News

ಯಳಂದೂರು ಕೃಷಿ ಇಲಾಖೆ ಕಟ್ಟಡದ ದುರಸ್ತಿ ಕಾಮಗಾರಿಗೆ ಗ್ರಹಣ..  ಪೂರ್ಣಗೊಳಿಸದಿದ್ದರೆ ಸಂಕಷ್ಟ ತಪ್ಪಿದಲ್ಲ!

ಯಳಂದೂರು(ನಾಗರಾಜು ವೈ.ಕೆ.ಮೋಳೆ): ರೈತರ ಬಗ್ಗೆ ಮಾರುದ್ದ ಮಾತನಾಡುವವರಿಗೆ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಯಳಂದೂರು ಪಟ್ಟಣದ ಕೃಷಿ ಇಲಾಖೆ ಕಟ್ಟಡದ ದುರಸ್ತಿ ಕಾಮಗಾರಿಯನ್ನು ಆರಂಭಿಸಿದ್ದರೂ ಅದನ್ನು ಸಕಾಲದಲ್ಲಿ ಮುಗಿಸದೆ ಅರ್ಧಕ್ಕೆ ಬಿಟ್ಟು ಕಾಲಹರಣ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2021-22 ನೇ ಸಾಲಿನ ಕೃಷಿ ಇಲಾಖೆಯ ಅನುದಾನವಿದ್ದು, ಅದನ್ನು ಕಚೇರಿ ದುರಸ್ತಿಗೆ ಬಳಸಿಕೊಳ್ಳಲು ಅವಕಾಶವಿದ್ದರೂ ಕಳೆದ 4 ವರ್ಷದಿಂದ ಕಾಮಗಾರಿಯನ್ನು ಪೂರ್ಣಮಾಡದೇ ಕಾಲಾಹರಣ ಮಾಡುತ್ತಿರುವ ಪರಿಣಾಮ ಸರ್ಕಾರದ ಹಣ ವ್ಯರ್ಥವಾಗುತ್ತಿರುವುದು ಸಂಬಂಧಿಸಿದವರ ಗಮನಕ್ಕೆ ಬಾರದಿರುವುದು ದುರ್ದೈವದ ಸಂಗತಿಯಾಗಿದೆ.

ಪಟ್ಟಣದ ಕೃಷಿ ಇಲಾಖೆ ಕಚೇರಿಯ ಕಟ್ಟಡದ ದುರಸ್ತಿ ಕಾಮಗಾರಿ ಕೈಗೊಂಡು ಹಲವು ವರ್ಷಗಳೇ ಕಳೆದಿವೆ. ಆದರೆ ಕಾಮಗಾರಿ ಪೂರ್ಣಮಾಡದೇ ಅರ್ಧಂಬರ್ಧವಾಗಿ ಮಾಡಿ ಗುತ್ತಿಗೆದಾರ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವರ್ಗ. ಕೈ ಬಿಟ್ಟಿರುವ ಪರಿಣಾಮ ಸರ್ಕಾರದ ಅನುದಾನ ಬೇಕಾ ಬಿಟ್ಟಿಯಾಗಿ ವ್ಯರ್ಥವಾಗಿದೆ. 2021-22 ನೇ ಸಾಲಿನ ಜಿಲ್ಲಾ ಪಂಚಾಯಿತಿ ಯೋಜನೆಯಡಿಯಲ್ಲಿ ಕೃಷಿ ಇಲಾಖೆ ಕಟ್ಟಡ ಕಾರ್ಯಕ್ರಮಮದಡಿಯಲ್ಲಿ 413 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಪಡಿಸುವ ಕಾಮಗಾರಿಗೆ ಬಿಡುಗಡೆಯಾದ ಅನುದಾನವನ್ನು ಜಿಲ್ಲಾ ಪಂಚಾಯಿತಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲಾಗಿದೆ.

ಆದರೆ ಈ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರ ಹಾಗು ಸಂಬಧಪಟ್ಟ ಜೆ.ಇ 2024 ನವೆಂಬರ್‌ನಲ್ಲಿ ಕಟ್ಟಡ ದುರಸ್ತಿ … ಕಾಮಗಾರಿಯನ್ನು ಆರಂಭಿಸಿದ್ದಾರೆ. ಆದರೆ ಕೆಲವು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕಾಮಗಾರಿಯ ಅಂದಾಜು ಪಟ್ಟಿ ಅನುಷ್ಠಾನಗೊಳಿಸಬೇಕೆಂದು ಪಿಆರ್‌ ಇಡಿ ಇಲಾಖೆಯು ಜೆಇ ಹಾಗೂ ಗುತ್ತಿಗೆದಾರ ಕಾಮಗಾರಿ ಪಡೆದಿರುವ ಗುತ್ತಿಗೆದಾರನಿಗೆ ನೋಟೀಸ್ ನೀಡಿ ಕೈ ತೊಳೆದುಕೊಂಡು ಕುಳಿತಿದ್ದಾರೆ.

ಕಟ್ಟಡದ ಬಳಿಗೆ ತೆರಳಿದರೆ ವಿದ್ಯುತ್‌ನಿಂದ ಅಪಾಯವಾಗುವ ಸಂಭವ  ಎದ್ದು ಕಾಣಿಸುತ್ತಿದೆ. ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಹಾಗೂ ವಾಲ್ಸ್ ಸೀಲಿಂಗ್ ಮಾಡುವ ಸಮಯದಲ್ಲಿ ವಿದ್ಯುತ್ ವೈರ್‌ಗಳನ್ನೂ ಎಳೆದು ಬೇಕಾ ಬಿಟ್ಟಿಯಾಗಿ ಬಿಡಲಾಗಿದೆ. ಸಹಾಯಕ ನಿರ್ದೇಶಕ ಕೊಠಡಿಯಲ್ಲಿ ವಿದ್ಯುತ್ ವೈರ್‌ಗಳು ಹಾಗೇ ಬಿಟ್ಟಿರುವ ಪರಿಣಾಮ ದಿನನಿತ್ಯ ನೂರಾರು ರೈತರು, ಸಾರ್ವಜನಿಕರು ಆಗಮಿಸುವ ಕಚೇರಿಯಲ್ಲಿ ಪ್ರಾಣಪಾಯಕ್ಕೂ ತೊಂದರೆಯಾಗುವ ಅಪಾಯವಿದೆ. ಇತ್ತೀಚೆಗೆ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಕಚೇರಿಯ 2 ಕಂಪ್ಯೂಟರ್ ಸುಟ್ಟು ಹೋಗಿದೆ. ಜತೆಗೆ ಕಚೇರಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾವೂ ಸಹ ಕೆಟ್ಟು ಹೋಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಇಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ.

ವಾಲ್ ಸೀಲಿಂಗ್, ಮೀನೀರ್ ಪ್ಯಾನಲ್‌, ಶೌಚಗೃಹಕ್ಕೆ ಬೇಸಿನ್ ಅಳವಡಿಕೆ, ಗೇಟ್, ಕೊಲ್ಯಾಪ್ಪಿಬಲ್ ಶೆಟ್ಟರ್ಸ್, ಪಾಯಕ್ಕಾಗಿ ಮಣ್ಣನ್ನು ಅಗೆಯುವುದು, ಜೆಲ್ಲಿ ಅಳವಡಿಸುವುದು, ಎಂ.20 ರಿಂದ ಕಾಂಕ್ರಿಟ್, ಕಬ್ಬಿಣದ ಸರಬರಾಜು, ಸುಣ್ಣ ಬಣ್ಣ, ಇಂಟರ್ ಲಾಕ್ ಪವರ್ ಅಳವಡಿಸವುದು ಸೇರಿದಂತೆ ಇತರೆ ಕಾಮಗಾರಿಯನ್ನು ಅಂದಾಜು ಪಟ್ಟಿಯಲ್ಲಿ ಸೇರಿಸಲಾಗಿತ್ತು, ಆದರೆ ಕಟ್ಟಡದ ದುರಸ್ತಿಯಲ್ಲಿ ಈ ಕಾಮಗಾರಿಗಳು ಪೂರ್ಣಗೊಳಿಸಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಸಾಕಷ್ಟು ಬಾರಿ ಪತ್ರದ ಮೂಲಕ ಮಾಹಿತಿ ನೀಡಿದರೂ ಈ ಬಗ್ಗೆ ಗಮನಹರಿಸದೇ ಇರುವುದು ದೊಡ್ಡ ತಲೆ ನೋವಾಗಿದೆ. ದಿನನಿತ್ಯ ರೈತರಿಗೆ  ಮಳೆ, ಬೆಳೆ, ಗೊಬ್ಬರ ಖರೀದಿಗೂ ಕಷ್ಟವಾಗಿದೆ. ಕಂಪ್ಯೂಟರ್ ಸುಟ್ಟಿರುವುದರಿಂದ  ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಂಡು. ಈ ಕಾಮಗಾರಿಯನ್ನು ಅಂದಾಜು ಪಟ್ಟಿಯಂತೆ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

admin
the authoradmin

Leave a Reply

Translate to any language you want