ಕೆಬಿಜಿಗೆ ನೆಲದ ಸಂಸ್ಕೃತಿ ಬಗ್ಗೆ ವಿಶೇಷ ಆಸ್ಥೆ ಇತ್ತು.. ಸಾಮಾಜಿಕ ಕಾಳಜಿಯ ತುಡಿತವಿತ್ತು
ಆ ದಿನಗಳ ಮೆಲುಕು..4

ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರ್ ದಿನ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಕೆ. ಬಿ. ಗಣಪತಿ ಅವರು ನಿಧನರಾಗಿ ಒಂದೂ ವರ್ಷವಾಯಿತು. ಇದರ ನಿಮಿತ್ತ ಅಂದು ಲೇಖಕ ಎಸ್.ಪ್ರಕಾಶ್ ಬಾಬು ಅವರು ಬರೆದಿದ್ದ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಲಾಗುತ್ತಿದೆ…ಓದಿ, ಅಭಿಪ್ರಾಯಿಸಿ….
ಕೆಬಿಜಿ ಅವರು ಸಂಜೆಯ “ಸ್ಟಾರ್ ಆಫ್ ಮೈಸೂರ್”ಗೆ ಬರೆಯುತ್ತಿದ್ದ ‘ಅಬ್ರಕದಬ್ರ’ ಮತ್ತು ಬೆಳಗಿನ “ಮೈಸೂರು ಮಿತ್ರ’ಕ್ಕೆ ಬರೆಯುತ್ತಿದ್ದ ‘ಛೂಮಂತ್ರ’ 80-90ರ ದಶಕದಲ್ಲಿ ಬಹಳ ಜನಪ್ರಿಯವಾಗಿತ್ತು. ಆಗ ಅಮೆರಿಕಾದಲ್ಲಿ ಆಧ್ಯಾತ್ಮಿಕ ಗುರುವಾಗಿ ಜನಪ್ರಿಯ ತುತ್ತ ತುದಿಯಲ್ಲಿದ್ದ ರಜನೀಶ್ ಬಗ್ಗೆ ಒಲವಿಂದ ಬರೆಯುತ್ತಿದ್ದ ಕೆಬಿಜಿ ಸಾಧು-ಸಂತರೆಂದರೆ ವಿಶೇಷವಾದ ಪ್ರೀತಿ ತೋರಿಸುತ್ತಿದ್ದರು. ಅವರಿಗೆ ಆಧ್ಯಾತ್ಮಿಕತೆ ಬಗ್ಗೆ ಕುತೂಹಲವಿತ್ತು. ಹೀಗಾಗಿ, ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ, ಜಗ್ಗಿ ವಾಸುದೇವ್ ಮತ್ತಿತರ ಸಂತರಲ್ಲಿ ಬೆರೆತು, ಅಧ್ಯಾತ್ಮದ ಚಿಂತನೆ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಅಪ್ಪಟ ರಾಷ್ಟ್ರೀವಾದಿಯಾಗಿದ್ದ ಕೆಬಿಜಿ ಅವರಿಗೆ ಕೊಡಗು ಮತ್ತು ಕೊಡವರ ಸಂಸ್ಕೃತಿ-ಸಂಘಟನೆ ಕುಸಿಯುತ್ತಿರುವ ಬಗ್ಗೆ ನೋವಿತ್ತು. ತಮ್ಮವರ ಬಗ್ಗೆ ಸಾಮಾಜಿಕ ಕಾಳಜಿಯ ತುಡಿತವಿತ್ತು. ಹಾಗೇ, ಹಾಳಾಗುತ್ತಿರುವ ರಾಜಕಾರಣದ ಬಗ್ಗೆ ಅಸಹ್ಯವಿತ್ತು. ಇಂಥ ಕೆಟ್ಟ ರಾಜಕಾರಣಿಗಳನ್ನು ಆರಿಸುವ ಮತದಾರರ ದಡ್ಡತನದ ಬಗ್ಗೆ ಮಾತ್ರ ಅನುಕಂಪವಿರಲಿಲ್ಲ, ಅತ್ಯಂತ ಕೋಪವಿತ್ತು. ಇದು ಅವರು ಬರೆಯುತ್ತಿದ್ದ ಪ್ರತಿ ಬರಹಗಳಲ್ಲಿ ಎದ್ದು ಕಾಣುತ್ತಿತ್ತು.
ಒಲ್ಲದ ಮನಸ್ಸಿನಿಂದ ಪತ್ರಿಕೆ ಆಕಾರ ಬದಲಿಸಿದರು ಕೆಬಿಜಿ..
ನಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ “ಮೈಸೂರುಮಿತ್ರ” ದಿನಪತ್ರಿಕೆ ಪ್ರಸರಣ ಬಹಳ ಕುಸಿದಿತ್ತು. ಇದಕ್ಕೆ ಟ್ಯಾಬ್ಲೋ ಸೈಜಿನ ಸಣ್ಣ ಆಕಾರವೇ ಕಾರಣ, ಡೆಮಿ ಆಕಾರದಲ್ಲಿ ದೊಡ್ಡದಾಗಿ ತನ್ನಿ ಅಂತ ಬಹಳ ಸಲ ಹೇಳುತ್ತಿದ್ದೆ. ಅವರಿಗೆ ಹಳೆ ಮಾದರಿ ಬಿಡಲಾಗದೆ ಒಪ್ಪಿರಲಿಲ್ಲ. 1991ರ ನವಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಒಂದು ವರ್ಷ ಸಾಧನಾ ವರ್ಷದ ಜಾಹೀರಾತು ಕೊಟ್ಟಾಗ ಟ್ಯಾಬ್ಲೋ ಸೈಜಿನ ಕಾರಣಕ್ಕೆ ಅರ್ಧದಷ್ಟು ಹಣ ನಷ್ಟವಾದಾಗಲೂ “ಮೈಸೂರು ಮಿತ್ರ”ನ ಆಕಾರ ಬದಲಿಸಲು ಇಚ್ಛಿಸಲಿಲ್ಲ.

ಸಣ್ಣ ಸೈಜಿನಿಂದಾಗಿಯೇ ನಮ್ಮ ಶ್ರಮವೆಲ್ಲಾ ವ್ಯರ್ಥವಾಗುತ್ತಿದೆ ಅಂತ ನಾನು ಸಮಯ ಸಿಕ್ಕಾಗಲೆಲ್ಲ ಹೇಳುತ್ತಿದ್ದೆ. ಮೊದಲ ಪುಟದಲ್ಲಿ ಬಂದ ಸುದ್ದಿಗಳು ಮಾತ್ರ ಓದುಗರ ಕಣ್ಣಿಗೆ ರಾಚುತ್ತೆ. ಒಳ ಪುಟಕ್ಕೆ ಹೋದ ಎಂಥ ಪ್ರಮುಖ ಸುದ್ದಿಯೂ ಓದುಗನ ಕಣ್ಣಿಗೆ ಮಂಕಾಗಿ, ಸುದ್ದಿ ಸಪ್ಪೆ ಅನ್ನಿಸುತ್ತೆ. ಈ ಕಾರಣದಿಂದಲೇ “ಮೈಸೂರು ಮಿತ್ರ”ನ ಪ್ರಸರಣ ಏರುತ್ತಿಲ್ಲ ಎಂದು ನಾನು ಬಲವಾಗಿ ಒತ್ತಾಯಿಸಿದಾಗ ಒಲ್ಲದ ಮನಸ್ಸಿನಿಂದಲೇ “ಮೈಸೂರು ಮಿತ್ರ” ಪತ್ರಿಕೆ ಆಕಾರವನ್ನು ಈಗಿನ ಏ-2 ಡೆಮಿ ಸೈಜಿನ ಆಕಾರಕ್ಕೆ ಒಪ್ಪಿಕೊಂಡರು. ಹೀಗೇ 1992ರ ಫೆಬ್ರವರಿ.10 ರಿಂದ “ಮೈಸೂರು ಮಿತ್ರ” ಪತ್ರಿಕೆ ಆಕಾರ ಬದಲಿಸಿಕೊಂಡು ಎರಡು ಪುಟಗಳಲ್ಲಿ ಮುದ್ರಣವಾಗತೊಡಗಿತು. ನನ್ನ ಎಣಿಕೆಯಂತೆ “ಮೈಸೂರು ಮಿತ್ರ”ನ ದೊಡ್ಡಾಕಾರ ಓದುಗರಿಗೆ ಇಷ್ಟವಾಗಿ ದಿನದಿಂದ ದಿನಕ್ಕೆ ಪ್ರಸರಣ ಸಂಖ್ಯೆ ಬೆಳೆಯುತ್ತಾ ಹೋಯಿತು.
ಲೇಖಕ, ಪತ್ರಕರ್ತ ಎಸ್ ಪ್ರಕಾಶ್ ಬಾಬು ಅವರು ಜನಮನಕನ್ನಡಕ್ಕಾಗಿ ಬರೆದ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಹೀಗೇ “ಸ್ಟಾರ್ ಆಫ್ ಮೈಸೂರ್”ನಂತೆ “ಮೈಸೂರು ಮಿತ್ರ” ಪತ್ರಿಕೆ ಸಹ ಪ್ರಸರಣದಲ್ಲಿ ನಂಬರ್ ಒನ್ ಆದಾಗ ನಿರಾಳವಾದರು. ಅವರು ಕೋಟ್ಯಾಂತರ ಮೌಲ್ಯದ ಉದ್ಯಮ ಕಟ್ಟಿದ್ದರು ಸಹ ಯಾವತ್ತೂ ಶ್ರೀಮಂತಿಕೆ ಅಹಂನಿಂದ ಬೀಗಿದವರಲ್ಲ. ತಮ್ಮಲ್ಲಿ ಕೆಲಸ ಮಾಡುವವರನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ನಂಬಿಕಸ್ಥನೆಂದರೆ ತಮ್ಮ ಹೃದಯದಲ್ಲಿಟ್ಟು ಪೋಷಿಸುತ್ತಿದ್ದರು. ನಂಬಿಕೆಗೆ ಅನರ್ಹನೆಂದು ಸಣ್ಣ ಸುಳಿವು ಸಿಕ್ಕರೂ ನಿರ್ದಯವಾಗಿ ಹೊರಹಾಕುತ್ತಿದ್ದರು. ನಾನು ಪದವಿ ಪರೀಕ್ಷೆಗೆ ಅಣಿಯಾಗಲು ರಾಜಿನಾಮೆ ಕೊಟ್ಟಾಗ ಸ್ವೀಕರಿಸಲೇ ಇಲ್ಲ. ಮತ್ತೆ ನನ್ನ ಕರೆದು ವಿಚಾರಿಸಿ, ವಿಷಯ ತಿಳಿದ ನಂತರವೇ ನನ್ನ ರಾಜಿನಾಮೆ ಪತ್ರ ಅಂಗೀಕರಿಸಿದ್ದರು.

ನಾನು ಆಗ ಪತ್ರಿಕಾಲಯದೊಳಗೆ ಇದ್ದ ಕೆಲವು ಕಹಿಸತ್ಯಗಳನ್ನು ಹೇಳಿದಾಗ, ಅರಗಿಸಿಕೊಳ್ಳುವ ಮನಸ್ಥಿತಿ ಅವರಲ್ಲಿ ಇರಲಿಲ್ಲ. ಆದರೆ, ನನ್ನ ಮಾತನ್ನು ಕಡೆಗಣಿಸದೆ ಹಂತಹಂತವಾಗಿ ಸರಿಪಡಿಸಿದರು. ನನ್ನ ಸಲಹೆಯಂತೆ ‘ಮಹಾನಂದಿ’ ಪತ್ರಿಕೆಯಲ್ಲಿದ್ದ ಕೆ.ಎಂ.ವಿಶ್ವನಾಥ್‌ರನ್ನು ಸುದ್ದಿ ಸಂಪಾದಕರನ್ನಾಗಿ ನೇಮಿಸಿಕೊಂಡರು. ಇದರಿಂದ “ಮೈಸೂರು ಮಿತ್ರ” ದಿನಪತ್ರಿಕೆಯಲ್ಲಿ ಕೆಲಸ ಮಾಡಲು ಯುವ ಉತ್ಸಾಹಿ ಪತ್ರಕರ್ತರ ಹಿಂಡು ಬೆಳೆಯುತ್ತಾ ಹೋಯಿತು. ದಶಕ ಮಾತ್ರದಲ್ಲಿ ಎರಡು ಪುಟಗಳಿಂದ 12 ಪುಟಗಳವರೆಗೆ ಬೃಹತ್ತಾಗಿ ಪತ್ರಿಕೆ ಬೆಳೆಯಿತು.
ಲೇಖಕ, ಪತ್ರಕರ್ತ ಎಸ್ ಪ್ರಕಾಶ್ ಬಾಬು ಅವರು ಜನಮನಕನ್ನಡಕ್ಕಾಗಿ ಬರೆದ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯಮಟ್ಟದ ಪತ್ರಿಕೆಗಳೊಂದಿಗೆ ಜಿಲ್ಲಾಮಟ್ಟದ ಪತ್ರಿಕೆ ಬೆಳೆಯಲು ಸಾಧ್ಯವೇ ಇಲ್ಲ ಅನ್ನೋ ಮಾತು ಮೈಸೂರು ನಗರದಲ್ಲಿ ಮಾತ್ರವಲ್ಲ, ಮುಂಬೈನಲ್ಲೂ ಇತ್ತು. ಇದನ್ನು ಮುಂಬೈನಲ್ಲಿ ಕೆಬಿಜಿ ಸಹೋದ್ಯೋಗಿಗಳಾಗಿದ್ದ “ಇಂಡಿಯನ್ ಎಕ್ಸ್ಪ್ರೆಸ್” ಪತ್ರಿಕೆ ಸಂಪಾದಕೀಯ ವರ್ಗದವರು 1991ರಲ್ಲಿ “ಮೈಸೂರು ಮಿತ್ರ” ಪತ್ರಿಕಾಲಯಕ್ಕೆ ಬಂದಿದ್ದಾಗ ನನಗೆ ಹೇಳಿದ್ದರು. ಅವರೆಲ್ಲ “ಮೈಸೂರು ಮಿತ್ರ” ಪತ್ರಿಕೆ ಕಚೇರಿಯ ಬೃಹತ್ ಕಟ್ಟಡ ನೋಡಿ ಮೂಕ ವಿಸ್ಮಿತರಾಗಿ ‘ಮುಂಬೈನಂಥ ನಗರದಲ್ಲೇ ಸಣ್ಣ ಪತ್ರಿಕೆ ಬೆಳೆಯಲಾಗಲಿಲ್ಲ. ಇಲ್ಲೇಗೆ ಸಾಧ್ಯವಾಯಿತು?’ ಅಂತ ಉದ್ಗರಿಸಿದ್ದರು.

ಅದ್ಯಾವ ಸಿಟ್ಟು ಮುಂಬೈ “ಇಂಡಿಯನ್ ಎಕ್ಸ್ಪ್ರೆಸ್” ಪತ್ರಿಕೆ ಸಹೋದ್ಯೋಗಿಗಳ ಮೇಲೆ ಕೆಬಿಜಿ ಅವರಿಗಿತ್ತೋ ಏನೋ! ಆಗಷ್ಟೇ ಮನೆಗೆ ಹೋಗಿದ್ದ ಕೆ.ಬಿ.ಗಣಪತಿ ಅವರಿಗೆ ನಾನು ಫೋನ್ ಮಾಡಿ ‘ಮುಂಬೈನ ನಿಮ್ಮ ಇಂಡಿಯನ್ ಎಕ್ಸ್ಪ್ರೆಸ್ ಸ್ನೇಹಿತರು ಬಂದಿದ್ದಾರೆ’ ಅಂದ್ರೆ; ಅವರಿಗೆ ಫೋನ್ ಕೊಡು ಅಂತಾನೂ ಹೇಳಲಿಲ್ಲ, ಸರಸ್ವತಿ ಪುರಂನಲ್ಲಿದ್ದ ತಮ್ಮ ಮನೆಗೆ ಬರುವಂತೆಯೂ ಹೇಳದೆ “ನಾಳೆ ಆಫೀಸ್‌ಗೆ ಬರೋದಕ್ಕೆ ಹೇಳು” ಅಂತ ಫೋನ್ ಕಟ್ ಮಾಡಿದ್ದರು.
ಲೇಖಕ, ಪತ್ರಕರ್ತ ಎಸ್ ಪ್ರಕಾಶ್ ಬಾಬು ಅವರು ಜನಮನಕನ್ನಡಕ್ಕಾಗಿ ಬರೆದ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇದೇನೇ ಇರಲಿ, ರಾಷ್ಟçಮಟ್ಟದ ಪತ್ರಕರ್ತರು ಮತ್ತು ರಾಜ್ಯ ಮಟ್ಟದ ಪತ್ರಿಕೋದ್ಯಮಿಗಳು ಹಾಗೂ ನನ್ನ ಬೆಂಗಳೂರು ಪ್ರೆಸ್ ಕ್ಲಬ್ ಸ್ನೇಹಿತರು, ಮೈಸೂರಿನಂಥ ಸಣ್ಣ ನಗರದಲ್ಲಿ “ಮೈಸೂರು ಮಿತ್ರ” ಮತ್ತು “ಸ್ಟಾರ್ ಆಫ್ ಮೈಸೂರ್” ಪತ್ರಿಕೆಗಳು ಮಾಡಿದ ಸಾಧನೆ ಬಗ್ಗೆ ಮುಕ್ತಕಂಠದಿಂದ ಹೊಗಳುವಾಗ ವೈಯಕ್ತಿಕವಾಗಿ ನನಗೆ ಹೆಮ್ಮೆ ಅನ್ನಿಸುತ್ತೆ. ಹೀಗೇ ಹೊಗಳುವವರ ಪ್ರತಿ ಮಾತಲ್ಲಿ ನನ್ನ ಆರಾಧ್ಯ ಗುರು ಕೆಬಿಜಿ ಕಾಣಿಸುತ್ತಾರೆ. ಅವರೆಂದೂ ಈ ಜಗದಿಂದ ನಿರ್ಗಮಿಸಿಲ್ಲ, ನಮ್ಮ-ನಿಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ ಅನ್ನೋ ನನ್ನ ನಂಬಿಕೆ ಮತ್ತಷ್ಟು ಗಟ್ಟಿಯಾಗಿಸುತ್ತದೆ.
ಲೇಖಕ, ಪತ್ರಕರ್ತ ಎಸ್ ಪ್ರಕಾಶ್ ಬಾಬು ಅವರು ಜನಮನಕನ್ನಡಕ್ಕಾಗಿ ಬರೆದ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಳುವ ವರ್ಗದ ಕೆಟ್ಟ ನಡೆಯನ್ನು ಕೆಬಿಜಿ ಸಹಿಸುತ್ತಲೂ ಇರಲಿಲ್ಲ, ಹೆದರುತ್ತಲೂ ಇರಲಿಲ್ಲ.








Hi there just wanted to give you a quick heads up. The text in your content seem to be running off the screen in Chrome. I’m not sure if this is a formatting issue or something to do with web browser compatibility but I thought I’d post to let you know. The style and design look great though! Hope you get the problem resolved soon. Thanks