DasaraLatestMysore

ಮೈಸೂರು ದಸರಾಕ್ಕೆ ಮುನ್ನುಡಿ ಬರೆದ ಗಜಪಯಣ… ವೀರನ ಹೊಸಹಳ್ಳಿ ಗೇಟ್ ನಿಂದ ಗಜಪಡೆಗೆ ಬೀಳ್ಕೋಡುಗೆ

ಹುಣಸೂರು(ನಂಜಾಪುರ ಮನುಕುಮಾರ್, ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ವಿಶ್ವವಿಖ್ಯಾತ 415ನೇ ಮೈಸೂರು ದಸರಾ ಮಹೋತ್ಸವಕ್ಕೆ ನಾಂದಿ ಹಾಡುವ ಗಜಪಯಣಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲು ವೀರನ ಹೊಸಹಳ್ಳಿ ಗೇಟ್ ಬಳಿ ಅಲಂಕೃತ ಗಜಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಗರ ಅಭಿವೃದ್ಧಿ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ ಯತಿಂದ್ರ ಸಿದ್ದರಾಮಯ್ಯ   ಬುಧವಾರ ಚಾಲನೆ ನೀಡಿದರು.

ಬೆಳ್ಳಿಗೆ 10 ಗಂಟೆಯಿಂದ 10:28 ಗಂಟೆಗೆ ಸಲ್ಲುವ ತುಲಾ ಶುಭ ಲಗ್ನದಲ್ಲಿ ಸಂಪ್ರದಾಯದಂತೆ ಮೈಸೂರು ಅರಮನೆ ಪುರೋಹಿತರ ತಂಡ ವೀರನ ಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಆನೆಗಳನ್ನು ಮೈಸೂರಿಗೆ ಬೀಳ್ಕೊಟ್ಟರು. ಅರಣ್ಯ ಇಲಾಖೆ ವತಿಯಿಂದ ಜಂಗಲ್ ಇನ್ ರೆಸಾರ್ಟ್ ಬಳಿ ಈ ಬಾರಿ ಗಣ್ಯರು ಸೇರಿದಂತೆ ಸುಮಾರು 3000 ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದು, ಮಳೆ ನೀರು ರಕ್ಷಕ ಜರ್ಮನ್ ಟೆಂಟ್ ಬೃಹತ್ ಪೆಂಡಲ್ ಹಾಕಲಾಗಿತ್ತು. ಜೊತೆಗೆ ಅಷ್ಟು ಜನಕ್ಕೂ ಮೃಷ್ಟಾನ ಭೋಜನ ತಯಾರಿಸಲಾಗಿತ್ತು.

ಗಜಪಡೆಯ ಮುಂದೆ ಮಹಿಳಾ ಸಂಘದ ಸದಸ್ಯರಿಂದ ಪೂರ್ಣ ಕುಂಭಮೇಳ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಗೊರವರ ಕುಣಿತ ಸೇರಿದಂತೆ ಗುರುಪುರ ಟಿಬೇಟಿಯನ್ ಶಾಲಾ ಮಕ್ಕಳ ಹಾಗೂ ಆದಿವಾಸಿ ಶಾಲಾ ಮಕ್ಕಳ ನೃತ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾತಂಡಗಳು ಪ್ರದರ್ಶನ ನೀಡಿ ಜನರನ್ನು ಮನರಂಜನೆ ಗೊಳಿಸಿದವು.

ದಸರಾ ಗಜಪಯಣದ ಮೊದಲ ತಂಡದಲ್ಲಿ ಒಟ್ಟು 9 ಆನೆಗಳು ತೆರಳುತ್ತಿದ್ದು ಅದರಲ್ಲಿ ಎರಡು ಹೆಣ್ಣು ಆನೆಗಳು ಒಳಗೊಂಡಿವೆ. ದುಬಾರೆಯ 45 ವರ್ಷದ ಧನಂಜಯ, ಬಳ್ಳೆಯ 42 ವರ್ಷದ ಮಹೇಂದ್ರ, ಮತ್ತಿಗೋಡಿನ 41 ವರ್ಷದ ಏಕಲವ್ಯ, ದುಬಾರೆಯ 54 ವರ್ಷದ ಪ್ರಶಾಂತ, ದುಬಾರೆಯ 43 ವರ್ಷದ ಗೋಪಿ, ದುಬಾರೆಯ 41 ವರ್ಷದ ಶ್ರೀರಾಮ, ದುಬಾರೆಯ 44 ವರ್ಷದ ಸುಗ್ರೀವ, ಬಳ್ಳೆಯ 54 ವರ್ಷದ ಲಕ್ಷ್ಮಿ ಹಾಗೂ ದುಬಾರೆಯ 46 ವರ್ಷದ ಕಾವೇರಿ ಮೊದಲ ಹಂತದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದವು.

ಅದೇ ರೀತಿ ಎರಡನೇ ತಂಡದಲ್ಲಿ ದೊಡ್ಡ ಹರವೆಯ 50 ವರ್ಷದ ರೂಪ, ರಾಮಪುರದ 55 ವರ್ಷದ ಚೈತ್ರ ಹಾಗೂ ಮತ್ತಿಗೋಡಿನ 57 ವರ್ಷದ ಶ್ರೀಕಂಠ ಪ್ರಯಾಣ ಬೆಳೆಸಲಿವೆ, ಇವುಗಳೊಂದಿಗೆ ಮತ್ತಿಗೋಡಿನ 26 ವರ್ಷದ ಭೀಮ ಮತ್ತು ದುಬಾರೆಯ 51 ವರ್ಷದ ಹರ್ಷ ಆನೆಗಳನ್ನು ಮೀಸಲಿಡಲಾಗಿದೆ. ಗಜಪಯಣ ಕಾರ್ಯಕ್ರಮದಲ್ಲಿಶಾಸಕ ಹರೀಶ್ ಗೌಡ, ಅನಿಲ್ ಚಿಕ್ಕಮಾದು, ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪುಷ್ಪ ಅಮರ್ ನಾಥ್, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಭಿಮನ್ಯು ಇಲ್ಲದ ದಸರಾ ಗಜಪಡೆ

ಮೈಸೂರು ದಸರಾ ಇತಿಹಾಸದಲ್ಲಿ ಯಾವ ಕಾಲದಲ್ಲೂ ನಾಯಕನಿಲ್ಲದೆ ಗಜಪಡೆ ಮೈಸೂರಿಗೆ ಆಗಮಿಸಿದಿಲ್ಲ. ಇದು 25ನೇ ರಜತ ಮಹೋತ್ಸವ ಕಂಡ ಗಜಪಯಣ, ಇಂಥ ಸಂದರ್ಭದಲ್ಲಿ ನಾಯಕನಿಲ್ಲದೆ ಗಜಪಡೆ ನಿರಾಸ ಪ್ರಯಾಣ ಬೆಳೆಸಿರುವುದು ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

2020 ರಿಂದ ಸತತವಾಗಿ 6 ಬಾರಿ ಅಂಬಾರಿ ಹೊತ್ತಿದ ಅಭಿಮನ್ಯು ಆನೆ, ಮೈಸೂರು ದಸರಾ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಗಜರಾಜರಲ್ಲಿ ಒಬ್ಬ. ಏಷಿಯನ್ ತಳಿಯ ಈ ಆನೆಗೆ ಈಗ ಸುಮಾರು 60 ವರ್ಷ ವಯಸ್ಸು. ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಸಾಮಾನ್ಯ ದಸರಾ ಆನೆಯಷ್ಟೇ ಅಲ್ಲ, ಕುಮ್ಕಿ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದ ಶಕ್ತಿಶಾಲಿ ಹಾಗೂ ಬುದ್ಧಿವಂತ ಆನೆ. 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆಗಳು ಮತ್ತು 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿರುವ ದಾಖಲೆ ಇವನ ಮೇಲೆ ಇದೆ. 60 ವರ್ಷ ದಾಟಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 2026ರ ದಸರಾ ಗಜಪಡೆಯಿಂದ ಅಭಿಮನ್ಯುವನ್ನು ಹೊರಗಿಟ್ಟಿದೆ. ಹೀಗಾಗಿ 2025ರ ದಸರಾ ಅವನ ಅಂಬಾರಿ ಸೇವೆಯ ಕೊನೆಯ ವರ್ಷವಾಗಿದೆ.

415 ನೇ ದಸರಾ ಮಹೋತ್ಸವದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುವ ಯೋಗ ಯಾವ ಆನೆಗೆ ಇದೆ ಎಂಬ ಕುತೂಹಲ ನಾಡ ಜನತೆಯಲ್ಲಿ ಇದೆ. ಅದಕ್ಕೆ ಉತ್ತರವಾಗಿ ಮೂರು ಬಲಿಷ್ಠ ಆನೆಗಳು ಪೈಪೋಟಿಯಲಿವೆ.  5110 ತೂಕದ ಪ್ರಶಾಂತ, 5300 ತೂಕದ ಧನಂಜಯ ಹಾಗೂ 5120 ತೂಕದ ಮಹೇಂದ್ರ ಈ ಮೂವರಲ್ಲಿ ಯಾರು ದಸರಾ ಗಜಪಡೆಯ ಕ್ಯಾಪ್ಟನ್ ಎಂದು ಕಾದು ನೋಡಬೇಕಾಗಿದೆ.

ಗಜಪಯಣ ಕಾರ್ಯಕ್ರಮಕ್ಕೆ ಮದುಮಗನಂತೆ ಅಲಂಕೃತಗೊಂಡು ನೆಪಕ್ಕೆ ನಿಂತಿದ್ದ ಅಭಿಮನ್ಯು, ಅದರ ಮೇಲೆ ಯಾವಾಗಲು ಗಾಂಭೀರ್ಯದಿಂದ ಆಸನನಾಗುತ್ತಿದ ಮಾವುತ ವಿನುವಿನ ಮುಖ ಬಾಡಿತ್ತು, ಕಣ್ಣೀರು ಇಂಗಿತ್ತು. ಆ ದೃಶ್ಯ ಎಂಥವರ ಮನಸ್ಸು ಮರಗುವಂತೆ ಮಾಡಿತ್ತು. ಬೆಳಗ್ಗೆ ವೀರನಹೊಸಹಳ್ಳಿಯಿಂದ ಹೊರಟ ಗಜಪಡೆಯನ್ನು ಲಾರಿಯಲ್ಲಿ ಮೈಸೂರಿಗೆ ಕರೆ ತರಲಾಗಿದ್ದು ನಗರದ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದು, ಆ.28ರಂದು ಅರಮನೆ ಪ್ರವೇಶ ಮಾಡಲಿವೆ.

admin
the authoradmin

Leave a Reply