LatestLife style

ಚಳಿಗಾಲದಲ್ಲಿ ಚರ್ಮ ಬಿರುಕು ಬಿಡಬಹುದು… ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ನಾವು ಮುಖಕ್ಕೆ ಎಷ್ಟೇ ಅಲಂಕಾರ ಮಾಡಿಕೊಂಡರೂ ಪಾದದಲ್ಲಿ ಚರ್ಮ ಬಿರುಕು ಬಿಟ್ಟಿರುವುದು ಕಾಣಿಸಿದರೆ ಮುಜುಗರವಾಗುತ್ತದೆ.

ಬಹಳಷ್ಟು ಮಂದಿ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಆತಂಕಕ್ಕೀಡಾಗುತ್ತಾರೆ ಕಾರಣ ಕಾಲು, ಹಿಮ್ಮಡಿ, ತುಟಿ ಹೀಗೆ ಮೈಯ್ಯಲ್ಲಿನ ಚರ್ಮದಲ್ಲಿ ಬಿರುಕು ಕಾಣಿಸಿಕೊಂಡು ಮುಜುಗರ ತರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ  ಬೆಳಿಗ್ಗೆ ಮತ್ತು ಸಂಜೆ ಮೈಕೊರೆಯುವ ಚಳಿಯಾದರೆ ಮಧ್ಯಾಹ್ನ ನೆತ್ತಿ ಸುಡುವ ಬಿಸಿಲು. ಇದರ ನಡುವೆ ನಮ್ಮ ದೇಹದಲ್ಲಿಯೂ ಒಂದಷ್ಟು ಏರು ಪೇರಾಗುತ್ತಿದೆ. ಇದರಿಂದ  ತುಟಿ, ಕೈಕಾಲು, ಚರ್ಮಗಳು ಗಡಸಾಗುವುದುದು, ಬಿರುಕು ಬಿಡುವುದು ಹೀಗೆ ಹಲವು ಪರಿಣಾಮಗಳು ಕಂಡು ಬರಬಹುದು.

ನಾವು ಮುಖಕ್ಕೆ ಎಷ್ಟೇ ಅಲಂಕಾರ ಮಾಡಿಕೊಂಡರೂ ಪಾದದಲ್ಲಿ ಚರ್ಮ ಬಿರುಕು ಬಿಟ್ಟಿರುವುದು ಕಾಣಿಸಿದರೆ ಮುಜುಗರವಾಗುತ್ತದೆ. ಇದು ಅಸಹ್ಯ ಎನಿಸುತ್ತಿದೆ. ಕೆಲವರಂತು  ಯಾರಾದರೂ ನೋಡಿ ಬಿಟ್ಟಾರು ಎಂದು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸಾಮಾನ್ಯವಾಗಿ ಚಳಿಗಾಲ ಬಂದಾಗ ಮೈಕೈ ಬಿರುಕು ಬಿಡುವುದು ಸಾಮಾನ್ಯವಾಗಿರುತ್ತದೆ. ಕೆಲವರ ದೇಹಕ್ಕೆ ಇದನ್ನೆಲ್ಲ ಸಹಿಸಿಕೊಳ್ಳುವ ಶಕ್ತಿ ಇರುವುದರಿಂದ ತಡೆದುಕೊಂಡರೆ ಮತ್ತೆ ಕೆಲವರು ಚರ್ಮದ ಬಗ್ಗೆ ಎಚ್ಚರ ವಹಿಸಿ ವೈದ್ಯರು ನೀಡುವ ಕ್ರಮಗಳನ್ನು ಅನುಸರಿಸಿ ಚರ್ಮದ ರಕ್ಷಣೆ ಮಾಡಿಕೊಳ್ಳುತ್ತಾರೆ.

ಮಾರುಕಟ್ಟೆಗೆ ಚರ್ಮ ಚಳಿಗೆ ಒಡೆಯದಂತೆ ರಕ್ಷಿಸುವ ಸೌಂದರ್ಯ ವರ್ಧಕ ಉತ್ಪನ್ನಗಳು ಬಂದಿದ್ದರೂ ಅವು ಚರ್ಮದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದೆಯೂ ಇರಬಹುದು. ಇದಕ್ಕೆ ಕಾರಣ ನಮ್ಮ ನಿತ್ಯದ ಆಹಾರ ಸೇವನೆಯ ಕ್ರಮವೂ ಇರಬಹುದು. ಹೀಗಾಗಿ ಮೊದಲಿಗೆ ನಾವು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಳಿಕ ಚರ್ಮದ ಕಡೆಗೆ ಕಾಳಜಿವಹಿಸಬೇಕು. ನಾವು ಏನು ಆಹಾರ ಸೇವಿಸುತ್ತೇವೆಯೋ ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಚಳಿ ಹೆಚ್ಚಾದಂತೆ ಚರ್ಮ ಸುಕ್ಕುಗಟ್ಟುವುದು ಹೆಚ್ಚಾಗಿ ಕಂಡು ಬರುತ್ತದೆ. ನಾವು ಆಕರ್ಷಕವಾಗಿ ಕಾಣಬೇಕಾದರೆ ನಮ್ಮ ಕಾಂತಿಯೂ ಅಷ್ಟೇ ಅಗತ್ಯ. ಅದನ್ನು ವಾತಾವರಣಕ್ಕೆ ತಕ್ಕಂತೆ ಕಾದಿಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ.

ನಾವು ಬಳಸುವ ಸೋಪು ಸೌಂದರ್ಯ ವರ್ಧಕಗಳಿಂದ ಆರೋಗ್ಯಕರ ತ್ವಚೆ  ಕಾಪಾಡಬಹುದಾದರೂ ಕೆಲವೊಂದು ಕ್ರಮಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುದು ಕೂಡ ಅಗತ್ಯ. ಕೆಲವರದು  ಒಣ  ಚರ್ಮವಿರುತ್ತದೆ. ಅಂಥವರು ಹೆಚ್ಚಾಗಿ ಮುಖ ತೊಳೆಯಬಾರದು. ಮಾರುಕಟ್ಟೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಕ್ರೀಮ್‌ನ್ನು ಬಳಸಬೇಕು  ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಕೊಬ್ಬಿನ ಪದರವನ್ನು ರಕ್ಷಿಸಲು ಸಾಧ್ಯವಾಗುತ್ತದೆ.  ಇದರಿಂದ  ತೇವಾಂಶ ಹಿಡಿದಿಡಲು ಸಾಧ್ಯವಾಗುತ್ತದೆ.

ಮಧ್ಯಾಹ್ನದ ವೇಳೆಯಲ್ಲಿ ಹೊರ ಹೋದಾಗ  ಸೂರ‍್ಯನ ಬಿಸಿಲು ಚರ್ಮದ ಮೇಲೆ ಪರಿಣಾಮ ಬೀರಬಹುದು. ಇದರಿಂದ ರಕ್ಷಣೆ ಪಡೆಯಲು ಸನ್‌ಕ್ರೀನ್ ಬಳಸಬಹುದು. ಚಳಿಗಾಲದಲ್ಲಿ ತುಂಬಾ ಬಿಸಿ ಇರುವ ನೀರು ಹಿತವೆನಿಸಿದರೂ  ಅದು ಚರ್ಮಕ್ಕೆ ಒಳ್ಳೆಯದಲ್ಲ. ಆದ್ದರಿಂದ ಹೆಚ್ಚು ಬಿಸಿಯಾದ ನೀರನ್ನು ಬಳಸದೆ ಕಡಿಮೆ ಬಿಸಿ ಇರುವ ನೀರನ್ನು ಬಳಸುವುದು ಒಳ್ಳೆಯದು. ತೀಷ್ಣವಾದ ಸೋಪು  ಉಪಯೋಗಿಸಬೇಕು. ಸ್ನಾನದ ಮೊದಲು ಕೊಬ್ಬರಿ ಎಣ್ಣೆ ಲೇಪಿಸಿ ಸ್ನಾನ ಮಾಡಿದರೆ ಮೈ ಒಡೆಯುವುದು ಕಡಿಮೆಯಾಗಲು ಸಾಧ್ಯವಾಗುತ್ತದೆ.

ಎಣ್ಣೆಯ ಜೊತೆಗೆ ಬೇವಿನ ಪುಡಿ ಅಥವಾ ಅರಿಶಿನ  ಸೇರಿಸಿ ಹಚ್ಚಿದರೆ ಚರ್ಮದ ನವೆಯನ್ನು ತಡೆಗಟ್ಟಬಹುದು. ಸ್ನಾನದ ನಂತರ ಕ್ರೀಮ್ ಇರುವ ಮಾಯಿಶ್ಚರೈಸಿಂಗ್  ಉಪಯೋಗಿಸಬೇಕು. ತ್ವಚೆಗೆ  ಬರೀ ಲೋಶನ್ ಹಚ್ಚಿದರೆ ಸಾಕಾಗದು. ಹೆಚ್ಚಿನ ನೀರನ್ನು ಕುಡಿಯಬೇಕು. ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಡಿಯಬೇಕು. ಪ್ರತಿದಿನ 8 ಲೋಟ ನೀರನ್ನು ಕುಡಿಯಲೇ ಬೇಕು.  ವಾಲ್‌ನಟ್  ಕೆನೋಲಾ ಎಣ್ಣೆ, ಆಗಸೇ ಬೀಜವನ್ನು ಹೆಚ್ಚಾಗಿ ಉಪಯೋಗಿಸಬೇಕು. ಹಸಿ ತರಕಾರಿ, ವಿಟಮಿನ್ ’ಸಿ’ ಇರುವ ಹಸಿರು ಎಲೆ  ತರಕಾರಿಯನ್ನು ಆಹಾರದಲ್ಲಿ   ಉಪಯೋಗಿಸಬೇಕು. ಜಂಕ್ ಆಹಾರ, ಕಾಫಿ ಸೋಡಾ  ಸೇವನೆ  ಕಡಿಮೆ ಮಾಡಬೇಕು. ಬಿಸಿ ನೀರು ಸ್ನಾನ  ಒಳ್ಳೆಯದು. ಆದರೆ ಬಿಸಿ ನೀರಿಗೆ ಕೊಬ್ಬರಿ ಎಣ್ಣೆ ಒಂದು ತೊಟ್ಟು ಹಾಕಿ ಉಪಯೋಗಿಸಬಹುದು.

ಹಿಮ್ಮಡಿ ಒಡೆಯುವುದನ್ನು ತಡೆಯಲು ಹೂ ಬಿಸಿ ನೀರಿಗೆ ಲ್ಯಾವೆಂಡರ್ ತೈಲದ ಎರಡು ಹನಿ  ಸೇರಿಸಿ ಪಾದವನ್ನು ಹತ್ತು ನಿಮಿಷ ಮುಳುಗಿಸಿಡುವುದು. ನಂತರ ಚೆನ್ನಾಗಿ ಉಜ್ಜಿ ತೊಳೆದು ನಿರ್ಜೀವ ಚರ್ಮ ತೆಗೆದು  ಮೆತ್ತನೆಯ ಬಟ್ಟೆಯಿಂದ ಪಾದ ಒರೆಸಿಕೊಳ್ಳಬೇಕು. ವ್ಯಾಸಲಿನ್  ಹಚ್ಚಿ ಸಾಕ್ಸ್ ಧರಿಸಿ ಓಡಾಡುವುದರಿಂದಲೂ ಹಿಮ್ಮಡಿ ಮತ್ತು ಪಾದದ ಬಿರುಕು ತಡೆಯಬಹುದು.

 

ಬಿ.ಎಂ.ಲವಕುಮಾರ್

admin
the authoradmin

Leave a Reply

Translate to any language you want