ArticlesLatest

ಕೊಡಗಿನ ಬ್ರಹ್ಮಗಿರಿ ಬೆಟ್ಟಶ್ರೇಣಿಯ ಚೆಕ್ಕೆಪಾರೆ ಕುಂದುಗೆ ಕುರುಂಜಿಯ ನೀಲಚಿತ್ತಾರ!

ಪಶ್ಚಿಮಘಟ್ಟಗಳು ನಿಸರ್ಗ ಸೋಜಿಗವೇ…  ಇಲ್ಲಿನ ಬೆಟ್ಟಗುಡ್ಡ, ಕಾಡುಗಳು ತನ್ನ ಪ್ರಾಕೃತಿಕ ಸೌಂದರ್ಯದೊಳಗೆ ಹಲವು ವಿಸ್ಮಯಗಳನ್ನು ಹುದುಗಿಟ್ಟುಕೊಂಡು ಆಗೊಮ್ಮೆ, ಈಗೊಮ್ಮೆ ಅದನ್ನು ಹೊರಚೆಲ್ಲಿ ನೊಡುಗರನ್ನು ಬೆರಗುಗೊಳಿಸುತ್ತವೆ… ಇದೀಗ ಬ್ರಹ್ಮಗಿರಿ ಬೆಟ್ಟಶ್ರೇಣಿಗಳ ನಡುವೆ ಇರುವ ಚೆಕ್ಕೆಪಾರೆ ಕುಂದುವಿನಲ್ಲಿ ಇದೇ ಮೊದಲ ಬಾರಿಗೆ ಕುರುಂಜಿ ಹೂ ಬಿಟ್ಟಿದ್ದು  ಪ್ರಕೃತಿ ಪ್ರೇಮಿಗಳನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿದೆ…

ಹಸಿರು ರಾಶಿ ಚೆಲ್ಲಿದ ನುಣ್ಣಗಿನ ಬೆಟ್ಟದ ಮೇಲೆ ನೀಲಿ ಮಿಂಚು ಸರಿದಂತೆ ಅಲ್ಲಲ್ಲಿ ಒತ್ತೊತ್ತಾಗಿ ನೀಲಿ ಹೂಬಿಟ್ಟು ಕುರುಂಜಿ ಹೂಗಳು ಕಂಗೊಳಿಸುತ್ತಿದ್ದು  ಒಂಥರಾ ಮಜಾ ಕೊಡುತ್ತಿದೆ.  ಕಣ್ಣು ಹಾಯಿಸಿದುದ್ದಕ್ಕೂ ಕಂಡು ಬರುವ ಹಸಿರು ರಾಶಿ ಚೆಲ್ಲಿದ ಬೆಟ್ಟ ಶ್ರೇಣಿಗಳು ಅದರ ಮೇಲೆ ಗಿರಕಿ ಹೊಡೆಯುವ ಮೇಘಗಳು.. ಸುಯ್ಯೆಂದು ಬೀಸುವ ಗಾಳಿ ಇದರ ನಡುವೆ  ಅರಳಿ ನಿಂತ ಕುರುಂಜಿ ಹೂಗಳು ನೋಡುಗರ ಕಣ್ಮನಕ್ಕೆ ತಂಪೆರೆಯುತ್ತದೆ.

ಇವತ್ತು ಕುರುಂಜಿ ಹೂಗಳಿಂದ ಸಿಂಗಾರಗೊಂಡಿರುವ ಚೆಕ್ಕೆಪಾರೆಕುಂದು ಕೊಡಗಿನ ನಾಪೋಕ್ಲುಗೆ ಸಮೀಪದ ಪೆರೂರು  ಕಿಯಲ್ ಕೇರಿ ಬಳಿಯಿರುವ ಬೆಟ್ಟವಾಗಿದೆ. ಇದೇನು ಹೆಸರುವಾಸಿಯಾಗಿರುವ ಬೆಟ್ಟ ಅಲ್ಲದಿದ್ದರೂ ಸ್ಥಳೀಯರಿಗೆ ಇದರ ಪರಿಚಯವಿದೆ. ಹೀಗಾಗಿ ಸ್ಥಳೀಯರು ಈ ಬೆಟ್ಟದಲ್ಲಿ ಕುರುಂಜಿ ಹೂ ಬಿಟ್ಟಿರುವುದನ್ನು ಕಂಡು ಅದನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಇದೀಗ ಎಲ್ಲರ ಗಮನಸೆಳೆಯುತ್ತಿದ್ದು, ಸೌಂದರ್ಯವನ್ನು ಕಣ್ತುಂಬಿಕೊಳ್ಳಲೆಂದೇ ಪ್ರಕೃತಿ ಪ್ರೇಮಿಗಳು ಇತ್ತ ಹೆಜ್ಜೆ ಹಾಕುತ್ತಿದ್ದಾರೆ.

ಹಾಗೆನೋಡಿದರೆ ಕುರುಂಜಿ ಗಿಡಗಳು ಕೊಡಗಿನಾದ್ಯಂತ ಬೆಳೆಯುತ್ತವೆ. ಇದರಲ್ಲಿ ಪ್ರತ್ಯೇಕ ತಳಿಗಳಿದ್ದು, ಬೆಟ್ಟಗಳಲ್ಲಿ ಬೆಳೆಯುವ ಗಿಡಗಳು ದಷ್ಠಪುಷ್ಠವಾಗಿರುತ್ತವೆ. ಇನ್ನು ತೋಟಗಳಲ್ಲಿಯೂ ಅದರಲ್ಲೂ ಮಳೆ ಹೆಚ್ಚು ಪ್ರದೇಶಗಳಲ್ಲಿನ ಕಾಫಿ ಏಲಕ್ಕಿ ತೋಟಗಳಲ್ಲಿಯೂ ಇವು ಹುಲುಸಾಗಿ ಬೆಳೆಯುತ್ತವೆ. ಏಲಕ್ಕಿ ತೋಟಕ್ಕೆ ಇವು ಸಹಕಾರಿಯಾಗಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿಯೂ ಪಾತ್ರ ವಹಿಸುತ್ತವೆ. ಹಿರಿಯರು ಹೇಳುವ ಪ್ರಕಾರ ಕುರುಂಜಿ ಹೂ ಬಿಟ್ಟ ವರ್ಷ ಜೇನು ಸಮೃದ್ಧವಾಗಿರುತ್ತದೆಯಂತೆ. ಅಷ್ಟೇ ಅಲ್ಲ ಹೂ ಬಿಟ್ಟ ಬಳಿಕ ಗಿಡಗಳು ಸಾವನ್ನಪ್ಪುತ್ತವೆ. ಆ ನಂತರ ಮತ್ತೆ ಬೀಜಗಳು ಹುಟ್ಟಿ ಗಿಡಗಳಾಗಬೇಕಾದರೆ ಮತ್ತಷ್ಟು ವರ್ಷ ಕಾಯಬೇಕಾಗುತ್ತದೆ.

ನಾವು ಕುರುಂಜಿ ಹೂ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ವಿಚಾರಗಳು ಹೊರಬರುತ್ತವೆ. ಅವು ಏನೆಂದರೆ?  ಈ ಕುರುಂಜಿ ಗಿಡಗಳು ಹನ್ನೆರಡು ವರ್ಷಗಳ ಕಾಲ ತಮ್ಮಲ್ಲಿಯೂ ಅಗಾಧ ಚೆಲುವಿದೆ ಎಂಬ ಸತ್ಯವನ್ನು ಹೊರಗೆಡವದೆ ತಮ್ಮ ಪಾಡಿಗೆ ತಾವು ಎಂಬಂತೆ ಇತರೆ ಸಸ್ಯ ಸಂಕುಲಗಳಲ್ಲೊಂದಾಗಿ ಬೆಳೆಯುತ್ತಿರುತ್ತವೆ. ಇದ್ದಕ್ಕಿದ್ದ ಹಾಗೆ ಹೂ ಬಿಟ್ಟು ಇಡೀ ಬೆಟ್ಟ ಗುಡ್ಡಗಳನ್ನೇ ನೀಲಮಯವಾಗಿಸಿ ಅಚ್ಚರಿ ಮೂಡಿಸುತ್ತವೆ. ಆದರೆ ಈ ಸುಂದರ ಅಪರೂಪದ ದೃಶ್ಯವನ್ನು ವೀಕ್ಷಿಸಬೇಕಾದರೆ ಹನ್ನೆರಡು ವರ್ಷ ಕಾಯಬೇಕು. ಆ ತಾಳ್ಮೆ ನಮ್ಮಲ್ಲಿರಬೇಕಷ್ಟೆ.

ಇನ್ನು ಕುರುಂಜಿ ಗಿಡಗಳು ಸುಮಾರು ಎರಡರಿಂದ ಏಳು ಅಡಿಗಿಂತಲೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತವೆ. ಇದರಲ್ಲಿ ಸುಮಾರು 59ಕ್ಕೂ ಹೆಚ್ಚಿನ ತಳಿಗಳಿವೆ ಎಂದು ಹೇಳಲಾಗಿದೆ. ಒತ್ತೊತ್ತಾಗಿ ಪೊದೆಯಾಗಿ ಬೆಳೆಯುವ ಇವು ನೀರಿನಾಶ್ರಯವಿಲ್ಲದ ಗಿರಿಶ್ರೇಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದೆಲ್ಲದರ ನಡುವೆ ಈ ಗಿಡಗಳಿಗೆ ಕುರುಂಜಿ ಎಂಬ ಹೆಸರು ಹೇಗೆ ಬಂತು ಎಂದು ಹುಡುಕುತ್ತಾ ಹೋದರೆ ಗುಡ್ಡಗಾಡುಗಳಲ್ಲಿ ವಾಸಿಸುವ ಗಿರಿಜನರು ಇಟ್ಟ ಹೆಸರು ಇದಾಗಿದೆ ಎಂಬ ಮಾಹಿತಿ ದೊರಕುತ್ತದೆ.  ಇನ್ನು ತೆಳು ನೀಲಿ ಮಿಶ್ರಿತ ನೇರಳೆ ಬಣ್ಣದ ಹೂ ಗಿಡದ ಮೇಲಿನಿಂದ ಕೆಳಗಿನವರೆಗೂ ಅರಳಿ ಕಂಗೊಳಿಸುತ್ತದೆ.  Acanthaceae ಸಸ್ಯ ಜಾತಿಗೆ ಸೇರಿದ ಇದರ ವೈಜ್ಞಾನಿಕ ಹೆಸರು Strobilanthes kunthiana ಆಗಿದೆ.

ಬೆಟ್ಟಗುಡ್ಡದಲ್ಲಿ ಹೂಬಿಟ್ಟು ಕಂಗೊಳಿಸುವ ಈ ಹೂ ಕೆಲವರಿಗೆ ಪವಿತ್ರ ಪುಷ್ಟವೂ ಹೌದು.    ಕೇರಳ ಹಾಗೂ ತಮಿಳುನಾಡಿನ ನಡುವಿನ ಪಶ್ಚಿಮ ಘಟ್ಟದ ಗುಡ್ಡಗಳಲ್ಲಿ ವಾಸಿಸುವ ತೋಡಾ ಹಾಗೂ ಮುದ್ದಾ ಜನಾಂಗವು ಈ ಹೂವನ್ನು ದೇವಪುಷ್ಪವೆಂದು ಪೂಜಿಸುತ್ತಾರಂತೆ. ತಮಿಳುನಾಡಿನಲ್ಲಿ  ಕುರುಂಜಿ ಹೂ ಆರಾಧ್ಯಪುಷ್ಪವಂತೆ. ಅದು ಹೇಗೆಂದರೆ ಕುರುಂಜಿ ಆಂಡವನ್ ಎಂದರೆ  ಆರಾಧ್ಯದೈವ ಮುರುಗನ ಹೆಸರಂತೆ.

ಹೂವಿನ ಬಗ್ಗೆಯೂ ಅಲ್ಲಿನ ಸಾಹಿತ್ಯಗಳಲ್ಲಿ ಪ್ರಸ್ತಾಪವಿದೆಯಂತೆ. ಮುರುಗನ್ ತನ್ನ ಮದುವೆ ಸಂದರ್ಭ ಪತ್ನಿ  ವಲ್ಲಿಯನ್ನು  ಕುರುಂಜಿ ಹೂವಿನ ಮಾಲೆ ಹಾಕಿ ವಿವಾಹವಾದನೆಂಬ ಐಹಿತ್ಯವಿದೆ. ಹೀಗಾಗಿ ಆರಾಧ‍್ಯ ದೈವ ಮುರುಗನ್ ಮೆಚ್ಚಿದ ಈ ಹೂವು ತಮಿಳರಿಗೆ ಪ್ರಿಯವಾದ ಪುಷ್ಪವಾಗಿದೆ.

ತನ್ನದೇ ಆದ ಬಣ್ಣ ಮತ್ತು ಸೌಂದರ್ಯದಿಂದ ಕಾನನದ ಪುಷ್ಪವಾಗಿ ಎಲ್ಲರ ಗಮನಸೆಳೆಯುವ ಕುರುಂಜಿಗೆ ಕಳೆದ ಒಂದೂವರೆ ದಶಕಗಳ ಹಿಂದೆಯೇ ಅಂಚೆ ಇಲಾಖೆ ಹದಿನೈದು ರೂಪಾಯಿಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸ್ಥಾನ ನೀಡಿತ್ತು. ಆ ಮೂಲಕ ಕುರುಂಜಿ ತನ್ನ ಸ್ಥಾನಮಾನವನ್ನು ಹೆಚ್ಚಿಸಿಕೊಂಡು ಗಮನಸೆಳೆದಿತ್ತು.

ಇಷ್ಟೆಲ್ಲ ಮಹತ್ವ ಹೊಂದಿರುವ ಕುರುಂಜಿ ಬಗ್ಗೆ ಓದಿದ ಮೇಲೆ ಅದನ್ನು ನೋಡಬೇಕು ಎನಿಸಿದರೆ ಕೊಡಗಿನ ಚೆಕ್ಕೆಪಾರೆ ಕುಂದು ಕಡೆಗೆ ಮುಖ ಮಾಡಬಹುದು. ಈ ಹೂ ಇನ್ನಷ್ಟು ದಿನಗಳ ಕಾಲ  ಅಂದರೆ ಸುಮಾರು ಎರಡು ತಿಂಗಳು ತನ್ನ ಚೆಲುವನ್ನು  ಪ್ರದರ್ಶಿಸುವುದರಿಂದ  ವೀಕ್ಷಣೆಗೆ ಅವಕಾಶವಿದೆ. ಬಹುಶಃ ಈ ಬಾರಿ ದೊರೆತಿರುವ ಅವಕಾಶವನ್ನು ನಾವು ತಪ್ಪಿಸಿಕೊಂಡರೆ ಮತ್ತೆ ಬರೋಬ್ಬರಿ ಹನ್ನೆರಡು ವರ್ಷಗಳ ಕಾಲ ಕಾಯಬೇಕಾಗಿ ಬರಬಹುದೇನೋ?

-ಬಿ.ಎಂ.ಲವಕುಮಾರ್

 

 

admin
the authoradmin

Leave a Reply