ಹಾಗೂ ವ್ಯವಸ್ಥೆ ಮೇಲೆಯೇ ದುಷ್ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದು  ಸಲಹೆ ನೀಡಿದರು

‘ವಚನಗಳಲ್ಲಿ ವ್ಯಸನಮುಕ್ತ ಜೀವನ’ ವಿಷಯ ಕುರಿತು, ಗಾವಡೆಗೆರೆಯ ಗುರುಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿಗಳು ಉಪನ್ಯಾಸ ನೀಡಿ, ಭಾರತದ ಪ್ರತಿ ಕಣ ಕಣದಲ್ಲೂ ಸತ್ಯವಿದೆ, ಸತ್ವವಿದೆ. ಈ ನಾಡು ಶರಣರ ಬೀಡು. ಈ ಭೂಮಿಯಲ್ಲಿ ದಾರ್ಶನಿಕರು ನಡೆದಾಡಿದ್ದಾರೆ. ತಮ್ಮ ವಿಚಾರಗಳನ್ನು ಉಣಬಡಿಸಿದ್ದಾರೆ.  ಆದರೆ ವಾಸ್ತವದಲ್ಲಿ ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದೇವೆ‌. ಅವರು ಡ್ರಗ್ಸ್ ಅನ್ನು ಔಷಧವನ್ನಾಗಿ ತೆಗೆದುಕೊಂಡರೆ, ನಾವು ಅದನ್ನೆ ಆಹಾರವನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. ಇದು ದುರಾದೃಷ್ಟದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಬರಡನಪುರ ಮಹಾಂತೇಶ್ವರಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ ‌ಮಾತನಾಡಿ, ಮನುಷ್ಯನಿಂದ ಅಸಾಧ್ಯವಾದದ್ದು ಯಾವುದು ಇಲ್ಲ. ಆದರೆ ನಮಗೆ ನಾವೆ ಕಡಿವಾಣ ಹಾಕಿಕೊಂಡಿದ್ದೇವೆ. ಇದರಿಂದ ಹೊರಬಂದು ಸಾಧನೆ ಮಾಡಬೇಕು. ಸಮಾಜಕ್ಕೆ ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು. ಆಗಿದ್ದರಷ್ಟೆ ಜನರು ನಮ್ಮನ್ನು ಸ್ಮರಿಸುತ್ತಾರೆ. ಇಲ್ಲದಿದ್ದರೆ ಈ ಬದುಕು ವ್ಯರ್ಥವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಈ ನಾಡಿಗೆ ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮಿಕ ಹಾದಿ ಹಾಕಿಕೊಟ್ಟವರು ಶ್ರೀ ಸುತ್ತೂರು ಶ್ರೀಗಳ ಪರಂಪರೆ. ವ್ಯಸನಿಗಳು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕು. ಭವ್ಯವಾದ ಬದುಕು ಕಟ್ಡಿಕೊಳ್ಳಬೇಕು ಎಂದು ನಿರ್ಧರಿಸಿ ಶರಣ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಆಯೋಜಿಸಿ ಯಶಸ್ಸು ಕಂಡಿದೆ. ಬದಲಾವಣೆ  ದಿಕ್ಕಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿಕೊಂಡಿದೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶರಣ ದೇವರಾಜು ಪಿ.ಚಿಕ್ಕಹಳ್ಳಿ(ದೇಚಿ) ಮಾತನಾಡಿ, ಶರಣರ ತತ್ವಗಳನ್ನು ಇಂದಿನ ಪೀಳಿಗೆ ಜನರಿಗೆ ಹಂಚುವ ಸಲುವಾಗಿ ನಮ್ಮ ಪರಿಷತ್ತು ಎಲ್ಲೆಡೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಶಾಲಾ, ಕಾಲೇಜು, ವಸತಿ ನಿಲಯ, ವ್ಯಸನಮುಕ್ತ ಕೇಂದ್ರಗಳು ಹೀಗೆ ಹತ್ತು ಹಲವಾರು ಕಡೆ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಶಿವಶರಣರ ತತ್ವಗಳನ್ನು ಜನರಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು‌.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ಹೆಳವರಹುಂಡ ಸಿದ್ದಪ್ಪ ಮಾತನಾಡಿ, ಬಸವಮಾರ್ಗ ವ್ಯಸನ ಮುಕ್ತ ಕೇಂದ್ರದ ನಾಲ್ಕೂ ಶಾಖೆಯಲ್ಲಿ ನಮ್ಮ ಸರಣಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶರಣ ಚಿಂತನೆಗಳನ್ನು ವ್ಯಸನಿಗಳಿಗೆ ತಿಳಿಸುವ ಪ್ರಯತ್ನ ಮಾಡಲಾಗಿತ್ತು. ಇದರಿಂದ ಅವರ ಜೀವನದಲ್ಲಿ ಪರಿವರ್ತನೆ ಯಾಗಿ ಬದುಕು ಬದಲಾವಣೆಯಾದರೆ ನಮ್ಮ ಶರಣ ಸಾಹಿತ್ಯ ಪರಿಷತ್ತಿನ ಕೆಲಸ ಸಾರ್ಥಕವಾಗುತ್ತದೆ ಎಂದು ನುಡಿದರು.

ಬಸವಮಾರ್ಗ ಫೌಂಡೇಷನ್(ರಿ) ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು ಮಾತನಾಡಿ, ವ್ಯಸನಕ್ಕೆ ತುತ್ತಾದ ವ್ಯಕ್ತಿ ಎಲ್ಲ ಕಡೆಯಿಂದಲೂ ಮೋಸಕ್ಕೆ ಒಳಗಾಗುತ್ತಾನೆ. ಸಮಾಜದಿಂದಲೂ ತಿರಸ್ಕತನಾಗುತ್ತಾನೆ. ಸಮಾಜದಲ್ಲಿ ಎಲ್ಲರಿಗೂ ಒಂದಲ್ಲ ಒಂದು ಸೂರು ಇದೆ. ಆದರೆ ವ್ಯಸನಕ್ಕೆ ದಾಸನಾಗದ ವ್ಯಕ್ತಿಗೆ ಎಲ್ಲೂ ಸೂರಿಲ್ಲ. ಆ ಸೂರನ್ನು ಕಲ್ಪಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಸ್ಥಾಪನೆಯಾದ ಸಂಸ್ಥೆಯೆ ಬಸವಮಾರ್ಗ. ವ್ಯಸನಕ್ಕೆ ದಾಸರಾದವರಿಗೆ ಕರುಣೆ, ಪ್ರೀತಿ ಕೊಟ್ಟರೆ ಒಳ್ಳೆಯ ಜೀವನ ಮಾಡಲು ಸಾಧ್ಯವಾಗುತ್ತದೆ ಎಂದು ಆಭಿಪ್ರಾಯ ಪಟ್ಟರು.

ಬಸವಮಾರ್ಗ ಸಂಸ್ಥೆಗೆ ಭಗವಂತನೇ ಫೌಂಡರ್ ಆಗಿದ್ದಾನೆ. ಸಂಸ್ಥೆ ಸಮಾಜಮುಖಿಯಾಗಿದೆ. ಇದಕ್ಕೆ ಮುಖ್ಯ ಕಾರಣಕರ್ತರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು. ಸಂಸ್ಥೆಯ ಪ್ರಾರಂಭದ ಸಮಯದಲ್ಲಿ ಅವರು ಹಾಕಿಕೊಟ್ಟ ಮಾರ್ಗದಿಂದ ಹಾಗೂ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದಿಂದ ಸಂಸ್ಥೆ ಸಮಾಜ ಸೇವೆಗೆ ತನ್ನನ್ನು ತಾನು ಅರ್ಪಣೆ ಮಾಡಿಕೊಂಡಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ವ್ಯಸನಿಯನ್ನೂ ನಮ್ಮ ಅಣ್ಣ, ತಮ್ಮನಂತೆ ಕಾಣಲಾಗುತ್ತದೆ. ಕೊನೆಯ ಉಸಿರು ಇರುವ ತನಕವೂ ಯಾವುದೇ ವ್ಯಸನಿಗೂ ಮೋಸವಾಗಲು ಬಿಡುವುದಿಲ್ಲ. ಯಾವುದೇ ಸಮಯದಲ್ಲಿ ಆತ ಬಂದು ನಮ್ಮ ಕದ ತಟ್ಟಿದರೆ, ಅವನ ಸೇವೆ ಮಾಡಲು ನಾವು ಸದಾ ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

admin
the authoradmin

Leave a Reply

Translate to any language you want